ಯಾಜಕಕಾಂಡ 14:1-57
14 ಯೆಹೋವ ಮೋಶೆಗೆ ಇನ್ನೂ ಹೇಳಿದ್ದೇನಂದ್ರೆ
2 “ಒಬ್ಬ ಕುಷ್ಠರೋಗಿ ವಾಸಿ ಆದ್ಮೇಲೆ ಅವನನ್ನ ಶುದ್ಧ ಅಂತ ತೀರ್ಮಾನಿಸೋ ದಿನ ಪಾಲಿಸಬೇಕಾದ ನಿಯಮಗಳು: ಅವನನ್ನ ಪುರೋಹಿತನಿಗೆ ತೋರಿಸಬೇಕು.+
3 ಪುರೋಹಿತ ಪಾಳೆಯದ ಹೊರಗೆ ಹೋಗಿ ಅವನನ್ನ ಪರೀಕ್ಷಿಸಬೇಕು. ಕುಷ್ಠರೋಗ ವಾಸಿ ಆಗಿದ್ರೆ
4 ಅವನು ತನ್ನ ಶುದ್ಧೀಕರಣಕ್ಕಾಗಿ ಎರಡು ಶುದ್ಧ ಪಕ್ಷಿ, ದೇವದಾರು ಮರದ ಕಟ್ಟಿಗೆ, ಕಡುಗೆಂಪು ಬಣ್ಣದ ಬಟ್ಟೆ, ಹಿಸ್ಸೋಪ್* ಗಿಡ ತರೋಕೆ ಪುರೋಹಿತ ಅವನಿಗೆ ಹೇಳಬೇಕು.+
5 ಆ ಪಕ್ಷಿಗಳಲ್ಲಿ ಒಂದನ್ನ ಹರಿಯೋ ನೀರು ತುಂಬಿಸಿರೋ ಮಣ್ಣಿನ ಪಾತ್ರೆಯಲ್ಲಿ ಕೊಲ್ಲಬೇಕು ಅಂತ ಪುರೋಹಿತ ಹೇಳಬೇಕು.
6 ಆ ಪಕ್ಷಿಯನ್ನ ಕೊಂದಾಗ ಅದ್ರ ರಕ್ತ ಪಾತ್ರೆಯಲ್ಲಿರೋ ನೀರು ಜೊತೆ ಬೆರೆಯುತ್ತೆ. ಪುರೋಹಿತ ಈ ರಕ್ತದಲ್ಲಿ ಜೀವ ಇರೋ ಇನ್ನೊಂದು ಪಕ್ಷಿಯನ್ನ, ದೇವದಾರು ಮರದ ಕಟ್ಟಿಗೆಯನ್ನ, ಕಡುಗೆಂಪು ಬಣ್ಣದ ಬಟ್ಟೆಯನ್ನ, ಹಿಸ್ಸೋಪ್ ಗಿಡವನ್ನ ಒಟ್ಟಿಗೆ ಅದ್ದಿ ತೆಗೆದು
7 ಶುದ್ಧ ಮಾಡ್ಕೊಳ್ತಾ ಇರೋ ವ್ಯಕ್ತಿ ಮೇಲೆ ಏಳು ಸಲ ಚಿಮಿಕಿಸಬೇಕು. ಈಗ ಅವನು ಶುದ್ಧ ಅಂತ ಎಲ್ರಿಗೂ ಹೇಳಬೇಕು. ಜೀವ ಇರೋ ಪಕ್ಷಿಯನ್ನ ಬಯಲಲ್ಲಿ ಬಿಟ್ಟುಬಿಡಬೇಕು.+
8 ಶುದ್ಧ ಮಾಡ್ಕೊಳ್ತಾ ಇರೋ ವ್ಯಕ್ತಿ ತನ್ನ ಬಟ್ಟೆಗಳನ್ನ ಒಗಿಬೇಕು. ಮೈಮೇಲಿರೋ ಕೂದಲೆಲ್ಲಾ ತೆಗೆದು ಸ್ನಾನ ಮಾಡಬೇಕು. ಆಗ ಅವನು ಶುದ್ಧ ಆಗ್ತಾನೆ. ಆಮೇಲೆ ಅವನು ಪಾಳೆಯದ ಒಳಗೆ ಬರಬಹುದು. ಆದ್ರೆ ಏಳು ದಿನ ತನಕ ತನ್ನ ಡೇರೆ ಹೊರಗೆನೇ ಇರಬೇಕು.
