ಅರಣ್ಯಕಾಂಡ 5:1-31

  • ಅಶುದ್ಧರು ಪಾಳೆಯದ ಹೊರಗಿರಬೇಕು (1-4)

  • ಪಾಪ ಒಪ್ಕೊಳ್ಳೋದು, ನಷ್ಟಭರ್ತಿ (5-10)

  • ವ್ಯಭಿಚಾರ ಸಂಶಯ ಬಂದಾಗ ನೀರಿಂದ ಪರೀಕ್ಷೆ (11-31)

5  ಯೆಹೋವ ಮೋಶೆಗೆ  “ಎಲ್ಲ ಕುಷ್ಠರೋಗಿಗಳನ್ನ,+ ಸ್ರಾವ ಇರೋರನ್ನ,+ ಶವ ಮುಟ್ಟಿ ಅಶುದ್ಧ ಆದವರನ್ನ+ ಪಾಳೆಯದಿಂದ ಹೊರಗೆ ಕಳಿಸಬೇಕು ಅಂತ ಇಸ್ರಾಯೇಲ್ಯರಿಗೆ ಹೇಳು.  ಗಂಡಸರಾಗ್ಲಿ ಹೆಂಗಸರಾಗ್ಲಿ ಪಾಳೆಯದಿಂದ ಹೊರಗೆ ಕಳಿಸಬೇಕು. ನಾನು ನಿಮ್ಮ ಮಧ್ಯ ವಾಸ ಮಾಡೋದ್ರಿಂದ+ ಅಂಥವರು ನಿಮ್ಮ ಮಧ್ಯ ಇದ್ದು ಪಾಳೆಯವನ್ನ ಅಶುದ್ಧ ಮಾಡಬಾರದು.+ ಹಾಗಾಗಿ ಅವರನ್ನ ಪಾಳೆಯದಿಂದ ಹೊರಗೆ ಕಳಿಸಬೇಕು” ಅಂದನು.  ಆಗ ಇಸ್ರಾಯೇಲ್ಯರು ಅಂಥವರನ್ನೆಲ್ಲ ಪಾಳೆಯದಿಂದ ಹೊರಗೆ ಕಳಿಸಿದ್ರು. ಹೀಗೆ ಯೆಹೋವ ಮೋಶೆಗೆ ಹೇಳಿದ ಹಾಗೆನೇ ಮಾಡಿದ್ರು.  ಯೆಹೋವ ಮೋಶೆಗೆ ಇನ್ನೂ ಹೇಳೋದು ಏನಂದ್ರೆ  “ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು: ‘ಹೆಂಗಸರಾಗ್ಲಿ ಗಂಡಸರಾಗ್ಲಿ ಏನಾದ್ರೂ ಪಾಪ ಮಾಡಿ ಯೆಹೋವನಿಗೆ ನಂಬಿಕೆ ದ್ರೋಹ ಮಾಡಿದ್ರೆ ಅವರು ಅಪರಾಧಿಗಳು.+  ಅವರೇ ಬಂದು ತಮ್ಮ ತಪ್ಪನ್ನ ಒಪ್ಕೊಳ್ಳಬೇಕು.+ ಅವರು ಯಾರ ವಿರುದ್ಧ ಪಾಪ ಮಾಡಿದ್ದಾರೋ ಅವರಿಗೆ ಪೂರ್ತಿ ನಷ್ಟಭರ್ತಿ ಮಾಡಬೇಕು. ಜೊತೆಗೆ ನಷ್ಟಭರ್ತಿ ಮಾಡೋ ವಸ್ತುವಿನ ಬೆಲೆಯ ಐದನೇ ಒಂದು ಭಾಗ ಸೇರಿಸಿ ಕೊಡಬೇಕು.