ಜ್ಞಾನೋಕ್ತಿ 27:1-27
27 ನಾಳೆ ಬಗ್ಗೆ ಕೊಚ್ಕೊಳ್ಳಬೇಡ,ಯಾಕಂದ್ರೆ ನಾಳೆ ಏನಾಗುತ್ತೆ ಅಂತ ನಿಂಗೊತ್ತಿಲ್ಲ.+
2 ನೀನೇ ನಿನ್ನನ್ನ ಹೊಗಳ್ಕೋಬೇಡ, ಬೇರೆಯವರು* ನಿನ್ನನ್ನ ಹೊಗಳಲಿ,ನಿನ್ನ ತುಟಿಗಳೇ ನಿನ್ನ ಗುಣಗಾನ ಮಾಡದೆ ವಿದೇಶಿಯರು ನಿನ್ನ ಗುಣಗಾನ ಮಾಡ್ಲಿ.+
3 ಕಲ್ಲೂ ಭಾರ, ಮರಳೂ ಭಾರ,ಆದ್ರೆ ಮೂರ್ಖ ಮಾಡೋ ಕಿರಿಕಿರಿ ಅವೆರಡಕ್ಕಿಂತ ಭಾರ.+
4 ಕೋಪ ಕ್ರೂರ, ಕ್ರೋಧ ಪ್ರವಾಹ,ಆದ್ರೆ ಹೊಟ್ಟೆಕಿಚ್ಚು ಇದಕ್ಕಿಂತ ಕೆಟ್ಟದು.+
5 ಒಳಗೇ ಇಟ್ಟಿರೋ ಪ್ರೀತಿಗಿಂತಬೇರೆಯವ್ರ ಮುಂದೆ ತಿದ್ದೋದು ಎಷ್ಟೋ ಒಳ್ಳೇದು.+
6 ನಂಬಿಗಸ್ತ ಸ್ನೇಹಿತ ಗಾಯಗಳನ್ನ ಮಾಡ್ತಾನೆ,+ಆದ್ರೆ ಶತ್ರು ತುಂಬ ಮುತ್ತು ಕೊಡ್ತಾನೆ.*
7 ಹೊಟ್ಟೆ ತುಂಬಿರೋನಿಗೆ ಜೇನು ಗೂಡಿಂದ ತೊಟ್ಟಿಕ್ಕೋ ಜೇನು ಕೊಟ್ರೂ ಬೇಡ,*ಆದ್ರೆ ಹಸಿದಿರೋನಿಗೆ ಕಹಿನೂ ಸಿಹಿ ಆಗಿರುತ್ತೆ.
8 ಮನೆ ಬಿಟ್ಟು ತಿರುಗಾಡೋನು,ಗೂಡು ಬಿಟ್ಟು ಹಾರಿದ ಪಕ್ಷಿ ತರ.
9 ಎಣ್ಣೆ, ಧೂಪದಿಂದ ಹೃದಯಕ್ಕೆ ಉಲ್ಲಾಸ,ಪ್ರಾಮಾಣಿಕ ಸಲಹೆಯಿಂದ ಸಿಗೋ ಸಿಹಿಯಾದ ಸ್ನೇಹದಿಂದ ಮನಸ್ಸಿಗೆ ಖುಷಿ.+
10 ನಿನ್ನ ಸ್ನೇಹಿತನಾಗಲಿ ತಂದೆಯ ಸ್ನೇಹಿತನಾಗಲಿ ಬಿಟ್ಟುಬಿಡಬೇಡ,ನಿನ್ನ ಕಷ್ಟಕಾಲದಲ್ಲಿ ಒಡಹುಟ್ಟಿದವನ ಮನೆಗೆ ಕಾಲಿಡಬೇಡ,ದೂರದಲ್ಲಿರೋ ಸಹೋದರನಿಗಿಂತ ಹತ್ರದಲ್ಲಿರೋ ನೆರೆಯವನೇ ಲೇಸು.+
11 ನನ್ನ ಮಗನೇ, ವಿವೇಕಿಯಾಗಿ ನನ್ನ ಮನಸ್ಸನ್ನ ಖುಷಿಪಡಿಸು,+ಆಗ ನನ್ನನ್ನ ಹಂಗಿಸುವವನಿಗೆ ನಾನು ಉತ್ತರ ಕೊಡಕ್ಕಾಗುತ್ತೆ.+
12 ಜಾಣ ಅಪಾಯ ನೋಡಿ ಅಡಗಿಕೊಳ್ತಾನೆ,+ಆದ್ರೆ ಅನುಭವ ಇಲ್ಲದವನು ಮುಂದೆ ಹೋಗಿ ನಷ್ಟ* ಅನುಭವಿಸ್ತಾನೆ.
