ಭಾಗ 8
ಸಂಕಷ್ಟದ ಸುಳಿಯಲ್ಲಿ ಸಿಲುಕಿದಾಗ
‘ನೀವು ಸದ್ಯಕ್ಕೆ ಸ್ವಲ್ಪಕಾಲ ನಾನಾ ವಿಧವಾದ ಪರೀಕ್ಷೆಗಳಿಂದ ದುಃಖಿಸುವವರಾಗಿದ್ದರೂ ಬಹಳವಾಗಿ ಹರ್ಷಿಸುವವರಾಗಿದ್ದೀರಿ.’ —1 ಪೇತ್ರ 1:6
ನಿಮ್ಮ ಸಂಸಾರದಲ್ಲಿ ಸಂತೋಷವಿರಬೇಕೆಂದು ನೀವೆಷ್ಟೇ ಪ್ರಯತ್ನಿಸಿದರೂ, ಕೆಲವೊಮ್ಮೆ ಅನಿರೀಕ್ಷಿತ ಘಟನೆಗಳು ನಿಮ್ಮ ಆನಂದವನ್ನು ಕಸಿದುಕೊಳ್ಳುತ್ತವೆ. (ಪ್ರಸಂಗಿ 9:11) ಆದರೆ ಸಂಕಷ್ಟಗಳನ್ನು ಎದುರಿಸುವಾಗ ದೇವರು ಪ್ರೀತಿಪೂರ್ವಕವಾಗಿ ಸಹಾಯಹಸ್ತ ನೀಡುತ್ತಾನೆ. ಕೆಳಗಿನ ಬೈಬಲ್ ತತ್ವಗಳನ್ನು ನೀವು ಮತ್ತು ನಿಮ್ಮ ಕುಟುಂಬದವರು ಅನ್ವಯಿಸುವಲ್ಲಿ, ಕಡು ಕಷ್ಟಕರ ಸನ್ನಿವೇಶಗಳನ್ನು ಸಹ ನಿಭಾಯಿಸಲು ಸಾಧ್ಯವಾಗುತ್ತದೆ.
1 ಯೆಹೋವನನ್ನು ಅವಲಂಬಿಸಿ
ಬೈಬಲಿನ ಹಿತವಚನ: “ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಏಕೆಂದರೆ ಆತನು ನಿಮಗೋಸ್ಕರ ಚಿಂತಿಸುತ್ತಾನೆ.” (1 ಪೇತ್ರ 5:7) ನಿಮ್ಮ ಕಷ್ಟಸಂಕಟಗಳಿಗೆ ದೇವರು ಕಾರಣನಲ್ಲ ಎನ್ನುವುದನ್ನು ಯಾವಾಗಲೂ ನೆನಪಿನಲ್ಲಿಡಿ. (ಯಾಕೋಬ 1:13) ನೀವು ಆತನಿಗೆ ಆಪ್ತರಾಗುವಲ್ಲಿ ಆತನು ನಿಮಗೆ ಅತ್ಯುತ್ತಮ ರೀತಿಯಲ್ಲಿ ಸಹಾಯ ಮಾಡುತ್ತಾನೆ. (ಯೆಶಾಯ 41:10) ಪ್ರಾರ್ಥನೆಯಲ್ಲಿ “ನಿಮ್ಮ ಹೃದಯವನ್ನು ಆತನ ಮುಂದೆ ಬಿಚ್ಚಿರಿ.” —ಕೀರ್ತನೆ 62:8.
ಪ್ರತಿದಿನ ಬೈಬಲನ್ನು ಓದಿ ಅಧ್ಯಯನ ಮಾಡುವುದರಿಂದ ಸಾಂತ್ವನ ಸಿಗುತ್ತದೆ. ಫಲಿತಾಂಶವಾಗಿ, ಯೆಹೋವನು “ನಮ್ಮ ಎಲ್ಲ ಸಂಕಟಗಳಲ್ಲಿ . . . ನಮ್ಮನ್ನು ಸಾಂತ್ವನಗೊಳಿಸುತ್ತಾನೆ” ಎನ್ನುವುದನ್ನು ಸ್ವತಃ ತಿಳಿದುಕೊಳ್ಳುವಿರಿ. (2 ಕೊರಿಂಥ 1:3, 4; ರೋಮನ್ನರಿಗೆ 15:4) ‘ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿಯನ್ನು’ ನಿಮಗೆ ಕೊಡುವನೆಂದು ಆತನು ಮಾತು ಕೊಟ್ಟಿದ್ದಾನೆ.—ಫಿಲಿಪ್ಪಿ 4:6, 7, 13.
