ಆದಿಕಾಂಡ 30:1-43
30 ರಾಹೇಲ ತನಗೆ ಮಕ್ಕಳಾಗದಿದ್ದ ಕಾರಣ ತನ್ನ ಅಕ್ಕನನ್ನ ನೋಡಿ ಹೊಟ್ಟೆಕಿಚ್ಚುಪಟ್ಟಳು. ಅವಳು ಯಾಕೋಬನಿಗೆ “ನನಗೆ ಮಕ್ಕಳು ಕೊಡು, ಇಲ್ಲದಿದ್ರೆ ನಾನು ಸಾಯ್ತೀನಿ” ಅಂತ ಹೇಳ್ತಾ ಇದ್ದಳು.
2 ಇದ್ರಿಂದ ಯಾಕೋಬ ರಾಹೇಲಳ ಮೇಲೆ ಕೋಪದಿಂದ “ನಿನಗೆ ಮಕ್ಕಳಾಗದ ಹಾಗೆ ದೇವರೇ ತಡೆದ ಮೇಲೆ ನಾನೇನು ಮಾಡೋಕಾಗುತ್ತೆ? ನನ್ನನ್ನ ದೂರಬೇಡ. ನಾನೇನು ದೇವರಾ?” ಅಂದ.
3 ಅದಕ್ಕೆ ಅವಳು “ನನ್ನ ದಾಸಿ ಬಿಲ್ಹಾ+ ಇದ್ದಾಳಲ್ಲಾ, ಅವಳ ಜೊತೆ ಮಲ್ಕೊ. ಅವಳಿಗೆ ಮಗು ಆದ್ರೆ ಅದು ನಂದಾಗುತ್ತೆ. ಈ ರೀತಿಯಾದ್ರೂ ನನಗೆ ಮಕ್ಕಳಾಗ್ಲಿ” ಅಂದಳು.
4 ಹಾಗಾಗಿ ರಾಹೇಲ ತನ್ನ ಸೇವಕಿ ಬಿಲ್ಹಾಳನ್ನ ಯಾಕೋಬನಿಗೆ ಹೆಂಡತಿಯಾಗಿ ಕೊಟ್ಟಳು. ಅವನು ಅವಳನ್ನ ಕೂಡಿದ.+
5 ಬಿಲ್ಹಾಗೆ ಯಾಕೋಬನಿಂದ ಗಂಡು ಮಗು ಹುಟ್ಟಿತು.
6 ಆಮೇಲೆ ರಾಹೇಲ “ದೇವರು ನನ್ನ ನ್ಯಾಯಾಧೀಶ, ನನ್ನ ಕೂಗು ಕೇಳಿದ್ದಾನೆ. ಹಾಗಾಗಿ ಆತನು ನನಗೆ ಒಬ್ಬ ಮಗನನ್ನ ಕೊಟ್ಟನು” ಅಂತೇಳಿ ಆ ಮಗುಗೆ ದಾನ್*+ ಅಂತ ಹೆಸರಿಟ್ಟಳು.
7 ರಾಹೇಲಳ ಸೇವಕಿ ಬಿಲ್ಹಾ ಮತ್ತೆ ಗರ್ಭಿಣಿ ಆಗಿ ಯಾಕೋಬನಿಗೆ ಇನ್ನೊಂದು ಗಂಡು ಮಗು ಹೆತ್ತಳು.
8 ಆಗ ರಾಹೇಲ “ನನ್ನ ಅಕ್ಕನ ಜೊತೆ ಸತತವಾಗಿ ಹೋರಾಡಿ ಗೆದ್ದಿದ್ದೀನಿ!” ಅಂತ ಹೇಳಿ ಆ ಮಗುಗೆ ನಫ್ತಾಲಿ*+ ಅಂತ ಹೆಸರಿಟ್ಟಳು.
9 ಲೇಯ ತನಗೆ ಮಕ್ಕಳಾಗ್ತಾ ಇಲ್ಲ ಅಂತ ತಿಳಿದು ತನ್ನ ಸೇವಕಿ ಜಿಲ್ಪಳನ್ನ ಯಾಕೋಬನಿಗೆ ಹೆಂಡತಿಯಾಗಿ ಕೊಟ್ಟಳು.+
10 ಜಿಲ್ಪಗೆ ಯಾಕೋಬನಿಂದ ಗಂಡು ಮಗು ಹುಟ್ಟಿತು.
