ಆದಿಕಾಂಡ 47:1-31
47 ಆಮೇಲೆ ಯೋಸೇಫ ಫರೋಹನ ಹತ್ರ ಹೋಗಿ+ “ನನ್ನ ಅಪ್ಪ ಮತ್ತು ಅಣ್ಣತಮ್ಮಂದಿರು ತಮ್ಮೆಲ್ಲ ಕುರಿಗಳನ್ನ, ಸೊತ್ತನ್ನ ತಗೊಂಡು ಕಾನಾನ್ ದೇಶದಿಂದ ಈ ದೇಶಕ್ಕೆ ಬಂದಿದ್ದಾರೆ. ಈಗ ಅವರು ಗೋಷೆನ್+ ಪ್ರದೇಶದಲ್ಲಿ ಇದ್ದಾರೆ” ಅಂದ.
2 ಆಮೇಲೆ ಅವನು ಐದು ಅಣ್ಣಂದಿರನ್ನ ಫರೋಹನ ಆಸ್ಥಾನಕ್ಕೆ ಕರ್ಕೊಂಡು ಹೋದ.+
3 ಫರೋಹ ಅವರಿಗೆ “ನೀವೇನು ಕೆಲಸ ಮಾಡ್ತೀರ?” ಅಂತ ಕೇಳಿದ. ಅವರು “ನಿನ್ನ ಸೇವಕರಾದ ನಾವು ನಮ್ಮ ಪೂರ್ವಜರ ತರ ಕುರಿ ಕಾಯೋ ಕೆಲಸ ಮಾಡ್ತೀವಿ” ಅಂದ್ರು.+
4 ಆಮೇಲೆ ಅವರು ಫರೋಹನಿಗೆ “ನಿನ್ನ ಸೇವಕರಾದ ನಾವು ಈ ದೇಶದಲ್ಲಿ ಸ್ವಲ್ಪ ಸಮಯ* ಇರೋಕೆ ಬಂದಿದ್ದೀವಿ.+ ಯಾಕಂದ್ರೆ ಕಾನಾನ್ ದೇಶದಲ್ಲಿ ಬರಗಾಲ ಜಾಸ್ತಿ ಆಗಿದೆ,+ ನಮ್ಮ ದನಕುರಿಗಳಿಗೆ ಮೇವು ಸಿಗ್ತಿಲ್ಲ. ಹಾಗಾಗಿ ನಮಗೆ ಗೋಷೆನ್+ ಪ್ರದೇಶದಲ್ಲಿ ಇರೋಕೆ ದಯವಿಟ್ಟು ಅನುಮತಿ ಕೊಡು” ಅಂದ್ರು.
5 ಆಗ ಫರೋಹ ಯೋಸೇಫನಿಗೆ “ನಿನ್ನ ಹತ್ರ ಬಂದಿರೋ ನಿನ್ನ ತಂದೆಗೆ, ಅಣ್ಣತಮ್ಮಂದಿರಿಗೆ
6 ವಾಸಿಸೋಕೆ ಈ ದೇಶದಲ್ಲೇ ಒಳ್ಳೇ ಜಾಗ ಕೊಡು. ಇಡೀ ಈಜಿಪ್ಟ್ ದೇಶ ನಿನ್ನ ಕೈಯಲ್ಲಿದೆ. ಅವರು ಗೋಷೆನ್ ಪ್ರದೇಶದಲ್ಲಿ ಇರಲಿ.+ ಅವರಲ್ಲಿ ಯಾರಾದ್ರೂ ಸಮರ್ಥ ಪುರುಷರು ಅಂತ ನಿನಗೆ ಅನಿಸಿದ್ರೆ ನನ್ನ ಪ್ರಾಣಿಗಳನ್ನ ನೋಡ್ಕೊಳ್ಳೋ ಜವಾಬ್ದಾರಿ ಅವರಿಗೆ ಕೊಡು” ಅಂದ.
7 ಆಮೇಲೆ ಯೋಸೇಫ ತನ್ನ ತಂದೆ ಯಾಕೋಬನನ್ನ ಫರೋಹನ ಮುಂದೆ ಕರ್ಕೊಂಡು ಬಂದ. ಯಾಕೋಬ ಫರೋಹನನ್ನ ಆಶೀರ್ವದಿಸಿದ.
