ನ್ಯಾಯಸ್ಥಾಪಕರು 6:1-40
6 ಇಸ್ರಾಯೇಲ್ಯರು ಯೆಹೋವನಿಗೆ ಇಷ್ಟ ಆಗದ ವಿಷ್ಯಗಳನ್ನ ಮತ್ತೆ ಮಾಡಿದ್ರು.+ ಹಾಗಾಗಿ ಯೆಹೋವ ಅವ್ರನ್ನ ಏಳು ವರ್ಷ ತನಕ ಮಿದ್ಯಾನ್ಯರ ಕೈಗೆ ಒಪ್ಪಿಸಿದನು.+
2 ಮಿದ್ಯಾನ್ಯರು ಇಸ್ರಾಯೇಲ್ಯರ ಮೇಲೆ ದಬ್ಬಾಳಿಕೆ ಮಾಡಿದ್ರು.+ ಇಸ್ರಾಯೇಲ್ಯರು ಅವ್ರಿಗೆ ಹೆದರಿ ಬಚ್ಚಿಟ್ಕೊಳ್ಳೋಕೆ ಜಾಗಗಳನ್ನ* ಮಾಡ್ಕೊಂಡ್ರು. ಬೆಟ್ಟ, ಗವಿ, ಶತ್ರುಗಳು ಬರೋಕೆ ಆಗದೆ ಇದ್ದ ಪ್ರದೇಶಗಳಲ್ಲಿ ಬಚ್ಚಿಟ್ಕೊಂಡ್ರು.+
3 ಇಸ್ರಾಯೇಲ್ಯರು ಬೀಜ ಬಿತ್ತಿದ್ರೆ ಮಿದ್ಯಾನ್ಯರು, ಅಮಾಲೇಕ್ಯರು,+ ಪೂರ್ವ ದಿಕ್ಕಲ್ಲಿರೋ ಜನ್ರು+ ದಾಳಿ ಮಾಡ್ತಿದ್ರು.
4 ಅವ್ರ ವಿರುದ್ಧ ಪಾಳೆಯ ಹೂಡಿ ಗಾಜಾ ತನಕ ಬೆಳೆ ನಾಶ ಮಾಡ್ತಿದ್ರು. ಇಸ್ರಾಯೇಲ್ಯರಿಗೆ ತಿನ್ನೋಕೆ ಏನನ್ನೂ ಉಳಿಸ್ತಾ ಇರಲಿಲ್ಲ. ಅವ್ರ ಹೋರಿ, ಕುರಿ, ಕತ್ತೆಗಳನ್ನ ಕೂಡ ಬಿಡ್ತಾ ಇರಲಿಲ್ಲ.+
5 ಆ ಶತ್ರುಗಳು ತಮ್ಮ ಪ್ರಾಣಿಗಳನ್ನೂ ಕರ್ಕೊಂಡು ಬಂದು ಡೇರೆ ಹಾಕ್ತಿದ್ರು. ಅದನ್ನ ನೋಡಿದ್ರೆ ಆ ಜಾಗದಲ್ಲಿ ಮಿಡತೆಗಳು ಮುತ್ಕೊಂಡ ಹಾಗೆ ಕಾಣ್ತಿತ್ತು.+ ಅವ್ರನ್ನ ಅವ್ರ ಒಂಟೆಗಳನ್ನ ಲೆಕ್ಕ ಮಾಡೋಕೆ ಆಗ್ತಾ ಇರಲಿಲ್ಲ.+ ಹೀಗೆ ದೇಶವನ್ನ ನಾಶ ಮಾಡೋಕೆ ಬರ್ತಿದ್ರು.