11 ಆಗ ಲೇಯ “ನನಗೆ ಎಂಥ ಸೌಭಾಗ್ಯ ಸಿಕ್ಕಿದೆ!” ಅಂತೇಳಿ ಆ ಮಗುಗೆ ಗಾದ್*+ ಅಂತ ಹೆಸರಿಟ್ಟಳು.
12 ಆಮೇಲೆ ಲೇಯಳ ಸೇವಕಿ ಜಿಲ್ಪಗೆ ಯಾಕೋಬನಿಂದ ಇನ್ನೊಂದು ಗಂಡು ಮಗು ಹುಟ್ಟಿತು.
13 ಆಗ ಲೇಯ “ನನಗೆ ತುಂಬ ಖುಷಿ ಆಗಿದೆ! ನಾನು ಸಂತೋಷವಾಗಿ ಇದ್ದೀನಿ ಅಂತ ಸ್ತ್ರೀಯರೆಲ್ಲ ಹೊಗಳ್ತಾರೆ”+ ಅಂತೇಳಿ ಆ ಮಗುಗೆ ಅಶೇರ್*+ ಅಂತ ಹೆಸರಿಟ್ಟಳು.
14 ಗೋದಿ ಕೊಯ್ಲಿನ ಕಾಲದಲ್ಲಿ ರೂಬೇನ+ ಬಯಲಲ್ಲಿ ನಡಿತಿದ್ದಾಗ ಕೆಲವು ಮ್ಯಾಂಡ್ರೇಕ್ ಹಣ್ಣುಗಳನ್ನ* ನೋಡಿ ಅವುಗಳನ್ನ ಕಿತ್ತು ತಂದು ತನ್ನ ಅಮ್ಮ ಲೇಯಗೆ ಕೊಟ್ಟ. ಆಗ ರಾಹೇಲ ಲೇಯಗೆ “ನಿನ್ನ ಮಗ ತಂದ ಹಣ್ಣುಗಳಲ್ಲಿ ಕೆಲವನ್ನ ದಯವಿಟ್ಟು ನನಗೆ ಕೊಡು” ಅಂದಳು.
15 ಅದಕ್ಕೆ ಲೇಯ “ನೀನು ನನ್ನ ಗಂಡನನ್ನ ನನ್ನಿಂದ ಕಿತ್ಕೊಂಡಿದ್ದು ಸಾಕಾಗಲಿಲ್ವಾ?+ ಈಗ ನನ್ನ ಮಗ ತಂದಿರೋ ಹಣ್ಣುಗಳನ್ನೂ ತಗೋಬೇಕಂತ ಇದ್ದೀಯಾ?” ಅಂದಳು. ಆಗ ರಾಹೇಲ “ಸರಿ, ಆ ಹಣ್ಣುಗಳನ್ನ ನನಗೆ ಕೊಟ್ರೆ ಗಂಡ ಇವತ್ತು ರಾತ್ರಿ ನಿನ್ನ ಜೊತೆ ಮಲಗ್ತಾನೆ” ಅಂದಳು.
16 ಯಾಕೋಬ ಆ ಸಂಜೆ ಹೊಲದಿಂದ ಬರ್ತಿದ್ದಾಗ ಲೇಯ ಅವನ ಹತ್ರ ಹೋಗಿ “ಇವತ್ತು ರಾತ್ರಿ ನೀನು ನನ್ನ ಜೊತೆ ಮಲಗಬೇಕು. ಯಾಕಂದ್ರೆ ನನ್ನ ಮಗ ತಂದ ಮ್ಯಾಂಡ್ರೇಕ್ ಹಣ್ಣುಗಳನ್ನ ರಾಹೇಲಗೆ ಕೊಟ್ಟು ನಾನು ನಿನ್ನನ್ನ ಸಂಪಾದಿಸಿದ್ದೀನಿ” ಅಂದಳು. ಆಗ ಅವನು ಆ ರಾತ್ರಿ ಅವಳ ಜೊತೆ ಮಲಗಿದ.
17 ದೇವರು ಲೇಯಳ ಪ್ರಾರ್ಥನೆ ಕೇಳಿ ಉತ್ತರ ಕೊಟ್ಟಿದ್ರಿಂದ ಯಾಕೋಬನಿಂದ ಗರ್ಭಿಣಿಯಾಗಿ ಅವಳಿಗೆ ಐದನೇ ಗಂಡು ಮಗು ಆಯ್ತು.