8 ಫರೋಹ “ನಿನಗೆ ಈಗ ಎಷ್ಟು ವಯಸ್ಸು?” ಅಂತ ಯಾಕೋಬನಿಗೆ ಕೇಳಿದಾಗ
9 ಅವನು “ನನಗೀಗ 130 ವರ್ಷ. ಇಷ್ಟುಕಾಲ ನಾನು ನನ್ನ ಪೂರ್ವಜರ ತರ ಬೇರೆಬೇರೆ ಜಾಗದಲ್ಲಿ ವಿದೇಶಿಯಾಗಿ ಜೀವಿಸಿದೆ. ನನ್ನ ಪೂರ್ವಜರು ಜೀವಿಸಿದಷ್ಟು ಕಾಲ ನಾನು ಜೀವಿಸಲ್ಲ.+ ನನ್ನ ಜೀವಮಾನದ ಈ ಸ್ವಲ್ಪ ವರ್ಷದಲ್ಲಿ ತುಂಬ ಕಷ್ಟ, ವೇದನೆ ಅನುಭವಿಸಿದೆ”+ ಅಂದ.
10 ಆಮೇಲೆ ಯಾಕೋಬ ಫರೋಹನನ್ನ ಆಶೀರ್ವದಿಸಿ ಅಲ್ಲಿಂದ ಹೊರಟುಹೋದ.
11 ಯೋಸೇಫ ಫರೋಹನ ಅಪ್ಪಣೆ ಪ್ರಕಾರ ತನ್ನ ತಂದೆಗೆ, ಅಣ್ಣತಮ್ಮಂದಿರಿಗೆ ಈಜಿಪ್ಟಲ್ಲಿ ಒಳ್ಳೇ ಜಾಗ ಆಗಿದ್ದ ರಮ್ಸೇಸ್ಸಾದಲ್ಲಿ*+ ಒಂದು ಭಾಗವನ್ನ ಆಸ್ತಿಯಾಗಿ ಕೊಟ್ಟು ಅಲ್ಲಿ ಇರೋದಕ್ಕೆ ವ್ಯವಸ್ಥೆ ಮಾಡಿದ.
12 ಅಲ್ಲದೆ ಯೋಸೇಫ ತಂದೆಗೆ, ಅಣ್ಣತಮ್ಮಂದಿರಿಗೆ, ತಂದೆಯ ಇಡೀ ಕುಟುಂಬಕ್ಕೆ ಆಹಾರ ಕೊಡ್ತಾ ಇದ್ದ. ಅವನು ಪ್ರತಿಯೊಂದು ಕುಟುಂಬದಲ್ಲಿರೋ ಮಕ್ಕಳ ಸಂಖ್ಯೆಗೆ ತಕ್ಕಂತೆ ಆಹಾರ ಕೊಟ್ಟ.
13 ಬರಗಾಲ ತುಂಬ ಜಾಸ್ತಿ ಆಗಿದ್ದರಿಂದ ಈಜಿಪ್ಟಲ್ಲಿ, ಕಾನಾನ್ ದೇಶದಲ್ಲಿ ಎಲ್ಲೂ ಆಹಾರ ಸಿಗ್ತಿರಲಿಲ್ಲ. ಬರಗಾಲದಿಂದ ಆ ದೇಶಗಳ ಜನ್ರು ಬಲಹೀನರಾದ್ರು.+
14 ಈಜಿಪ್ಟ್ ಮತ್ತು ಕಾನಾನ್ ದೇಶದಲ್ಲಿದ್ದ ಜನ್ರು ಹಣ ಕೊಟ್ಟು ಧಾನ್ಯ ತಗೊಳ್ತಿದ್ರು.+ ಹೀಗೆ ಯೋಸೇಫ ಆ ದೇಶಗಳಲ್ಲಿದ್ದ ಹಣವನ್ನೆಲ್ಲ ಸಂಗ್ರಹಿಸಿ ಫರೋಹನ ಭಂಡಾರಕ್ಕೆ ಸೇರಿಸ್ತಾ ಇದ್ದ.
