ಅಧ್ಯಾಯ 2
ನೀವು ನಿಜವಾಗಿ ‘ದೇವರ ಸಮೀಪಕ್ಕೆ ಬರಬಲ್ಲಿರೊ?’
1, 2. (ಎ) ಅನೇಕರಿಗೆ ಯಾವುದು ಅಸಾಧ್ಯವಾಗಿ ತೋರಬಹುದು, ಆದರೆ ಬೈಬಲು ನಮಗೆ ಯಾವ ಆಶ್ವಾಸನೆಯನ್ನು ನೀಡುತ್ತದೆ? (ಬಿ) ಅಬ್ರಹಾಮನಿಗೆ ಯಾವ ಆಪ್ತ ಸಂಬಂಧವನ್ನು ದಯಪಾಲಿಸಲಾಯಿತು, ಮತ್ತು ಏಕೆ?
ಭೂಪರಲೋಕಗಳ ಸೃಷ್ಟಿಕರ್ತನು ನಿಮ್ಮ ಕುರಿತಾಗಿ, “ಇವನು ನನ್ನ ಸ್ನೇಹಿತ” ಎಂದು ಹೇಳುವಲ್ಲಿ, ನಿಮಗೆ ಹೇಗನಿಸೀತು? ಅನೇಕರಿಗೆ ಇದು ಅಸಾಧ್ಯವಾಗಿ ತೋರಬಹುದು. ಎಷ್ಟೆಂದರೂ ಒಬ್ಬ ಮನುಷ್ಯ ಮಾತ್ರದವನು ಯೆಹೋವ ದೇವರೊಂದಿಗೆ ಮಿತ್ರತ್ವವನ್ನು ಮಾಡಿಕೊಳ್ಳುವುದಾದರೂ ಹೇಗೆ? ಆದರೂ ನಾವು ನಿಜವಾಗಿಯೂ ದೇವರಿಗೆ ಸಮೀಪವಾಗಿರಬಲ್ಲೆವೆಂದು ಬೈಬಲು ನಮಗೆ ಆಶ್ವಾಸನೆಯನ್ನು ನೀಡುತ್ತದೆ.
2 ಪುರಾತನ ಕಾಲದ ಅಬ್ರಹಾಮನು ಅಂಥ ಆಪ್ತತೆಯನ್ನು ಆನಂದಿಸಿದವರಲ್ಲಿ ಒಬ್ಬನಾಗಿದ್ದನು. ಆ ಪೂರ್ವಜನನ್ನು ಯೆಹೋವನು “ನನ್ನ ಸ್ನೇಹಿತ” ಎಂದು ಕರೆದನು. (ಯೆಶಾಯ 41:8) ಹೌದು, ಯೆಹೋವನು ಅಬ್ರಹಾಮನನ್ನು ಒಬ್ಬ ವೈಯಕ್ತಿಕ ಸ್ನೇಹಿತನಾಗಿ ಪರಿಗಣಿಸಿದ್ದನು. ಅಬ್ರಹಾಮನಿಗೆ ಆ ಆಪ್ತ ಸಂಬಂಧದ ಅನುಗ್ರಹವು ದೊರೆತದ್ದು ಅವನು ‘ದೇವರನ್ನು ನಂಬಿದ’ ಕಾರಣದಿಂದಲೇ. (ಯಾಕೋಬ 2:23) ಇಂದು ಸಹ ಯೆಹೋವನು, ಪ್ರೀತಿಯಿಂದ ತನ್ನ ಸೇವೆಮಾಡುವವರೊಂದಿಗೆ “ಇಷ್ಟವುಳ್ಳ”ವನಾಗುವ ಸಂದರ್ಭಗಳಿಗಾಗಿ ಹುಡುಕುತ್ತಿದ್ದಾನೆ. (ಧರ್ಮೋಪದೇಶಕಾಂಡ 10:15) ಆತನ ವಾಕ್ಯವು ಪ್ರೋತ್ಸಾಹಿಸುವುದು: “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು.” (ಯಾಕೋಬ 4:8) ಈ ಮಾತುಗಳಲ್ಲಿ ಒಂದು ಆಮಂತ್ರಣ ಮತ್ತು ಒಂದು ವಾಗ್ದಾನ, ಹೀಗೆ ಎರಡೂ ಸೇರಿರುತ್ತವೆ.
3. ಯೆಹೋವನು ನಮಗೆ ಯಾವ ಆಮಂತ್ರಣವನ್ನು ನೀಡುತ್ತಾನೆ, ಮತ್ತು ಅದರಲ್ಲಿ ಯಾವ ವಾಗ್ದಾನವು ಸೇರಿರುತ್ತದೆ?
3 ಯೆಹೋವನು ನಮ್ಮನ್ನು ಆತನ ಹತ್ತಿರಕ್ಕೆ ಬರುವಂತೆ ಆಮಂತ್ರಿಸುತ್ತಾನೆ. ಸ್ನೇಹಿತರೋಪಾದಿ ಆತನ ಅನುಗ್ರಹದೊಳಗೆ ನಮ್ಮನ್ನು ಸೇರಿಸಿಕೊಳ್ಳಲು ಆತನು ಸಿದ್ಧನೂ ಇಷ್ಟವುಳ್ಳವನೂ ಆಗಿರುತ್ತಾನೆ. ಅದೇ ಸಮಯದಲ್ಲಿ, ಆತನು ವಾಗ್ದಾನಿಸುವುದೇನೆಂದರೆ ಆತನ ಸಮೀಪಕ್ಕೆ ಬರಲು ನಾವು ಹೆಜ್ಜೆಗಳನ್ನು ತೆಗೆದುಕೊಳ್ಳುವುದಾದರೆ, ಆತನೂ ಅನುರೂಪವಾದ ಕ್ರಿಯೆಯನ್ನು ಕೈಕೊಳ್ಳುವನು. ಅಂದರೆ ಆತನೂ ನಮ್ಮ ಸಮೀಪಕ್ಕೆ ಬರುವನು. ಹೀಗೆ ನಾವು ನಿಜವಾಗಿಯೂ ಅತಿ ಅಮೂಲ್ಯವಾದ ಸಂಬಂಧಕ್ಕೆ, ಯೆಹೋವನೊಂದಿಗೆ “ಆಪ್ತ” ಸಂಬಂಧಕ್ಕೆ ಪ್ರವೇಶಿಸಬಲ್ಲೆವು. * (ಕೀರ್ತನೆ 25:14) “ಆಪ್ತ” ಸಂಬಂಧವು ಒಬ್ಬ ಪ್ರಿಯ ಮಿತ್ರನೊಂದಿಗಿನ ಅಂತರಂಗದ ಮಾತುಕತೆಯ ವಿಚಾರವನ್ನು ಸೂಚಿಸುತ್ತದೆ.
4. ಒಬ್ಬ ಆಪ್ತ ಮಿತ್ರನನ್ನು ನೀವು ಹೇಗೆ ವರ್ಣಿಸುವಿರಿ, ಮತ್ತು ತನ್ನ ಸಮೀಪಕ್ಕೆ ಬರುವವರಿಗೆ ಯೆಹೋವನು ಯಾವ ರೀತಿಯಲ್ಲಿ ಅಂಥ ಸ್ನೇಹಿತನಾಗಿ ಪರಿಣಮಿಸುವನು?
ಕೀರ್ತನೆ 103:14; 1 ಪೇತ್ರ 5:7) ನಿಮ್ಮ ಹೃದಯಾಂತರಾಳದ ಭಾವನೆಗಳನ್ನು ಆತನಲ್ಲಿ ತೋಡಿಕೊಳ್ಳುತ್ತೀರಿ, ಏಕೆಂದರೆ ಯಾರು ಆತನಿಗೆ ನಿಷ್ಠಾವಂತರೊ ಅವರಿಗೆ ಆತನು ನಿಷ್ಠಾವಂತನು. ಆದರೂ, ದೇವರೊಂದಿಗಿನ ಈ ಆಪ್ತತೆಯ ವಿಶೇಷಾಧಿಕಾರವು ನಮಗೆ ಲಭ್ಯವಾದದ್ದು, ಆತನು ನಮಗದನ್ನು ಸಾಧ್ಯಗೊಳಿಸಿರುವುದರಿಂದ ಮಾತ್ರವೇ.