6 ಮಿದ್ಯಾನ್ಯರಿಂದಾಗಿ ಇಸ್ರಾಯೇಲ್ಯರು ಕಡುಬಡತನಕ್ಕೆ ಬಂದ್ರು. ಹಾಗಾಗಿ ಸಹಾಯಕ್ಕಾಗಿ ಯೆಹೋವನನ್ನ ಬೇಡ್ಕೊಂಡ್ರು.+
7 ಮಿದ್ಯಾನ್ಯರ ಕಾಟದಿಂದಾಗಿ ಇಸ್ರಾಯೇಲ್ಯರು ಯೆಹೋವನನ್ನ ಬೇಡ್ಕೊಂಡಾಗ+
8 ಯೆಹೋವ ಒಬ್ಬ ಪ್ರವಾದಿಯನ್ನ ಅವ್ರ ಹತ್ರ ಕಳಿಸಿದನು. ಆ ಪ್ರವಾದಿ “ಇಸ್ರಾಯೇಲ್ ದೇವರಾದ ಯೆಹೋವ ಹೀಗೆ ಹೇಳಿದ್ದಾನೆ ‘ನಿಮ್ಮನ್ನ ಈಜಿಪ್ಟಿಂದ ಕರ್ಕೊಂಡು ಬಂದು ಗುಲಾಮಗಿರಿಯಿಂದ ನಾನು ಬಿಡಿಸ್ದೆ.+
9 ನಿಮ್ಮನ್ನ ಈಜಿಪ್ಟಿನ ಕೈಯಿಂದ, ಕ್ರೂರವಾಗಿ ಕಿರುಕುಳ ಕೊಡ್ತಿದ್ದ ಜನ್ರ ಕೈಯಿಂದ ಬಿಡಿಸ್ದೆ. ನಿಮ್ಮ ಶತ್ರುಗಳನ್ನ ನಿಮ್ಮಿಂದ ಓಡಿಸಿ ಅವ್ರ ಜಾಗಗಳನ್ನ ನಿಮಗೆ ಕೊಟ್ಟೆ.+
10 “ನಾನು ನಿಮ್ಮ ದೇವರಾದ ಯೆಹೋವ.+ ನೀವು ಯಾವ ದೇಶದಲ್ಲಿ ವಾಸ ಆಗಿದ್ದೀರೋ ಅಲ್ಲಿನ ಅಮೋರಿಯರ ದೇವರುಗಳಿಗೆ ಹೆದರಬಾರದು”+ ಅಂತನೂ ಹೇಳಿದ್ದೆ. ಆದ್ರೆ ನೀವು ನನ್ನ ಮಾತು ಕೇಳಲಿಲ್ಲ.’”*+
11 ಇದಾದ್ಮೇಲೆ, ಯೆಹೋವನ ಒಬ್ಬ ದೂತ+ ಒಫ್ರಕ್ಕೆ ಬಂದು ಅಲ್ಲಿದ್ದ ದೊಡ್ಡ ಮರದ ಕೆಳಗೆ ಕೂತ. ಈ ಮರ ಅಬೀಯೆಜೆರನಾದ+ ಯೋವಾಷನಿಗೆ ಸೇರಿದ್ದು. ಇವನ ಮಗ ಗಿದ್ಯೋನ+ ದ್ರಾಕ್ಷಾಮದ್ಯ ತಯಾರಿಸೋ ತೊಟ್ಟಿಯಲ್ಲಿ ಗೋದಿ ಬಡೀತಾ ಇದ್ದ. ಮಿದ್ಯಾನ್ಯರಿಗೆ ಗೊತ್ತಾಗಬಾರದು ಅಂತ ಅಲ್ಲಿ ಬಡಿತಿದ್ದ.
12 ಯೆಹೋವನ ದೂತ ಅವನಿಗೆ ಕಾಣಿಸ್ಕೊಂಡು “ಬಲಶಾಲಿ ವೀರ ಸೈನಿಕ, ಯೆಹೋವ ನಿನ್ನ ಜೊತೆ ಇದ್ದಾನೆ”+ ಅಂದನು.
13 ಅದಕ್ಕೆ ಗಿದ್ಯೋನ “ನನ್ನೊಡೆಯ, ಕ್ಷಮಿಸು. ಯೆಹೋವ ನಮ್ಮ ಜೊತೆ ಇದ್ದಿದ್ರೆ ಈ ಕಷ್ಟಗಳೆಲ್ಲ ಯಾಕೆ ಬರ್ತಿತ್ತು?+ ನಮ್ಮ ಪೂರ್ವಜರು ‘ಯೆಹೋವ ನಮ್ಮನ್ನ ಈಜಿಪ್ಟಿಂದ ಬಿಡಿಸಿದ್ದನು’+ ಅಂತಿದ್ರಲ್ಲಾ? ಈಗ ಯಾಕೆ ಅದ್ಭುತ ಮಾಡಿ ನಮ್ಮನ್ನ ಬಿಡಿಸ್ತಿಲ್ಲ?+ ಯೆಹೋವ ಈಗ ನಮ್ಮ ಕೈಬಿಟ್ಟಿದ್ದಾನೆ,+ ಮಿದ್ಯಾನ್ಯರ ಕೈಗೆ ನಮ್ಮನ್ನ ಒಪ್ಪಿಸಿಬಿಟ್ಟಿದ್ದಾನೆ” ಅಂದ.