15 ಸ್ವಲ್ಪ ದಿನ ಆದ್ಮೇಲೆ ಈಜಿಪ್ಟ್ ಮತ್ತು ಕಾನಾನ್ ದೇಶದ ಜನ್ರ ಹತ್ರ ಇದ್ದ ಹಣ ಎಲ್ಲ ಖಾಲಿ ಆಯ್ತು. ಆಗ ಈಜಿಪ್ಟಿನ ಜನರೆಲ್ಲ ಯೋಸೇಫನ ಹತ್ರ ಬಂದು “ನಮ್ಮ ಹತ್ರ ಸ್ವಲ್ಪನೂ ಹಣವಿಲ್ಲ. ನಮಗೆ ಆಹಾರ ಕೊಡು. ನಿನ್ನ ಕಣ್ಮುಂದೆನೇ ನಾವು ಹಸಿವೆಯಿಂದ ಸಾಯೋ ಪರಿಸ್ಥಿತಿ ಬರೋ ಹಾಗೆ ಬಿಡಬೇಡ” ಅಂತ ಹೇಳ್ತಿದ್ರು.
16 ಅದಕ್ಕೆ ಯೋಸೇಫ “ನಿಮ್ಮ ಹತ್ರ ಇರೋ ಹಣ ಖಾಲಿಯಾಗಿದ್ರೆ ನಿಮ್ಮ ಸಾಕುಪ್ರಾಣಿಗಳನ್ನ ತಂದು ಕೊಡಿ. ಅವನ್ನ ತಗೊಂಡು ನಾನು ನಿಮಗೆ ಆಹಾರ ಕೊಡ್ತೀನಿ” ಅಂದ.
17 ಹಾಗಾಗಿ ಜನ್ರು ತಮ್ಮ ಜಾನುವಾರು ತಂದು ಯೋಸೇಫನಿಗೆ ಕೊಡೋಕೆ ಆರಂಭಿಸಿದ್ರು. ಅವನು ಅವರ ಕುದುರೆಗಳನ್ನ, ಪ್ರಾಣಿ ಹಿಂಡುಗಳನ್ನ, ಕತ್ತೆಗಳನ್ನ ತಗೊಂಡು ಬದಲಿಯಾಗಿ ಅವರಿಗೆ ಆಹಾರ ಕೊಡ್ತಾ ಇದ್ದ. ಇಡೀ ವರ್ಷ ಹೀಗೇ ಮಾಡ್ತಿದ್ದ.
18 ಆ ವರ್ಷ ಮುಗಿದ ಮೇಲೆ ಮುಂದಿನ ವರ್ಷ ಜನ್ರು ಯೋಸೇಫನ ಹತ್ರ ಬಂದು “ಸ್ವಾಮಿ, ನಮ್ಮ ಹತ್ರ ಇದ್ದ ಹಣ, ಸಾಕುಪ್ರಾಣಿ ಎಲ್ಲ ನಿಂಗೆ ಕೊಟ್ಟಿದ್ದೀವಿ. ಅದು ನಿಂಗೂ ಗೊತ್ತು. ಈಗ ಇರೋದು ನಾವು,* ನಮ್ಮ ಜಮೀನು ಅಷ್ಟೇ.
19 ನಿನ್ನ ಕಣ್ಮುಂದೆನೇ ನಾವು ಹಸಿವೆಯಿಂದ ಸಾಯೋ ಪರಿಸ್ಥಿತಿ ಬರೋದು ಬೇಡ. ನಮ್ಮ ಜಮೀನೂ ಹಾಳಾಗೋದು ಬೇಡ. ಹಾಗಾಗಿ ನಮ್ಮನ್ನ ಮತ್ತು ನಮ್ಮ ಜಮೀನನ್ನ ತಗೊಂಡು ನಮಗೆ ಆಹಾರ ಕೊಡು. ನಾವು ಫರೋಹನಿಗೆ ದಾಸರಾಗಿ ಇರ್ತಿವಿ. ನಮ್ಮ ಜಮೀನು ಫರೋಹಗೆ ಸೇರಲಿ. ನಾವು ಬದುಕಿ ಉಳಿಯೋಕೆ, ನಮ್ಮ ಜಮೀನು ಹಾಳು ಬೀಳದೆ ಇರೋಕೆ ನಮಗೆ ಬಿತ್ತನೆ ಮಾಡೋಕೆ ಬೀಜ ಕೊಡು” ಅಂತ ಹೇಳೋಕೆ ಶುರುಮಾಡಿದ್ರು.