9 ಏಳನೇ ದಿನ ತಲೆ, ಗಲ್ಲ, ಹುಬ್ಬು ಮೇಲಿರೋ ಎಲ್ಲ ಕೂದಲು ತೆಗಿಬೇಕು. ಆಮೇಲೆ ಬಟ್ಟೆಗಳನ್ನ ಒಗೆದು ಸ್ನಾನ ಮಾಡಬೇಕು. ಆಗ ಅವನು ಶುದ್ಧ ಆಗ್ತಾನೆ.
10 ಎಂಟನೇ ದಿನ ಯಾವುದೇ ದೋಷ ಇಲ್ಲದ ಎರಡು ಟಗರನ್ನ, ಒಂದು ವರ್ಷದೊಳಗಿನ ಒಂದು ಹೆಣ್ಣು ಕುರಿಮರಿಯನ್ನ ಅವನು ತರಬೇಕು.+ ಅಷ್ಟೇ ಅಲ್ಲ ಏಫಾ ಅಳತೆಯ ಹತ್ತರಲ್ಲಿ ಮೂರು ಭಾಗದಷ್ಟು* ನುಣ್ಣಗಿರೋ ಹಿಟ್ಟಿಗೆ ಎಣ್ಣೆ ಬೆರೆಸಿ ಧಾನ್ಯ ಅರ್ಪಣೆಗಾಗಿ ತರಬೇಕು.+ ಒಂದು ಲೋಗ್ ಅಳತೆ* ಎಣ್ಣೆ ಕೂಡ ತರಬೇಕು.+
11 ಆ ವ್ಯಕ್ತಿ ಶುದ್ಧ ಅಂತ ಎಲ್ರಿಗೂ ಹೇಳೋ ಪುರೋಹಿತ ಆ ವ್ಯಕ್ತಿ ಜೊತೆಗೆ ಅರ್ಪಣೆಗಳನ್ನ ಯೆಹೋವನ ಮುಂದೆ, ದೇವದರ್ಶನ ಡೇರೆಯ ಬಾಗಿಲ ಹತ್ರ ತರಬೇಕು.
12 ಪುರೋಹಿತ ದೋಷಪರಿಹಾರಕ ಬಲಿಗಾಗಿ ಒಂದು ಟಗರು,+ ಜೊತೆಗೆ ಒಂದು ಲೋಗ್ ಅಳತೆ ಎಣ್ಣೆ ತಗೊಳ್ಳಬೇಕು. ಅವುಗಳನ್ನ ಯೆಹೋವನ ಮುಂದೆ ಓಲಾಡಿಸೋ ಅರ್ಪಣೆಯಾಗಿ ಹಿಂದೆ ಮುಂದೆ ಆಡಿಸಬೇಕು.+
13 ಆಮೇಲೆ ಅವನು ಆ ಟಗರನ್ನ ಪವಿತ್ರವಾದ ಒಂದು ಜಾಗದಲ್ಲಿ ಕಡಿಬೇಕು ಅಂದ್ರೆ ಪಾಪಪರಿಹಾರಕ ಬಲಿಯ ಮತ್ತು ಸರ್ವಾಂಗಹೋಮ ಬಲಿಯ ಪ್ರಾಣಿಯನ್ನ ಕಡಿಯೋ ಜಾಗದಲ್ಲೇ ಕಡಿಬೇಕು.+ ಪಾಪಪರಿಹಾರಕ ಬಲಿ ತರಾನೇ ದೋಷಪರಿಹಾರಕ ಬಲಿಯ ಮಾಂಸನೂ ಪುರೋಹಿತನಿಗೆ ಸೇರಿದೆ.+ ಅದು ಅತಿ ಪವಿತ್ರ.+
14 ಆಮೇಲೆ ಪುರೋಹಿತ ದೋಷಪರಿಹಾರಕ ಬಲಿಗಾಗಿ ಅರ್ಪಿಸಿದ ಟಗರಿನ ರಕ್ತದಲ್ಲಿ ಸ್ವಲ್ಪ ತಗೊಂಡು ಶುದ್ಧ ಮಾಡ್ಕೊಳ್ತಾ ಇರೋ ವ್ಯಕ್ತಿಯ ಬಲ ಕಿವಿಯ ತುದಿಗೆ,* ಬಲಗೈಯ ಹೆಬ್ಬೆರಳಿಗೆ, ಬಲಗಾಲಿನ ಹೆಬ್ಬೆರಳಿಗೆ ಹಚ್ಚಬೇಕು.