4 ನೀವು ನಿಮ್ಮ ಅಂತರಂಗದ ವಿಷಯಗಳನ್ನು ತಿಳಿಸಬಲ್ಲ ನಂಬಿಕೆಗರ್ಹನಾದ ಆಪ್ತ ಮಿತ್ರನು ನಿಮಗಿದ್ದಾನೊ? ಅಂಥ ಮಿತ್ರನು ನಿಮ್ಮ ಕುರಿತು ಚಿಂತಿಸುವ ವ್ಯಕ್ತಿಯಾಗಿದ್ದಾನೆ. ನೀವು ಆತನಲ್ಲಿ ವಿಶ್ವಾಸವಿಡುತ್ತೀರಿ ಯಾಕಂದರೆ ಅವನು ನಿಷ್ಠೆಯುಳ್ಳ ವ್ಯಕ್ತಿಯಾಗಿ ಕಂಡುಬಂದಿದ್ದಾನೆ. ನಿಮ್ಮ ಸಂತೋಷಗಳನ್ನು ಅವನೊಂದಿಗೆ ಹಂಚಿಕೊಳ್ಳುವಾಗ ಅವು ದ್ವಿಗುಣವಾಗುತ್ತವೆ. ಅವನು ಅನುಕಂಪದಿಂದ ನಿಮಗೆ ಕಿವಿಗೊಡುವಾಗ, ನಿಮ್ಮ ದುಃಖದ ಭಾರವು ಹಗುರವಾಗುತ್ತದೆ. ಬೇರೆ ಯಾರೂ ನಿಮ್ಮನ್ನು ಅರ್ಥಮಾಡಿಕೊಳ್ಳದಿದ್ದರೂ, ಅವನು ಅರ್ಥಮಾಡಿಕೊಳ್ಳುತ್ತಾನೆ. ತದ್ರೀತಿಯಲ್ಲಿ ನೀವು ದೇವರ ಸಮೀಪಕ್ಕೆ ಬರುವಾಗ, ನಿಮಗೊಬ್ಬ ವಿಶೇಷ ಮಿತ್ರನು ದೊರೆಯುತ್ತಾನೆ. ನೀವು ನಿಜವಾಗಿ ಆತನಿಗೆ ಅಮೂಲ್ಯವಾಗಿದ್ದೀರಿ, ನಿಮ್ಮ ಕುರಿತು ಆತನು ಆಳವಾಗಿ ಚಿಂತಿಸುತ್ತಾನೆ, ಮತ್ತು ನಿಮ್ಮನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತಾನೆ. (ಆ ದಾರಿಯನ್ನು ಯೆಹೋವನು ತೆರೆದಿದ್ದಾನೆ
5. ನಾವಾತನಿಗೆ ಸಮೀಪವಾಗಿರುವುದನ್ನು ಸಾಧ್ಯಗೊಳಿಸಲು ಯೆಹೋವನು ಏನು ಮಾಡಿದನು?
5 ಪಾಪಿಗಳೋಪಾದಿ ನಾವಾಗಿಯೇ ನಾವೆಂದಿಗೂ ದೇವರ ಸಮೀಪಕ್ಕೆ ಬರಲು ಸಾಧ್ಯವಿರುತ್ತಿರಲಿಲ್ಲ. (ಕೀರ್ತನೆ 5:4) “ಆದರೆ ನಾವು ಪಾಪಿಗಳಾಗಿದ್ದಾಗಲೂ ಕ್ರಿಸ್ತನು ನಮಗೋಸ್ಕರ ಪ್ರಾಣಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ಸಿದ್ಧಾಂತಪಡಿಸಿದ್ದಾನೆ,” ಎಂದು ಅಪೊಸ್ತಲ ಪೌಲನು ಬರೆದನು. (ರೋಮಾಪುರ 5:8) ಹೌದು, “ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ” ಯೇಸು “ತನ್ನ ಪ್ರಾಣವನ್ನು ಈಡು ಕೊಡು”ವಂತೆ ಯೆಹೋವನು ಏರ್ಪಡಿಸಿದನು. (ಮತ್ತಾಯ 20:28) ಆ ಈಡು ಯಜ್ಞದಲ್ಲಿ ನಾವು ಇಡುವ ನಂಬಿಕೆಯು ನಾವು ದೇವರ ಸಮೀಪವಿರುವಂತೆ ಸಾಧ್ಯಮಾಡುತ್ತದೆ. ದೇವರೇ “ಮೊದಲು ನಮ್ಮನ್ನು ಪ್ರೀತಿಸಿದ್ದರಿಂದ,” ಆತನೊಂದಿಗಿನ ಸ್ನೇಹಸಂಬಂಧದೊಳಗೆ ಪ್ರವೇಶಿಸುವುದಕ್ಕಾಗಿ ತಳಪಾಯವನ್ನು ಹಾಕಿದಾತನು ಆತನೇ.—1 ಯೋಹಾನ 4:19.
6, 7. (ಎ) ಯೆಹೋವನು ಎಲ್ಲೊ ಅವಿತುಕೊಂಡಿರುವ, ತಿಳಿಯಲು ಅಸಾಧ್ಯವಾಗಿರುವಂಥ ಒಬ್ಬ ದೇವರಲ್ಲವೆಂದು ನಮಗೆ ತಿಳಿದಿರುವುದು ಹೇಗೆ? (ಬಿ) ಯಾವ ವಿಧಗಳಲ್ಲಿ ಯೆಹೋವನು ತನ್ನನ್ನು ಪ್ರಕಟಪಡಿಸಿದ್ದಾನೆ?
6 ಯೆಹೋವನು ಇನ್ನೊಂದು ಹೆಜ್ಜೆಯನ್ನು ತೆಗೆದುಕೊಂಡನು: ತನ್ನನ್ನು ನಮಗೆ ಪ್ರಕಟಪಡಿಸಿಕೊಂಡನು. ಯಾವುದೇ ಒಂದು ಸ್ನೇಹಬಂಧದಲ್ಲಿ ಆಪ್ತತೆಗೆ ಆಧಾರವು, ಆ ವ್ಯಕ್ತಿಯನ್ನು ನಿಜವಾಗಿ ತಿಳಿದುಕೊಳ್ಳುವುದು, ಅವನ ಗುಣಗಳನ್ನೂ ಮಾರ್ಗಗಳನ್ನೂ ಅಮೂಲ್ಯವೆಂದೆಣಿಸುವುದು ಆಗಿರುತ್ತದೆ. ಆದುದರಿಂದ, ಯೆಹೋವನು ಎಲ್ಲೊ ಅವಿತುಕೊಂಡಿರುವ, ತಿಳಿಯಲು ಅಸಾಧ್ಯವಾಗಿರುವಂಥ ದೇವರಾಗಿರುತ್ತಿದ್ದರೆ, ನಾವಾತನ ಯೆಶಾಯ 45:19) ಅಷ್ಟಲ್ಲದೆ, ಆತನು ತನ್ನ ಕುರಿತು ಏನನ್ನು ಪ್ರಕಟಪಡಿಸುತ್ತಾನೊ ಅದು ಎಲ್ಲರಿಗೂ ಲಭ್ಯವಿದೆ, ಲೋಕದ ಮಟ್ಟಕ್ಕನುಸಾರ ಅಲ್ಪರೆಂದು ಪರಿಗಣಿಸಲ್ಪಡಬಹುದಾದ ಜನರಿಗೆ ಸಹ.—ಮತ್ತಾಯ 11:25.
ಸಮೀಪಕ್ಕೆ ಎಂದಿಗೂ ಬರಲು ಸಾಧ್ಯವಾಗುತ್ತಿರಲಿಲ್ಲ. ಆದರೂ ತನ್ನನ್ನು ಮರೆಮಾಡಿಟ್ಟುಕೊಳ್ಳುವ ಬದಲಿಗೆ, ನಾವು ಆತನ ಬಗ್ಗೆ ತಿಳಿಯುವಂತೆ ಆತನು ಬಯಸುತ್ತಾನೆ. (7 ಯೆಹೋವನು ತನ್ನನ್ನು ನಮಗೆ ಪ್ರಕಟಪಡಿಸಿರುವುದು ಹೇಗೆ? ಆತನ ಸೃಷ್ಟಿಕಾರ್ಯವು ಆತನ ವ್ಯಕ್ತಿತ್ವದ ಕೆಲವು ಮುಖಮುದ್ರೆಗಳನ್ನು, ಅಂದರೆ ಆತನ ಶಕ್ತಿಯ ಅಪಾರತೆ, ಆತನ ವಿವೇಕದ ಗಹನತೆ, ಮತ್ತು ಆತನ ಪ್ರೀತಿಯ ವೈಶಾಲ್ಯವನ್ನು ತಿಳಿಯಪಡಿಸುತ್ತದೆ. (ರೋಮಾಪುರ 1:20) ಆದರೆ ಯೆಹೋವನು ಕೇವಲ ತಾನು ನಿರ್ಮಿಸಿರುವ ವಸ್ತುಗಳ ಮೂಲಕ ಮಾತ್ರ ತನ್ನನ್ನು ಪ್ರಕಟಪಡಿಸಿಲ್ಲ. ಮಹಾ ಸಂವಾದಕನಾದ ಯೆಹೋವ ದೇವರು ತನ್ನ ವಾಕ್ಯವಾದ ಬೈಬಲಿನ ಮುಖಾಂತರ ತನ್ನ ಬಗ್ಗೆ ಲಿಖಿತ ರೂಪದಲ್ಲೂ ಪ್ರಕಟಪಡಿಸಿರುತ್ತಾನೆ.
‘ಯೆಹೋವನ ಪ್ರಸನ್ನತೆಯನ್ನು’ ಕಾಣುವುದು
8. ನಮ್ಮ ಕಡೆಗೆ ಯೆಹೋವನಿಗಿರುವ ಪ್ರೀತಿಗೆ ಬೈಬಲು ತಾನೇ ಒಂದು ರುಜುವಾತಾಗಿದೆಯೆಂದು ಏಕೆ ಹೇಳಬಹುದು?
