ಆದಿಕಾಂಡ 38:1-30

  • ಯೆಹೂದ ಮತ್ತು ತಾಮಾರ (1-30)

38  ಆ ಸಮಯದಲ್ಲೇ ಯೆಹೂದ ತನ್ನ ಅಣ್ಣತಮ್ಮಂದಿರನ್ನ ಬಿಟ್ಟು ಬೇರೆ ಕಡೆ ಹೋದ. ಅವನು ಅದುಲ್ಲಾಮ್ಯನಾದ ಹೀರಾ ಅನ್ನುವವನು ವಾಸಿಸ್ತಿದ್ದ ಸ್ಥಳದ ಹತ್ರ ಡೇರೆ ಹಾಕೊಂಡ.  ಅಲ್ಲಿ ಕಾನಾನ್ಯನಾದ+ ಶೂಗನ ಮಗಳನ್ನ ಯೆಹೂದ ನೋಡಿದ. ಅವಳನ್ನ ಮದುವೆ ಆದ.  ಅವಳಿಗೆ ಗಂಡು ಮಗು ಆಯ್ತು. ಯೆಹೂದ ಆ ಮಗುಗೆ ಏರ್‌+ ಅಂತ ಹೆಸರಿಟ್ಟ.  ಅವಳಿಗೆ ಇನ್ನೊಂದು ಗಂಡುಮಗು ಹುಟ್ಟಿತು. ಆ ಮಗುಗೆ ಓನಾನ್‌ ಅಂತ ಹೆಸರಿಟ್ರು.  ಆಮೇಲೆ ಅವಳಿಗೆ ಇನ್ನೊಂದು ಗಂಡುಮಗು ಹುಟ್ಟಿತು. ಅದಕ್ಕೆ ಶೇಲಹ ಅಂತ ಹೆಸರಿಟ್ರು. ಇವನು ಯೆಹೂದ ಅಕ್ಜೀಬಿನಲ್ಲಿದ್ದಾಗ+ ಹುಟ್ಟಿದ.  ಸ್ವಲ್ಪ ಸಮಯ ಆದ್ಮೇಲೆ ಯೆಹೂದ ತನ್ನ ಮೊದಲನೇ ಮಗ ಏರನಿಗೆ ತಾಮಾರ್‌+ ಅನ್ನೋ ಹೆಣ್ಣನ್ನ ಮದುವೆ ಮಾಡಿಸಿದ.  ಆದ್ರೆ ಏರ್‌ ಯೆಹೋವನ ದೃಷ್ಟಿಯಲ್ಲಿ ಕೆಟ್ಟದು ಮಾಡ್ತಿದ್ದ. ಹಾಗಾಗಿ ಯೆಹೋವ ಅವನನ್ನ ಸಾಯಿಸಿದನು.  ಹಾಗಾಗಿ ಯೆಹೂದ ಓನಾನನಿಗೆ “ನೀನು ನಿನ್ನ ಅತ್ತಿಗೆಯನ್ನ ಮದುವೆ ಆಗು. ಮೈದುನನಾಗಿ ನಿನ್ನ ಕರ್ತವ್ಯ ಮಾಡಿ ಅಣ್ಣನ ವಂಶ ಬೆಳೆಸು” ಅಂದ.+  ಆದ್ರೆ ಓನಾನ ತನ್ನ ಮೂಲಕ ಅತ್ತಿಗೆಗೆ ಹುಟ್ಟೋ ಮಕ್ಕಳು ತನ್ನದಾಗಲ್ಲ+ ಅಂತ ತಿಳಿದು ಅವಳನ್ನ ಕೂಡುವಾಗೆಲ್ಲ ವೀರ್ಯ ನೆಲಕ್ಕೆ ಬೀಳಿಸ್ತಿದ್ದ. ಯಾಕಂದ್ರೆ ಅವನು ತನ್ನ ಅಣ್ಣನಿಗಾಗಿ ವಂಶ ಹುಟ್ಟಿಸೋಕೆ ಬಯಸಲಿಲ್ಲ.+ 10  ಅವನು ಮಾಡಿದ್ದು ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದಾಗಿತ್ತು. ಹಾಗಾಗಿ ಅವನನ್ನ ಸಹ ಸಾಯಿಸಿದನು.