13 ಅಪರಿಚಿತನಿಗೆ ಜಾಮೀನು ಕೊಡುವವನ ಬಟ್ಟೆ ಕಿತ್ಕೊ.
ಅವನು ನಡತೆಗೆಟ್ಟ* ಹೆಂಗಸಿಗಾಗಿ ವಸ್ತುಗಳನ್ನ ಒತ್ತೆ ಇಟ್ರೆ ವಾಪಸ್ ಕೊಡಬೇಡ.+
14 ಮುಂಜಾನೆ ಒಬ್ಬ ತನ್ನ ಜೊತೆಗಾರನನ್ನ ದೊಡ್ಡ ಸ್ವರದಲ್ಲಿ ಆಶೀರ್ವದಿಸಿದ್ರೆ,ಅದನ್ನ ಶಾಪ ಅಂತ ಅಂದ್ಕೊಳ್ತಾರೆ.
15 ಜಗಳಗಂಟಿ* ಹೆಂಡತಿ ಮಳೆಗೆ ಯಾವಾಗ್ಲೂ ಸೋರೋ ಸೂರಿನ ತರ.+
16 ಅಂಥ ಹೆಂಡತಿಯನ್ನ ತಡಿಯೋನಿಗೆ ಗಾಳಿಯನ್ನೂ ತಡಿಯಕ್ಕಾಗುತ್ತೆ,ಬಲಗೈಯಲ್ಲಿ ಎಣ್ಣೆಯನ್ನೂ ಹಿಡ್ಕೊಳ್ಳಕ್ಕಾಗುತ್ತೆ.
17 ಕಬ್ಬಿಣ ಕಬ್ಬಿಣವನ್ನ ಹರಿತ ಮಾಡೋ ತರ,ಸ್ನೇಹಿತ ತನ್ನ ಸ್ನೇಹಿತನನ್ನ ಪ್ರಗತಿ ಮಾಡ್ತಾನೆ.+
18 ಅಂಜೂರ ಮರವನ್ನ ಚೆನ್ನಾಗಿ ನೋಡ್ಕೊಳ್ಳೋನು ಅದ್ರ ಹಣ್ಣು ತಿಂತಾನೆ,+ತನ್ನ ಯಜಮಾನನ ಕಾಳಜಿ ವಹಿಸುವವನಿಗೆ ಗೌರವ ಸಿಗುತ್ತೆ.+
19 ನೀರು ಒಬ್ಬನ ಮುಖವನ್ನ ಪ್ರತಿಬಿಂಬಿಸೋ ತರ,ಒಬ್ಬನ ಹೃದಯ ಇನ್ನೊಬ್ಬನ ಹೃದಯವನ್ನ ಪ್ರತಿಬಿಂಬಿಸುತ್ತೆ.
20 ಸಮಾಧಿಗಾಗಲಿ ನಾಶದ ಸ್ಥಳಕ್ಕಾಗಲಿ* ತೃಪ್ತಿ ಅನ್ನೋದೇ ಇಲ್ಲ,+ಹಾಗೇ ಮನುಷ್ಯನ ಕಣ್ಣುಗಳಿಗೂ ತೃಪ್ತಿ ಆಗಲ್ಲ.