8 ನಮ್ಮ ಕಡೆಗೆ ಯೆಹೋವನಿಗಿರುವ ಪ್ರೀತಿಗೆ ಬೈಬಲು ತಾನೇ ಒಂದು ರುಜುವಾತಾಗಿದೆ. ಆತನ ವಾಕ್ಯದಲ್ಲಿ ನಾವಾತನನ್ನು ಗ್ರಹಿಸಬಹುದಾದ ರೀತಿಯಲ್ಲಿ ಆತನು ತನ್ನನ್ನು ಪ್ರಕಟಪಡಿಸಿದ್ದಾನೆ. ಇದು ಆತನು ನಮ್ಮನ್ನು ಪ್ರೀತಿಸುತ್ತಾನೆಂಬುದಕ್ಕೆ ಮಾತ್ರವಲ್ಲ ನಾವಾತನನ್ನು ತಿಳಿಯಬೇಕು ಮತ್ತು ಪ್ರೀತಿಸಬೇಕು ಎಂದು ಆತನು ಬಯಸುತ್ತಾನೆ ಎಂಬುದಕ್ಕೂ ರುಜುವಾತಾಗಿದೆ. ಈ ಅಮೂಲ್ಯವಾದ ಪುಸ್ತಕದಲ್ಲಿ ನಾವೇನನ್ನು ಓದುತ್ತೇವೊ ಅದು ನಮಗೆ ‘ಯೆಹೋವನ ಪ್ರಸನ್ನತೆಯನ್ನು’ ಕಾಣುವಂತೆ ಸಾಧ್ಯಗೊಳಿಸಿ, ಆತನ ಸಮೀಪವಿರಲು ಬಯಸುವಂತೆ ಪ್ರೇರೇಪಿಸುತ್ತದೆ. (ಕೀರ್ತನೆ 90:17) ಯೆಹೋವನು ತನ್ನ ವಾಕ್ಯದಲ್ಲಿ ತನ್ನ ಬಗ್ಗೆ ಪ್ರಕಟಪಡಿಸಿರುವಂಥ ಕೆಲವು ಹೃದಯೋಲ್ಲಾಸಕರ ವಿಧಾನಗಳನ್ನು ನಾವೀಗ ಚರ್ಚಿಸೋಣ.
9. ಬೈಬಲಿನಲ್ಲಿ ದೇವರ ಗುಣಗಳನ್ನು ತಿಳಿಸುವ ನೇರ ಹೇಳಿಕೆಗಳ ಕೆಲವು ಉದಾಹರಣೆಗಳಾವುವು?
9 ದೇವರ ಗುಣಗಳನ್ನು ತಿಳಿಸುವ ಅನೇಕ ನೇರವಾದ ಹೇಳಿಕೆಗಳು ಬೈಬಲಿನಲ್ಲಿ ಅಡಕವಾಗಿವೆ. ಕೆಲವು ಉದಾಹರಣೆಗಳನ್ನು ಗಮನಿಸಿರಿ. “ಯೆಹೋವನು ನ್ಯಾಯವನ್ನು ಮೆಚ್ಚುವವನು.” (ಕೀರ್ತನೆ 37:28) ದೇವರ “ಶಕ್ತಿಯು ಅಪಾರ.” (ನಹೂಮ 1:3) “ಯೆಹೋವನು ಹೀಗನ್ನುತ್ತಾನೆ, . . . ನಾನು ಕರುಣಾಶಾಲಿ [“ನಿಷ್ಠಾವಂತನು,” NW].” (ಯೆರೆಮೀಯ 3:12) “ದೇವರ ಹೃದಯವು ವಿವೇಕವುಳ್ಳದ್ದು.” (ಯೋಬ 9:4) ಆತನು “ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಘಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳವನು.” (ವಿಮೋಚನಕಾಂಡ 34:6) “ಓ ಯೆಹೋವನೇ, ನೀನು ಒಳ್ಳೆಯವನೂ ಕ್ಷಮಿಸಲು ಸಿದ್ಧನೂ ಆಗಿದ್ದೀ.” (ಕೀರ್ತನೆ 86:5, NW) ಮತ್ತು ಹಿಂದಿನ ಅಧ್ಯಾಯದಲ್ಲಿ ತಿಳಿಸಿದ ಪ್ರಕಾರ, “ದೇವರು ಪ್ರೀತಿಸ್ವರೂಪಿ.” ಅದೇ ಆತನ ಅತೀ ಪ್ರಧಾನ ಗುಣವಾಗಿದೆ. (1 ಯೋಹಾನ 4:8) ಈ ಮನಮೋಹಕ ಗುಣಗಳನ್ನು ನೀವು ಅವಲೋಕಿಸುವಾಗ, ಈ ಅತುಲ್ಯನಾದ ದೇವರ ಕಡೆಗೆ ನೀವು ಸೆಳೆಯಲ್ಪಡುವುದಿಲ್ಲವೇ?
ಯೆಹೋವನ ಸಮೀಪಕ್ಕೆ ಬರುವಂತೆ ಬೈಬಲು ನಮಗೆ ಸಹಾಯಮಾಡುತ್ತದೆ
10, 11. (ಎ) ನಾವು ಆತನ ವ್ಯಕ್ತಿತ್ವವನ್ನು ಅಧಿಕ ಸ್ಪಷ್ಟವಾಗಿ ಕಾಣಲು ನಮ್ಮ ಸಹಾಯಕ್ಕಾಗಿ ಯೆಹೋವನು ತನ್ನ ವಾಕ್ಯದಲ್ಲಿ ಏನನ್ನು ಒಳಗೂಡಿಸಿದ್ದಾನೆ? (ಬಿ) ಕ್ರಿಯೆಯಲ್ಲಿ ತೋರಿಬರುವ ದೇವರ ಶಕ್ತಿಯನ್ನು ಚಿತ್ರಿಸಿಕೊಳ್ಳುವಂತೆ ನಮಗೆ ಯಾವ ಉದಾಹರಣೆಯು ಸಹಾಯಮಾಡುತ್ತದೆ?
10 ಯೆಹೋವನು ತನ್ನ ಗುಣಗಳನ್ನು ನಮಗೆ ತಿಳಿಸಿರುವುದು ಮಾತ್ರವಲ್ಲದೆ, ಈ ಗುಣಗಳು ಕ್ರಿಯೆಯಲ್ಲಿ ತೋರಿಸಲ್ಪಟ್ಟಿರುವಂಥ ನಿರ್ದಿಷ್ಟ ಉದಾಹರಣೆಗಳನ್ನೂ ಪ್ರೀತಿಪೂರ್ವಕವಾಗಿ ನಮಗೆ ತನ್ನ ವಾಕ್ಯದಲ್ಲಿ ಒದಗಿಸಿರುತ್ತಾನೆ. ಅಂಥ ವೃತ್ತಾಂತಗಳು ಆತನ ವ್ಯಕ್ತಿತ್ವದ ವಿವಿಧ ಮುಖಮುದ್ರೆಗಳನ್ನು ಕಾಣುವಂತೆ ಸಹಾಯಮಾಡುವ ಸ್ಪಷ್ಟ ಚಿತ್ರಣಗಳನ್ನು ನಮ್ಮ ಮನಸ್ಸಿನಲ್ಲಿ ಮೂಡಿಸುತ್ತವೆ. ಇದು, ಪ್ರತಿಯಾಗಿ ನಾವು ದೇವರ ಸಮೀಪಕ್ಕೆ ಬರುವಂತೆ ನಮಗೆ ನೆರವು ನೀಡುತ್ತದೆ. ಒಂದು ಉದಾಹರಣೆಯನ್ನು ಗಮನಿಸಿರಿ.