+ 11  ‘ಒಂದುವೇಳೆ ಶೇಲಹನನ್ನ ತಾಮಾರಳಿಗೆ ಮದುವೆ ಮಾಡಿಸಿದ್ರೆ ಅವನು ಸಹ ಅವನ ಅಣ್ಣಂದಿರ ತರ ಸಾಯಬಹುದು’+ ಅಂತ ನೆನಸಿ ಯೆಹೂದ ತಾಮಾರಳಿಗೆ “ನೀನು ನಿನ್ನ ತಂದೆ ಮನೆಗೆ ಹೋಗು. ನನ್ನ ಮಗ ಶೇಲಹ ದೊಡ್ಡವನಾಗೋ ತನಕ ಅಲ್ಲೇ ಇರು, ಮದುವೆ ಆಗಬೇಡ” ಅಂದ. ಹಾಗಾಗಿ ತಾಮಾರ ತಂದೆ ಮನೆಗೆ ಹೋಗಿ ಅಲ್ಲೇ ಇದ್ದಳು. 12  ಸ್ವಲ್ಪ ಸಮಯ ಆದ್ಮೇಲೆ ಶೂಗನ ಮಗಳು+ ಅಂದ್ರೆ ಯೆಹೂದನ ಹೆಂಡತಿ ತೀರಿಹೋದಳು. ಯೆಹೂದ ಅವಳಿಗಾಗಿ ಶೋಕಿಸಿದ. ಶೋಕದ ದಿನಗಳು ಮುಗಿದ ಮೇಲೆ ಅವನು ತನ್ನ ಸ್ನೇಹಿತ ಅದುಲ್ಲಾಮ್ಯನಾದ ಹೀರಾನ ಜೊತೆ+ ತಿಮ್ನಾದಲ್ಲಿ+ ತನ್ನ ಕುರಿಗಳ ಉಣ್ಣೇ ಕತ್ತರಿಸ್ತಾ ಇದ್ದವರ ಹತ್ರ ಹೋದ. 13  ತಾಮಾರಳಿಗೆ ತನ್ನ ಮಾವ ಕುರಿಗಳ ಉಣ್ಣೇ ಕತ್ತರಿಸೋಕೆ ಎತ್ತರ ಪ್ರದೇಶವಾದ ತಿಮ್ನಾಕ್ಕೆ ಹೋಗ್ತಿದ್ದಾನೆ ಅನ್ನೋ ಸುದ್ದಿ ಸಿಕ್ತು. 14  ಶೇಲಹ ದೊಡ್ಡವನಾದ್ರೂ ಮಾವ ಅವಳಿಗೆ ಅವನನ್ನ ಮದುವೆ ಮಾಡಿಸಿ ಕೊಡಲಿಲ್ಲ. ಹಾಗಾಗಿ ಅವಳು ವಿಧವೆಯ ಬಟ್ಟೆ ತೆಗೆದಿಟ್ಟು ಬೇರೆ ಬಟ್ಟೆ ಹಾಕೊಂಡು ಶಾಲ್‌ ಸುತ್ಕೊಂಡು ಮುಸುಕು ಹಾಕೊಂಡಳು. ಆಮೇಲೆ ತಿಮ್ನಾಕ್ಕೆ ಹೋಗೋ ದಾರಿಯಲ್ಲಿರೋ ಏನಯಿಮಿನ ಬಾಗಿಲ ಹತ್ರ ಕೂತಳು.+ 15  ಯೆಹೂದ ಅವಳನ್ನ ನೋಡಿದ, ಅವಳು ಮುಖ ಮುಚ್ಚಿದ್ರಿಂದ ಅವಳನ್ನ ವೇಶ್ಯೆ ಅಂದ್ಕೊಂಡ. 16  ಅವಳು ತನ್ನ ಸೊಸೆ+ ಅಂತ ಗೊತ್ತಾಗದೆ ದಾರಿ ಬದಿ ಅವಳ ಹತ್ರ ಹೋಗಿ “ನಾನು ನಿನ್ನನ್ನ ಸಂಗಮಿಸೋಕೆ ಒಪ್ತಿಯಾ?” ಅಂದ. ಅದಕ್ಕೆ ಅವಳು “ಬದಲಿಗೆ ನೀನೇನು ಕೊಡ್ತೀಯಾ?” ಅಂದಳು. 17  ಆಗ “ನನ್ನ ಹಿಂಡಿನಿಂದ ಒಂದು ಆಡುಮರಿ ಕಳಿಸಿಕೊಡ್ತೀನಿ” ಅಂದ. ಆದ್ರೆ ಅವಳು “ಅಲ್ಲಿ ತನಕ ನನ್ನ ಹತ್ರ ಏನಾದ್ರೂ ಒತ್ತೆ ಇಡು” ಅಂದಳು. 