20 ತುಂಬ ದೊಡ್ಡ ಬರಗಾಲ ಬಂದಿದ್ರಿಂದ ಈಜಿಪ್ಟಿನ ಎಲ್ಲ ಜನ್ರು ತಮ್ಮ ಜಮೀನನ್ನ ಮಾರಿಬಿಟ್ರು. ಯೋಸೇಫ ಅವುಗಳನ್ನ ಫರೋಹನ ಸಲುವಾಗಿ ಖರೀದಿಸಿದ. ಹೀಗೆ ಈಜಿಪ್ಟಿನ ಜಮೀನೆಲ್ಲ ಫರೋಹನಿಗೆ ಸೇರಿತು.
21 ಆಮೇಲೆ ಯೋಸೇಫ ಈಜಿಪ್ಟಿನ ಜನರಿಗೆಲ್ಲ ಹತ್ರದ ಪಟ್ಟಣಗಳಿಗೆ ಹೋಗಿ ವಾಸ ಮಾಡಿ ಅಂತ ಆಜ್ಞಾಪಿಸಿದ. ಜನ್ರು ಹಾಗೇ ಮಾಡಿದ್ರು.+
22 ಪುರೋಹಿತರಿಗೆ ಫರೋಹನಿಂದ ಆಹಾರ ಸಿಗ್ತಿದ್ದ ಕಾರಣ ಅವರು ಮಾತ್ರ ತಮ್ಮ ಜಮೀನು ಮಾರಲಿಲ್ಲ. ಹಾಗಾಗಿ ಅವರ ಜಮೀನನ್ನ ಯೋಸೇಫ ಖರೀದಿಸಲಿಲ್ಲ.+
23 ಅವನು ಜನರಿಗೆ “ನಾನು ಇವತ್ತು ನಿಮ್ಮನ್ನ, ನಿಮ್ಮ ಜಮೀನನ್ನೆಲ್ಲ ಫರೋಹನಿಗೋಸ್ಕರ ಖರೀದಿಸಿದ್ದೀನಿ. ನಾನು ನಿಮಗೆ ಬೀಜ ಕೊಡ್ತೀನಿ. ಅದನ್ನ ನೀವು ತಗೊಂಡು ಹೋಗಿ ಹೊಲಗದ್ದೆಗಳಲ್ಲಿ ಬಿತ್ತನೆ ಮಾಡಿ.
24 ನೀವು ಬೆಳಿಯೋ ಬೆಳೆಯಲ್ಲಿ ಐದನೇ ಒಂದು ಭಾಗ ಫರೋಹನಿಗೆ ಕೊಡಿ.+ ಉಳಿದ ನಾಲ್ಕು ಭಾಗ ನಿಮಗೆ. ನೀವು ಅದನ್ನ ನಿಮಗೆ, ನಿಮ್ಮ ಮಕ್ಕಳಿಗೆ, ಮನೆಯಲ್ಲಿರೋ ಎಲ್ಲರಿಗೆ ಆಹಾರವಾಗಿ ತಗೊಳ್ಳಿ ಮತ್ತು ಬಿತ್ತನೆ ಮಾಡೋಕೆ ಬಳಸಿ” ಅಂದ.