21 ಬೆಳ್ಳಿಬಂಗಾರವನ್ನ ಬೆಂಕಿಯಲ್ಲಿ ಹಾಕಿ ಶುದ್ಧ ಮಾಡೋ ತರ,+ಒಬ್ಬ ವ್ಯಕ್ತಿಯನ್ನ ಹೊಗಳೋ ಮೂಲಕ ಅವನನ್ನ ಪರೀಕ್ಷಿಸಬಹುದು.
22 ಒರಳಲ್ಲಿ ಧಾನ್ಯ ಕುಟ್ಟೋ ತರ,ಒಬ್ಬ ಮೂರ್ಖನನ್ನ ಒನಕೆಯಿಂದ ಕುಟ್ಟಿದ್ರೂಮೂರ್ಖತನ ಅವನನ್ನ ಬಿಟ್ಟು ಹೋಗಲ್ಲ.
23 ನಿನ್ನ ಕುರಿಗಳು ಹೇಗಿದೆ ಅಂತ ನಿನಗೆ ಚೆನ್ನಾಗಿ ಗೊತ್ತಿರಬೇಕು,ನಿನ್ನ ಪ್ರತಿಯೊಂದು ಕುರಿಯನ್ನ ಚೆನ್ನಾಗಿ ನೋಡ್ಕೊ.*+
24 ಯಾಕಂದ್ರೆ ಹಣ-ಆಸ್ತಿ ಶಾಶ್ವತ ಅಲ್ಲ,+ಕಿರೀಟ ಪೀಳಿಗೆಯಿಂದ ಪೀಳಿಗೆಗೆ ಹೋಗ್ತಾನೇ ಇರಲ್ಲ.
25 ಹಸಿರು ಹುಲ್ಲು ಒಣಗಿ ಹೊಸ ಹುಲ್ಲು ಬರುತ್ತೆ,ಬೆಟ್ಟಗಳ ಮೇಲಿರೋ ಗಿಡಗಳನ್ನ ಒಟ್ಟುಗೂಡಿಸ್ತಾರೆ.
26 ಟಗರುಗಳಿಂದ ನಿನಗೆ ಬಟ್ಟೆ ಸಿಗುತ್ತೆ,ಹೋತಗಳಿಂದ ಹೊಲ ತಗೊಳ್ಳೋಕೆ ಆಗುತ್ತೆ.
27 ನಿನಗೆ, ನಿನ್ನ ಕುಟುಂಬದವ್ರಿಗೆ, ನಿನ್ನ ಸೇವಕಿಯರಿಗೆ,ಸಿಕ್ಕಾಪಟ್ಟೆ ಮೇಕೆ ಹಾಲು ಸಿಗುತ್ತೆ.
ಪಾದಟಿಪ್ಪಣಿ
^ ಅಕ್ಷ. “ಅಪರಿಚಿತರು.”
^ ಬಹುಶಃ, “ಶತ್ರುವಿನ ಮುತ್ತುಗಳು ನಿಜ ಅಲ್ಲ, ಒತ್ತಾಯದಿಂದ ಕೊಡ್ತಾನೆ.”
^ ಅಕ್ಷ. “ತುಳಿದು ಹಾಕ್ತಾನೆ.”
^ ಅಥವಾ “ಅದ್ರ ಪರಿಣಾಮ.”
^ ಅಥವಾ “ವಿದೇಶಿ.”
^ ಅಥವಾ “ಕಿರಿಕಿರಿ ಮಾಡೋ.”
^ ಅಥವಾ “ಕುರಿ ಮೇಲೆ ಮನಸ್ಸಿಡು, ಕುರಿ ಕಡೆ ಗಮನ ಕೊಡು.”