15 ಒಂದು ಲೋಗ್ ಅಳತೆ ಎಣ್ಣೆಯಲ್ಲಿ ಸ್ವಲ್ಪ ತಗೊಂಡು+ ಪುರೋಹಿತ ತನ್ನ ಎಡ ಅಂಗೈಗೆ ಹಾಕೊಳ್ಳಬೇಕು.
16 ಈ ಎಣ್ಣೆಯಲ್ಲಿ ತನ್ನ ಬಲಗೈಯ ಬೆರಳು ಅದ್ದಿ ಎಣ್ಣೆಯನ್ನ ಯೆಹೋವನ ಮುಂದೆ ಏಳು ಸಲ ಚಿಮಿಕಿಸಬೇಕು.
17 ಆಮೇಲೆ ಅಂಗೈಯಲ್ಲಿ ಉಳಿದಿರೋ ಎಣ್ಣೆಯಲ್ಲಿ ಸ್ವಲ್ಪ ತಗೊಂಡು ಶುದ್ಧ ಮಾಡ್ಕೊಳ್ತಾ ಇರೋ ವ್ಯಕ್ತಿಗೆ ದೋಷಪರಿಹಾರಕ ಬಲಿಯ ಟಗರಿನ ರಕ್ತವನ್ನ ಹಚ್ಚಿದ ಜಾಗದಲ್ಲೇ ಅಂದ್ರೆ ಅವನ ಬಲ ಕಿವಿಯ ತುದಿಗೆ, ಬಲಗೈಯ ಹೆಬ್ಬೆರಳಿಗೆ, ಬಲಗಾಲಿನ ಹೆಬ್ಬೆರಳಿಗೆ ಹಚ್ಚಬೇಕು.
18 ತನ್ನ ಅಂಗೈಯಲ್ಲಿ ಉಳಿದಿರೋ ಎಣ್ಣೆಯನ್ನ ಶುದ್ಧ ಮಾಡ್ಕೊಳ್ತಾ ಇರೋ ವ್ಯಕ್ತಿ ತಲೆ ಮೇಲೆ ಹೊಯ್ಯಬೇಕು. ಅವನಿಗೋಸ್ಕರ ಯೆಹೋವನ ಮುಂದೆ ಪ್ರಾಯಶ್ಚಿತ್ತ ಮಾಡಬೇಕು.+
19 ಆಮೇಲೆ ಪುರೋಹಿತ ಪಾಪಪರಿಹಾರಕ ಬಲಿ ಪ್ರಾಣಿಯನ್ನ ಅರ್ಪಿಸಬೇಕು.+ ಶುದ್ಧ ಮಾಡ್ಕೊಳ್ತಾ ಇರೋ ವ್ಯಕ್ತಿಗಾಗಿ ಪ್ರಾಯಶ್ಚಿತ್ತ ಮಾಡಬೇಕು. ಸರ್ವಾಂಗಹೋಮ ಬಲಿಯ ಪ್ರಾಣಿಯನ್ನ ಕಡಿಬೇಕು.