11 ದೇವರು “ಮಹಾಶಕ್ತ”ನಾಗಿದ್ದಾನೆಂದು ನಾವು ಬೈಬಲಿನಲ್ಲಿ ಓದುತ್ತೇವೆ. (ಯೆಶಾಯ 40:26) ಆದರೆ ಇಸ್ರಾಯೇಲ್ಯರನ್ನು ಆತನು ಕೆಂಪು ಸಮುದ್ರದೊಳಗಿಂದ ಹೇಗೆ ಪಾರುಗೊಳಿಸಿದನು ಮತ್ತು ಅನಂತರ ಆ ಜನಾಂಗವನ್ನು ಅರಣ್ಯದಲ್ಲಿ 40 ವರುಷ ಹೇಗೆ ಪೋಷಿಸಿದನೆಂಬುದನ್ನು ಓದುವಾಗ ಆತನ ಶಕ್ತಿಯ ಬಗ್ಗೆ ನಮಗೆ ಹೆಚ್ಚು ಸ್ಪಷ್ಟವಾದ ಚಿತ್ರಣವು ಸಿಗುತ್ತದೆ. ಉಕ್ಕೇರುತ್ತಿದ್ದ ನೀರು ಸರ್ರನೆ ಸರಿದು ಇಬ್ಭಾಗವಾಗುವುದನ್ನು ನೀವು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಬಹುದು. ಎರಡೂ ಪಕ್ಕಗಳಲ್ಲಿ ಗಟ್ಟಿಯಾಗಿರುವ ನೀರು ಬೃಹತ್ ಗೋಡೆಗಳಾಗಿ ನಿಂತಿರುವಾಗ, ಪ್ರಾಯಶಃ ಒಟ್ಟು 30,00,000 ಜನರಿಂದ ಕೂಡಿದ್ದ ಆ ಜನಾಂಗವು ಸಮುದ್ರದ ಮಧ್ಯೆ ಒಣನೆಲದ ಮೇಲೆ ನಡೆದು ಹೋಗುವುದನ್ನೂ ನೀವು ನಿಮ್ಮ ಮನಃಪಟಲದಲ್ಲಿ ಚಿತ್ರಿಸಿಕೊಳ್ಳಬಹುದು. (ವಿಮೋಚನಕಾಂಡ 14:21; 15:8) ಅರಣ್ಯದಲ್ಲಿ ದೇವರು ನೀಡಿದ ರಕ್ಷಣಾತ್ಮಕ ಪರಿಪಾಲನೆಯ ರುಜುವಾತನ್ನು ನೀವು ಕಾಣಬಲ್ಲಿರಿ. ಬಂಡೆಯೊಳಗಿಂದ ನೀರು ಪ್ರವಾಹವಾಗಿ ಹೊರಟಿತು. ಬಿಳೀ ಕೊತ್ತುಂಬರಿ ಕಾಳಿನಂತಿದ್ದ ಆಹಾರವು ಅರಣ್ಯದ ನೆಲದ ಮೇಲೆ ತೋರಿಬಂತು. (ವಿಮೋಚನಕಾಂಡ 16:31; ಅರಣ್ಯಕಾಂಡ 20:11) ಯೆಹೋವನು ಇಲ್ಲಿ ತನಗೆ ಶಕ್ತಿಯಿದೆ ಎಂದು ತೋರಿಸುತ್ತಾನೆ ಮಾತ್ರವಲ್ಲ ಅದನ್ನು ತಾನು ತನ್ನ ಜನರ ಪರವಾಗಿ ಉಪಯೋಗಿಸುತ್ತೇನೆಂದೂ ತೋರಿಸುತ್ತಾನೆ. ‘ನಮಗೆ ಆಶ್ರಯದುರ್ಗವಾಗಿರುವ, ಇಕ್ಕಟ್ಟಿನಲ್ಲಿ ನಮಗೆ ವಿಶೇಷ ಸಹಾಯಕನು ಆಗಿರುವ’ ಒಬ್ಬ ಶಕ್ತಿಶಾಲಿಯಾದ ದೇವರಿಗೆ ನಮ್ಮ ಪ್ರಾರ್ಥನೆಗಳು ಸಲ್ಲಿಸಲ್ಪಡುತ್ತಿವೆ ಎಂಬುದನ್ನು ತಿಳಿಯುವುದು ನಮ್ಮಲ್ಲಿ ಧೈರ್ಯವನ್ನು ತುಂಬಿಸುತ್ತದಲ್ಲವೆ?—ಕೀರ್ತನೆ 46:1.
12. ನಾವು ಅರ್ಥಮಾಡಿಕೊಳ್ಳಬಲ್ಲ ಪರಿಭಾಷೆಯ ಮುಖಾಂತರ ಆತನನ್ನು “ಕಾಣು”ವಂತೆ ಯೆಹೋವನು ಸಹಾಯಮಾಡುವುದು ಹೇಗೆ?
12 ಯೆಹೋವನು ಆತ್ಮಜೀವಿಯಾಗಿರಲಾಗಿ, ನಾವು ಆತನನ್ನು ತಿಳಿದುಕೊಳ್ಳುವಂತೆ ಆತನು ಇನ್ನೂ ಹೆಚ್ಚಿನದನ್ನು ಮಾಡಿರುತ್ತಾನೆ. ಮಾನವರಾದ ನಮಗೆ ದೃಷ್ಟಿಸಂಬಂಧವಾದ ಇತಿಮಿತಿಗಳಿದ್ದು, ನಮ್ಮ ಕಣ್ಣಿಗೆ ಬೀಳುವಂಥದ್ದನ್ನು ಮಾತ್ರವೇ ನಾವು ನೋಡಬಲ್ಲೆವು. ಆದುದರಿಂದ ಆತ್ಮಜೀವಿಗಳ ಕ್ಷೇತ್ರವು ನಮ್ಮ ದೃಷ್ಟಿಗೆ ಅಗೋಚರವಾಗಿರುತ್ತದೆ. ಒಂದುವೇಳೆ ದೇವರು ತನ್ನ ಬಗ್ಗೆ ನಮಗೆ ಆಧ್ಯಾತ್ಮಿಕ ಪರಿಭಾಷೆಯಲ್ಲಿ ವಿವರಿಸುತ್ತಿದ್ದಲ್ಲಿ, ಅದು ಹುಟ್ಟುಕುರುಡನೊಬ್ಬನಿಗೆ ನಿಮ್ಮ ಕಣ್ಣಿನ ಬಣ್ಣ ಅಥವಾ ಚರ್ಮದ ಮಚ್ಚೆಗಳು ಮುಂತಾದ ನಿಮ್ಮ ರೂಪದ ವಿವರಗಳನ್ನು ತಿಳಿಸಲು ಪ್ರಯತ್ನಿಸುವಂತೆ ಇರುತ್ತಿತ್ತು. ಇದರ ಬದಲಿಗೆ, ಯೆಹೋವನು ದಯೆಯಿಂದ ನಾವು ಅರ್ಥಮಾಡಿಕೊಳ್ಳಬಲ್ಲ ಪರಿಭಾಷೆಯ ಮೂಲಕ ನಾವಾತನನ್ನು “ಕಾಣು”ವಂತೆ ಸಹಾಯಮಾಡುತ್ತಾನೆ. ಕೆಲವೊಮ್ಮೆ ಆತನು ಉಪಮೆ ಮತ್ತು ರೂಪಕಗಳನ್ನು ಬಳಸಿ ನಮಗೆ ಪರಿಚಿತವಾಗಿರುವ ಸಂಗತಿಗಳಿಗೆ ತನ್ನನ್ನು ಹೋಲಿಸುತ್ತಾನೆ. ತನಗೆ ನಿರ್ದಿಷ್ಟ ಮಾನವ ಅಂಗಗಳಿರುವುದಾಗಿಯೂ ಆತನು ತನ್ನನ್ನು ವರ್ಣಿಸಿಕೊಳ್ಳುತ್ತಾನೆ. *
13. ಯೆಶಾಯ 40:11 ಯಾವ ಮಾನಸಿಕ ಚಿತ್ರಣವನ್ನು ಮೂಡಿಸುತ್ತದೆ, ಮತ್ತು ಅದು ನಿಮ್ಮ ಮೇಲೆ ಹೇಗೆ ಪರಿಣಾಮಬೀರುತ್ತದೆ?
13ಯೆಶಾಯ 40:11 ರಲ್ಲಿ ಕಂಡುಬರುವ ಯೆಹೋವನ ಕುರಿತಾದ ವರ್ಣನೆಯನ್ನು ತುಸು ಗಮನಿಸಿರಿ: “ಆತನು ಕುರುಬನಂತೆ ತನ್ನ ಮಂದೆಯನ್ನು ಮೇಯಿಸುವನು, ಮರಿಗಳನ್ನು ಕೈಯಿಂದ ಕೂಡಿಸಿ ಎದೆಗೆತ್ತಿಕೊಳ್ಳುವನು.” ಇಲ್ಲಿ ಯೆಹೋವನು ಕುರಿಮರಿಗಳನ್ನು “ಕೈಯಿಂದ” ಎತ್ತುವ ಕುರುಬನಿಗೆ ಹೋಲಿಸಲ್ಪಟ್ಟಿದ್ದಾನೆ. ಕುರಿಗಳಿಗಿಂತಲೂ ಹೆಚ್ಚು ಅಮೂಲ್ಯರಾದ ತನ್ನ ಜನರನ್ನು, ಹೌದು, ತುಂಬ ನಿರ್ಬಲರಾಗಿರುವವರನ್ನೂ ರಕ್ಷಿಸಲು ಮತ್ತು ಬೆಂಬಲಿಸಲು ದೇವರಿಗಿರುವ ಸಾಮರ್ಥ್ಯವನ್ನು ಇದು ಸೂಚಿಸುತ್ತದೆ. ಆತನ ಬಲಾಢ್ಯವಾದ ಕೈಗಳಲ್ಲಿ ನಾವು ಸುರಕ್ಷೆಯನ್ನು ಅನುಭವಿಸಬಲ್ಲೆವು. ಯಾಕಂದರೆ ನಾವಾತನಿಗೆ ನಿಷ್ಠಾವಂತರಾಗಿ ಉಳಿಯುವುದಾದರೆ ಆತನೆಂದಿಗೂ ನಮ್ಮ ಕೈಬಿಡನು. (ರೋಮಾಪುರ 8:38, 39) ಆ ಮಹಾ ಕುರುಬನು ಕುರಿಮರಿಗಳನ್ನು “ಎದೆಗೆತ್ತಿಕೊಳ್ಳುವನು” ಎಂಬ ಅಭಿವ್ಯಕ್ತಿಯು, ಒಂದು ನವಜನಿತ ಕುರಿಮರಿಯನ್ನು ಕುರುಬನು ಕೆಲವೊಮ್ಮೆ ಯಾವುದರಲ್ಲಿ ಎತ್ತಿಕೊಳ್ಳುತ್ತಾನೊ ಆ ಮೇಲಂಗಿಯ ಸಡಿಲವಾದ ಮಡಿಕೆಗಳಿಗೆ ಸೂಚಿಸುತ್ತವೆ. ಹೀಗೆ ಯೆಹೋವನು ನಮ್ಮನ್ನು ಸಾಕಿಸಲಹುತ್ತಾನೆ, ಕೋಮಲವಾಗಿ ಪರಿಪಾಲಿಸುತ್ತಾನೆಂಬ ಭರವಸೆಯು ನಮಗೆ ನೀಡಲ್ಪಡುತ್ತದೆ. ಹೀಗಿರುವುದರಿಂದ ಸ್ವಾಭಾವಿಕವಾಗಿಯೇ ನಾವಾತನ ಸಮೀಪವಿರಲು ಬಯಸುವೆವು.