18 ಆಗ ಲೇಯ “ನಾನು ನನ್ನ ಗಂಡನಿಗೆ ನನ್ನ ಸೇವಕಿ ಕೊಟ್ಟಿದ್ರಿಂದ ದೇವರು ನನಗೆ ಪ್ರತಿಫಲ ಕೊಟ್ಟಿದ್ದಾನೆ” ಅಂತೇಳಿ ಆ ಮಗುಗೆ ಇಸ್ಸಾಕಾರ್*+ ಅಂತ ಹೆಸರಿಟ್ಟಳು.
19 ಲೇಯ ಮತ್ತೆ ಯಾಕೋಬನಿಂದ ಗರ್ಭಿಣಿಯಾಗಿ ಆರನೇ ಗಂಡು ಮಗು ಹುಟ್ಟಿತು.+
20 ಆಗ ಲೇಯ “ದೇವರು ನನಗೆ ಒಳ್ಳೇ ಉಡುಗೊರೆ ಕೊಟ್ಟಿದ್ದಾನೆ. ನಾನು ನನ್ನ ಗಂಡನಿಗೆ ಆರು ಗಂಡು ಮಕ್ಕಳನ್ನ ಕೊಟ್ಟಿದ್ದೀನಿ.+ ಈಗಂತೂ ಅವನು ನನ್ನನ್ನ ಸಹಿಸ್ಕೊಳ್ತಾನೆ”+ ಅಂತೇಳಿ ಆ ಮಗುಗೆ ಜೆಬುಲೂನ್*+ ಅಂತ ಹೆಸರಿಟ್ಟಳು.
21 ಆಮೇಲೆ ಅವಳಿಗೆ ಒಂದು ಹೆಣ್ಣುಮಗು ಹುಟ್ಟಿತು. ಅವಳು ಆ ಮಗುಗೆ ದೀನ ಅಂತ ಹೆಸರಿಟ್ಟಳು.+
22 ಕೊನೆಗೆ ದೇವರು ರಾಹೇಲನ್ನ ನೆನಪಿಸ್ಕೊಂಡನು.* ಅವಳಿಗೆ ಮಕ್ಕಳಾಗೋ ತರ ಮಾಡೋ ಮೂಲಕ ಅವಳ ಪ್ರಾರ್ಥನೆಗೆ ಉತ್ತರ ಕೊಟ್ಟನು.+
23 ಅವಳಿಗೆ ಗಂಡು ಮಗು ಆಯ್ತು. ಅವಳು “ದೇವರು ನನ್ನ ಮೇಲಿದ್ದ ಅವಮಾನ ತೆಗೆದುಹಾಕಿದ್ದಾನೆ”+ ಅಂದಳು.
24 “ಯೆಹೋವ ನನಗೆ ಇನ್ನೊಬ್ಬ ಮಗನನ್ನ ಕೊಟ್ಟಿದ್ದಾನೆ” ಅಂತೇಳಿ ಆ ಮಗುಗೆ ಯೋಸೇಫ*+ ಅಂತ ಹೆಸರಿಟ್ಟಳು.
25 ರಾಹೇಲಗೆ ಯೋಸೇಫ ಹುಟ್ಟಿದ ಮೇಲೆ ಯಾಕೋಬ ಲಾಬಾನನಿಗೆ “ನನ್ನ ದೇಶದಲ್ಲಿರೋ ನನ್ನ ಮನೆಗೆ ವಾಪಸ್ ಹೋಗೋಕೆ ನನಗೆ ಅನುಮತಿ ಕೊಡು.+
26 ನಾನು ನಿನ್ನ ಹತ್ರ ಕೆಲಸಮಾಡಿ ಪಡೆದ ನನ್ನ ಹೆಂಡತಿಯರನ್ನ, ಮಕ್ಕಳನ್ನ ನನಗೆ ಕೊಡು, ನಾನು ಹೋಗ್ತೀನಿ. ನಿನ್ನ ಹತ್ರ ಎಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೀನಿ ಅಂತ ನಿನಗೆ ಚೆನ್ನಾಗಿ ಗೊತ್ತು”+ ಅಂದ.
