ಅಧ್ಯಾಯ 31
“ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು”
1-3. (ಎ) ಹೆತ್ತವರ ಮತ್ತು ಅವರ ಮಗುವಿನ ನಡುವಣ ಪರಸ್ಪರ ಕ್ರಿಯೆಯನ್ನು ಅವಲೋಕಿಸುವ ಮೂಲಕ ಮಾನುಷ ಸ್ವಭಾವದ ಕುರಿತು ನಾವೇನನ್ನು ಕಲಿಯಬಹುದು? (ಬಿ) ಯಾರಾದರೂ ನಮಗೆ ಪ್ರೀತಿಯನ್ನು ತೋರಿಸುವಾಗ ಯಾವ ಕಾರ್ಯಗತಿಯು ಸ್ವಾಭಾವಿಕವಾಗಿ ವಿಕಾಸಗೊಳ್ಳುತ್ತದೆ, ಮತ್ತು ಯಾವ ಪ್ರಾಮುಖ್ಯ ಪ್ರಶ್ನೆಯನ್ನು ನಾವು ನಮಗೆ ಕೇಳಿಕೊಳ್ಳಬಲ್ಲೆವು?
ತಮ್ಮ ನವಜಾತ ಮಗುವು ನಸುನಗುವುದನ್ನು ನೋಡಿ ಹೆತ್ತವರು ಹಿರಿಹಿಗ್ಗುತ್ತಾರೆ. ಅನೇಕಾವರ್ತಿ ಅವರು ತಮ್ಮ ಮುಖವನ್ನು ಕೂಸಿನ ಮುಖದ ಹತ್ತಿರ ತಂದು ಲಲ್ಲೆಗರೆಯುತ್ತಾ ದೊಡ್ಡ ನಗೆಯನ್ನು ಹೊರಸೂಸುತ್ತಾರೆ. ಮಗುವಿನ ಪ್ರತಿವರ್ತನೆಯನ್ನು ಕಾಣಲು ಅವರಿಗೆ ಆತುರ. ಮತ್ತು ತುಸು ಹೊತ್ತಿನಲ್ಲೇ ಅದು ತೋರಿಬರುತ್ತದೆ—ಕೂಸಿನ ಗಲ್ಲಗಳಲ್ಲಿ ಕುಳಿಬೀಳುತ್ತದೆ, ತುಟಿಗಳು ಅರಳುತ್ತವೆ, ಮತ್ತು ಉಲ್ಲಾಸಬರಿಸುವ ನಸುನಗೆಯನ್ನು ಅದು ಹೊರಡಿಸುತ್ತದೆ. ಹೆತ್ತವರ ಮಮತೆಗೆ ಪ್ರತಿವರ್ತನೆಯಲ್ಲಿ ಮಗು ಪ್ರೀತಿಯನ್ನು ವ್ಯಕ್ತಪಡಿಸಲಾರಂಭಿಸುತ್ತಾ, ಆ ನಸುನಗೆಯ ಮೂಲಕ ಅದನ್ನು ಪ್ರದರ್ಶಿಸುತ್ತಿರುವಂತೆ ತೋರುತ್ತದೆ.
2 ಮಗುವಿನ ಆ ನಸುನಗೆಯು ಮಾನುಷ ಸ್ವಭಾವದ ಕುರಿತ ಒಂದು ಪ್ರಾಮುಖ್ಯ ವಿಷಯವನ್ನು ನಮಗೆ ಮರುಜ್ಞಾಪಿಸುತ್ತದೆ. ಪ್ರೀತಿಗೆ ಪ್ರತಿಯಾಗಿ ಪ್ರೀತಿಯನ್ನು ತೋರಿಸುವುದು ನಮ್ಮ ಸಹಜ ಸ್ವಭಾವವಾಗಿದೆ. ಆ ರೀತಿಯಲ್ಲೇ ನಾವು ನಿರ್ಮಿಸಲ್ಪಟ್ಟಿದ್ದೇವೆ. (ಕೀರ್ತನೆ 22:9) ನಾವು ಬೆಳೆದು ದೊಡ್ಡವರಾಗುತ್ತಾ ಹೋದಂತೆ, ಪ್ರೀತಿಗೆ ಪ್ರತಿಕ್ರಿಯಿಸುವ ನಮ್ಮ ಸಾಮರ್ಥ್ಯದಲ್ಲಿ ಪಕ್ವತೆಯನ್ನು ಪಡೆಯುತ್ತೇವೆ. ಪ್ರಾಯಶಃ ನಿಮ್ಮ ಸ್ವಂತ ಬಾಲ್ಯದಲ್ಲಿ ನಿಮ್ಮ ಹೆತ್ತವರು, ಸಂಬಂಧಿಕರು, ಅಥವಾ ಸ್ನೇಹಿತರು ನಿಮಗೆ ಹೇಗೆ ಪ್ರೀತಿಯನ್ನು ತೋರಿಸಿದ್ದರೆಂಬುದು ನಿಮಗೆ ಜ್ಞಾಪಕವಿರಬಹುದು. ನಿಮ್ಮ ಹೃದಯದಲ್ಲಿ ಒಂದು ಬೆಚ್ಚಗಿನ ಭಾವವು ಬೇರೂರಿತು, ಬೆಳೆಯಿತು, ಮತ್ತು ಕ್ರಿಯೆಯಲ್ಲಿ ಪರಿಪಕ್ವಗೊಂಡಿತು. ಪ್ರತಿಯಾಗಿ ನೀವು ನಿಮ್ಮ ಪ್ರೀತಿಯನ್ನು ತೋರಿಸಿದಿರಿ. ಯೆಹೋವ ದೇವರೊಂದಿಗಿನ ನಿಮ್ಮ ಸಂಬಂಧದಲ್ಲಿ ತದ್ರೀತಿಯ ಒಂದು ಕಾರ್ಯಗತಿಯು ನಡೆಯುತ್ತಿದೆಯೇ?
3 ಬೈಬಲ್ ಅನ್ನುವುದು: “ದೇವರು ಮೊದಲು ನಮ್ಮನ್ನು ಪ್ರೀತಿಸಿದ್ದರಿಂದ ನಾವು ಪ್ರೀತಿಸುತ್ತೇವೆ.” (1 ಯೋಹಾನ 4:19) ಈ ಪುಸ್ತಕದ 1ರಿಂದ 3ನೆಯ ವಿಭಾಗಗಳಲ್ಲಿ, ಯೆಹೋವನು ಹೇಗೆ ತನ್ನ ಶಕ್ತಿಯನ್ನು, ತನ್ನ ನ್ಯಾಯವನ್ನು, ಮತ್ತು ತನ್ನ ವಿವೇಕವನ್ನು ನಿಮ್ಮ ಪ್ರಯೋಜನಕ್ಕಾಗಿ ಪ್ರೀತಿಪೂರ್ವಕವಾದ ವಿಧಾನಗಳಲ್ಲಿ ಉಪಯೋಗಿಸಿದ್ದಾನೆಂಬ ಮರುಜ್ಞಾಪನವನ್ನು ನಿಮಗೆ ನೀಡಲಾಯಿತು. ಮತ್ತು 4ನೆಯ ವಿಭಾಗದಲ್ಲಿ, ಮಾನವಕುಲಕ್ಕಾಗಿ—ಮತ್ತು ವೈಯಕ್ತಿಕವಾಗಿ ನಿಮಗೆ—ಆತನು ತನ್ನ ಪ್ರೀತಿಯನ್ನು ನೇರವಾಗಿ ಗಮನಾರ್ಹವಾದ ರೀತಿಯಲ್ಲಿ ವ್ಯಕ್ತಪಡಿಸಿರುವುದನ್ನು ನೀವು ನೋಡಿದಿರಿ. ಈಗ ಒಂದು ಪ್ರಶ್ನೆಯೇಳುತ್ತದೆ. ಒಂದು ರೀತಿಯಲ್ಲಿ, ಅದು ನಿಮಗೆ ನೀವೇ ಕೇಳಬಲ್ಲ ಅತ್ಯಂತ ಪ್ರಾಮುಖ್ಯವಾದ ಪ್ರಶ್ನೆಯಾಗಿರುತ್ತದೆ: ‘ಯೆಹೋವನ ಪ್ರೀತಿಗೆ ನಾನು ಹೇಗೆ ಪ್ರತಿವರ್ತನೆ ತೋರಿಸುವೆ?’
ದೇವರನ್ನು ಪ್ರೀತಿಸುವುದು ಎಂದರೇನು?
4. ದೇವರನ್ನು ಪ್ರೀತಿಸುವುದು ಎಂದರೇನೆಂಬ ವಿಷಯದಲ್ಲಿ ಜನರು ಯಾವ ರೀತಿಯಲ್ಲಿ ಗೊಂದಲಕ್ಕೀಡಾಗಿದ್ದಾರೆ?