14 ಆಗ ಯೆಹೋವ “ನಿನಗಿರೋ ಬಲದಿಂದ ಇಸ್ರಾಯೇಲ್ಯರನ್ನ ಮಿದ್ಯಾನ್ಯರ ಕೈಯಿಂದ ಕಾಪಾಡು.+ ನಿನ್ನನ್ನ ನಾನು ಕಳಿಸ್ತಾ ಇದ್ದೀನಿ” ಅಂದನು.
15 ಅದಕ್ಕೆ ಗಿದ್ಯೋನ “ಯೆಹೋವ, ಕ್ಷಮಿಸು. ಇಸ್ರಾಯೇಲ್ಯರನ್ನ ಕಾಪಾಡೋಕೆ ನನ್ನಿಂದ ಹೇಗಾಗುತ್ತೆ? ಮನಸ್ಸೆ ಕುಲದಲ್ಲೇ ನನ್ನ ಮನೆತನ ತುಂಬ ಚಿಕ್ಕದು. ನನ್ನ ತಂದೆ ಕುಟುಂಬದಲ್ಲೇ ಸಾಮಾನ್ಯ ಮನುಷ್ಯ ನಾನು” ಅಂದ.
16 ಆಗ ಯೆಹೋವ “ನಿನ್ನ ಜೊತೆ ನಾನು ಇರ್ತೀನಿ.+ ಒಬ್ಬನನ್ನ ಕೊಲ್ಲೋಷ್ಟು ಸುಲಭವಾಗಿ ಅಷ್ಟೂ ಮಿದ್ಯಾನ್ಯರನ್ನ ಕೊಲ್ತೀಯ” ಅಂದನು.
17 ಆಗ ಗಿದ್ಯೋನ “ನನ್ನನ್ನ ಮೆಚ್ಚಿರೋದಾದ್ರೆ ನನ್ನ ಜೊತೆ ಮಾತಾಡ್ತಾ ಇರೋದು ನೀನೇ ಅಂತ ನನ್ಗೊಂದು ಸೂಚನೆ ತೋರಿಸು.
18 ಉಡುಗೊರೆ ತಂದು ನಿನ್ನ ಮುಂದೆ ಇಡೋ ತನಕ ದಯವಿಟ್ಟು ಇಲ್ಲಿಂದ ಹೋಗಬೇಡ”+ ಅಂದ. “ನೀನು ವಾಪಸ್ ಬರೋ ತನಕ ಇಲ್ಲೇ ಇರ್ತಿನಿ” ಅಂದನು.
19 ಆಗ ಗಿದ್ಯೋನ ಒಳಗೆ ಹೋಗಿ ಆಡುಮರಿಯ ಮಾಂಸದ ಅಡುಗೆ ಮಾಡಿದ. ಒಂದು ಏಫಾದಷ್ಟು* ಹಿಟ್ಟಿಂದ ಹುಳಿ ಇಲ್ಲದ ರೊಟ್ಟಿ ತಯಾರಿಸಿದ.+ ಮಾಂಸವನ್ನ ಬುಟ್ಟಿಯಲ್ಲಿ ಇಟ್ಟು, ಸಾರನ್ನ ಪಾತ್ರೆಯಲ್ಲಿ ತುಂಬಿಸ್ಕೊಂಡ. ಆಮೇಲೆ ಆತನ ಹತ್ರ ಬಂದು ಆ ದೊಡ್ಡ ಮರದ ಕೆಳಗೆ ಬಡಿಸಿದ.
20 ಆಗ ಸತ್ಯ ದೇವರ ದೂತ ಗಿದ್ಯೋನನಿಗೆ “ಆ ದೊಡ್ಡ ಬಂಡೆ ಮೇಲೆ ಈ ಮಾಂಸ, ಹುಳಿ ಇಲ್ಲದ ರೊಟ್ಟಿ ಇಡು. ಅದ್ರ ಮೇಲೆ ಸಾರು ಹಾಕು” ಅಂದನು. ಅವನು ಹಾಗೇ ಮಾಡಿದ.