18  ಅದಕ್ಕೆ “ನಾನೇನು ಒತ್ತೆ ಇಡಲಿ?” ಅಂದಾಗ ಅವಳು “ನಿನ್ನ ಮುದ್ರೆ ಉಂಗುರ,+ ಅದ್ರ ದಾರ, ನಿನ್ನ ಕೈಯಲ್ಲಿರೋ ಕೋಲು ಕೊಡು” ಅಂದಳು. ಆಗ ಅವನು ಅವುಗಳನ್ನ ಕೊಟ್ಟು ಅವಳನ್ನ ಕೂಡಿದ. ಹೀಗೆ ಅವಳು ಅವನಿಂದ ಗರ್ಭಿಣಿ ಆದಳು. 19  ಆಮೇಲೆ ಅವಳು ಅಲ್ಲಿಂದ ಹೋದಳು. ಅವಳು ಸುತ್ಕೊಂಡಿದ್ದ ಶಾಲ್‌ ತೆಗೆದು ವಿಧವೆ ಬಟ್ಟೆ ಹಾಕೊಂಡಳು. 20  ಆಮೇಲೆ ಯೆಹೂದ ಒತ್ತೆ ಇಟ್ಟದ್ದನ್ನ ಬಿಡಿಸಿಕೊಳ್ಳೋಕೆ ತನ್ನ ಸ್ನೇಹಿತ ಅದುಲ್ಲಾಮ್ಯನ+ ಕೈಯಲ್ಲಿ ಆಡುಮರಿ ಕೊಟ್ಟು ಕಳಿಸಿದ. ಆದ್ರೆ ಅವನಿಗೆ ಅವಳು ಸಿಗಲೇ ಇಲ್ಲ. 21  ಅವನು ಆ ಊರಿನ ಗಂಡಸರಿಗೆ “ಏನಯಿಮಿನ ದಾರಿ ಪಕ್ಕದಲ್ಲಿ ಇರ್ತಿದ್ದ ವೇಶ್ಯೆ* ಎಲ್ಲಿದ್ದಾಳೆ?” ಅಂತ ಕೇಳಿದ. ಆದ್ರೆ ಅವರು “ಈ ಜಾಗದಲ್ಲಿ ಇಷ್ಟರ ತನಕ ಯಾವ ವೇಶ್ಯೆನೂ ಇರಲಿಲ್ಲ” ಅಂತ ಹೇಳಿದ್ರು. 22  ಕೊನೆಗೆ ಅವನು ಯೆಹೂದನ ಹತ್ರ ಹೋಗಿ “ನನಗೆ ಅವಳು ಸಿಗಲಿಲ್ಲ. ಅಷ್ಟೇ ಅಲ್ಲ ಆ ಸ್ಥಳದಲ್ಲಿ ಇಷ್ಟರ ತನಕ ಯಾವ ವೇಶ್ಯೆನೂ ಇರಲಿಲ್ಲ ಅಂತ ಅಲ್ಲಿದ್ದವರು ಹೇಳಿದ್ರು” ಅಂದ. 23  ಅದಕ್ಕೆ ಯೆಹೂದ “ಹೋಗ್ಲಿ ಬಿಡು, ಅದನ್ನೆಲ್ಲ ಅವಳೇ ಇಟ್ಕೊಳ್ಳಲಿ. ನಾನಂತೂ ಹೇಳಿದ ಹಾಗೆ ಆಡುಮರಿ ಕಳಿಸಿಕೊಟ್ಟೆ. ಅವಳು ಸಿಗದಿದ್ರೆ ನಾನೇನು ಮಾಡೋಕಾಗುತ್ತೆ? ಮತ್ತೆ ಅವಳನ್ನ ಹುಡುಕೋಕೆ ಹೋದ್ರೆ ನಮಗೇ ಅವಮಾನ” ಅಂದ. 24  ಸುಮಾರು ಮೂರು ತಿಂಗಳು ಆದ್ಮೇಲೆ ಯೆಹೂದನಿಗೆ ಅವನ ಸೊಸೆ ತಾಮಾರ ವ್ಯಭಿಚಾರ ಮಾಡಿದ್ದಾಳೆ, ಇದ್ರಿಂದ ಗರ್ಭಿಣಿ ಆಗಿದ್ದಾಳೆ ಅಂತ ಸುದ್ದಿ ಸಿಕ್ತು. ಅದಕ್ಕೆ ಯೆಹೂದ “ಅವಳನ್ನ ಹೊರಗೆ ಕರ್ಕೊಂಡು