‘ಮಗನು ತಂದೆಯನ್ನು ಪ್ರಕಟಿಸುವದಕ್ಕೆ ಮನಸ್ಸುಳ್ಳವನಾಗಿದ್ದಾನೆ’
14. ಯೇಸುವಿನ ಮೂಲಕ ಯೆಹೋವನು ತನ್ನ ಬಗ್ಗೆ ಅತಿ ಗಾಢವಾದ ಪ್ರಕಟನೆಯನ್ನು ಮಾಡಿರುತ್ತಾನೆಂದು ಏಕೆ ಹೇಳಬಹುದು?
14 ಯೆಹೋವನು ತನ್ನ ವಾಕ್ಯದಲ್ಲಿ ತನ್ನ ಬಗ್ಗೆ ಅತಿ ಗಾಢವಾದ ಪ್ರಕಟನೆಯನ್ನು ಮಾಡಿರುವುದು ತನ್ನ ಪ್ರಿಯ ಮಗನಾದ ಯೇಸುವಿನ ಮುಖಾಂತರವೇ. ದೇವರ ಆಲೋಚನೆ ಮತ್ತು ಭಾವನೆಗಳನ್ನು ಅತಿ ನಿಕಟವಾಗಿ ಪ್ರತಿಬಿಂಬಿಸಲು ಅಥವಾ ಅತಿ ಸ್ಪಷ್ಟವಾಗಿ ವಿವರಿಸಲು ಯೇಸುವಿಗಿಂತ ಅಧಿಕ ಶಕ್ತರಾಗಿದ್ದವರು ಬೇರೆ ಯಾರೂ ಇರಲಿಲ್ಲ. ಎಷ್ಟೆಂದರೂ ಆ ಜ್ಯೇಷ್ಠಪುತ್ರನು, ಬೇರೆ ಆತ್ಮಜೀವಿಗಳು ಹಾಗೂ ಈ ಭೌತಿಕ ವಿಶ್ವವು ನಿರ್ಮಿಸಲ್ಪಡುವ ಮುಂಚೆಯೇ ತಂದೆಯೊಂದಿಗೆ ಬದುಕಿದ್ದನಲ್ಲಾ. (ಕೊಲೊಸ್ಸೆ 1:15) ಯೇಸುವು ಯೆಹೋವನೊಂದಿಗೆ ಅತ್ಯಾಪ್ತವಾಗಿ ಪರಿಚಿತನಾಗಿದ್ದನು. ಆದುದರಿಂದಲೇ ಅವನು ಹೇಳಸಾಧ್ಯವಾದದ್ದು: “ಮಗನು ಇಂಥವನೆಂದು ತಂದೆಯೇ ಹೊರತು ಇನ್ನಾವನೂ ತಿಳಿದವನಲ್ಲ; ತಂದೆ ಇಂಥವನೆಂದು ಮಗನೇ ಹೊರತು ಇನ್ನಾವನೂ ತಿಳಿದವನಲ್ಲ; ಮತ್ತು ಮಗನು ತಂದೆಯನ್ನು ಯಾರಿಗೆ ಪ್ರಕಟಿಸುವದಕ್ಕೆ ಮನಸ್ಸುಳ್ಳವನಾಗಿದ್ದಾನೋ ಅವನೂ ಆತನನ್ನು ತಿಳಿದವನಾಗಿದ್ದಾನೆ.” (ಲೂಕ ) ಭೂಮಿಯಲ್ಲಿ ಮನುಷ್ಯನಾಗಿದ್ದಾಗ, ಯೇಸು ಎರಡು ಪ್ರಾಮುಖ್ಯ ವಿಧಾನಗಳಲ್ಲಿ ತನ್ನ ತಂದೆಯ ಬಗ್ಗೆ ಪ್ರಕಟಪಡಿಸಿದನು. 10:22
15, 16. ಯಾವ ಎರಡು ವಿಧಗಳಲ್ಲಿ ಯೇಸು ತನ್ನ ತಂದೆಯನ್ನು ಪ್ರಕಟಪಡಿಸಿದನು?
15 ಮೊದಲನೆಯದಾಗಿ, ಯೇಸುವಿನ ಬೋಧನೆಗಳು ಅವನ ತಂದೆಯ ಕುರಿತು ತಿಳಿಯಲು ನಮಗೆ ನೆರವಾಗುತ್ತವೆ. ನಮ್ಮ ಹೃದಯವನ್ನು ಸ್ಪರ್ಶಿಸುವಂಥ ಮಾತುಗಳಲ್ಲಿ ಯೇಸುವು ಯೆಹೋವನನ್ನು ವಿವರಿಸಿದ್ದಾನೆ. ಉದಾಹರಣೆಗೆ, ಪಶ್ಚಾತ್ತಾಪಪಟ್ಟ ಪಾಪಿಗಳನ್ನು ಪುನಃ ಬರಮಾಡಿಕೊಳ್ಳುವ ಕರುಣಾಭರಿತ ದೇವರನ್ನು ವಿವರಿಸಲಿಕ್ಕಾಗಿ ಯೇಸು ಯೆಹೋವನನ್ನು ಒಬ್ಬ ಕ್ಷಮಾಶೀಲ ತಂದೆಗೆ ಹೋಲಿಸುತ್ತಾನೆ. ತನ್ನ ಪೋಲಿಹೋದ ಮಗನು ಹಿಂದೆ ಬರುವುದನ್ನು ದೂರದಿಂದ ಕಂಡ ಆ ತಂದೆಯ ಮನಕರಗಿ, ಅವನು ಓಡಿಬಂದು ಮಗನನ್ನು ಅಪ್ಪಿಕೊಂಡು ಕೋಮಲವಾಗಿ ಮುದ್ದಿಡುತ್ತಾನೆ. (ಲೂಕ 15:11-24) ಯೆಹೋವನು ಸಹೃದಯಿ ಜನರಲ್ಲಿ ಒಬ್ಬೊಬ್ಬರನ್ನೂ ಪ್ರೀತಿಸುವುದರಿಂದ ಆತನು ಅವರನ್ನು ತನ್ನ ಕಡೆಗೆ “ಎಳೆ”ಯುವ ದೇವರಾಗಿದ್ದಾನೆಂಬ ಚಿತ್ರಣವನ್ನು ಯೇಸು ಕೊಟ್ಟನು. (ಯೋಹಾನ 6:44) ಒಂದು ಪುಟ್ಟ ಗುಬ್ಬಿಯು ನೆಲಕ್ಕೆ ಬೀಳುವಾಗಲೂ ಆತನಿಗೆ ಗೊತ್ತಿರುತ್ತದೆ. “ಆದದರಿಂದ ಹೆದರಬೇಡಿರಿ; ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚಿನವರು” ಎಂದು ಯೇಸು ವಿವರಿಸಿದನು. (ಮತ್ತಾಯ 10:29, 31) ಅಂಥ ಪರಾಮರಿಕೆ ತೋರಿಸುವ ದೇವರ ಕಡೆಗೆ ನಾವು ಸೆಳೆಯಲ್ಪಡದೆ ಇರಲಾರೆವು, ಅಲ್ಲವೇ?
16 ಎರಡನೆಯದಾಗಿ, ಯೆಹೋವನು ಎಂಥವನು ಎಂದು ಯೇಸುವಿನ ಮಾದರಿಯು ನಮಗೆ ತೋರಿಸುತ್ತದೆ. ಯೇಸು ತನ್ನ ತಂದೆಯನ್ನು ಎಷ್ಟು ಪರಿಪೂರ್ಣವಾಗಿ ಪ್ರತಿಬಿಂಬಿಸಿದನೆಂದರೆ ಅವನು ಹೀಗನ್ನಶಕ್ತನಾದನು: “ನನ್ನನ್ನು ನೋಡಿದವನು ತಂದೆಯನ್ನು ನೋಡಿದ್ದಾನೆ.” (ಯೋಹಾನ 14:9) ಹೀಗಿರುವುದರಿಂದ, ಸುವಾರ್ತೆಗಳಲ್ಲಿ ನಾವು ಯೇಸುವಿನ ಕುರಿತು ಓದುವಾಗ—ಅವನು ತೋರಿಸಿದ ಕೋಮಲ ಭಾವನೆಗಳು ಮತ್ತು ಅವನು ಇತರರೊಂದಿಗೆ ವ್ಯವಹರಿಸಿದ ವಿಧವು—ಒಂದು ರೀತಿಯಲ್ಲಿ ಅವನ ತಂದೆಯ ಒಂದು ಸಜೀವ ಭಾವಚಿತ್ರವೇ ನಮ್ಮ ಕಣ್ಣಮುಂದೆ ಇರುತ್ತದೆ. ಇದಕ್ಕಿಂತ ಅಧಿಕ ಸ್ಪಷ್ಟವಾಗಿ ಯೆಹೋವನು ತನ್ನ ಗುಣಗಳನ್ನು ಪ್ರಕಟಿಸುವುದು ಅಸಾಧ್ಯ. ಏಕೆ?