21 ಆಮೇಲೆ ಯೆಹೋವನ ದೂತ ತನ್ನ ಕೈಯಲ್ಲಿದ್ದ ಕೋಲು ಚಾಚಿ ಮಾಂಸವನ್ನ, ಹುಳಿ ಇಲ್ಲದ ರೊಟ್ಟಿಯನ್ನ ಮುಟ್ಟಿದ. ಆಗ ಬಂಡೆ ಒಳಗಿಂದ ಬೆಂಕಿ ಬಂದು ಅದನ್ನ ಸುಟ್ಟುಬಿಡ್ತು.+ ಆಮೇಲೆ ಯೆಹೋವನ ದೂತ ಕಣ್ಮರೆ ಆದ.
22 ಬಂದಿದ್ದವನು ಯೆಹೋವನ ದೂತನೇ ಅಂತ ಗಿದ್ಯೋನನಿಗೆ ಗೊತ್ತಾಯ್ತು.+
ತಕ್ಷಣ ಗಿದ್ಯೋನ “ಅಯ್ಯೋ ಯೆಹೋವನೇ! ವಿಶ್ವದ ರಾಜ ಯೆಹೋವನೇ, ನಿನ್ನ ದೂತನನ್ನ ಕಣ್ಣಾರೆ ನೋಡಿಬಿಟ್ನಲ್ಲಾ?”+ ಅಂದ.
23 ಆಗ “ಹೆದರಬೇಡ.+ ಸಮಾಧಾನ. ನೀನು ಸಾಯಲ್ಲ” ಅಂತ ಯೆಹೋವ ಹೇಳಿದನು.
24 ಹಾಗಾಗಿ ಗಿದ್ಯೋನ ಯೆಹೋವನಿಗಾಗಿ ಅಲ್ಲಿ ಒಂದು ಯಜ್ಞವೇದಿ ಕಟ್ಟಿದ. ಇವತ್ತಿಗೂ ಅದಕ್ಕೆ ಯೆಹೋವ-ಷಾಲೋಮ್*+ ಅಂತ ಹೆಸ್ರಿದೆ, ಅಬೀಯೆಜೆರೀಯರಿಗೆ ಸೇರಿದ ಒಫ್ರದಲ್ಲೇ ಇದೆ.
25 ಆ ರಾತ್ರಿ ಯೆಹೋವ ಅವನಿಗೆ “ನಿನ್ನ ತಂದೆಗೆ ಸೇರಿದ ಏಳು ವರ್ಷದ ಒಂದು ಎಳೇ ಹೋರಿ* ತಗೊಂಡು ಹೋಗು. ನಿನ್ನ ತಂದೆಗೆ ಸೇರಿರೋ ಬಾಳನ ಯಜ್ಞವೇದಿ ನಾಶ ಮಾಡು. ಅದ್ರ ಪಕ್ಕದಲ್ಲಿರೋ ಪೂಜಾಕಂಬವನ್ನ* ಕಡಿದುಹಾಕು.+
26 ಈ ಎತ್ರ ಇರೋ ಸುರಕ್ಷಿತ ಜಾಗದಲ್ಲಿ ಕಲ್ಲುಗಳನ್ನ ಸಾಲಾಗಿ ಇಟ್ಟು ನಿನ್ನ ದೇವರಾದ ಯೆಹೋವನಿಗೆ ಯಜ್ಞವೇದಿ ಕಟ್ಟು. ನೀನು ಕಡಿದುಹಾಕಿದ ಪೂಜಾಕಂಬದ ಮರದ ತುಂಡುಗಳ ಮೇಲೆ ಈ ಹೋರಿಯನ್ನ ಸರ್ವಾಂಗಹೋಮ ಬಲಿಯಾಗಿ ಅರ್ಪಿಸು” ಅಂದನು.
27 ಗಿದ್ಯೋನ ತನ್ನ ಸೇವಕರಲ್ಲಿ 10 ಜನ್ರನ್ನ ಕರ್ಕೊಂಡು ಯೆಹೋವ ಹೇಳಿದ ಹಾಗೇ ಮಾಡಿದ. ಆದ್ರೆ ತಂದೆ ಕುಟುಂಬದವ್ರಿಗೆ, ಪಟ್ಟಣದ ಗಂಡಸ್ರಿಗೆ ಹೆದರಿ ಈ ಕೆಲಸವನ್ನ ರಾತ್ರಿಯಲ್ಲಿ ಮಾಡಿದ.