4 ಇತರರಲ್ಲಿರುವ ಅತ್ಯುತ್ತಮ ಗುಣಗಳನ್ನು ಹೊರತರುವ ಮಹತ್ತಾದ ಶಕ್ತಿ ಪ್ರೀತಿಗಿದೆ ಎಂಬುದು ಪ್ರೀತಿಯ ಮೂಲದಾತನಾದ ಯೆಹೋವ ದೇವರಿಗೆ ಚೆನ್ನಾಗಿ ತಿಳಿದಿದೆ. ಆದುದರಿಂದ ಅಪನಂಬಿಗಸ್ತ ಮಾನವರ ಎಡೆಬಿಡದ ದಂಗೆಯ ಮಧ್ಯೆಯೂ, ಕೆಲವು ಮಾನವರು ತನ್ನ ಪ್ರೀತಿಗೆ ಪ್ರತಿವರ್ತನೆ ತೋರಿಸುವರೆಂಬ ಭರವಸೆಯನ್ನು ಆತನು ಕಾಪಾಡಿಕೊಂಡು ಬಂದಿದ್ದಾನೆ. ಮತ್ತು ಲಕ್ಷಾಂತರ ಜನರು ಹಾಗೆಯೇ ಮಾಡಿದ್ದಾರೆ. ಆದರೆ ಈ ಭ್ರಷ್ಟ ಲೋಕದ ಧರ್ಮಗಳಾದರೋ ದೇವರನ್ನು ಪ್ರೀತಿಸುವುದೆಂದರೇನೆಂಬ ವಿಷಯದಲ್ಲಿ ಜನರನ್ನು ಗೊಂದಲಕ್ಕೀಡುಮಾಡಿವೆ. ಅಸಂಖ್ಯಾತ ಜನರು ತಾವು ದೇವರನ್ನು ಪ್ರೀತಿಸುತ್ತೇವೆಂದು ಹೇಳುತ್ತಾರೆ, ಆದರೆ ಅಂಥ ಪ್ರೀತಿಯು ಬರಿಯ ಮಾತುಗಳಿಂದ ವ್ಯಕ್ತಪಡಿಸಲ್ಪಡುವ ಒಂದು ಭಾವನೆಯೆಂದು ಅವರು ನೆನಸುತ್ತಿರುವಂತೆ ಕಾಣುತ್ತದೆ. ತನ್ನ ಹೆತ್ತವರ ಕಡೆಗೆ ಒಂದು ಕೂಸಿನ ಪ್ರೇಮವು ಆರಂಭದಲ್ಲಿ ಒಂದು ನಸುನಗೆಯಲ್ಲಿ ತೋರಿಬರುವಂತೆಯೇ ದೇವರಿಗಾಗಿರುವ ಪ್ರೀತಿಯು ಆ ರೀತಿಯಲ್ಲಿ ಅಂದರೆ ಮಾತುಗಳಲ್ಲಿ ಆರಂಭಗೊಳ್ಳಬಹುದು. ಪ್ರೌಢ ವ್ಯಕ್ತಿಗಳಲ್ಲಾದರೋ ಪ್ರೀತಿ ಹೆಚ್ಚು ವಿಷಯಗಳನ್ನು ಒಳಗೊಳ್ಳುತ್ತದೆ.
5. ದೇವರಿಗಾಗಿರುವ ಪ್ರೀತಿಯನ್ನು ಬೈಬಲು ಹೇಗೆ ಅರ್ಥನಿರೂಪಿಸುತ್ತದೆ, ಮತ್ತು ಆ ಅರ್ಥನಿರೂಪಣೆಯು ನಮ್ಮ ಮನಸ್ಸಿಗೆ ಏಕೆ ಹಿಡಿಸಬೇಕು?
5 ತನ್ನನ್ನು ಪ್ರೀತಿಸುವುದರ ಅರ್ಥನಿರೂಪಣೆಯನ್ನು ಯೆಹೋವನೇ ಕೊಡುತ್ತಾನೆ. ಆತನ ವಾಕ್ಯವು ಹೇಳುವುದು: “ದೇವರ ಮೇಲಣ ಪ್ರೀತಿ ಏನಂದರೆ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವದೇ.” ಹೀಗಿರಲಾಗಿ ದೇವರ ಮೇಲಣ ಪ್ರೀತಿಯನ್ನು ಕ್ರಿಯೆಯಲ್ಲಿ ವ್ಯಕ್ತಪಡಿಸುವ ಅಗತ್ಯವಿದೆ. ವಿಧೇಯತೆಯನ್ನು ತೋರಿಸುವ ವಿಚಾರವು ಅನೇಕ ಜನರಿಗೆ ಹಿಡಿಸುವುದಿಲ್ಲವೆಂಬುದು ನಿಜ. ಆದರೂ ಅದೇ ವಚನವು ದಯೆಯಿಂದ ಕೂಡಿಸುವುದು: “[ದೇವರ] ಆಜ್ಞೆಗಳು ಭಾರವಾದವುಗಳಲ್ಲ.” (1 ಯೋಹಾನ 5:3) ಯೆಹೋವನ ನಿಯಮಗಳು ಮತ್ತು ಮೂಲತತ್ತ್ವಗಳು ನಮ್ಮ ಪ್ರಯೋಜನಕ್ಕಾಗಿ ರಚಿಸಲ್ಪಟ್ಟಿವೆ, ನಮ್ಮನ್ನು ಅದುಮಿಬಿಡಲಿಕ್ಕಾಗಿ ಅಲ್ಲ. (ಯೆಶಾಯ 48:17, 18) ದೇವರ ವಾಕ್ಯವು ಮೂಲತತ್ತ್ವಗಳಿಂದ ತುಂಬಿದ್ದು ನಾವು ಆತನ ಸಮೀಪಕ್ಕೆ ಬರುವಂತೆ ನಮಗೆ ಸಹಾಯಮಾಡುತ್ತವೆ. ಅದು ಹೇಗೆ? ದೇವರೊಂದಿಗಿನ ನಮ್ಮ ಸಂಬಂಧದ ಮೂರು ವೈಶಿಷ್ಟ್ಯಗಳನ್ನು ನಾವೀಗ ಪುನರ್ವಿಮರ್ಶಿಸೋಣ. ಇವುಗಳಲ್ಲಿ ಸಂವಾದ, ಆರಾಧನೆ, ಮತ್ತು ಅನುಕರಣೆಯು ಸೇರಿರುತ್ತದೆ.
ಯೆಹೋವನೊಂದಿಗೆ ಸಂವಾದಮಾಡುವುದು
6-8. (ಎ) ಯಾವುದರ ಮೂಲಕವಾಗಿ ನಾವು ಯೆಹೋವನಿಗೆ ಕಿವಿಗೊಡಬಲ್ಲೆವು? (ಬಿ) ಶಾಸ್ತ್ರವಚನಗಳನ್ನು ಓದುವಾಗ ಅವುಗಳಲ್ಲಿ ನಾವು ಹೇಗೆ ಜೀವತುಂಬಿಸಬಲ್ಲೆವು?
6 ಅಧ್ಯಾಯ 1, “ದೇವರೊಂದಿಗೆ ನೀವು ಸಂಭಾಷಣೆ ಮಾಡುತ್ತಿದ್ದೀರೆಂಬುದನ್ನು ಊಹಿಸಿಕೊಳ್ಳಬಲ್ಲಿರೊ?” ಎಂಬ ಪ್ರಶ್ನೆಯೊಂದಿಗೆ ಆರಂಭಗೊಂಡಿತು. ಇದೊಂದು ಬರಿಯ ಭ್ರಾಂತಿಯ ಕಲ್ಪನೆಯಲ್ಲ ಎಂಬುದನ್ನೂ ನಾವು ನೋಡಿದೆವು. ಮೋಶೆಯು ಸಾಕ್ಷಾತ್ ಅಂಥ ಒಂದು ಸಂಭಾಷಣೆಯನ್ನು ಮಾಡಿದ್ದನು. ನಮ್ಮ ವಿಷಯದಲ್ಲೇನು? ಮಾನವರೊಂದಿಗೆ ಸಂವಾದಮಾಡಲು ಯೆಹೋವನು ತನ್ನ ದೇವದೂತರನ್ನು ಕಳುಹಿಸಿಕೊಡುವ ಸಮಯವಿದಲ್ಲ. ಆದರೆ ಇಂದು ನಮ್ಮೊಂದಿಗೆ ಸಂಭಾಷಿಸುವ ಅತ್ಯುತ್ತಮ ಸಾಧನವು ಯೆಹೋವನಿಗಿದೆ. ಯೆಹೋವನಿಗೆ ನಾವು ಹೇಗೆ ಕಿವಿಗೊಡಬಲ್ಲೆವು?