17. ತಾನು ಎಂಥವನೆಂದು ನಾವು ಗ್ರಹಿಸಿಕೊಳ್ಳುವಂತೆ ನಮ್ಮ ಸಹಾಯಕ್ಕಾಗಿ ಯೆಹೋವನು ಏನು ಮಾಡಿದ್ದಾನೆಂಬುದನ್ನು ದೃಷ್ಟಾಂತಿಸಿರಿ.
17 ದೃಷ್ಟಾಂತಕ್ಕಾಗಿ: ದಯೆ ಎಂದರೇನೆಂಬುದನ್ನು ವಿವರಿಸಲು ಪ್ರಯತ್ನಿಸುತ್ತಿದ್ದೀರೆಂದು ಊಹಿಸಿಕೊಳ್ಳಿರಿ. ಶಬ್ದಗಳಿಂದ ನೀವದನ್ನು ವಿವರಿಸಬಹುದು. ಆದರೆ ಒಬ್ಬ ವ್ಯಕ್ತಿಯು ಒಂದು ದಯಾಭರಿತ ಕ್ರಿಯೆಯನ್ನು ನಡಿಸುತ್ತಿರುವಾಗ, ನೀವು ಆ ವ್ಯಕ್ತಿಯ ಕಡೆಗೆ ಕೈತೋರಿಸುತ್ತಾ “ನೋಡಿ, ಇದೇ ದಯೆ ತೋರಿಸುವುದರ ಒಂದು ಮಾದರಿ” ಎಂದು ಹೇಳುವುದಾದರೆ “ದಯೆ” ಎಂಬ ಶಬ್ದವು ಅಧಿಕ ಅರ್ಥವುಳ್ಳದ್ದಾಗಿ ಮತ್ತು ತಿಳಿದುಕೊಳ್ಳಲು ಹೆಚ್ಚು ಸುಲಭವಾಗಿ ಪರಿಣಮಿಸುವುದು. ಯೆಹೋವನು ತಾನು ಎಂಥವನೆಂದು ನಾವು ಗ್ರಹಿಸುವಂತೆ ಸಹಾಯಮಾಡಲಿಕ್ಕಾಗಿ ತದ್ರೀತಿಯ ವಿಧಾನವನ್ನು ಉಪಯೋಗಿಸಿದ್ದಾನೆ.
ತನ್ನನ್ನು ಮಾತುಗಳಿಂದ ವರ್ಣಿಸಿದ್ದಾನಲ್ಲದೆ ತನ್ನ ಮಗನಲ್ಲಿ ನಮಗೊಂದು ಜೀವಂತ ಮಾದರಿಯನ್ನೇ ಒದಗಿಸಿರುತ್ತಾನೆ. ಯೇಸುವಿನಲ್ಲಿ, ದೇವರ ಗುಣಗಳು ಕಾರ್ಯರೂಪದಲ್ಲಿ ತೋರಿಬರುತ್ತವೆ. ಯೇಸುವನ್ನು ವರ್ಣಿಸುವಂಥ ಸುವಾರ್ತಾ ವೃತ್ತಾಂತಗಳ ಮೂಲಕ ಯೆಹೋವನು ಕಾರ್ಯತಃ “ನೋಡಿ, ನಾನು ಇಂಥವನೆ ಆಗಿದ್ದೇನೆ” ಎಂದು ಹೇಳುತ್ತಿದ್ದಾನೆ. ಯೇಸು ಭೂಮಿಯಲ್ಲಿದ್ದಾಗ ಹೇಗಿದ್ದನೆಂದು ಪ್ರೇರಿತ ದಾಖಲೆಗಳು ವರ್ಣಿಸಿವೆ?18. ಶಕ್ತಿ, ನ್ಯಾಯ, ಮತ್ತು ವಿವೇಕ ಎಂಬ ಗುಣಗಳನ್ನು ಯೇಸು ವ್ಯಕ್ತಪಡಿಸಿದ್ದು ಹೇಗೆ?
18 ದೇವರ ನಾಲ್ಕು ಪ್ರಧಾನ ಗುಣಗಳು ಯೇಸುವಿನಲ್ಲಿ ಸುಂದರವಾಗಿ ವ್ಯಕ್ತಪಡಿಸಲ್ಪಟ್ಟಿವೆ. ರೋಗ, ಹಸಿವು, ಮತ್ತು ಮರಣದ ಮೇಲೂ ಅವನಿಗಿದ್ದ ಅಧಿಕಾರದಿಂದ ಅವನ ಶಕ್ತಿಯು ತೋರಿಬರುತ್ತಿತ್ತು. ಆದರೂ ತಮ್ಮ ಅಧಿಕಾರ ಶಕ್ತಿಯನ್ನು ದುರುಪಯೋಗ ಮಾಡುವ ಮನುಷ್ಯರ ಹಾಗೆ ಅವನೆಂದೂ ತನ್ನ ಅದ್ಭುತ ಶಕ್ತಿಯನ್ನು ತನಗೋಸ್ಕರವಾಗಲಿ ಇತರರ ಹಾನಿಗಾಗಲಿ ಉಪಯೋಗಿಸಲಿಲ್ಲ. (ಮತ್ತಾಯ 4:2-4) ಅವನು ನ್ಯಾಯವನ್ನು ಪ್ರೀತಿಸಿದನು. ಅನ್ಯಾಯಿಗಳಾದ ವ್ಯಾಪಾರಿಗಳು ಜನರನ್ನು ಲೂಟಿಮಾಡುವುದನ್ನು ಕಂಡಾಗ ಅವನ ಹೃದಯವು ಧರ್ಮಶೀಲ ಕ್ರೋಧದಿಂದ ತುಂಬಿಕೊಂಡಿತು. (ಮತ್ತಾಯ 21:12, 13) ಅವನು ಬಡವರನ್ನು ಮತ್ತು ತುಳಿಯಲ್ಪಟ್ಟವರನ್ನು ನಿಷ್ಪಕ್ಷಪಾತ ರೀತಿಯಲ್ಲಿ ಉಪಚರಿಸಿ, ಅವರು ತಮ್ಮ ಆತ್ಮಗಳಿಗೆ “ವಿಶ್ರಾಂತಿ”ಯನ್ನು ಕಂಡುಕೊಳ್ಳುವಂತೆ ಸಹಾಯಮಾಡಿದನು. (ಮತ್ತಾಯ 11:4, 5, 28-30) “ಸೊಲೊಮೋನನಿಗಿಂತಲೂ ಹೆಚ್ಚಿನವ”ನಾಗಿದ್ದ ಯೇಸುವಿನ ಬೋಧನೆಗಳಲ್ಲಿ ಸರಿಸಾಟಿಯಿಲ್ಲದ ವಿವೇಕವು ಅಡಕವಾಗಿತ್ತು. (ಮತ್ತಾಯ 12:42) ಆದರೆ ಯೇಸುವೆಂದೂ ತನ್ನ ಜ್ಞಾನದ ಬಾಹ್ಯಾಡಂಬರ ಮಾಡಲಿಲ್ಲ. ಅವನ ಮಾತುಗಳು ಸಾಧಾರಣ ಜನರ ಹೃದಯಗಳನ್ನು ತಲಪಿದವು, ಯಾಕಂದರೆ ಅವನ ಬೋಧನೆಗಳು ಸ್ಪಷ್ಟವೂ, ಸರಳವೂ, ವ್ಯಾವಹಾರಿಕವೂ ಆಗಿದ್ದವು.
19, 20. (ಎ) ಯೇಸು ಹೇಗೆ ಪ್ರೀತಿಯಲ್ಲಿ ಒಂದು ಎದ್ದುಕಾಣುವ ಮಾದರಿಯಾಗಿದ್ದನು? (ಬಿ) ಯೇಸುವಿನ ಮಾದರಿಯ ಕುರಿತು ನಾವು ಓದುವಾಗ ಮತ್ತು ಯೋಚಿಸುವಾಗ ನಾವೇನನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು?