27 ಆಗ ಲಾಬಾನ “ದಯವಿಟ್ಟು ನೀನು ನನ್ನ ಜೊತೆನೇ ಇರು. ನಿನ್ನಿಂದ ಯೆಹೋವ ನನ್ನನ್ನ ಆಶೀರ್ವದಿಸ್ತಿದ್ದಾನೆ ಅಂತ ನಾನು ಶಕುನ ನೋಡಿ ತಿಳ್ಕೊಂಡೆ” ಅಂದ.
28 ಅಲ್ಲದೆ “ನಿನಗೆಷ್ಟು ಸಂಬಳ ಕೊಡಬೇಕು ಹೇಳು, ಕೊಡ್ತೀನಿ”+ ಅಂದ.
29 ಯಾಕೋಬ “ನಾನು ನಿನ್ನ ಹತ್ರ ಎಷ್ಟು ಪ್ರಾಮಾಣಿಕನಾಗಿ ಕೆಲಸ ಮಾಡಿದ್ದೀನಿ, ನಿನ್ನ ಪ್ರಾಣಿಗಳನ್ನ ನಾನು ನೋಡ್ಕೊಂಡಾಗ ಅವು ಎಷ್ಟು ಜಾಸ್ತಿ ಆಯ್ತು ಅನ್ನೋದೆಲ್ಲ ನಿನಗೇ ಗೊತ್ತು.+
30 ನಾನು ಬರೋದಕ್ಕೆ ಮುಂಚೆ ನಿನ್ನ ಹತ್ರ ಕೆಲವೇ ಪ್ರಾಣಿ ಇತ್ತು. ಆದ್ರೆ ನಾನು ಬಂದ ದಿನದಿಂದ ಯೆಹೋವ ನಿನ್ನನ್ನ ಆಶೀರ್ವದಿಸಿದ್ದಾನೆ. ಹಾಗಾಗಿ ನಿನ್ನ ಪ್ರಾಣಿಗಳು ಜಾಸ್ತಿ ಆಯ್ತು. ಈಗ ನಾನು ನನ್ನ ಕುಟುಂಬಕ್ಕಾಗಿ ಏನಾದ್ರು ಮಾಡಬೇಕಲ್ವಾ?”+ ಅಂದ.
31 ಅದಕ್ಕೆ ಲಾಬಾನ “ನಾನು ನಿನಗೇನು ಕೊಡಬೇಕು?” ಅಂದಾಗ ಯಾಕೋಬ “ಏನೂ ಕೊಡೋದು ಬೇಡ! ನನಗಾಗಿ ಒಂದು ವಿಷ್ಯ ಮಾಡಿದ್ರೆ ನಾನು ನಿನ್ನ ಆಡು-ಕುರಿಗಳನ್ನ ಮೇಯಿಸಿ ಕಾಯೋದನ್ನ ಮುಂದುವರಿಸ್ತೀನಿ.+
32 ನಾವಿಬ್ರೂ ಇವತ್ತು ನಿನ್ನ ಪ್ರಾಣಿಗಳನ್ನ ಹೋಗಿ ನೋಡೋಣ. ನೀನು ಹಿಂಡಿನಿಂದ ಮಚ್ಚೆ ಮತ್ತು ಚುಕ್ಕೆ ಇರೋ ಕುರಿಗಳನ್ನ, ಕಡುಕಂದು ಬಣ್ಣದ ಗಂಡು ಕುರಿಮರಿಗಳನ್ನ, ಮಚ್ಚೆ ಮತ್ತು ಚುಕ್ಕೆ ಇರೋ ಹೆಣ್ಣು ಆಡುಗಳನ್ನ ಬೇರೆ ಮಾಡಿಡು. ಇನ್ನು ಮುಂದೆ ಇಂಥ ಕುರಿ, ಟಗರು, ಆಡು ಹುಟ್ಟಿದ್ರೆ ಅವೇ ನನ್ನ ಸಂಬಳವಾಗಿರಲಿ.+
33 ಹೀಗೆ ನನಗೆ ಸಂಬಳವಾಗಿ ಸಿಕ್ಕಿದ್ದನ್ನ ನೀನು ಮುಂದೆ ಯಾವತ್ತಾದ್ರೂ ಪರೀಕ್ಷಿಸೋಕೆ ಬಂದಾಗ ನಾನು ಪ್ರಾಮಾಣಿಕ ಅನ್ನೋದು ನಿನಗೇ ಗೊತ್ತಾಗುತ್ತೆ. ಒಂದುವೇಳೆ ಮಚ್ಚೆ ಮತ್ತು ಚುಕ್ಕೆ ಇಲ್ಲದ ಹೆಣ್ಣು ಆಡು, ಕಡುಕಂದು ಬಣ್ಣದ್ದಲ್ಲದ ಗಂಡು ಕುರಿಮರಿ ನನ್ನ ಹತ್ರ ಇದ್ರೆ ಅವುಗಳನ್ನ ನಾನು ಕದ್ದಿದ್ದೀನಿ ಅಂತ ನೀನು ನೆನಸಬಹುದು” ಅಂದ.