25 ಅದಕ್ಕೆ ಅವರು “ನೀನು ನಮ್ಮ ಜೀವ ಉಳಿಸಿದೆ.+ ಸ್ವಾಮಿ, ನಮ್ಮ ಮೇಲೆ ನಿನ್ನ ದಯೆ ಇರಲಿ, ನಾವು ಫರೋಹನ ದಾಸರಾಗ್ತೀವಿ” ಅಂದ್ರು.+
26 ಆಮೇಲೆ ಯೋಸೇಫ, ಬೆಳೆಯಲ್ಲಿ ಐದನೇ ಒಂದು ಭಾಗ ಫರೋಹನಿಗೆ ಕೊಡಬೇಕು ಅನ್ನೋ ಆಜ್ಞೆ ಹೊರಡಿಸಿದ. ಈ ಆಜ್ಞೆ ಇವತ್ತಿನ ತನಕ ಈಜಿಪ್ಟ್ ದೇಶದಲ್ಲಿ ಜಾರಿಯಲ್ಲಿದೆ. ಪುರೋಹಿತರ ಜಮೀನು ಮಾತ್ರ ಫರೋಹನಿಗೆ ಸೇರಲಿಲ್ಲ.+
27 ಇಸ್ರಾಯೇಲನ ಕುಟುಂಬದವರು ಈಜಿಪ್ಟಿನ ಗೋಷೆನ್+ ಪ್ರದೇಶದಲ್ಲೇ ಇದ್ರು. ಅವರಿಗೆ ತುಂಬ ಮಕ್ಕಳು ಹುಟ್ಟಿದ್ರು. ಅವರ ಸಂಖ್ಯೆ ಜಾಸ್ತಿ ಆಯ್ತು.+
28 ಯಾಕೋಬ ಈಜಿಪ್ಟ್ ದೇಶದಲ್ಲಿ 17 ವರ್ಷ ಇದ್ದ. ಅವನು ಒಟ್ಟು 147 ವರ್ಷ ಬದುಕಿದ.+
29 ಯಾಕೋಬನಿಗೆ ತಾನು ಇನ್ನು ತುಂಬ ದಿನ ಬದುಕಲ್ಲ+ ಅಂತ ಗೊತ್ತಾದಾಗ ಅವನು ತನ್ನ ಮಗ ಯೋಸೇಫನನ್ನ ಕರೆದು “ಮಗ, ನನಗೊಂದು ಸಹಾಯ ಮಾಡು. ನಾನು ಸತ್ತ ಮೇಲೆ ದಯವಿಟ್ಟು ನನ್ನನ್ನ ಈಜಿಪ್ಟಲ್ಲಿ ಸಮಾಧಿ ಮಾಡಬೇಡ. ನನ್ನ ಆಸೆ ನೆರವೇರಿಸ್ತೀಯ ಅಂತ ನನ್ನ ತೊಡೆ ಕೆಳಗೆ ನಿನ್ನ ಕೈಯಿಟ್ಟು ಆಣೆ ಮಾಡು. ನನಗೆ ಶಾಶ್ವತ ಪ್ರೀತಿ ತೋರಿಸ್ತೀಯ, ವಿಶ್ವಾಸ ಉಳಿಸ್ಕೊಳ್ತೀಯ ಅಂತ ಆಣೆ ಮಾಡು.+
30 ನಾನು ಸತ್ತ ಮೇಲೆ ನನ್ನ ದೇಹನಾ ಈಜಿಪ್ಟಿಂದ ತಗೊಂಡು ಹೋಗಿ ನನ್ನ ಪೂರ್ವಜರ ಸಮಾಧಿಯಲ್ಲೇ ಸಮಾಧಿ ಮಾಡಬೇಕು” ಅಂದ.+ ಅದಕ್ಕೆ ಯೋಸೇಫ “ನೀನು ಹೇಳಿದ ಹಾಗೇ ಮಾಡ್ತೀನಿ” ಅಂದ.
31 ಅದಕ್ಕೆ ಇಸ್ರಾಯೇಲ “ಮಾತು ಕೊಡು” ಅಂದಾಗ ಯೋಸೇಫ ಮಾತುಕೊಟ್ಟ.+ ಆಗ ಇಸ್ರಾಯೇಲ ಹಾಸಿಗೆ ಮೇಲೆ ತಲೆ ಇಡೋ ಜಾಗದಲ್ಲಿ ದೇವರಿಗೆ ಬಗ್ಗಿ ಪ್ರಾರ್ಥನೆ ಮಾಡಿದ.+
ಪಾದಟಿಪ್ಪಣಿ
^ ಅಥವಾ “ವಿದೇಶಿಗಳಾಗಿ.”
^ ರಮ್ಸೇಸ್ ಅನ್ನೋದು ಗೋಷೆನಲ್ಲಿ ಇರೋ ಒಂದು ಪ್ರದೇಶ ಆಗಿರಬಹುದು ಅಥವಾ ಗೋಷೆನಿನ ಇನ್ನೊಂದು ಹೆಸರು ಇರಬಹುದು.
^ ಅಕ್ಷ. “ನಮ್ಮ ದೇಹ.”