19ಪ್ರೀತಿಯಲ್ಲಿ ಎದ್ದುಕಾಣುವ ಮಾದರಿ ಯೇಸುವಿನದ್ದು. ತನ್ನ ಶುಶ್ರೂಷೆಯಲ್ಲೆಲ್ಲ, ಪರಾನುಭೂತಿ ಮತ್ತು ಕನಿಕರದ ಸಮೇತ ಪ್ರೀತಿಯ ಅನೇಕ ಮುಖಗಳನ್ನು ಅವನು ಪ್ರದರ್ಶಿಸಿದನು. ಬೇರೆಯವರ ಕಷ್ಟಾನುಭವಗಳನ್ನು ಕಂಡು ಅವನು ಕನಿಕರಪಟ್ಟನು. ಇತರರ ಕೊರತೆಗಳ ಕಡೆಗೆ ಅವನ ಸೂಕ್ಷ್ಮವೇದನೆಯು ಪದೇಪದೇ ಅವನನ್ನು ಕ್ರಿಯೆಗೈಯುವಂತೆ ಪ್ರೇರೇಪಿಸಿತು. (ಮತ್ತಾಯ 14:14) ರೋಗಿಗಳನ್ನು ವಾಸಿಮಾಡಿ ಹಸಿದವರಿಗೆ ಉಣಿಸಿದರೂ, ಯೇಸು ಎಷ್ಟೋ ಮಹತ್ತಾದ ಮತ್ತೊಂದು ರೀತಿಯಲ್ಲಿ ಕನಿಕರವನ್ನು ವ್ಯಕ್ತಪಡಿಸಿದನು. ಸಕಲ ಮಾನವಕುಲಕ್ಕೆ ಶಾಶ್ವತ ಆಶೀರ್ವಾದಗಳನ್ನು ತರಲಿರುವ ದೇವರ ರಾಜ್ಯದ ಕುರಿತು ಸತ್ಯವನ್ನು ಇತರರು ತಿಳಿಯುವಂತೆ, ಸ್ವೀಕರಿಸುವಂತೆ, ಮತ್ತು ಪ್ರೀತಿಸುವಂತೆ ಅವನು ಸಹಾಯಮಾಡಿದನು. (ಮಾರ್ಕ 6:34; ಲೂಕ 4:43) ಎಲ್ಲಕ್ಕಿಂತಲೂ ಮುಖ್ಯವಾಗಿ, ತನ್ನ ಮಾನವ ಜೀವವನ್ನೇ ಇತರರಿಗಾಗಿ ಮನಃಪೂರ್ವಕವಾಗಿ ಕೊಡುವ ಮೂಲಕ ಅವನು ತನ್ನ ಸ್ವತ್ಯಾಗದ ಪ್ರೀತಿಯನ್ನು ತೋರಿಸಿಕೊಟ್ಟನು.—ಯೋಹಾನ 15:13.
20 ಆದುದರಿಂದ, ಎಲ್ಲಾ ವಯಸ್ಸಿನ ಮತ್ತು ಎಲ್ಲಾ ಹಿನ್ನೆಲೆಗಳ ಜನರು ಈ ಕೋಮಲ ಸ್ವಭಾವದ ಮತ್ತು ಆಳವಾದ ಸಹಾನುಭೂತಿಯಿದ್ದ ವ್ಯಕ್ತಿಯ ಕಡೆಗೆ ಸೆಳೆಯಲ್ಪಟ್ಟದ್ದು ಆಶ್ಚರ್ಯದ ಸಂಗತಿಯೆ? (ಮಾರ್ಕ 10:13-16) ಆದರೂ ಯೇಸುವಿನ ಜೀವಂತ ಮಾದರಿಯ ಕುರಿತು ನಾವು ಓದುವಾಗ ಮತ್ತು ಯೋಚಿಸುವಾಗ, ಈ ದೇವಕುಮಾರನಲ್ಲಿ ನಾವು ಅವನ ತಂದೆಯ ಸ್ಪಷ್ಟವಾದ ಪ್ರತಿಬಿಂಬವನ್ನು ಕಾಣುತ್ತಿದ್ದೇವೆಂಬುದನ್ನು ಸದಾ ಮನಸ್ಸಿನಲ್ಲಿಡೋಣ.—ಇಬ್ರಿಯ 1:3.
ನಮಗೆ ನೆರವು ನೀಡಲಿಕ್ಕಾಗಿ ಒಂದು ಅಧ್ಯಯನ ಸಹಾಯಕ
21, 22. ಯೆಹೋವನಿಗಾಗಿ ಹುಡುಕುವುದರಲ್ಲಿ ಏನೆಲ್ಲಾ ಒಳಗೂಡಿದೆ, ಮತ್ತು ಈ ಪ್ರಯತ್ನದಲ್ಲಿ ನಮಗೆ ಸಹಾಯಮಾಡಲು ಈ ಅಧ್ಯಯನ ಪುಸ್ತಕದಲ್ಲಿ ಏನು ಅಡಕವಾಗಿದೆ?
21 ಯೆಹೋವನು ತನ್ನ ವಾಕ್ಯದಲ್ಲಿ ತನ್ನನ್ನು ಅಷ್ಟು ಸ್ಪಷ್ಟವಾಗಿ ಪ್ರಕಟಿಸುವ ಮೂಲಕ, ನಾವು ಆತನ ಸಮೀಪಕ್ಕೆ ಬರುವಂತೆ ಆತನು ಬಯಸುತ್ತಾನೆಂಬ ವಿಷಯದಲ್ಲಿ ಯಾವ ಸಂದೇಹವನ್ನೂ ಇಟ್ಟಿರುವುದಿಲ್ಲ. ಅದೇ ಸಮಯದಲ್ಲಿ, ಆತನೊಂದಿಗೆ ಒಂದು ಅನುಗ್ರಹದ ಸಂಬಂಧದೊಳಗೆ ಬರುವಂತೆ ಆತನು ನಮ್ಮನ್ನು ಒತ್ತಾಯಪಡಿಸುವುದೂ ಇಲ್ಲ. “ಯೆಹೋವನು ಸಿಕ್ಕುವ ಕಾಲದಲ್ಲಿ” ಆತನನ್ನು ಹುಡುಕುವ ಜವಾಬ್ದಾರಿ ನಮ್ಮದು. (ಯೆಶಾಯ 55:6) ಯೆಹೋವನಿಗಾಗಿ ಹುಡುಕುವುದು ಎಂದರೆ, ಬೈಬಲಿನಲ್ಲಿ ಪ್ರಕಟಿಸಲ್ಪಟ್ಟಿರುವ ಆತನ ಗುಣಗಳನ್ನು ಮತ್ತು ಆತನು ಕ್ರಿಯೆಗೈಯುವ ವಿಧಾನಗಳನ್ನು ತಿಳಿದುಕೊಳ್ಳುವುದೇ. ನೀವೀಗ ಓದುತ್ತಿರುವ ಅಧ್ಯಯನ ಪುಸ್ತಕವು ಈ ಪ್ರಯತ್ನದಲ್ಲಿ ನಿಮಗೆ ಸಹಾಯಮಾಡುವ ಉದ್ದೇಶದಿಂದ ರಚಿಸಲ್ಪಟ್ಟಿದೆ.
22 ಈ ಪುಸ್ತಕವು, ಯೆಹೋವನ ನಾಲ್ಕು ಪ್ರಧಾನ ಗುಣಗಳಾದ ಶಕ್ತಿ, ನ್ಯಾಯ, ವಿವೇಕ, ಮತ್ತು ಪ್ರೀತಿಗೆ ಅನುಗುಣವಾದ ನಾಲ್ಕು ವಿಭಾಗಗಳಾಗಿ ವಿಭಾಗಿಸಲ್ಪಟ್ಟಿರುವುದನ್ನು ನೀವು ಗಮನಿಸುವಿರಿ. ಪ್ರತಿ ವಿಭಾಗವು ಆ ಗುಣದ ಕುರಿತ ಸಾರಾಂಶದೊಂದಿಗೆ ಆರಂಭಿಸುತ್ತದೆ. ಆ ವಿಭಾಗದಲ್ಲಿರುವ ಮುಂದಿನ ಕೆಲವು ಅಧ್ಯಾಯಗಳು, ಯೆಹೋವನು ಆ ಗುಣವನ್ನು ಅದರ ವಿವಿಧ ಮುಖಗಳಲ್ಲಿ ಹೇಗೆ ತೋರಿಸುತ್ತಾನೆಂಬುದನ್ನು ಚರ್ಚಿಸುತ್ತವೆ. ಯೇಸು ಆ ಗುಣವನ್ನು ಹೇಗೆ ಉದಾಹರಿಸಿ ತೋರಿಸಿದನೆಂದೂ ಮತ್ತು ನಾವು ನಮ್ಮ ಜೀವಿತದಲ್ಲಿ ಅದನ್ನು ಹೇಗೆ ಪ್ರತಿಬಿಂಬಿಸಬಲ್ಲೆವೆಂದೂ ತೋರಿಸುವ ಒಂದೊಂದು ಅಧ್ಯಾಯವೂ ಇದರಲ್ಲಿ ಅಡಕವಾಗಿದೆ.