7 ‘ಪ್ರತಿಯೊಂದು ಶಾಸ್ತ್ರವು ದೈವಪ್ರೇರಿತ’ವಾಗಿರುವುದರಿಂದ, ಆತನ ವಾಕ್ಯವಾದ ಬೈಬಲನ್ನು ಓದುವಾಗ ನಾವು ಯೆಹೋವನಿಗೆ ಕಿವಿಗೊಡುತ್ತಿದ್ದೇವೆ. (2 ತಿಮೊಥೆಯ 3:16) ಹೀಗಿರುವುದರಿಂದ ಯೆಹೋವನ ಸೇವಕರು ಅಂಥ ವಾಚನವನ್ನು “ಹಗಲಿರುಳು” ಮಾಡುವಂತೆ ಕೀರ್ತನೆಗಾರನು ಉತ್ತೇಜಿಸಿದನು. (ಕೀರ್ತನೆ 1:1, 2) ಹಾಗೆ ಮಾಡಲು ನಮ್ಮಿಂದ ಬಹಳಷ್ಟು ಪ್ರಯತ್ನದ ಆವಶ್ಯಕತೆಯಿದೆ. ಆದರೆ ಆ ರೀತಿಯಲ್ಲಿ ಮಾಡಲ್ಪಡುವ ಪ್ರಯತ್ನಗಳೆಲ್ಲವು ಸಾರ್ಥಕವಾಗಿವೆ. ಅಧ್ಯಾಯ 18ರಲ್ಲಿ ನಾವು ನೋಡಿದ ಪ್ರಕಾರ, ಬೈಬಲು ನಮ್ಮ ಸ್ವರ್ಗೀಯ ತಂದೆಯಿಂದ ನಮಗೆ ಬಂದ ಅಮೂಲ್ಯ ಪತ್ರದಂತಿದೆ. ಹೀಗೆ ಅದನ್ನು ಓದುವುದು ಒಂದು ಬೇಸರದ ಕೆಲಸವಾಗಿರಬಾರದು. ನಾವು ಶಾಸ್ತ್ರವಚನಗಳನ್ನು ಓದುವಾಗ ಅದರಲ್ಲಿ ಜೀವತುಂಬಿಸಬೇಕು. ನಾವದನ್ನು ಮಾಡುವುದು ಹೇಗೆ?
8 ಬೈಬಲ್ ವೃತ್ತಾಂತಗಳನ್ನು ನೀವು ಓದುತ್ತಾ ಹೋದಂತೆ ಅವು ನಿಮ್ಮ ಕಣ್ಮುಂದೆಯೇ ನಡೆಯುತ್ತಿರುವಂತೆ ಚಿತ್ರಿಸಿಕೊಳ್ಳಿರಿ. ಬೈಬಲ್ ಪಾತ್ರಧಾರಿಗಳನ್ನು ನೈಜ ವ್ಯಕ್ತಿಗಳೋಪಾದಿ ನೋಡಲು ಪ್ರಯತ್ನಿಸಿರಿ. ಅವರ ಹಿನ್ನೆಲೆಗಳು, ಸನ್ನಿವೇಶಗಳು, ಮತ್ತು ಹೇತುಗಳನ್ನು ಗ್ರಹಿಸಿಕೊಳ್ಳಲು ಪ್ರಯತ್ನಿಸಿರಿ. ಅನಂತರ, ನೀವೇನನ್ನು ಓದಿದಿರೋ ಅದರ ಕುರಿತು ಗಾಢವಾಗಿ ಯೋಚಿಸುತ್ತಾ ಈ ಪ್ರಶ್ನೆಗಳನ್ನು ನಿಮಗೆ ಹಾಕಿಕೊಳ್ಳಿರಿ: ‘ಈ ವೃತ್ತಾಂತವು ಯೆಹೋವನ ಕುರಿತು ನನಗೆ ಏನನ್ನು ಕಲಿಸುತ್ತದೆ? ಆತನ ಯಾವ ಗುಣಗಳನ್ನು ನಾನಿಲ್ಲಿ ಕಾಣುತ್ತೇನೆ? ಯಾವ ಮೂಲತತ್ತ್ವವನ್ನು ನಾನಿಲ್ಲಿ ಕಲಿಯುವಂತೆ ಯೆಹೋವನು ಬಯಸುತ್ತಾನೆ, ಮತ್ತು ಅದನ್ನು ನಾನು ನನ್ನ ಜೀವನದಲ್ಲಿ ಹೇಗೆ ಅನ್ವಯಿಸಿಕೊಳ್ಳಬಲ್ಲೆ?’ ಓದಿ, ಧ್ಯಾನಿಸಿ, ಅನ್ವಯಿಸಿಕೊಳ್ಳಿರಿ. ನೀವು ಹೀಗೆ ಮಾಡುತ್ತಾ ಹೋಗುವಾಗ ದೇವರ ವಾಕ್ಯವು ನಿಮಗೆ ಸಜೀವವಾಗುವುದು.—ಕೀರ್ತನೆ 77:12; ಯಾಕೋಬ 1:23-25.
9. “ನಂಬಿಗಸ್ತನೂ ವಿವೇಕಿಯೂ ಆದ ಆಳು” ಯಾರು, ಮತ್ತು ನಾವು ಆ ‘ಆಳಿಗೆ’ ಗಮನಕೊಟ್ಟು ಕೇಳುವುದು ಯಾಕೆ ಪ್ರಾಮುಖ್ಯವಾಗಿರುತ್ತದೆ?
9 ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಮೂಲಕವೂ ಯೆಹೋವನು ನಮ್ಮೊಂದಿಗೆ ಮಾತನಾಡುತ್ತಾನೆ. ಯೇಸು ಮುಂತಿಳಿಸಿದ ಪ್ರಕಾರ, ಈ ತೊಂದರೆಭರಿತ ಕಡೇ ದಿವಸಗಳಲ್ಲಿ “ಹೊತ್ತುಹೊತ್ತಿಗೆ” ಆಧ್ಯಾತ್ಮಿಕ ಆಹಾರವನ್ನು ಒದಗಿಸಲಿಕ್ಕಾಗಿ ಅಭಿಷಿಕ್ತ ಕ್ರೈಸ್ತರ ಒಂದು ವರ್ಗವು ನೇಮಿಸಲ್ಪಟ್ಟಿರುತ್ತದೆ. (ಮತ್ತಾಯ 24:45-47) ಬೈಬಲಿನ ನಿಷ್ಕೃಷ್ಟ ಜ್ಞಾನವನ್ನು ಪಡೆಯುವುದರಲ್ಲಿ ಸಹಾಯಮಾಡಲಿಕ್ಕಾಗಿ ತಯಾರಿಸಲ್ಪಟ್ಟ ಸಾಹಿತ್ಯವನ್ನು ನಾವು ಓದುವಾಗ ಮತ್ತು ಕ್ರೈಸ್ತ ಕೂಟಗಳಿಗೂ ಅಧಿವೇಶನಗಳಿಗೂ ನಾವು ಹಾಜರಾಗುವಾಗ, ಆ ಆಳು ವರ್ಗದಿಂದ ನಾವು ಆಧ್ಯಾತ್ಮಿಕವಾಗಿ ಉಣಿಸಲ್ಪಡುತ್ತೇವೆ. ಆ ಆಳು ವರ್ಗವು ಕ್ರಿಸ್ತನ ಆಳಾಗಿರಲಾಗಿ, ಯೇಸುವಿನ ಈ ಮಾತುಗಳನ್ನು ನಾವು ವಿವೇಕದಿಂದ ಅನ್ವಯಿಸಿಕೊಳ್ಳುತ್ತೇವೆ: “ನೀವು ಹೇಗೆ ಕಿವಿಗೊಡಬೇಕೋ ನೋಡಿಕೊಳ್ಳಿರಿ.” (ಓರೆ ಅಕ್ಷರಗಳು ನಮ್ಮವು.) (ಲೂಕ 8:18) ಆ ಆಳು ವರ್ಗವು ಯೆಹೋವನು ನಮ್ಮೊಂದಿಗೆ ಸಂವಾದಮಾಡುವ ಒಂದು ಮಾಧ್ಯಮವಾಗಿದೆಯೆಂದು ನಾವು ಅಂಗೀಕರಿಸುತ್ತೇವಾದುದರಿಂದ ನಾವು ಗಮನಕೊಟ್ಟು ಕೇಳುತ್ತೇವೆ.
10-12. (ಎ) ಪ್ರಾರ್ಥನೆಯು ಯೆಹೋವನಿಂದ ಬಂದ ಒಂದು ಅದ್ಭುತ ವರವಾಗಿದೆಯೇಕೆ? (ಬಿ) ಯೆಹೋವನಿಗೆ ಮೆಚ್ಚಿಕೆಯಾಗುವ ರೀತಿಯಲ್ಲಿ ನಾವು ಹೇಗೆ ಪ್ರಾರ್ಥಿಸಬಲ್ಲೆವು, ಮತ್ತು ಆತನು ನಮ್ಮ ಪ್ರಾರ್ಥನೆಗಳನ್ನು ಬಹುಮೂಲ್ಯವೆಂದೆಣಿಸುತ್ತಾನೆಂದು ನಮಗೆ ಭರವಸೆಯಿರಬಲ್ಲದೇಕೆ?