20 ಆ ಸರ್ವಾಂಗಹೋಮ ಬಲಿಯ ಪ್ರಾಣಿಯನ್ನ, ಧಾನ್ಯ ಅರ್ಪಣೆಯನ್ನ ಯಜ್ಞವೇದಿ ಮೇಲೆ ಅರ್ಪಿಸಬೇಕು.+ ಆ ವ್ಯಕ್ತಿಗಾಗಿ ಪ್ರಾಯಶ್ಚಿತ್ತ ಮಾಡಬೇಕು.+ ಆಗ ಅವನು ಶುದ್ಧ ಆಗ್ತಾನೆ.+
21 ಆ ವ್ಯಕ್ತಿ ಬಡವನಾಗಿದ್ದು ಆ ಪ್ರಾಣಿಗಳನ್ನ ಕೊಡೋಕೆ ಆಗಿಲ್ಲಾಂದ್ರೆ ಅವನು ದೋಷಪರಿಹಾರಕ ಬಲಿಗಾಗಿ ಒಂದು ಟಗರು ಕೊಡಬೇಕು. ಅದು ಹಿಂದೆ ಮುಂದೆ ಆಡಿಸಿ ಕೊಡೋ ಅರ್ಪಣೆ. ಪ್ರಾಯಶ್ಚಿತ್ತಕ್ಕಾಗಿ ಅವನು ಅದನ್ನ ಕೊಡಬೇಕು. ಜೊತೆಗೆ ಏಫಾ ಅಳತೆಯ ಹತ್ತನೇ ಒಂದು ಭಾಗದಷ್ಟು* ನುಣ್ಣಗಿರೋ ಹಿಟ್ಟಿಗೆ ಎಣ್ಣೆ ಬೆರೆಸಿ ಧಾನ್ಯ ಅರ್ಪಣೆಯಾಗಿ ಕೊಡಬೇಕು. ಒಂದು ಲೋಗ್ ಅಳತೆ ಎಣ್ಣೆ,
22 ಆಗೋದಾದ್ರೆ ಎರಡು ಕಾಡುಪಾರಿವಾಳ ಅಥವಾ ಎರಡು ಪಾರಿವಾಳ ಮರಿಗಳನ್ನ ಕೂಡ ಕೊಡಬೇಕು. ಈ ಪಕ್ಷಿಗಳಲ್ಲಿ ಒಂದನ್ನ ಪಾಪಪರಿಹಾರಕ ಬಲಿಗಾಗಿ, ಇನ್ನೊಂದನ್ನ ಸರ್ವಾಂಗಹೋಮ ಬಲಿಗಾಗಿ ಕೊಡಬೇಕು.+
23 ಇದನ್ನೆಲ್ಲ ಆ ವ್ಯಕ್ತಿ ತನ್ನ ಶುದ್ಧೀಕರಣದ ಎಂಟನೇ ದಿನ+ ಯೆಹೋವನ ಮುಂದೆ ಅಂದ್ರೆ ದೇವದರ್ಶನ ಡೇರೆಯ ಬಾಗಿಲ ಹತ್ರ ತಂದು ಪುರೋಹಿತನಿಗೆ ಕೊಡಬೇಕು.+
24 ಪುರೋಹಿತ ದೋಷಪರಿಹಾರಕ ಬಲಿಯ ಟಗರು,+ ಒಂದು ಲೋಗ್ ಅಳತೆ ಎಣ್ಣೆ ತಗೊಂಡು ಯೆಹೋವನ ಎದುರಲ್ಲಿ ಹಿಂದೆ ಮುಂದೆ ಆಡಿಸಬೇಕು. ಇದು ಓಲಾಡಿಸೋ ಅರ್ಪಣೆ.+
25 ಆಮೇಲೆ ಪುರೋಹಿತ ಆ ಟಗರನ್ನ ಕಡಿದು ಅದ್ರ ರಕ್ತದಲ್ಲಿ ಸ್ವಲ್ಪ ತಗೊಂಡು ಶುದ್ಧ ಮಾಡ್ಕೊಳ್ತಾ ಇರೋ ವ್ಯಕ್ತಿಯ ಬಲ ಕಿವಿಯ ತುದಿಗೆ, ಬಲಗೈಯ ಹೆಬ್ಬೆರಳಿಗೆ, ಬಲಗಾಲಿನ ಹೆಬ್ಬೆರಳಿಗೆ ಹಚ್ಚಬೇಕು.+
26 ಸ್ವಲ್ಪ ಎಣ್ಣೆಯನ್ನ ತನ್ನ ಎಡ ಅಂಗೈಗೆ ಹಾಕೊಳ್ಳಬೇಕು.+
27 ಈ ಎಣ್ಣೆಯಲ್ಲಿ ಸ್ವಲ್ಪ ತಗೊಂಡು ತನ್ನ ಬಲಗೈಯ ಬೆರಳಿಂದ ಯೆಹೋವನ ಮುಂದೆ ಏಳು ಸಲ ಚಿಮಿಕಿಸಬೇಕು.