ಹೀಗೆ ಮಾಡಿ:
-
ಸಮಾಧಾನದಿಂದಿರಲು ಮತ್ತು ಸರಿಯಾಗಿ ಯೋಚಿಸಲು ಸಹಾಯಕ್ಕಾಗಿ ಯೆಹೋವನಿಗೆ ಪ್ರಾರ್ಥಿಸಿ
-
ನಿಮಗೆ ಎದುರಾಗಿರುವ ಪರಿಸ್ಥಿತಿಯನ್ನು ನಿಭಾಯಿಸಲು ಏನೇನು ಮಾಡಬಹುದೆಂದು ಯೋಚಿಸಿ, ತಕ್ಕ ಕ್ರಮ ಕೈಗೊಳ್ಳಿ
2 ನಿಮ್ಮ ಮತ್ತು ನಿಮ್ಮ ಕುಟುಂಬದವರ ಕಾಳಜಿ ವಹಿಸಿ
ಬೈಬಲಿನ ಹಿತವಚನ: “ವಿವೇಕಿಯ ಹೃದಯವು ತಿಳುವಳಿಕೆಯನ್ನು ಸಂಪಾದಿಸುವದು; ಜ್ಞಾನಿಯ ಕಿವಿಯು ತಿಳುವಳಿಕೆಯನ್ನು ಹುಡುಕುವದು.” (ಜ್ಞಾನೋಕ್ತಿ 18:15) ಈ ಸಲಹೆಯಂತೆ, ನೀವು ನಿಜ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ನಿಮ್ಮ ಕುಟುಂಬದಲ್ಲಿರುವ ಪ್ರತಿಯೊಬ್ಬರಿಗೆ ಯಾವುದರ ಅವಶ್ಯಕತೆಯಿದೆ ಅಂತ ತಿಳಿದುಕೊಳ್ಳಿ. ಹೇಗೆ? ಹೇಗೆಂದರೆ ಅವರೊಟ್ಟಿಗೆ ಮಾತಾಡಿ, ಅವರು ಹೇಳೋ ಮಾತಿಗೂ ಕಿವಿಗೊಡಿ.—ಜ್ಞಾನೋಕ್ತಿ 20:5.
ನೀವು ತುಂಬಾ ಪ್ರೀತಿಸುವ ಯಾರಾದರೂ ತೀರಿಕೊಂಡಾಗ ಆಗುವ ದುಃಖವನ್ನು ಮಾತಿನಲ್ಲಿ ಹೇಳಲು ಅಸಾಧ್ಯ. ಆದ್ದರಿಂದ ಮನಸ್ಸು ಹಗುರವಾಗುವ ತನಕ ಅತ್ತುಬಿಡಿ. ‘ಯೇಸು ಸಹ ಕಣ್ಣೀರು ಸುರಿಸಿದನು’ ಅಂತ ಬೈಬಲ್ ಹೇಳುತ್ತದೆ. (ಯೋಹಾನ 11:35; ಪ್ರಸಂಗಿ 3:4) ನೆಮ್ಮದಿಗಾಗಿ ಸಾಕಷ್ಟು ವಿಶ್ರಾಂತಿ ಪಡೆಯಿರಿ. (ಪ್ರಸಂಗಿ 4:6) ಹೀಗೆ ಮಾಡುವಲ್ಲಿ ಯಾವುದೇ ಸಂಕಷ್ಟಕರ ಪರಿಸ್ಥಿತಿಯನ್ನು ಸುಲಭವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ.