ಬನ್ನಿ, ಕೊಂದು ಸುಟ್ಟುಹಾಕಿ”+ ಅಂದ. 25  ಅವಳನ್ನ ಹೊರಗೆ ಕರ್ಕೊಂಡು ಬರ್ತಿದ್ದಾಗ ತನ್ನ ಹತ್ರ ಒತ್ತೆಯಾಗಿ ಇಟ್ಟ ವಸ್ತುಗಳನ್ನ ಅವಳು ಮಾವನಿಗೆ ಕಳಿಸ್ಕೊಟ್ಟು “ಈ ವಸ್ತುಗಳು ಯಾರದ್ದೋ ಅವನಿಂದಾನೇ ನಾನು ಗರ್ಭಿಣಿ ಆದೆ” ಅಂತ ಹೇಳಿದಳು. ಅಲ್ಲದೆ “ದಯವಿಟ್ಟು ಈ ಮುದ್ರೆ ಉಂಗುರ, ಅದ್ರ ದಾರ, ಕೋಲು ಯಾರದ್ದು, ನೋಡು”+ ಅಂದಳು. 26  ಯೆಹೂದ ಅವುಗಳನ್ನ ನೋಡಿ “ನಾನು ಅವಳನ್ನ ನನ್ನ ಮಗ ಶೇಲಹನಿಗೆ ಮದುವೆ ಮಾಡಿಸಲಿಲ್ಲ. ಹಾಗಾಗಿ ಅವಳು ನನಗಿಂತ ಹೆಚ್ಚು ನೀತಿವಂತಳಾಗಿ ನಡ್ಕೊಂಡಳು”+ ಅಂದ. ಇದಾದ ಮೇಲೆ ಅವನು ಮತ್ತೆ ಅವಳ ಜೊತೆ ಮಲಗಲಿಲ್ಲ. 27  ಅವಳಿಗೆ ಹೆರಿಗೆ ಸಮಯ ಬಂತು. ಅವಳ ಗರ್ಭದಲ್ಲಿ ಅವಳಿ ಮಕ್ಕಳಿದ್ರು. 28  ಹೆರಿಗೆ ಆಗುವಾಗ ಒಂದು ಮಗು ತನ್ನ ಕೈ ಹೊರಗೆ ಚಾಚಿತು. ತಕ್ಷಣ ಸೂಲಗಿತ್ತಿ* “ಇದು ಮೊದಲನೇ ಮಗು” ಅಂತೇಳಿ ಗುರುತಿಗಾಗಿ ಅವನ ಕೈಗೆ ಕೆಂಪು ಬಣ್ಣದ ದಾರ ಕಟ್ಟಿದಳು. 29  ಆದ್ರೆ ಅವನು ಕೈ ಹಿಂದಕ್ಕೆ ತೆಗೆದಾಗ ಅವನ ಸಹೋದರ ಹೊರಗೆ ಬಂದ. ಆಗ ಅವಳು ಆಶ್ಚರ್ಯದಿಂದ “ನೀನು ಸಂದಿಯಲ್ಲಿ ತೂರಿಕೊಂಡು ಬಂದ್ಯಾ!” ಅಂದಳು. ಹಾಗಾಗಿ ಅವನಿಗೆ ಪೆರೆಚ್‌*+ ಅಂತ ಹೆಸರಿಟ್ರು. 30  ಆಮೇಲೆ ಕೈಗೆ ಕೆಂಪು ಬಣ್ಣದ ದಾರ ಕಟ್ಟಿದ್ದ ಅವನ ಸಹೋದರ ಬಂದ. ಅವನಿಗೆ ಜೆರಹ+ ಅಂತ ಹೆಸರಿಟ್ರು.

ಪಾದಟಿಪ್ಪಣಿ

ಅಥವಾ “ದೇವದಾಸಿ.” ಇದು, ಕಾನಾನ್ಯ ದೇವದೇವತೆಗಳ ಆರಾಧನೆಯ ಭಾಗವಾಗಿ ವೇಶ್ಯಾವೃತ್ತಿಯಲ್ಲಿ ಒಳಗೂಡೋ ಸ್ತ್ರೀಯನ್ನ ಸೂಚಿಸಬಹುದು.
ಅಥವಾ “ಹೆರಿಗೆ ದಾದಿ.”
ಅರ್ಥ “ಸೀಳು.” ಬಹುಶಃ ಮೂಲಾಧಾರದ (ಪೆರಿನಿಯಂ) ಸೀಳುವಿಕೆಗೆ ಸೂಚಿಸುತ್ತೆ.