28 ಮಾರನೇ ದಿನ ಬೆಳಿಗ್ಗೆ ಪಟ್ಟಣದ ಗಂಡಸ್ರು ನೋಡಿದಾಗ ಬಾಳನ ಯಜ್ಞವೇದಿ ನಾಶ ಆಗಿತ್ತು, ಅದ್ರ ಪಕ್ಕದಲ್ಲಿದ್ದ ಪೂಜಾಕಂಬ ತುಂಡಾಗಿತ್ತು. ಹೊಸ ಯಜ್ಞವೇದಿ ಕಟ್ಟಿ ಅದ್ರ ಮೇಲೆ ಹೋರಿಯನ್ನ ಬಲಿಯಾಗಿ ಅರ್ಪಿಸಿದ್ದು ಕಾಣಿಸ್ತು.
29 ಆಗ ಅವರು “ಯಾರು ಹೀಗೆ ಮಾಡಿದ್ದು?” ಅಂತ ಮಾತಾಡ್ಕೊಂಡ್ರು. ಅವರು ವಿಚಾರಣೆ ಮಾಡಿದಾಗ “ಇದು ಯೋವಾಷನ ಮಗ ಗಿದ್ಯೋನನ ಕೆಲಸ” ಅಂತ ಗೊತ್ತಾಯ್ತು.
30 ಆಗ ಪಟ್ಟಣದ ಗಂಡಸ್ರು ಯೋವಾಷನಿಗೆ “ನಿನ್ನ ಮಗನನ್ನ ಹೊರಗೆ ಕರ್ಕೊಂಡು ಬಾ. ಬಾಳನ ಯಜ್ಞವೇದಿ ಕೆಡವಿದ್ದಾನೆ. ಅದ್ರ ಪಕ್ಕದಲ್ಲಿದ್ದ ಪೂಜಾಕಂಬ ತುಂಡು ಮಾಡಿದ್ದಾನೆ. ಅವನು ಸಾಯಬೇಕು” ಅಂದ್ರು.
31 ಯೋವಾಷ+ ತನ್ನ ವಿರುದ್ಧ ಬಂದವ್ರಿಗೆ “ಬಾಳನ ಪರವಾಗಿ ನೀವು ಮಾತಾಡಬೇಕಾ? ಅವನನ್ನ ನೀವು ಕಾಪಾಡಬೇಕಾ? ನಿಮ್ಮಲ್ಲಿ ಯಾರಾದ್ರೂ ಅವನ ಪರವಾಗಿ ಮಾತಾಡಿದ್ರೆ ಈಗ್ಲೇ ಪ್ರಾಣ ಕಳ್ಕೊಳ್ತೀರ.+ ಬಾಳ ದೇವರಾಗಿದ್ರೆ ಅವನ ಪರವಾಗಿ ಅವನೇ ಮಾತಾಡ್ಲಿ.+ ಕೆಡವಿ ಹಾಕಿರೋದು ಅವನ ಯಜ್ಞವೇದಿನ ತಾನೇ?” ಅಂದ.
32 ಆ ದಿನ ಯೋವಾಷ ಗಿದ್ಯೋನನನ್ನ ಯೆರುಬ್ಬಾಳ* ಅಂತ ಕರೆದು “ಬಾಳ ತನ್ನ ಪರವಾಗಿ ತಾನೇ ಮಾತಾಡ್ಲಿ, ಕೆಡವಿ ಹಾಕಿರೋದು ಅವನ ಯಜ್ಞವೇದಿನ ತಾನೇ?” ಅಂದ.
33 ಎಲ್ಲ ಮಿದ್ಯಾನ್ಯರು,+ ಅಮಾಲೇಕ್ಯರು,+ ಪೂರ್ವ ದಿಕ್ಕಲ್ಲಿ ಇರೋರು ಯುದ್ಧಕ್ಕಾಗಿ ಸೇರಿಬಂದು+ ನದಿ ದಾಟಿ ಇಜ್ರೇಲ್ ಕಣಿವೆಯಲ್ಲಿ ಪಾಳೆಯ ಹೂಡಿದ್ರು.
34 ಆಮೇಲೆ ಯೆಹೋವನ ಪವಿತ್ರಶಕ್ತಿ ಗಿದ್ಯೋನನ+ ಮೇಲೆ ಬಂತು. ಕೊಂಬು ಊದಿದ.+ ಅಬೀಯೆಜೆರೀಯರು+ ಅವನ ಬೆಂಬಲಕ್ಕೆ ಬಂದ್ರು.