23, 24. (ಎ) “ಧ್ಯಾನಕ್ಕಾಗಿ ಪ್ರಶ್ನೆಗಳು” ಎಂಬ ವಿಶಿಷ್ಟ ಭಾಗವನ್ನು ವಿವರಿಸಿಹೇಳಿರಿ. (ಬಿ) ನಾವು ಸದಾ ದೇವರಿಗೆ ಹೆಚ್ಚು ಸಮೀಪ ಬರುವಂತೆ ಧ್ಯಾನವು ಹೇಗೆ ಸಹಾಯಮಾಡುತ್ತದೆ?
23 ಈ ಅಧ್ಯಾಯದೊಂದಿಗೆ ಆರಂಭಿಸುತ್ತಾ, “ಧ್ಯಾನಕ್ಕಾಗಿ ಪ್ರಶ್ನೆಗಳು” ಎಂಬ ಶೀರ್ಷಿಕೆಯುಳ್ಳ ಒಂದು ವಿಶಿಷ್ಟ ಭಾಗವನ್ನು ಸಾದರಪಡಿಸಲಾಗಿದೆ. ಉದಾಹರಣೆಗಾಗಿ, 24ನೆಯ ಪುಟದಲ್ಲಿರುವ ಚೌಕವನ್ನು ನೋಡಿರಿ. ಆ ವಚನಗಳು ಮತ್ತು ಪ್ರಶ್ನೆಗಳು ಅಧ್ಯಾಯದ ಪುನರ್ವಿಮರ್ಶೆಗಾಗಿ ರಚಿಸಲ್ಪಟ್ಟಿಲ್ಲ. ಬದಲಿಗೆ, ಅಧ್ಯಾಯದ ಇತರ ಪ್ರಾಮುಖ್ಯ ವಿಷಯಗಳನ್ನು ನಿಮ್ಮ ಮನಸ್ಸಿಗೆ ತರುವುದೇ ಅವುಗಳ ಉದ್ದೇಶವಾಗಿದೆ. ಈ ಭಾಗದ ಕಾರ್ಯಸಾಧಕ ಉಪಯೋಗವನ್ನು ನೀವು ಹೇಗೆ ಮಾಡಬಹುದು? ಕೊಡಲ್ಪಟ್ಟಿರುವ ಪ್ರತಿಯೊಂದು ವಚನವನ್ನು ತೆರೆದು ನೋಡಿರಿ ಮತ್ತು ವಚನಗಳನ್ನು ಜಾಗರೂಕತೆಯಿಂದ ಓದಿರಿ. ಅನಂತರ ಕೊಡಲ್ಪಟ್ಟಿರುವ ವಚನಗಳೊಂದಿಗಿರುವ ಪ್ರಶ್ನೆಯನ್ನು ಪರಿಗಣಿಸಿರಿ. ಉತ್ತರಗಳೇನೆಂಬುದನ್ನು ಪರ್ಯಾಲೋಚಿಸಿರಿ. ಸ್ವಲ್ಪ ಸಂಶೋಧನೆಯನ್ನೂ ಮಾಡಬೇಕಾದೀತು. ‘ಈ ವಿಷಯವು ಯೆಹೋವನ ಕುರಿತು ನನಗೇನನ್ನು ತಿಳಿಸುತ್ತದೆ? ಅದು ನನ್ನ ಜೀವನವನ್ನು ಹೇಗೆ ಬಾಧಿಸುತ್ತದೆ? ಇತರರ ಸಹಾಯಕ್ಕಾಗಿ ನಾನದನ್ನು ಹೇಗೆ ಉಪಯೋಗಿಸಬಲ್ಲೆ?’ ಎಂಬ ಅಧಿಕ ಪ್ರಶ್ನೆಗಳನ್ನು ಸ್ವತಃ ಕೇಳಿಕೊಳ್ಳಿರಿ.
24 ಅಂಥ ಧ್ಯಾನವು ನಾವು ಸದಾ ಯೆಹೋವನಿಗೆ ಹೆಚ್ಚು ಸಮೀಪ ಬರುವಂತೆ ಸಹಾಯಮಾಡುವುದು. ಏಕೆ? ಏಕೆಂದರೆ ಬೈಬಲು ಧ್ಯಾನವನ್ನು ಹೃದಯದೊಂದಿಗೆ ಜತೆಗೂಡಿಸುತ್ತದೆ. (ಕೀರ್ತನೆ 19:14) ದೇವರ ಕುರಿತು ನಾವೇನನ್ನು ಕಲಿಯುತ್ತೇವೊ ಅದಕ್ಕಾಗಿ ಹೃತ್ಪೂರ್ವಕ ಕೃತಜ್ಞತೆಯಿಂದ ನಾವು ಯೋಚಿಸಿದರೆ, ಆ ಮಾಹಿತಿಯು ನಮ್ಮ ಸಾಂಕೇತಿಕ ಹೃದಯಕ್ಕೆ ತೊಟ್ಟಿಕ್ಕುವುದು. ಅಲ್ಲಿಂದ ಅದು ನಮ್ಮ ಆಲೋಚನೆಯನ್ನು ಪ್ರಭಾವಿಸಿ, ನಮ್ಮ ಅನಿಸಿಕೆಗಳನ್ನು ಹುರಿದುಂಬಿಸಿ, ಕಟ್ಟಕಡೆಗೆ ನಮ್ಮನ್ನು ಕ್ರಿಯೆಗೈಯುವಂತೆ ಪ್ರೇರೇಪಿಸುತ್ತದೆ. ಆಗ ದೇವರ ಕಡೆಗಿನ ನಮ್ಮ ಪ್ರೀತಿಯು ಆಳಗೊಳ್ಳುವುದು, ಮತ್ತು ಪ್ರತಿಯಾಗಿ ಈ ಪ್ರೀತಿಯು, ನಮ್ಮ ಅತಿ ಪ್ರಿಯ ಮಿತ್ರನೋಪಾದಿ ಆತನನ್ನು ಮೆಚ್ಚಿಸಲು ನಮ್ಮನ್ನು ಪ್ರೇರಿಸುವುದು. (1 ಯೋಹಾನ 5:3) ಅಂಥ ಒಂದು ಸುಸಂಬಂಧವನ್ನು ಗಳಿಸಲಿಕ್ಕೆ ಯೆಹೋವನ ಗುಣಗಳನ್ನೂ ಮಾರ್ಗಗಳನ್ನೂ ನಾವು ತಿಳಿದುಕೊಳ್ಳುವ ಅಗತ್ಯವಿದೆ. ಆದರೂ ನಾವು ಆತನ ಸಮೀಪಕ್ಕೆ ಬರುವುದಕ್ಕೆ ಬಲವಂತ ಕಾರಣವನ್ನೀಯುವ ಆತನ ವ್ಯಕ್ತಿತ್ವದ ಒಂದು ಗುಣವಾದ ಆತನ ಪವಿತ್ರತೆಯ ಕುರಿತು ನಾವು ಮೊದಲಾಗಿ ಚರ್ಚಿಸೋಣ.
^ ಪ್ಯಾರ. 3 “ಆಪ್ತ” ಎಂದು ತರ್ಜುಮೆಯಾಗಿರುವ ಹೀಬ್ರು ಪದವು ಆಮೋಸ 3:7 ರಲ್ಲಿ ಉಪಯೋಗಿಸಲ್ಪಟ್ಟಿರುವುದು ಕುತೂಹಲಕರ. ಪರಮಾಧಿಕಾರಿ ಕರ್ತನಾದ ಯೆಹೋವನು ತನ್ನ “ರಹಸ್ಯವನ್ನು” ತನ್ನ ಸೇವಕರಿಗೆ ತಿಳಿಸುತ್ತಾನೆಂದು ಅದು ಹೇಳುತ್ತದೆ, ಅಂದರೆ ತಾನು ಉದ್ದೇಶಿಸಿರುವುದನ್ನು ಮುಂಚಿತವಾಗಿಯೆ ಅವರಿಗೆ ತಿಳಿಸುತ್ತಾನೆ.
^ ಪ್ಯಾರ. 12 ಉದಾಹರಣೆಗೆ, ದೇವರ ಮುಖ, ಕಣ್ಣುಗಳು, ಕಿವಿಗಳು, ಮೂಗು, ಬಾಯಿ, ಭುಜ, ಮತ್ತು ಪಾದಗಳ ಕುರಿತು ಬೈಬಲು ತಿಳಿಸುತ್ತದೆ. (2 ಸಮುವೇಲ 22:9; ಕೀರ್ತನೆ 88:14; 44:3; ಯೆಶಾಯ 60:13; 65:16; ಮತ್ತಾಯ 4:4) ಅಂಥ ಸಾಂಕೇತಿಕ ಹೇಳಿಕೆಗಳನ್ನು, ಯೆಹೋವನನ್ನು ಸೂಚಿಸುತ್ತಾ ‘ಬಂಡೆ’ ಅಥವಾ “ಗುರಾಣಿ” ಎಂದು ಹೇಳುವ ನಿರ್ದೇಶನಗಳನ್ನು ನಾವು ಹೇಗೆ ಅಕ್ಷರಶಃ ಅರ್ಥಮಾಡುವುದಿಲ್ಲವೊ ಹಾಗೆಯೇ, ಅಕ್ಷರಾರ್ಥವಾಗಿ ತೆಗೆದುಕೊಳ್ಳಬಾರದು.—ಕೀರ್ತನೆ 18:2; 84:11.