10 ಆದರೆ ದೇವರೊಂದಿಗೆ ನಾವು ಸಂವಾದಮಾಡುವುದರ ಕುರಿತೇನು? ಯೆಹೋವನೊಂದಿಗೆ ನಾವು ಮಾತನಾಡಬಲ್ಲೆವೋ? ಅದು ಭಯವಿಸ್ಮಯವನ್ನು ಹುಟ್ಟಿಸುವ ಒಂದು ವಿಚಾರವಾಗಿದೆ. ನಿಮ್ಮ ವೈಯಕ್ತಿಕ ಚಿಂತೆಗಳ ಕುರಿತಾಗಿ ಮಾತಾಡುವುದಕ್ಕೋಸ್ಕರ ನಿಮ್ಮ ದೇಶದ ಅತ್ಯಂತ ಬಲಾಢ್ಯ ಅಧಿಪತಿಯನ್ನು ಸಮೀಪಿಸಲು ನೀವು ಪ್ರಯತ್ನಿಸಿದ್ದುದಾದರೆ, ನಿಮ್ಮ ಪ್ರಯತ್ನವು ಯಶಸ್ಸು ಪಡೆಯುವ ಸಾಧ್ಯತೆಯೆಷ್ಟು? ಕೆಲವು ಸಾರಿ ಅಂಥ ಪ್ರಯತ್ನವು ತಾನೇ ಅಪಾಯಕರವಾಗಿ ಪರಿಣಮಿಸೀತು! ಎಸ್ತೇರ್ ಮತ್ತು ಮೊರ್ದೆಕೈಯ ದಿನಗಳಲ್ಲಿ, ಪಾರಸೀಯ ಸಾಮ್ರಾಟನನ್ನು ರಾಜಾಜ್ಞೆಯಾಗದ ಹೊರತು ಸಮೀಪಿಸಲು ಯಾರಾದರೂ ಪ್ರಯತ್ನಿಸಿದ್ದುದಾದರೆ, ಅವನಿಗೆ ಮರಣದಂಡನೆಯಾಗುವ ಸಂಭವವಿತ್ತು. (ಎಸ್ತೇರಳು 4:10, 11) ಯಾರ ಮುಂದೆ ಮಾನವರಲ್ಲಿ ಅತ್ಯಂತ ಬಲಾಢ್ಯರು ಸಹ ಬರಿಯ “ಮಿಡತೆ”ಗಳಿಗೆ ಹೋಲಿಸಲ್ಪಟ್ಟಿರುತ್ತಾರೋ, ಆ ಪರಮಾಧಿಕಾರಿ ಕರ್ತನ ಮುಂದೆ ಬರುವುದನ್ನು ಈಗ ಕಲ್ಪಿಸಿಕೊಳ್ಳಿರಿ. (ಯೆಶಾಯ 40:22) ಆತನನ್ನು ಸಮೀಪಿಸಲು ನಾವು ಅತಿಯಾಗಿ ಹೆದರಬೇಕೋ? ಖಂಡಿತವಾಗಿಯೂ ಇಲ್ಲ!
11 ಯೆಹೋವನು ತನ್ನನ್ನು ಸಮೀಪಿಸಲಿಕ್ಕಾಗಿ ಒಂದು ಮುಕ್ತ, ಆದರೂ ಸರಳವಾದ ಮಾಧ್ಯಮವನ್ನು ಒದಗಿಸಿದ್ದಾನೆ—ಅದೇ ಪ್ರಾರ್ಥನೆಯಾಗಿದೆ. ಒಂದು ಅತಿ ಚಿಕ್ಕ ಮಗುವು ಸಹ ಯೇಸುವಿನ ಹೆಸರಿನಲ್ಲಿ ನಂಬಿಕೆಯಿಂದ ಯೆಹೋವನಿಗೆ ಪ್ರಾರ್ಥನೆ ಮಾಡಬಲ್ಲದು. (ಯೋಹಾನ 14:6; ಇಬ್ರಿಯ 11:6) ಹೀಗಿದ್ದರೂ, ನಮ್ಮ ಅತ್ಯಂತ ತೊಡಕಿನ, ಅಂತರಂಗದ ಆಲೋಚನೆಗಳನ್ನು ಮತ್ತು ಭಾವನೆಗಳನ್ನು—ಮಾತುಗಳಲ್ಲಿ ವ್ಯಕ್ತಪಡಿಸಲು ಕಷ್ಟಕರವಾದ ನೋವಿನ ಭಾವನೆಗಳನ್ನು ಸಹ ತಿಳಿಯಪಡಿಸಲು ಪ್ರಾರ್ಥನೆಯು ನಮ್ಮನ್ನು ಶಕ್ತರನ್ನಾಗಿ ಮಾಡುತ್ತದೆ. (ರೋಮಾಪುರ 8:26) ವಾಗ್ವೈಖರಿಯ, ಆಲಂಕಾರಿಕ ಭಾಷೆಯಿಂದ ತುಂಬಿರುವ, ಅಥವಾ ಉದ್ದುದ್ದವಾದ, ಶಬ್ದಾಡಂಬರದ ಮಾತುಗಳಿಂದ ಪ್ರಾರ್ಥನೆ ಮಾಡುತ್ತಾ ಯೆಹೋವನನ್ನು ಪ್ರಭಾವಿಸಲು ಪ್ರಯತ್ನಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. (ಮತ್ತಾಯ 6:7, 8) ಇನ್ನೊಂದು ಕಡೆ, ನಾವು ಎಷ್ಟು ಸಮಯದ ತನಕ ಅಥವಾ ಎಷ್ಟು ಬಾರಿ ಪ್ರಾರ್ಥಿಸಬಹುದೆಂಬುದಕ್ಕೆ ಯೆಹೋವನು ಯಾವ ಮಿತಿಗಳನ್ನೂ ಇಟ್ಟಿರುವುದಿಲ್ಲ. ಆತನ ವಾಕ್ಯವು ನಮಗೆ, ‘ಎಡೆಬಿಡದೆ ಪ್ರಾರ್ಥನೆಮಾಡು’ವಂತೆಯೂ ಆಮಂತ್ರಿಸುತ್ತದೆ.—1 ಥೆಸಲೊನೀಕ 5:16.
ಕೀರ್ತನೆ 65:2) ತನ್ನ ನಂಬಿಗಸ್ತ ಸೇವಕರ ಪ್ರಾರ್ಥನೆಗಳನ್ನು ಆತನು ಬರೇ ಸಹಿಸಿಕೊಳ್ಳುತ್ತಾನೆ ಅಷ್ಟೆಯೊ? ಇಲ್ಲ, ಆತನು ನಿಜವಾಗಿ ಅವುಗಳಲ್ಲಿ ಆನಂದವನ್ನು ಪಡೆಯುತ್ತಾನೆ. ಆತನ ವಾಕ್ಯವು ಅಂಥ ಪ್ರಾರ್ಥನೆಗಳನ್ನು, ಯಾವುದು ಸುಡಲ್ಪಡುವಾಗ ಸುಗಂಧಭರಿತ ಆಹ್ಲಾದಕರ ಹೊಗೆಯನ್ನು ಮೇಲೇರಿಸುತ್ತದೋ ಆ ಧೂಪಕ್ಕೆ ಹೋಲಿಸುತ್ತದೆ. (ಕೀರ್ತನೆ 141:2; ಪ್ರಕಟನೆ 5:8; 8:4) ನಮ್ಮ ಮನಃಪೂರ್ವಕ ಪ್ರಾರ್ಥನೆಗಳು ಅಂತೆಯೇ ಮೇಲಕ್ಕೇರಿ ಪರಮಾಧಿಕಾರಿ ಕರ್ತನನ್ನು ಆನಂದಗೊಳಿಸುತ್ತದೆಂದು ನೆನಸುವುದು ಸಾಂತ್ವನಕರ ಸಂಗತಿಯಾಗಿದೆ ಅಲ್ಲವೇ? ಆದುದರಿಂದ ಯೆಹೋವನ ಸಮೀಪಕ್ಕೆ ಬರಲು ನೀವು ಬಯಸುವುದಾದರೆ, ದೀನತೆಯಿಂದ ಆಗಿಂದಾಗ್ಗೆ, ದಿನಂಪ್ರತಿ ಆತನಿಗೆ ಪ್ರಾರ್ಥನೆಮಾಡಿರಿ. ನಿಮ್ಮ ಹೃದಯದ ಚಿಂತೆಗಳನ್ನು ಆತನಲ್ಲಿ ತೋಡಿಕೊಳ್ಳಿರಿ. ಏನನ್ನೂ ಬಚ್ಚಿಡಬೇಡಿರಿ. (ಕೀರ್ತನೆ 62:8) ನಿಮ್ಮ ಚಿಂತೆಗಳನ್ನು, ನಿಮ್ಮ ಸಂತೋಷಗಳನ್ನು, ನಿಮ್ಮ ಕೃತಜ್ಞತೆಯನ್ನು, ನಿಮ್ಮ ಸ್ತುತಿಯನ್ನು ನಿಮ್ಮ ಸ್ವರ್ಗೀಯ ತಂದೆಯೊಂದಿಗೆ ಹಂಚಿಕೊಳ್ಳಿರಿ. ಫಲಿತಾಂಶವಾಗಿ, ನಿಮ್ಮ ಮತ್ತು ಆತನ ನಡುವಣ ಬಂಧವು ಸದಾ ಬಲವಾಗುತ್ತಾ ಬೆಳೆಯುವುದು.
12 “ಪ್ರಾರ್ಥನೆಯನ್ನು ಕೇಳುವವ” ಎಂದು ಯೆಹೋವನನ್ನು ಮಾತ್ರ ಕರೆಯಲಾಗಿದೆ ಎಂಬುದನ್ನು ನೆನಪಿನಲ್ಲಿಡಿರಿ, ಮತ್ತು ನಿಜ ಪರಾನುಭೂತಿಯಿಂದ ಆತನು ಕಿವಿಗೊಡುತ್ತಾನೆ. (ಯೆಹೋವನನ್ನು ಆರಾಧಿಸುವುದು
13, 14. ಯೆಹೋವನನ್ನು ಆರಾಧಿಸುವುದು ಎಂದರೇನು, ಮತ್ತು ನಾವು ಹಾಗೆ ಮಾಡುವುದು ಯಥಾಯೋಗ್ಯವಾಗಿದೆಯೇಕೆ?
13 ಯೆಹೋವನೊಂದಿಗೆ ನಾವು ಸಂವಾದಮಾಡುವಾಗ, ಅದು ಒಬ್ಬ ಸ್ನೇಹಿತ ಅಥವಾ ಸಂಬಂಧಿಯೊಂದಿಗೆ ಹೇಗೋ ಹಾಗೆ ಬರೇ ಮಾತಾಡುವುದು ಮತ್ತು ಕಿವಿಗೊಡುವುದು ಆಗಿರುವುದಿಲ್ಲ. ನಾವು ವಾಸ್ತವದಲ್ಲಿ ಯೆಹೋವನನ್ನು ಆರಾಧಿಸುತ್ತಿದ್ದೇವೆ, ಆತನು ಯಾವುದಕ್ಕೆ ನಿಸ್ಸಂದೇಹವಾಗಿ ಅರ್ಹನಾಗಿದ್ದಾನೋ ಆ ಪೂಜ್ಯ ಗೌರವವನ್ನು ಆತನಿಗೆ ಸಲ್ಲಿಸುತ್ತಿದ್ದೇವೆ. ಸತ್ಯಾರಾಧನೆಯೇ ನಮ್ಮ ಇಡೀ ಬದುಕಿನ ಜೀವಾಳ. ನಮ್ಮ ಆರಾಧನೆಯು ನಮ್ಮ ಪೂರ್ಣ ಪ್ರಾಣದ ಪ್ರೀತಿ ಮತ್ತು ಭಕ್ತಿಯನ್ನು ನಾವು ವ್ಯಕ್ತಪಡಿಸುವ ಮಾರ್ಗವಾಗಿದೆ, ಮತ್ತು ಅದು ಭೂಪರಲೋಕಗಳಲ್ಲಿರುವ ಯೆಹೋವನ ಸಮಸ್ತ ನಂಬಿಗಸ್ತ ಸೃಷ್ಟಿಜೀವಿಗಳನ್ನು ಐಕ್ಯಗೊಳಿಸುತ್ತದೆ. ಒಬ್ಬ ದೇವದೂತನು ಈ ಆಜ್ಞೆಯನ್ನು ಘೋಷಿಸುವುದನ್ನು ಅಪೊಸ್ತಲ ಯೋಹಾನನು ದರ್ಶನದಲ್ಲಿ ಕಂಡನು: “ಭೂಲೋಕ ಪರಲೋಕಗಳನ್ನೂ ಸಮುದ್ರವನ್ನೂ ನೀರಿನ ಬುಗ್ಗೆಗಳನ್ನೂ ಉಂಟುಮಾಡಿದಾತನಿಗೆ ನಮಸ್ಕಾರಮಾಡಿರಿ [“ನಿರ್ಮಿಸಿದವನನ್ನು ಆರಾಧಿಸಿರಿ,” NW].”—ಪ್ರಕಟನೆ 14:7.
14 ನಾವು ಯೆಹೋವನನ್ನು ಏಕೆ ಆರಾಧಿಸಬೇಕು? ನಾವು ಚರ್ಚಿಸಿದ ಗುಣಗಳಾದ—ಪರಿಶುದ್ಧತೆ, ಶಕ್ತಿ, ಆತ್ಮನಿಯಂತ್ರಣ, ನ್ಯಾಯ, ಧೈರ್ಯ, ಕರುಣೆ, ವಿವೇಕ, ದೀನತೆ, ಪ್ರೀತಿ, ಕನಿಕರ, ನಿಷ್ಠೆ, ಮತ್ತು ಒಳ್ಳೇತನ ಮೊದಲಾದವುಗಳ ಕುರಿತು ಯೋಚಿಸಿರಿ. ಈ ಪ್ರತಿಯೊಂದು ಅತ್ಯಮೂಲ್ಯ ಗುಣಗಳ ಶಿಖರವನ್ನು, ಸಂಭಾವ್ಯವಾದ ಸರ್ವೋನ್ನತ ಮಟ್ಟವನ್ನು ಯೆಹೋವನು ಪ್ರತಿನಿಧಿಸುತ್ತಾನೆಂಬುದನ್ನು ನಾವು ನೋಡಿದೆವು. ಆತನ ಗುಣಲಕ್ಷಣಗಳ ಒಟ್ಟುಮೊತ್ತವನ್ನು ಯೆಶಾಯ 55:9) ಯೆಹೋವನು ನಮ್ಮ ನ್ಯಾಯವಾದ ಪರಮಾಧಿಕಾರಿಯೆಂಬುದಕ್ಕೆ ಯಾವ ಸಂಶಯವೂ ಇಲ್ಲ, ಮತ್ತು ಆತನು ಖಂಡಿತವಾಗಿಯೂ ನಮ್ಮ ಆರಾಧನೆಗೆ ಅರ್ಹನು. ಹೀಗಿರಲಾಗಿ, ನಾವು ಯೆಹೋವನನ್ನು ಹೇಗೆ ಆರಾಧಿಸಬೇಕು?
ನಾವು ಗ್ರಹಿಸಿಕೊಳ್ಳಲು ಪ್ರಯತ್ನಿಸುವಾಗ, ಆತನು ಒಬ್ಬ ಮಹಾನ್ ಗಣ್ಯ ವ್ಯಕ್ತಿಗಿಂತಲೂ ಎಷ್ಟೋ ಹೆಚ್ಚು ಸರ್ವೋತ್ತಮನಾಗಿ ಕಂಡುಬರುತ್ತಾನೆ. ಆತನು ಮಹಾ ಮಹಿಮಾಭೂಷಿತನೂ ನಮಗಿಂತ ಅಪರಿಮಿತ ಮಹೋನ್ನತನೂ ಆಗಿರುತ್ತಾನೆ. (15. ಯೆಹೋವನನ್ನು “ಆತ್ಮ ಮತ್ತು ಸತ್ಯದಿಂದ” ನಾವು ಹೇಗೆ ಆರಾಧಿಸಬಹುದು, ಮತ್ತು ಕ್ರೈಸ್ತ ಕೂಟಗಳು ಯಾವ ಸುಸಂದರ್ಭವನ್ನು ನಮಗೆ ನೀಡುತ್ತವೆ?
15 ಯೇಸುವಂದದ್ದು: “ದೇವರು ಆತ್ಮಸ್ವರೂಪನು; ಆತನನ್ನು ಆರಾಧಿಸುವವರು ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ [“ಆತ್ಮ ಮತ್ತು ಸತ್ಯದಿಂದ,” NW] ಆರಾಧಿಸಬೇಕು.” (ಯೋಹಾನ 4:24) ಇದರರ್ಥ ನಾವು ಆತನ ಆತ್ಮದಿಂದ ಮಾರ್ಗದರ್ಶಿಸಲ್ಪಟ್ಟವರಾಗಿ, ನಂಬಿಕೆ ಮತ್ತು ಪ್ರೀತಿ ತುಂಬಿರುವ ಹೃದಯದಿಂದ ಯೆಹೋವನನ್ನು ಆರಾಧಿಸಬೇಕು ಎಂಬುದೇ. ಸತ್ಯಕ್ಕೆ, ಅಂದರೆ ದೇವರ ವಾಕ್ಯದಲ್ಲಿ ಕಂಡುಬರುವ ನಿಷ್ಕೃಷ್ಟ ಜ್ಞಾನಕ್ಕೆ ಹೊಂದಿಕೆಯಲ್ಲಿ ಆರಾಧಿಸುವುದನ್ನೂ ಅದು ಅರ್ಥೈಸುತ್ತದೆ. ಜೊತೆ ಆರಾಧಕರೊಂದಿಗೆ ಕೂಡಿಬರುವಾಗಲೆಲ್ಲಾ ಯೆಹೋವನನ್ನು “ಆತ್ಮ ಮತ್ತು ಸತ್ಯದಿಂದ” ಆರಾಧಿಸುವ ಅಮೂಲ್ಯ ಸಂದರ್ಭವು ನಮಗಿದೆ. (ಇಬ್ರಿಯ 10:24, 25) ನಾವು ಯೆಹೋವನಿಗೆ ಸ್ತುತಿಗೀತಗಳನ್ನು ಹಾಡುವಾಗ, ಪ್ರಾರ್ಥನೆಯಲ್ಲಿ ಐಕ್ಯರಾಗುವಾಗ, ಮತ್ತು ಆತನ ವಾಕ್ಯದ ಚರ್ಚೆಗಳಿಗೆ ಕಿವಿಗೊಡುವಾಗ ಮತ್ತು ಅವುಗಳಲ್ಲಿ ಪಾಲಿಗರಾಗುವಾಗ ಶುದ್ಧಾರಾಧನೆಯಲ್ಲಿ ಪಾಲ್ಗೊಂಡು, ಅದರ ಮೂಲಕ ಆತನಿಗೆ ಪ್ರೀತಿಯನ್ನು ವ್ಯಕ್ತಪಡಿಸುತ್ತೇವೆ.
ಯೆಹೋವನನ್ನು ಆರಾಧಿಸಲು ಕ್ರೈಸ್ತ ಕೂಟಗಳು ಉಲ್ಲಾಸಕರವಾದ ಸುಸಂದರ್ಭಗಳಾಗಿವೆ
16. ಸತ್ಕ್ರೈಸ್ತರಿಗೆ ಕೊಡಲ್ಪಟ್ಟಿರುವ ಮಹಾ ಆಜ್ಞೆಗಳಲ್ಲೊಂದು ಯಾವುದು, ಮತ್ತು ನಾವು ಅದನ್ನು ವಿಧೇಯತೆಯಿಂದ ಪಾಲಿಸುವ ಹಂಗಿನವರಾಗಿದ್ದೇವೆ ಏಕೆ?
16 ಯೆಹೋವನನ್ನು ಬಹಿರಂಗವಾಗಿ ಸ್ತುತಿಸುತ್ತಾ, ಇತರರೊಂದಿಗೆ ಆತನ ಕುರಿತು ಮಾತನಾಡುವಾಗಲೂ ನಾವು ಯೆಹೋವನನ್ನು ಆರಾಧಿಸುತ್ತೇವೆ. (ಇಬ್ರಿಯ 13:15) ನಿಜ ಕ್ರೈಸ್ತರಿಗೆ ಕೊಡಲ್ಪಟ್ಟಿರುವ ಮಹತ್ತಾದ ಆಜ್ಞೆಗಳಲ್ಲೊಂದು ಯಾವುದೆಂದರೆ ಯೆಹೋವನ ರಾಜ್ಯದ ಸುವಾರ್ತೆಯನ್ನು ಸಾರುವುದೇ. (ಮತ್ತಾಯ 24:14) ನಾವದಕ್ಕೆ ಉತ್ಸಾಹದಿಂದ ವಿಧೇಯರಾಗುತ್ತೇವೆ ಯಾಕಂದರೆ ನಾವು ಯೆಹೋವನನ್ನು ಪ್ರೀತಿಸುತ್ತೇವೆ. ‘ಈ ಪ್ರಪಂಚದ ದೇವರಾದ’ ಪಿಶಾಚನಾದ ಸೈತಾನನು ಯೆಹೋವನ ವಿರುದ್ಧವಾಗಿ ಕೆಟ್ಟ ಸುಳ್ಳುಗಳನ್ನು ಪ್ರವರ್ಧಿಸುತ್ತಾ, ‘ನಂಬಿಕೆಯಿಲ್ಲದವರ ಮನಸ್ಸನ್ನು ಮಂಕುಮಾಡಿರುವ’ ರೀತಿಯ ಬಗ್ಗೆ ನಾವು ಯೋಚಿಸುವಾಗ, ನಮ್ಮ ದೇವರ ಪರವಾಗಿ ಆತನ ಸಾಕ್ಷಿಗಳಾಗಿ ಸೇವೆಮಾಡಿ ಅಂಥ ನಿಂದೆಯನ್ನು ಹೋಗಲಾಡಿಸುವುದಕ್ಕಾಗಿ ನಾವು ಹಂಬಲಿಸುವುದಿಲ್ಲವೇ? (2 ಕೊರಿಂಥ 4:4; ಯೆಶಾಯ 43:10-12) ಮತ್ತು ಯೆಹೋವನ ಆಶ್ಚರ್ಯಕರವಾದ ಗುಣಗಳ ಕುರಿತು ನಾವು ಪರ್ಯಾಲೋಚಿಸುವಾಗ, ಆತನ ಕುರಿತಾಗಿ ಇತರರಿಗೆ ತಿಳಿಸುವ ಅಪೇಕ್ಷೆಯು ನಮ್ಮಲ್ಲಿ ಉಕ್ಕಿಹರಿಯುವುದಿಲ್ಲವೆ? ನಮ್ಮ ಸ್ವರ್ಗೀಯ ತಂದೆಯನ್ನು ನಮ್ಮಂತೆಯೇ ಇತರರೂ ತಿಳಿದುಕೊಂಡು ಆತನನ್ನು ಪ್ರೀತಿಸುವಂತೆ ನೆರವಾಗುವುದಕ್ಕಿಂತ ಹೆಚ್ಚಿನ ಸುಯೋಗವು ಬೇರೆ ಇರಲಾರದು ನಿಶ್ಚಯ.
17. ಯೆಹೋವನನ್ನು ಆರಾಧಿಸುವುದರಲ್ಲಿ ಏನೆಲ್ಲಾ ಒಳಗೂಡಿರುತ್ತದೆ, ಮತ್ತು ನಾವು ಆತನನ್ನು ಸಮಗ್ರತೆಯಿಂದ ಆರಾಧಿಸಬೇಕು ಏಕೆ?
17 ಯೆಹೋವನನ್ನು ಆರಾಧಿಸುವುದರಲ್ಲಿ ಇನ್ನೂ ಹೆಚ್ಚಿನ ವಿಷಯವು ಸೇರಿರುತ್ತದೆ. ಅದು ನಮ್ಮ ಜೀವನದ ಪ್ರತಿಯೊಂದು ಅಂಶವನ್ನು ಪ್ರಭಾವಿಸುತ್ತದೆ. (ಕೊಲೊಸ್ಸೆ 3:23) ನಾವು ಯೆಹೋವನನ್ನು ನಿಜವಾಗಿಯೂ ನಮ್ಮ ಪರಮಾಧಿಕಾರಿ ಕರ್ತನಾಗಿ ಸ್ವೀಕರಿಸುವುದಾದರೆ, ನಾವು ಪ್ರತಿಯೊಂದು ವಿಷಯದಲ್ಲಿ—ನಮ್ಮ ಕುಟುಂಬ ಜೀವನ, ನಮ್ಮ ಐಹಿಕ ಉದ್ಯೋಗ, ಇತರರೊಂದಿಗಿನ ನಮ್ಮ ವ್ಯವಹಾರಗಳು, ನಮ್ಮ ಖಾಸಗಿ ವಿರಾಮ ಸಮಯಗಳಲ್ಲಿ—ಆತನ ಚಿತ್ತವನ್ನು ಮಾಡಲು ಪ್ರಯತ್ನಿಸುವೆವು. ನಾವು ಯೆಹೋವನನ್ನು “ಸಂಪೂರ್ಣಹೃದಯದಿಂದ” ಹೌದು, ಸಮಗ್ರತೆಯಿಂದ ಸೇವಿಸಲು ಹುಡುಕುವೆವು. (1 ಪೂರ್ವಕಾಲವೃತ್ತಾಂತ 28:9) ಅಂಥ ಆರಾಧನೆಯು ವಿಭಜಿತ ಹೃದಯಕ್ಕಾಗಲಿ ಇಬ್ಬಗೆಯ ಜೀವಿತಕ್ಕಾಗಲಿ—ಅಂದರೆ ಗುಪ್ತವಾಗಿ ಗಂಭೀರ ಪಾಪಗಳನ್ನು ಆಚರಿಸುತ್ತಾ ಯೆಹೋವನನ್ನು ಸೇವಿಸುವ ಸೋಗನ್ನು ಹಾಕುವ ಕಪಟಾಚರಣೆಗೆ—ಯಾವ ಅವಕಾಶವನ್ನೂ ಕೊಡುವುದಿಲ್ಲ. ಸಮಗ್ರತೆಯು ಅಂಥ ಕಪಟಾಚರಣೆಯನ್ನು ಅಶಕ್ಯವನ್ನಾಗಿ ಮಾಡುತ್ತದೆ; ಮತ್ತು ಪ್ರೀತಿಯು ಕಪಟತನದ ಬಗ್ಗೆ ಹೇಸಿಗೆಯನ್ನು ಹುಟ್ಟಿಸುತ್ತದೆ. ದೈವಿಕ ಭಯವು ಸಹ ಸಹಾಯಕಾರಿಯಾಗಿದೆ. ಇಂಥ ಪೂಜ್ಯಭಾವನೆಯನ್ನು ಬೈಬಲು ಯೆಹೋವನೊಂದಿಗಿನ ನಮ್ಮ ನಿರಂತರದ ಆಪ್ತ ಸಂಬಂಧದೊಂದಿಗೆ ಜೋಡಿಸುತ್ತದೆ.—ಕೀರ್ತನೆ 25:14, NW.