+  ಅದನ್ನ ತಗೊಬೇಕಾದ ವ್ಯಕ್ತಿ ಸತ್ತುಹೋಗಿದ್ರೆ, ಅವನಿಗೆ ಹತ್ರದ ಸಂಬಂಧಿಕರು ಯಾರೂ ಇಲ್ಲದಿದ್ರೆ ಅವನು ಆ ನಷ್ಟಭರ್ತಿಯನ್ನ ಯೆಹೋವನಿಗೆ ಕೊಡಬೇಕು. ಅದು ಪುರೋಹಿತನಿಗೆ ಸೇರಬೇಕು. ಪಾಪ ಮಾಡಿದವರು ತಮ್ಮ ಪ್ರಾಯಶ್ಚಿತ್ತಕ್ಕಾಗಿ ಕೊಡೋ ಟಗರೂ ಪುರೋಹಿತನಿಗೆ ಸೇರಬೇಕು.+  ಇಸ್ರಾಯೇಲ್ಯರು ಪುರೋಹಿತನಿಗೆ ತಂದು ಕೊಡೋ ಎಲ್ಲ ಪವಿತ್ರ ಕಾಣಿಕೆಗಳು+ ಅವನಿಗೇ ಸೇರಬೇಕು.+ 10  ಪ್ರತಿಯೊಬ್ಬ ಇಸ್ರಾಯೇಲ್ಯ ತಂದು ಕೊಡೋ ಪವಿತ್ರ ವಸ್ತುಗಳು ಪುರೋಹಿತನಿಗೇ ಸೇರಬೇಕು. ಕಾಣಿಕೆಯಾಗಿ ಏನನ್ನೇ ತಂದು ಕೊಟ್ರೂ ಅದು ಪುರೋಹಿತನಿಗೆ ಸೇರುತ್ತೆ.’” 11  ಯೆಹೋವ ಮೋಶೆಗೆ ಮತ್ತೂ ಹೇಳೋದು ಏನಂದ್ರೆ 12  “ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು: ‘ಒಬ್ಬನ ಹೆಂಡತಿ ಅಡ್ಡದಾರಿ ಹಿಡಿದು ಗಂಡನಿಗೆ ದ್ರೋಹ ಮಾಡಿದ್ರೆ ನೀವು ಹೀಗೆ ಮಾಡಬೇಕು. 13  ಅವಳಿಗೆ ಇನ್ನೊಬ್ಬನ ಜೊತೆ ಲೈಂಗಿಕ ಸಂಬಂಧ ಇರಬಹುದು.+ ಈ ವಿಷ್ಯ ಅವಳ ಗಂಡನಿಗೆ ಗೊತ್ತಾಗದೆ ಗುಟ್ಟಾಗಿ ಇರಬಹುದು. ಅವಳು ಅಪವಿತ್ರ ಆಗಿದ್ರೂ ಅವಳ ವಿರುದ್ಧ ಯಾವುದೇ ಸಾಕ್ಷಿ ಇಲ್ಲದೆ ಅವಳು ಸಿಕ್ಕಿಬೀಳದೇನೂ ಇರಬಹುದು. 14  ಅವಳ ಗಂಡನಿಗೆ ಅವಳ ಮೇಲೆ ಕೋಪ ಬಂದು ಅವಳ ನಡತೆ ಮೇಲೆ ಸಂಶಯ ಬಂದ್ರೆ ಅಥವಾ ಒಬ್ಬ ಸ್ತ್ರೀ ವ್ಯಭಿಚಾರ ಮಾಡದಿದ್ರೂ ಅವಳ ಗಂಡನಿಗೆ ಸಂಶಯ ಬಂದ್ರೆ ಅಂಥ ಸಂದರ್ಭದಲ್ಲಿ ಹೀಗೆ ಮಾಡಬೇಕು: 15  ಅವನು ತನ್ನ ಹೆಂಡತಿಯನ್ನ ಪುರೋಹಿತನ ಹತ್ರ ಕರ್ಕೊಂಡು ಬರಬೇಕು. ಅವಳಿಗಾಗಿ ಒಂದು ಏಫಾ* ಅಳತೆಯ ಹತ್ತನೇ ಒಂದು ಭಾಗ ಬಾರ್ಲಿ* ಹಿಟ್ಟೂ ತಗೊಂಡು ಬರಬೇಕು. ಅವನು ಕೋಪದಿಂದಾಗಿ ತಪ್ಪನ್ನ ಗಮನಕ್ಕೆ ತರೋಕೆ ಆ ಹಿಟ್ಟನ್ನ ಧಾನ್ಯ ಅರ್ಪಣೆಯಾಗಿ ಕೊಡೋದ್ರಿಂದ ಅದ್ರ ಮೇಲೆ ಎಣ್ಣೆ ಸುರಿಬಾರದು, ಸಾಂಬ್ರಾಣಿ ಇಡಬಾರದು. 16  ಪುರೋಹಿತ ಅವಳನ್ನ ಕರ್ಕೊಂಡು ಬಂದು ಯೆಹೋವನ ಮುಂದೆ ನಿಲ್ಲಿಸಬೇಕು.+ 17  ಪುರೋಹಿತ ಒಂದು ಮಣ್ಣಿನ ಪಾತ್ರೆಯಲ್ಲಿ ಶುದ್ಧವಾದ ನೀರು ತಗೊಂಡು ಅದ್ರಲ್ಲಿ ಪವಿತ್ರ ಡೇರೆಯ ನೆಲದಲ್ಲಿ ಇರೋ ಸ್ವಲ್ಪ ಧೂಳು ಹಾಕಬೇಕು. 18  ಅವಳನ್ನ ಯೆಹೋವನ ಮುಂದೆ ನಿಲ್ಲಿಸಿ ಅವಳ ಕೂದಲು ಬಿಚ್ಚಬೇಕು. ತಪ್ಪನ್ನ ಗಮನಕ್ಕೆ ತರೋಕೆ ಅಂದ್ರೆ ಕೋಪ ಇರೋದ್ರಿಂದಾಗಿ ಕೊಟ್ಟ ಧಾನ್ಯ ಅರ್ಪಣೆಯನ್ನ ಅವಳ ಕೈಯಲ್ಲಿ ಇಡಬೇಕು.+ ಶಾಪವನ್ನ ತರೋ ಕಹಿ ನೀರನ್ನ ಪುರೋಹಿತ ತನ್ನ ಕೈಯಲ್ಲಿ ಹಿಡ್ಕೋಬೇಕು.+ 19  ಪುರೋಹಿತ ಅವಳಿಂದ ಆಣೆ ಮಾಡಿಸೋಕೆ ಮುಂಚೆ “ನೀನು ಮದುವೆಯಾದ*+ ಸಮಯದಿಂದ ಬೇರೊಬ್ಬ ಗಂಡಸಿನ ಜೊತೆ ಲೈಂಗಿಕ ಸಂಬಂಧ ಇಲ್ಲಾಂದ್ರೆ ನೀನು ಅಡ್ಡದಾರಿ ಹಿಡಿದು ಅಪವಿತ್ರ ಆಗಿಲ್ಲಾಂದ್ರೆ ಶಾಪವನ್ನ ತರೋ ಈ ಕಹಿ ನೀರಿಂದ ನಿನಗೇನೂ ಹಾನಿ ಆಗದಿರಲಿ. 20  ಆದ್ರೆ ನೀನು ಮದುವೆ ಆದ್ಮೇಲೆ* ಅಡ್ಡದಾರಿ ಹಿಡಿದು ಗಂಡನನ್ನ ಬಿಟ್ಟು ಬೇರೊಬ್ಬ ಗಂಡಸಿನ ಜೊತೆ ಲೈಂಗಿಕ ಸಂಬಂಧ ಇಟ್ಕೊಂಡು+ ನೀನು ಅಪವಿತ್ರ ಆಗಿದ್ರೆ­­—” ಅಂತ ಹೇಳಿ 21  ಪುರೋಹಿತ ಆ ಸ್ತ್ರೀಯಿಂದ ಆಣೆ ಮಾಡಿಸಬೇಕು. ಆಗ ಅವಳು, ತಾನು ನಿಜವಾಗ್ಲೂ ಪಾಪ ಮಾಡಿದ್ರೆ ಪುರೋಹಿತ ಹೇಳೋ ಶಾಪ ತನ್ನ ಮೇಲೆ ಬರಲಿ ಅಂತ ಆಣೆ ಮಾಡಬೇಕು. ಆಗ ಪುರೋಹಿತ ಅವಳಿಗೆ “ಇಸ್ರಾಯೇಲ್ಯರು ಶಾಪ ಹಾಕುವಾಗ, ಶಪಥ ಮಾಡುವಾಗ ನಿನ್ನ ಹೆಸ್ರನ್ನ ಉಪಯೋಗಿಸೋ ತರ ಯೆಹೋವ ಮಾಡ್ಲಿ. ನಿನ್ನ ತೊಡೆ* ಕ್ಷೀಣಿಸೋ ತರ,* ನಿನ್ನ ಹೊಟ್ಟೆ ಉಬ್ಬೋ ತರ ಯೆಹೋವ ಮಾಡ್ಲಿ. 22  ಶಾಪ ತರೋ ಈ ನೀರು ನಿನ್ನ ಕರುಳ ಒಳಗೆ ಹೋಗಿ ಹೊಟ್ಟೆ ಉಬ್ಬೋ ತರ, ನಿನ್ನ ತೊಡೆ* ಕ್ಷೀಣಿಸೋ ತರ* ಮಾಡ್ಲಿ” ಅಂತ ಹೇಳಬೇಕು. ಅದಕ್ಕೆ ಅವಳು “ಹಾಗೇ ಆಗ್ಲಿ, ಹಾಗೇ ಆಗ್ಲಿ”* ಅನ್ನಬೇಕು. 23  ಆಮೇಲೆ ಪುರೋಹಿತ ಆ ಶಾಪಗಳನ್ನ ಪುಸ್ತಕದಲ್ಲಿ ಬರೆದು ಅದನ್ನ ಕಹಿ ನೀರಲ್ಲಿ ತೊಳಿಬೇಕು. 24  ಆ ಕಹಿ ನೀರನ್ನ ಅವಳಿಗೆ ಕುಡಿಸಬೇಕು. ಆಗ ಶಾಪ ತರೋ ಆ ನೀರು ಅವಳೊಳಗೆ ಹೋಗಿ ನೋವು ಶುರು ಆಗುತ್ತೆ. 25  ಕೋಪ ಇರೋದ್ರಿಂದಾಗಿ ಕೊಟ್ಟ ಧಾನ್ಯ ಅರ್ಪಣೆಯನ್ನ+ ಪುರೋಹಿತ ಅವಳ ಕೈಯಿಂದ ತಗೊಂಡು ಯೆಹೋವನ ಎದುರಲ್ಲಿ ಹಿಂದೆ ಮುಂದೆ ಆಡಿಸಿ ಯಜ್ಞವೇದಿ ಹತ್ರ ತರಬೇಕು. 26  ಆ ಅರ್ಪಣೆಯ ಹಿಟ್ಟನ್ನ ಒಂದು ಹಿಡಿತುಂಬ ತಗೊಂಡು ಯಜ್ಞವೇದಿ ಮೇಲೆ ಅರ್ಪಿಸಬೇಕು. ಅದ್ರಿಂದ ಹೊಗೆ ಮೇಲೆ ಹೋಗಬೇಕು.+ ಇದು ಧಾನ್ಯ ಅರ್ಪಣೆಯನ್ನ ಪೂರ್ತಿಯಾಗಿ ಅರ್ಪಿಸಲಾಗಿದೆ ಅಂತ ಸೂಚಿಸುತ್ತೆ. ಪುರೋಹಿತ ಅವಳಿಗೆ ನೀರು ಕುಡಿಸಿದ ಮೇಲೆ 27  ನಿಜವಾಗ್ಲೂ ಅವಳು ಗಂಡನಿಗೆ ದ್ರೋಹ ಮಾಡಿದ್ರೆ ತನ್ನನ್ನ ಅಪವಿತ್ರ ಮಾಡ್ಕೊಂಡಿದ್ರೆ ಶಾಪ ತರೋ ಆ ನೀರು ಅವಳೊಳಗೆ ಹೋಗಿ ಅವಳಿಗೆ ನೋವು ಶುರು ಆಗುತ್ತೆ. ಇದ್ರಿಂದ ಅವಳ ಹೊಟ್ಟೆ ಉಬ್ಬುತ್ತೆ, ತೊಡೆ* ಕ್ಷೀಣಿಸುತ್ತೆ.