34 ಆಗ ಲಾಬಾನ “ಸರಿ, ನೀನು ಹೇಳಿದ ಹಾಗೇ ಆಗ್ಲಿ”+ ಅಂದ.
35 ಅದೇ ದಿನ ಲಾಬಾನ ಪಟ್ಟೆ ಮತ್ತು ಚುಕ್ಕೆ ಇರೋ ಗಂಡು ಆಡುಗಳನ್ನ, ಮಚ್ಚೆ ಮತ್ತು ಚುಕ್ಕೆ ಇರೋ ಎಲ್ಲ ಹೆಣ್ಣು ಆಡುಗಳನ್ನ, ಗಂಡು ಕುರಿಮರಿಗಳ ಮೇಲೆ ಸ್ವಲ್ಪ ಬಿಳಿ ಬಣ್ಣ ಇದ್ರೂ ಆ ಎಲ್ಲ ಮರಿಗಳನ್ನ ಮತ್ತು ಕಡುಕಂದು ಬಣ್ಣದ ಎಲ್ಲ ಟಗರು ಮರಿಗಳನ್ನ ಪ್ರತ್ಯೇಕಿಸಿ ಅವುಗಳನ್ನ ಮೇಯಿಸೋಕೆ ತನ್ನ ಗಂಡುಮಕ್ಕಳಿಗೆ ಒಪ್ಪಿಸಿದ.
36 ಆಮೇಲೆ ಅವನು ಅವುಗಳನ್ನ ಹೊಡೆದುಕೊಂಡು ಯಾಕೋಬನಿದ್ದ ಸ್ಥಳದಿಂದ ಮೂರು ದಿನ ಪ್ರಯಾಣ ಮಾಡುವಷ್ಟು ದೂರ ಹೋದ. ಹಿಂಡಿನಲ್ಲಿ ಉಳಿದ ಪ್ರಾಣಿಗಳನ್ನ ಯಾಕೋಬ ಮೇಯಿಸ್ತಿದ್ದ.
37 ಆಮೇಲೆ ಯಾಕೋಬ ಗುಗ್ಗುಳದ ಮರ, ಬಾದಾಮಿ ಮರ, ಪ್ಲೇನ್ ಮರಗಳಿಂದ ಹಸಿ ಕೋಲುಗಳನ್ನ ಕತ್ತರಿಸಿದ. ಆ ಕೋಲುಗಳ ಮೇಲೆ ಅಲ್ಲಲ್ಲಿ ಸಿಪ್ಪೆ ಸುಲಿದು ಒಳಗಿರೋ ಬಿಳಿ ಬಣ್ಣ ಕಾಣೋ ತರ ಮಾಡಿದ. ಇದ್ರಿಂದ ಕೋಲುಗಳ ಮೇಲೆ ಮಚ್ಚೆ ಇರೋ ತರ ಕಾಣ್ತಿತ್ತು.
38 ಆಮೇಲೆ ಆ ಕೋಲುಗಳನ್ನ ನೀರು ಕುಡಿಯೋಕೆ ಹಿಂಡು ಬರುವಾಗ ಅವುಗಳಿಗೆ ಕಾಣೋ ತರ ನೀರು ಹರಿಯೋ ಕಾಲುವೆಗಳಲ್ಲಿ ಮತ್ತು ನೀರಿನ ತೊಟ್ಟಿಗಳಲ್ಲಿ ಇಟ್ಟ. ಅಲ್ಲಿಗೆ ಬರೋ ಆಡು-ಕುರಿಗಳು ಕೋಲುಗಳನ್ನ ನೋಡ್ತಾ ಸಂಗಮ ಮಾಡಬೇಕಂತ ಹಾಗೆ ಮಾಡಿದ.