ಹೀಗೆ ಮಾಡಿ:
-
ನಿಮ್ಮ ಕುಟುಂಬದವರ ಜೊತೆ ಮಾತಾಡುವ ರೂಢಿ ನಿಮಗಿರುವುದಾದರೆ ಸಂಕಷ್ಟಗಳು ಬರುವಾಗ ಅವರು ನಿಮ್ಮ ಜೊತೆ ಮಾತಾಡಲು ಹಿಂಜರಿಯುವುದಿಲ್ಲ
-
ನಿಮ್ಮಂಥದ್ದೇ ಸಮಸ್ಯೆಯನ್ನು ಎದುರಿಸಿರುವವರೊಂದಿಗೆ ಮಾತಾಡಿ ಅವರ ಸಲಹೆ ಪಡೆಯಿರಿ
3 ಸಹಾಯ ಸ್ವೀಕರಿಸಿ
ಬೈಬಲಿನ ಹಿತವಚನ: “ಮಿತ್ರನ ಪ್ರೀತಿಯು ನಿರಂತರ; ಸಹೋದರನ ಜನ್ಮವು ಆಪತ್ತಿನಲ್ಲಿ ಸಾರ್ಥಕ.” (ಜ್ಞಾನೋಕ್ತಿ 17:17) ನಿಮಗೆ ಸಹಾಯ ಮಾಡಬೇಕು ಅಂತ ನಿಮ್ಮ ಸ್ನೇಹಿತರು ಬಯಸುತ್ತಾರೆ, ಆದರೆ ಅವರಿಗೆ ಏನು ಮಾಡಬೇಕೆಂದು ತೋಚದೆ ಇರಬಹುದು. ಹಾಗಾಗಿ, ನಿಮಗೆ ಯಾವ ಸಹಾಯಬೇಕು ಅಂತ ಹೇಳೋದಕ್ಕೆ ಹಿಂಜರಿಯಬೇಡಿ. (ಜ್ಞಾನೋಕ್ತಿ 12:25) ಅದರೊಂದಿಗೆ ಬೈಬಲಿನ ಒಳ್ಳೆಯ ಜ್ಞಾನವಿರುವ ವ್ಯಕ್ತಿಗಳಿಂದ ಆಧ್ಯಾತ್ಮಿಕ ಸಹಾಯ ಪಡೆಯಿರಿ. ಅವರು ಬೈಬಲಿನಿಂದ ಕೊಡುವ ಮಾರ್ಗದರ್ಶನ ನಿಮಗೆ ಹೆಚ್ಚು ಪ್ರಯೋಜನ ತರುವುದು.—ಯಾಕೋಬ 5:14.
ದೇವರಲ್ಲಿ ನಂಬಿಕೆ ಇಟ್ಟು, ಆತನ ವಾಗ್ದಾನಗಳು ಖಂಡಿತ ನೆರವೇರುತ್ತವೆಂದು ಭರವಸೆ ಇಟ್ಟಿರುವ ಜನರೊಂದಿಗೆ ಸಹವಾಸ ಮಾಡಿ. ಆಗ ನಿಮಗೆ ಬೇಕಾದ ಬೆಂಬಲ ಸಿಗುತ್ತದೆ. ಪ್ರೋತ್ಸಾಹದ ಅಗತ್ಯವಿರುವವರಿಗೆ ಸಹಾಯ ಮಾಡುವಾಗಲೂ ನಿಮಗೆ ಸಾಂತ್ವನ ಸಿಗುತ್ತದೆ. ಯೆಹೋವನ ಮೇಲೆ ಮತ್ತು ಆತನ ವಾಗ್ದಾನಗಳ ಮೇಲೆ ನಿಮಗಿರುವ ನಂಬಿಕೆಯನ್ನು ಅವರೊಂದಿಗೆ ಹಂಚಿಕೊಳ್ಳಿ. ಅಗತ್ಯವಿರುವವರಿಗೆ ಸಹಾಯ ಮಾಡುವುದರಲ್ಲಿ ಕಾರ್ಯಮಗ್ನರಾಗಿರಿ. ನಿಮ್ಮ ಬಗ್ಗೆ ಕಾಳಜಿವಹಿಸುವ ಮತ್ತು ನಿಮ್ಮನ್ನು ಪ್ರೀತಿಸುವ ಜನರಿಂದ ಎಂದಿಗೂ ದೂರವಿರಬೇಡಿ.—ಜ್ಞಾನೋಕ್ತಿ 18:1; 1 ಕೊರಿಂಥ 15:58.
ಹೀಗೆ ಮಾಡಿ:
-
ನಿಮ್ಮ ಆಪ್ತ ಗೆಳೆಯ/ಗೆಳತಿಯ ಜೊತೆ ಮಾತಾಡಿ, ಅವರ ಸಹಾಯ ಪಡೆಯಿರಿ
-
ನಿಮಗೆ ಯಾವ ಸಹಾಯ ಬೇಕೊ ಅದನ್ನು ನಿರ್ದಿಷ್ಟವಾಗಿ, ಪ್ರಾಮಾಣಿಕವಾಗಿ ಹೇಳಿ