28 ತನ್ನ ಅಂಗೈಯಲ್ಲಿ ಇರೋ ಎಣ್ಣೆಯಲ್ಲಿ ಸ್ವಲ್ಪ ತಗೊಂಡು ಶುದ್ಧ ಮಾಡ್ಕೊಳ್ತಾ ಇರೋ ವ್ಯಕ್ತಿಗೆ ದೋಷಪರಿಹಾರಕ ಬಲಿಯ ಟಗರಿನ ರಕ್ತವನ್ನ ಹಚ್ಚಿದ್ದಲ್ಲೇ ಅಂದ್ರೆ ಅವನ ಬಲ ಕಿವಿಯ ತುದಿಗೆ, ಬಲಗೈಯ ಹೆಬ್ಬೆರಳಿಗೆ, ಬಲಗಾಲಿನ ಹೆಬ್ಬೆರಳಿಗೆ ಹಚ್ಚಬೇಕು.
29 ಶುದ್ಧ ಮಾಡ್ಕೊಳ್ತಾ ಇರೋ ವ್ಯಕ್ತಿಗಾಗಿ ಯೆಹೋವನ ಮುಂದೆ ಪ್ರಾಯಶ್ಚಿತ್ತ ಮಾಡೋಕೆ ಪುರೋಹಿತ ತನ್ನ ಅಂಗೈಯಲ್ಲಿ ಉಳಿದಿರೋ ಎಣ್ಣೆಯನ್ನ ಆ ವ್ಯಕ್ತಿ ತಲೆ ಮೇಲೆ ಹೊಯ್ಯಬೇಕು.
30 ಆ ವ್ಯಕ್ತಿ ತನ್ನ ಸಾಮರ್ಥ್ಯಕ್ಕೆ ತಕ್ಕ ಹಾಗೆ ಕೊಟ್ಟ ಎರಡು ಕಾಡುಪಾರಿವಾಳಗಳಲ್ಲಿ ಒಂದನ್ನ ಅಥವಾ ಎರಡು ಪಾರಿವಾಳ ಮರಿಗಳಲ್ಲಿ+ ಒಂದನ್ನ
31 ಪಾಪಪರಿಹಾರಕ ಬಲಿಗಾಗಿ, ಇನ್ನೊಂದನ್ನ ಸರ್ವಾಂಗಹೋಮ ಬಲಿಗಾಗಿ+ ಅರ್ಪಿಸಬೇಕು. ಜೊತೆಗೆ ಧಾನ್ಯ ಅರ್ಪಣೆ ಕೊಡಬೇಕು. ಶುದ್ಧ ಮಾಡ್ಕೊಳ್ತಾ ಇರೋ ವ್ಯಕ್ತಿಗಾಗಿ ಪುರೋಹಿತ ಯೆಹೋವನ ಮುಂದೆ ಪ್ರಾಯಶ್ಚಿತ್ತ ಮಾಡಬೇಕು.+
32 ಇದಿಷ್ಟು ಕುಷ್ಠರೋಗ ವಾಸಿ ಆದವರು ಶುದ್ಧೀಕರಣಕ್ಕಾಗಿ ಪ್ರಾಣಿಗಳನ್ನ ಕೊಡೋಕೆ ಆಗದಿದ್ರೆ ಪಾಲಿಸಬೇಕಾದ ನಿಯಮಗಳು.”
33 ಮೋಶೆ ಮತ್ತು ಆರೋನನಿಗೆ ಯೆಹೋವ ಹೀಗಂದನು:
34 “ನಾನು ನಿಮಗೆ ಆಸ್ತಿಯಾಗಿ ಕೊಡೋ+ ಕಾನಾನ್ ದೇಶಕ್ಕೆ ಹೋದ್ಮೇಲೆ+ ಅಲ್ಲಿ ಯಾವುದಾದ್ರೂ ಮನೆಗೆ ಕುಷ್ಠ ಬರೋಕೆ ನಾನು ಬಿಟ್ರೆ,+
35 ಆ ಮನೆ ಯಜಮಾನ ಪುರೋಹಿತನ ಹತ್ರ ಹೋಗಿ ‘ನನ್ನ ಮನೆ ಗೋಡೆ ಮೇಲೆ ಕಲೆಗಳಿವೆ. ಅವು ಕುಷ್ಠರೋಗದ ತರ ಇದೆ’ ಅಂತ ಹೇಳಬೇಕು.