35 ಗಿದ್ಯೋನ ಸಂದೇಶವಾಹಕರ ಮೂಲಕ ಮನಸ್ಸೆ ಕುಲದವ್ರಿಗೆ ಸುದ್ದಿ ಮುಟ್ಟಿಸಿದ. ಅವರು ಸಹ ಗಿದ್ಯೋನನ ಬೆಂಬಲಕ್ಕೆ ಬಂದ್ರು. ಅವನು ಅಶೇರ್, ಜೆಬುಲೂನ್, ನಫ್ತಾಲಿ ಕುಲದವ್ರ ಹತ್ರ ಸಂದೇಶವಾಹಕರನ್ನ ಕಳಿಸಿದ, ಅವರೂ ನೋಡೋಕೆ ಬಂದ್ರು.
36 ಆಮೇಲೆ ಗಿದ್ಯೋನ ಸತ್ಯ ದೇವರಿಗೆ “ನೀನು ನನಗೆ ಮಾತು ಕೊಟ್ಟ ಹಾಗೆ ಇಸ್ರಾಯೇಲ್ಯರನ್ನ ನನ್ನ ಮೂಲಕ ಕಾಪಾಡೋದಾದ್ರೆ+
37 ನಾನು ಕಣದ ಮೇಲೆ ಕುರಿ ತುಪ್ಪಟ ಇಡ್ತೀನಿ. ಅದ್ರ ಮೇಲೆ ಮಾತ್ರ ಇಬ್ಬನಿ ಬಿದ್ದು ಸುತ್ತ ನೆಲ ಒಣಗಿದ್ರೆ ನೀನು ಮಾತು ಕೊಟ್ಟ ಹಾಗೇ ಇಸ್ರಾಯೇಲ್ಯರನ್ನ ನನ್ನ ಮೂಲಕ ಕಾಪಾಡ್ತೀಯ ಅಂತ ತಿಳ್ಕೊಳ್ತೀನಿ” ಅಂದ.
38 ಹಾಗೇ ನಡಿತು, ಮಾರನೇ ದಿನ ಅವನು ಬೇಗ ಎದ್ದು ಕುರಿ ತುಪ್ಪಟ ಹಿಂಡಿದಾಗ ಒಂದು ದೊಡ್ಡ ಬೋಗುಣಿ ತುಂಬ ನೀರು ಬಂತು.
39 ಗಿದ್ಯೋನ ಸತ್ಯ ದೇವರಿಗೆ “ನನ್ನ ಮೇಲೆ ಕೋಪ ಮಾಡ್ಕೊಳ್ಳಬೇಡ. ಇನ್ನೊಂದು ಸಾರಿ ಬೇಡ್ಕೊಳ್ತೀನಿ. ನನ್ನ ಜೊತೆ ನೀನು ಇರ್ತಿಯ ಅಂತ ಪರೀಕ್ಷಿಸೋಕೆ ದಯವಿಟ್ಟು ಇನ್ನೊಂದು ಅವಕಾಶ ಕೊಡು. ಈ ಸಲ ಕುರಿ ತುಪ್ಪಟ ಮಾತ್ರ ಒಣಗಿರಬೇಕು, ಸುತ್ತ ನೆಲ ಇಬ್ಬನಿಯಿಂದ ಒದ್ದೆ ಆಗಿರಬೇಕು” ಅಂದ.
40 ದೇವರು ಆ ರಾತ್ರಿ ಹಾಗೇ ಮಾಡಿದನು. ಕುರಿ ತುಪ್ಪಟ ಮಾತ್ರ ಒಣಗಿತ್ತು, ನೆಲ ಇಬ್ಬನಿಯಿಂದ ಒದ್ದೆ ಆಗಿತ್ತು.
ಪಾದಟಿಪ್ಪಣಿ
^ ಬಹುಶಃ, “ನೆಲದಡಿಯಲ್ಲಿ ಶೇಖರಿಸೋ ಜಾಗಗಳನ್ನ.”
^ ಅಕ್ಷ. “ನನ್ನ ಧ್ವನಿ ಕೇಳಲಿಲ್ಲ.”
^ ಸುಮಾರು 22ಲೀ. ಪರಿಶಿಷ್ಟ ಬಿ14 ನೋಡಿ.
^ ಅರ್ಥ “ಯೆಹೋವ ಶಾಂತಿಯಾಗಿದ್ದಾನೆ.”
^ ಅಕ್ಷ. “ಎರಡನೇ ಹೋರಿ.”
^ ಅರ್ಥ “ಬಾಳ ತನ್ನ ಪರವಾಗಿ ತಾನೇ ಮಾತಾಡ್ಲಿ (ಹೋರಾಡ್ಲಿ).”