39 ಆಡು-ಕುರಿಗಳು ಆ ಕೋಲುಗಳನ್ನ ನೋಡ್ತಾ ಸಂಗಮ ಮಾಡ್ತು. ಹಾಗಾಗಿ ಅವುಗಳಿಗೆ ಹುಟ್ಟಿದ ಮರಿಗಳ ಮೇಲೆ ಪಟ್ಟೆ, ಮಚ್ಚೆ, ಚುಕ್ಕೆ ಇತ್ತು.
40 ಯಾಕೋಬ ಆ ಮರಿಗಳನ್ನ ಪ್ರತ್ಯೇಕವಾಗಿಟ್ಟ. ಅಲ್ಲದೆ ಲಾಬಾನನ ಆಡು-ಕುರಿಗಳು ಹಿಂಡಿನಲ್ಲಿದ್ದ ಪಟ್ಟೆ ಇರೋ, ಕಡುಕಂದು ಬಣ್ಣದ ಆಡುಕುರಿಗಳನ್ನ ನೋಡ್ತಾ ಇರೋ ಹಾಗೆ ಮಾಡಿದ. ಆಮೇಲೆ ತನ್ನ ಹಿಂಡನ್ನ ಲಾಬಾನನ ಹಿಂಡಿನ ಜೊತೆ ಸೇರಿಸದೆ ಬೇರೆ ಇಟ್ಟ.
41 ಅಷ್ಟೇ ಅಲ್ಲ ದಷ್ಟಪುಷ್ಟವಾದ ಆಡು-ಕುರಿಗಳು ಕೋಲುಗಳನ್ನ ನೋಡ್ತಾ ಸಂಗಮ ಮಾಡಬೇಕಂತ ಯಾಕೋಬ ನೀರು ಹರಿಯೋ ಕಾಲುವೆಗಳಲ್ಲಿ ಆ ಕೋಲುಗಳನ್ನ ಇಡ್ತಿದ್ದ.
42 ಆದ್ರೆ ಬಲಹೀನವಾದ ಆಡು-ಕುರಿಗಳ ಮುಂದೆ ಅವನು ಆ ಕೋಲುಗಳನ್ನ ಇಡ್ತಾ ಇರಲಿಲ್ಲ. ಹೀಗಾಗಿ ಬಲಹೀನವಾದ ಆಡು-ಕುರಿಗಳು ಯಾವಾಗ್ಲೂ ಲಾಬಾನನ ಪಾಲಿಗೆ ಹೋಯ್ತು. ದಷ್ಟಪುಷ್ಟವಾದ ಆಡುಕುರಿಗಳೆಲ್ಲ ಯಾಕೋಬನ ಪಾಲಿಗೆ ಬಂತು.+
43 ಹೀಗೆ ಯಾಕೋಬ ತುಂಬ ಶ್ರೀಮಂತನಾದ. ಅವನ ಹತ್ರ ದೊಡ್ಡ ದೊಡ್ಡ ಹಿಂಡು, ತುಂಬ ಸೇವಕ ಸೇವಕಿಯರು, ತುಂಬಾ ಕತ್ತೆ ಒಂಟೆ ಇತ್ತು.+
ಪಾದಟಿಪ್ಪಣಿ
^ ಅರ್ಥ “ನ್ಯಾಯಾಧೀಶ.”
^ ಅರ್ಥ “ನನ್ನ ಹೋರಾಟ.”
^ ಅರ್ಥ “ಸೌಭಾಗ್ಯ.”
^ ಅರ್ಥ “ಸಂತೋಷ, ಖುಷಿ.”
^ ಈ ಹಣ್ಣು ತಿಂದ್ರೆ ಗರ್ಭಧಾರಣೆಗೆ ಸಹಾಯ ಆಗುತ್ತೆ ಅಂತ ಸ್ತ್ರೀಯರು ನೆನಸ್ತಿದ್ರು.
^ ಅರ್ಥ “ಇವನೇ ಪ್ರತಿಫಲ.”
^ ಅರ್ಥ “ಸಹಿಸು.”
^ ಅಕ್ಷ. “ಗಮನಕೊಟ್ಟನು.”
^ ಇದು ಯೋಸಿಫಿಯದ ಸಂಕ್ಷಿಪ್ತರೂಪ. ಅರ್ಥ “ಯಾಹು ಹೆಚ್ಚು ಮಾಡ್ಲಿ.”