* ಅದಾದ ಮೇಲೆ ಇಸ್ರಾಯೇಲ್ಯರು ಶಾಪ ಹಾಕುವಾಗ ಅವಳ ಹೆಸ್ರನ್ನ ಉಪಯೋಗಿಸ್ತಾರೆ. 28  ಆದ್ರೆ ಅವಳು ಅಪವಿತ್ರ ಆಗಿಲ್ಲಾಂದ್ರೆ ಗಂಡನಿಗೆ ದ್ರೋಹ ಮಾಡಿಲ್ಲಾಂದ್ರೆ ಆ ಶಿಕ್ಷೆ ಸಿಗಲ್ಲ. ಅವಳು ಗರ್ಭಿಣಿಯಾಗಿ ಮಕ್ಕಳು ಹುಟ್ತಾರೆ. 29  ಗಂಡನ ಅಧಿಕಾರದ ಕೆಳಗಿರೋ ಒಬ್ಬ ಸ್ತ್ರೀ ಅಡ್ಡದಾರಿ ಹಿಡಿದು ತನ್ನನ್ನ ಅಪವಿತ್ರ ಮಾಡ್ಕೊಂಡಿದ್ರಿಂದ+ ಅವಳ ಗಂಡ ಕೋಪ ಮಾಡ್ಕೊಂಡ್ರೆ 30  ಅಥವಾ ಒಬ್ಬ ಗಂಡಸಿಗೆ ತನ್ನ ಹೆಂಡತಿ ನಡತೆ ಮೇಲೆ ಸಂಶಯ ಬಂದು ಕೋಪ ಮಾಡ್ಕೊಂಡ್ರೆ ಈ ನಿಯಮ ಪಾಲಿಸಬೇಕು. ಅವನು ತನ್ನ ಹೆಂಡತಿನ ಯೆಹೋವನ ಮುಂದೆ ನಿಲ್ಲಿಸಬೇಕು. ಪುರೋಹಿತ ಈ ನಿಯಮದ ಪ್ರಕಾರ ಎಲ್ಲ ಮಾಡಬೇಕು. 31  ಇಂಥ ಸಂದರ್ಭದಲ್ಲಿ ಗಂಡ ಅಪರಾಧಿ ಅಲ್ಲ. ಹೆಂಡತಿ ತಪ್ಪು ಮಾಡಿದ್ರೆ ಖಂಡಿತ ಅವಳಿಗೆ ಶಿಕ್ಷೆ ಆಗುತ್ತೆ.’”

ಪಾದಟಿಪ್ಪಣಿ

ಅಥವಾ “ಜವೆಗೋದಿ.”
ಅಥವಾ “ನೀನು ಗಂಡನ ಅಧಿಕಾರದ ಕೆಳಗಿದ್ದ.”
ಅಥವಾ “ನೀನು ಗಂಡನ ಅಧಿಕಾರದ ಕೆಳಗಿರುವಾಗ.”
ಇದು ಸಂತಾನೋತ್ಪತ್ತಿಯ ಅಂಗಗಳನ್ನ ಸೂಚಿಸ್ತಿರಬೇಕು.
ಇದು ಸಂತಾನ ಶಕ್ತಿ ಕಳ್ಕೊಳ್ಳೋದಕ್ಕೆ ಸೂಚಿಸ್ತಿರಬೇಕು.
ಇದು ಸಂತಾನೋತ್ಪತ್ತಿಯ ಅಂಗಗಳನ್ನ ಸೂಚಿಸ್ತಿರಬೇಕು.
ಇದು ಸಂತಾನ ಶಕ್ತಿ ಕಳ್ಕೊಳ್ಳೋದಕ್ಕೆ ಸೂಚಿಸ್ತಿರಬೇಕು.
ಹೀಬ್ರು ಭಾಷೆಯಲ್ಲಿ “ಆಮೆನ್‌, ಆಮೆನ್‌.”
ಇದು ಸಂತಾನೋತ್ಪತ್ತಿಯ ಅಂಗಗಳನ್ನ ಸೂಚಿಸ್ತಿರಬೇಕು.
ಇದು ಸಂತಾನ ಶಕ್ತಿ ಕಳ್ಕೊಳ್ಳೋದಕ್ಕೆ ಸೂಚಿಸ್ತಿರಬೇಕು.