ಯೆಹೋವನನ್ನು ಅನುಕರಿಸುವುದು
18, 19. ಅಪರಿಪೂರ್ಣರಾದ ಮನುಷ್ಯ ಮಾತ್ರದವರು ಯೆಹೋವ ದೇವರನ್ನು ಅನುಕರಿಸಬಲ್ಲರೆಂದು ನೆನಸುವುದು ವಾಸ್ತವಿಕವೇಕೆ?
18 ಈ ಪುಸ್ತಕದ ಪ್ರತಿಯೊಂದು ವಿಭಾಗವು ‘ದೇವರ ಪ್ರಿಯರಾದ ಮಕ್ಕಳಿಗೆ ತಕ್ಕ ಹಾಗೆ ಆತನನ್ನು ಅನುಸರಿಸುವ [“ಅನುಕರಿಸುವ,” NW] ವರಾಗುವುದು’ ಹೇಗೆಂಬ ಅಧ್ಯಾಯದೊಂದಿಗೆ ಕೊನೆಗೊಂಡಿರುತ್ತದೆ. (ಎಫೆಸ 5:1) ನಾವು ಅಪರಿಪೂರ್ಣರಾಗಿದ್ದಾಗ್ಯೂ, ಶಕ್ತಿಯನ್ನು ಉಪಯೋಗಿಸುವ, ನ್ಯಾಯವನ್ನು ಅನುಸರಿಸುವ, ವಿವೇಕದಿಂದ ಕ್ರಿಯೆಗೈಯುವ, ಮತ್ತು ಪ್ರೀತಿ ತೋರಿಸುವ ಯೆಹೋವನ ಪರಿಪೂರ್ಣ ವಿಧಾನವನ್ನು ನಿಜವಾಗಿಯೂ ಅನುಕರಿಸಬಲ್ಲೆವು ಎಂಬುದನ್ನು ನೆನಪಿನಲ್ಲಿಡುವುದು ಪ್ರಾಮುಖ್ಯ. ಸರ್ವಶಕ್ತನಾದಾತನನ್ನು ಅನುಕರಿಸುವುದು ನಿಜವಾಗಿಯೂ ಶಕ್ಯ ಎಂದು ನಮಗೆ ತಿಳಿದಿರುವುದು ಹೇಗೆ? ಯೆಹೋವನ ಹೆಸರಿನ ಅರ್ಥವು, ಆತನು ತನ್ನ ಉದ್ದೇಶಗಳನ್ನು ನೆರವೇರಿಸುವುದಕ್ಕಾಗಿ ಏನಾಗಲು ಆರಿಸಿಕೊಳ್ಳುತ್ತಾನೋ ಹಾಗೆ ತನ್ನನ್ನು ಆಗಿಸಿಕೊಳ್ಳುತ್ತಾನೆಂದು ನಮಗೆ ಕಲಿಸುತ್ತದೆಂಬುದನ್ನು ಜ್ಞಾಪಕದಲ್ಲಿಡಿರಿ. ಆ ಶಕ್ತಿಯು ನಮ್ಮನ್ನು ನಿಜವಾಗಿಯೂ ಚಕಿತಗೊಳಿಸುತ್ತದೆ, ಆದರೆ ಅದು ಸಂಪೂರ್ಣವಾಗಿ ನಮ್ಮ ನಿಲುಕಿಗೆ ಮೀರಿದಂಥದ್ದೋ? ಇಲ್ಲ.
19 ನಾವು ದೇವರ ಸ್ವರೂಪದಲ್ಲಿ ನಿರ್ಮಿಸಲ್ಪಟ್ಟಿರುತ್ತೇವೆ. (ಆದಿಕಾಂಡ 1:26) ಆದುದರಿಂದ ಮಾನವರು ಭೂಮಿ ಮೇಲಿರುವ ಬೇರೆ ಯಾವುದೇ ಜೀವಿಗಳಿಗಿಂತ ಭಿನ್ನರಾಗಿದ್ದಾರೆ. ನಾವು ಕೇವಲ ಸಹಜ ಪ್ರವೃತ್ತಿ, ವಂಶವಾಹಿಗಳು, ಅಥವಾ ನಮ್ಮ ಪರಿಸರದಲ್ಲಿನ ಅಂಶಗಳಿಂದ ಪ್ರಭಾವಿತರಾಗಿಲ್ಲ. ಯೆಹೋವನು ನಮಗೆ ಇಚ್ಛಾಸ್ವಾತಂತ್ರ್ಯ ಎಂಬ ಅಮೂಲ್ಯ ವರದಾನವನ್ನು ಕೊಟ್ಟಿದ್ದಾನೆ. ನಮ್ಮ ಇತಿಮಿತಿಗಳು ಮತ್ತು ಅಪರಿಪೂರ್ಣತೆಗಳ ಹೊರತೂ, ನಾವೇನಾಗುವೆವೋ ಅದನ್ನು ಆರಿಸಿಕೊಳ್ಳಲು ನಾವು ಸ್ವತಂತ್ರರಿದ್ದೇವೆ. ಶಕ್ತಿಯನ್ನು ಯೋಗ್ಯವಾಗಿ ಉಪಯೋಗಿಸುವ ಪ್ರೀತಿಯೂ ನ್ಯಾಯವೂ ನೀತಿಯೂ ಉಳ್ಳ ವ್ಯಕ್ತಿಯಾಗಿರಲು ನೀವು ಬಯಸುತ್ತೀರೋ? ಯೆಹೋವನ ಆತ್ಮದ ಸಹಾಯದಿಂದ ನೀವು ಸರಿಯಾಗಿ ಅಂಥ ವ್ಯಕ್ತಿಯೇ ಆಗಬಲ್ಲಿರಿ! ಆ ಮೂಲಕ ನೀವು ಸಾಧಿಸಬಲ್ಲ ಒಳಿತಿನ ಕುರಿತು ಯೋಚಿಸಿರಿ.
20. ಯೆಹೋವನನ್ನು ನಾವು ಅನುಕರಿಸುವಾಗ ಯಾವ ಒಳಿತನ್ನು ಸಾಧಿಸುತ್ತೇವೆ?
20 ನೀವು ನಿಮ್ಮ ಸ್ವರ್ಗೀಯ ತಂದೆಯನ್ನು ಮೆಚ್ಚಿಸುವವರಾಗಿ ಆತನ ಹೃದಯವನ್ನು ಹರ್ಷಗೊಳಿಸುವಿರಿ. (ಜ್ಞಾನೋಕ್ತಿ 27:11) “ಎಲ್ಲಾ ವಿಧದಲ್ಲಿ ಆತನನ್ನು ಸಂತೋಷಪಡಿಸು”ವವರೂ ಆಗಿರಬಲ್ಲಿರಿ ಯಾಕಂದರೆ ಯೆಹೋವನು ನಿಮ್ಮ ಇತಿಮಿತಿಗಳನ್ನು ಬಲ್ಲವನಾಗಿದ್ದಾನೆ. (ಕೊಲೊಸ್ಸೆ 1:9, 10) ಮತ್ತು ನಿಮ್ಮ ಪ್ರಿಯ ತಂದೆಯ ಅನುಕರಣೆಯಲ್ಲಿ ನೀವು ಸದ್ಗುಣಗಳನ್ನು ಬೆಳೆಸಿಕೊಳ್ಳುತ್ತಾ ಹೋಗುವಾಗ, ನಿಮಗೊಂದು ಅಸದೃಶ ಸುಸಂದರ್ಭವು ಕೊಡಲ್ಪಡುವುದು. ದೇವರಿಂದ ದೂರಹೋಗಿರುವ ಈ ಅಂಧಕಾರಭರಿತ ಲೋಕದಲ್ಲಿ, ನೀವು ಒಬ್ಬ ಬೆಳಕುವಾಹಕರಾಗಿರುವಿರಿ. (ಮತ್ತಾಯ 5:1, 2, 14) ಯೆಹೋವನ ಮಹಿಮಾಭರಿತ ವ್ಯಕ್ತಿತ್ವದ ಕೆಲವು ಪ್ರತಿಫಲನಗಳನ್ನು ಭೂಮಿಯಲ್ಲೆಲ್ಲಾ ಹಬ್ಬಿಸಲು ನೀವು ಸಹಾಯಮಾಡುವಿರಿ. ಇದೆಂಥ ಒಂದು ಸನ್ಮಾನ!
“ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು”
21, 22. ಯೆಹೋವನನ್ನು ಪ್ರೀತಿಸುವವರೆಲ್ಲರ ಮುಂದೆ ಯಾವ ಅನಂತವಾದ ಪಯಣವು ಇದೆ?
21ಯಾಕೋಬ 4:8 ರಲ್ಲಿ ದಾಖಲೆಯಾದ ಈ ಸರಳವಾದ ಪ್ರೇರೇಪಣೆಯು ಬರಿಯ ಒಂದು ಧ್ಯೇಯಕ್ಕಿಂತ ಹೆಚ್ಚಿನದ್ದಾಗಿದೆ. ಅದೊಂದು ಪಯಣವಾಗಿದೆ. ನಾವು ಎಷ್ಟರ ತನಕ ನಂಬಿಗಸ್ತರಾಗಿ ಉಳಿಯುವೆವೋ ಅಷ್ಟರ ತನಕ ಆ ಪಯಣವು ಎಂದಿಗೂ ಅಂತ್ಯಗೊಳ್ಳದು. ನಾವು ದೇವರಿಗೆ ಹೆಚ್ಚೆಚ್ಚು ಸಮೀಪ ಬರುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ. ವಾಸ್ತವದಲ್ಲಿ, ಆತನ ಕುರಿತಾಗಿ ಕಲಿಯಲು ಯಾವಾಗಲೂ ಹೆಚ್ಚಿನ ವಿಷಯಗಳಿರುವವು. ಯೆಹೋವನ ಕುರಿತು ತಿಳಿಯತಕ್ಕ ಎಲ್ಲಾ ವಿಷಯಗಳನ್ನು ಈ ಪುಸ್ತಕವು ನಮಗೆ ಕಲಿಸಿದೆ ಎಂದು ನಾವು ನೆನಸಬಾರದು. ನಮ್ಮ ದೇವರ ಕುರಿತು ಬೈಬಲು ಹೇಳುವ ಎಲ್ಲಾ ವಿಷಯಗಳ ಚರ್ಚೆಯನ್ನು ನಾವು ಬರೇ ಆರಂಭಿಸಿದ್ದೇವೆ ಅಷ್ಟೇ! ಮತ್ತು ಬೈಬಲು ತಾನೇ ಯೆಹೋವನ ಕುರಿತು ನಾವು ತಿಳಿಯತಕ್ಕದಾದ ಎಲ್ಲವನ್ನೂ ನಮಗೆ ತಿಳಿಸುವುದೂ ಇಲ್ಲ. ಯೇಸು ತನ್ನ ಭೂಶುಶ್ರೂಷೆಯ ಸಮಯದಲ್ಲಿ ಮಾಡಿದ್ದ ಎಲ್ಲಾ ಸಂಗತಿಗಳನ್ನು ಬರವಣಿಗೆಯಲ್ಲಿ ಹಾಕಿದ್ದುದಾದರೆ “ಬರೆಯಬೇಕಾದ ಪುಸ್ತಕಗಳನ್ನು ಲೋಕವೇ ಹಿಡಿಸದೆ ಹೋದೀತೆಂದು” ಅಪೊಸ್ತಲ ಯೋಹಾನನು ಹೇಳಿದನು. (ಯೋಹಾನ 21:25) ಪುತ್ರನ ಕುರಿತಾಗಿಯೇ ಇಂಥ ಒಂದು ವಿಷಯವನ್ನು ಹೇಳಸಾಧ್ಯವಾಗಿದ್ದಲ್ಲಿ, ತಂದೆಯ ಕುರಿತಾಗಿ ಇನ್ನೆಷ್ಟು ಹೆಚ್ಚನ್ನು ಹೇಳಸಾಧ್ಯವಿದ್ದೀತು!
ಪ್ರಸಂಗಿ 3:11) ಹೀಗಿರಲಾಗಿ, ನಮ್ಮ ಮುಂದಿರುವ ಪ್ರತೀಕ್ಷೆಯ ಕುರಿತು ಯೋಚಿಸಿರಿ. ನೂರಾರು, ಸಾವಿರಾರು, ಲಕ್ಷಾಂತರ, ಮತ್ತು ಕೋಟ್ಯಂತರ ವರ್ಷಗಳ ತನಕ ಜೀವಿಸಿದ ನಂತರ ನಮಗೆ ಯೆಹೋವ ದೇವರ ಕುರಿತು ಈಗ ತಿಳಿದಿರುವುದಕ್ಕಿಂತ ಎಷ್ಟೋ ಹೆಚ್ಚು ತಿಳಿದಿರುವುದು. ಆದರೂ ಕಲಿಯಲು ಅಗಣಿತ ಆಶ್ಚರ್ಯಕರ ವಿಷಯಗಳು ಇನ್ನೂ ಇವೆಯೆಂದು ನಮಗೆ ತಿಳಿದುಬರುವುದು. ನಾವು ಇನ್ನೂ ಹೆಚ್ಚನ್ನು ಕಲಿಯಲು ಆತುರದಿಂದಿರುವೆವು. “ನನಗಾದರೋ ದೇವರ ಸಮೀಪ ಬರುವುದೇ ಒಳ್ಳೆಯದಾಗಿದೆ” ಎಂದು ಹಾಡಿದ ಕೀರ್ತನೆಗಾರನಂತೆ ಭಾವಿಸಲು ನಮಗೆ ಯಾವಾಗಲೂ ಸಕಾರಣವಿರುವದು. (ಕೀರ್ತನೆ 73:28, NW) ಅನಂತ ಜೀವನವು ನಾವು ಊಹಿಸಲೂ ಆಗದಷ್ಟು ವೈವಿಧ್ಯವುಳ್ಳದ್ದೂ ಅರ್ಥಭರಿತವೂ ಆಗಿರುವುದು ಮತ್ತು ಯೆಹೋವನ ಸಮೀಪಕ್ಕೆ ಬರುವುದು ಯಾವಾಗಲೂ ನಿತ್ಯಜೀವದ ಅತ್ಯಂತ ಪ್ರತಿಫಲದಾಯಕ ಭಾಗವಾಗಿರುವುದು.
22 ಯೆಹೋವನ ಕುರಿತಾಗಿ ನಾವು ಕಲಿಯುವುದನ್ನು ನಿತ್ಯಜೀವವು ಸಹ ಅಂತ್ಯಗೊಳಿಸಲಾರದು. (23. ನೀವು ಏನು ಮಾಡುವಂತೆ ಪ್ರೋತ್ಸಾಹಿಸಲ್ಪಟ್ಟಿದ್ದೀರಿ?
23 ಯೆಹೋವನನ್ನು ಪೂರ್ಣಹೃದಯದಿಂದಲೂ ಆತ್ಮದಿಂದಲೂ ಮನಸ್ಸಿನಿಂದಲೂ ಶಕ್ತಿಯಿಂದಲೂ ಪ್ರೀತಿಸುವ ಮೂಲಕ ಆತನ ಪ್ರೀತಿಗೆ ನೀವು ಪ್ರತಿವರ್ತನೆಯನ್ನು ತೋರಿಸುವಂತಾಗಲಿ. (ಮಾರ್ಕ 12:29, 30) ನಿಮ್ಮ ಪ್ರೀತಿಯು ನಿಷ್ಠೆಯುಳ್ಳದ್ದೂ ದೃಢವಾದದ್ದೂ ಆಗಿರಲಿ. ನೀವು ದಿನಂಪ್ರತಿ ಮಾಡುವ ನಿರ್ಣಯಗಳು, ಎಷ್ಟೇ ಚಿಕ್ಕದಾಗಿರಲಿ ದೊಡ್ಡದಾಗಿರಲಿ, ಎಲ್ಲವೂ ಈ ಒಂದೇ ಮಾರ್ಗದರ್ಶಕ ತತ್ತ್ವವನ್ನು ಪ್ರತಿಬಿಂಬಿಸಲಿ: ನಿಮ್ಮ ಸ್ವರ್ಗೀಯ ತಂದೆಯೊಂದಿಗೆ ಹೆಚ್ಚು ಬಲವಾದ ಸಂಬಂಧಕ್ಕೆ ನಡಿಸುವಂಥ ಮಾರ್ಗವನ್ನೇ ನೀವು ಯಾವಾಗಲೂ ಆರಿಸಿಕೊಳ್ಳುವಿರಿ. ಎಲ್ಲದಕ್ಕಿಂತಲೂ ಹೆಚ್ಚಾಗಿ, ನೀವು ಯೆಹೋವನಿಗೆ ಸದಾ ಹೆಚ್ಚೆಚ್ಚು ಸಮೀಪವಾಗಿ ಬರುತ್ತಾ ಇರುವಂತಾಗಲಿ, ಮತ್ತು ಆತನೂ ನಿತ್ಯಕ್ಕೂ ನಿಮ್ಮ ಸಮೀಪಕ್ಕೆ ಬರುವಂತಾಗಲಿ!