36 ಆಗ ಪುರೋಹಿತ ಆ ಮನೆಯನ್ನ ಪರೀಕ್ಷಿಸೋ ಮುಂಚೆ ಮನೆ ಖಾಲಿ ಮಾಡೋಕೆ ಹೇಳಬೇಕು. ಖಾಲಿ ಮಾಡದಿದ್ರೆ ಮನೇಲಿ ಇರೋದನ್ನೆಲ್ಲ ಅವನು ಅಶುದ್ಧ ಅಂತ ಹೇಳಬೇಕು. ಮನೆ ಖಾಲಿ ಮಾಡಿದ ಮೇಲೆ ಅದನ್ನ ಪರೀಕ್ಷಿಸೋಕೆ ಮನೆ ಒಳಗೆ ಹೋಗಬೇಕು.
37 ಕಲೆಗಳು ಇರೋ ಜಾಗವನ್ನ ಪರೀಕ್ಷಿಸಬೇಕು. ಆ ಕಲೆಗಳು ಹಳದಿ-ಹಸಿರು ಮಿಶ್ರಿತ ಬಣ್ಣದಲ್ಲಿ ಇದ್ರೆ ಅಥವಾ ನಸುಗೆಂಪು ಬಣ್ಣ ಆಗಿದ್ರೆ ಅವು ಗೋಡೆ ಒಳಗಡೆ ತನಕ ಹೋಗಿದೆ ಅಂತ ಗೊತ್ತಾದ್ರೆ
38 ಪುರೋಹಿತ ಮನೆ ಹೊರಗೆ ಹೋಗಿ ಬಾಗಿಲು ಮುಚ್ಚಬೇಕು. ಏಳು ದಿನ ಆ ಮನೆ ಮುಚ್ಚಿನೇ ಇರಬೇಕು.+
39 ಏಳನೇ ದಿನ ಪುರೋಹಿತ ಮತ್ತೆ ಆ ಮನೆಗೆ ಬಂದು ಪರೀಕ್ಷಿಸಬೇಕು. ಆ ಕಲೆಗಳು ಗೋಡೆಗಳಲ್ಲಿ ಹರಡಿದ್ರೆ
40 ಆ ಜಾಗದಲ್ಲಿ ಇರೋ ಕಲ್ಲುಗಳನ್ನ ತೆಗೆದು ಪಟ್ಟಣದ ಹೊರಗೆ ಒಂದು ಅಶುದ್ಧ ಸ್ಥಳದಲ್ಲಿ ಬಿಸಾಡೋಕೆ ಹೇಳಬೇಕು.
41 ಆಮೇಲೆ ಮನೆ ಒಳಗಿನ ಗೋಡೆನ್ನೆಲ್ಲ ಕೆರೆದು ಗಾರೆ, ಗಿಲಾಯಿ ತೆಗೆದು ಅದನ್ನ ಪಟ್ಟಣದ ಹೊರಗೆ ಒಂದು ಅಶುದ್ಧ ಜಾಗದಲ್ಲಿ ಹಾಕಬೇಕು.
42 ಕಲ್ಲುಗಳನ್ನ ತೆಗೆದಿರೋ ಜಾಗದಲ್ಲಿ ಬೇರೆ ಕಲ್ಲುಗಳನ್ನ ಇಡಬೇಕು. ಮನೆ ಒಳಗೆ ಹೊಸದಾಗಿ ಗಾರೆ, ಗಿಲಾವು ಮಾಡಬೇಕು.
43 ಕಲೆಗಳ ಜಾಗದಲ್ಲಿದ್ದ ಕಲ್ಲುಗಳನ್ನ ತೆಗೆಸಿ ಗೋಡೆಗಳನ್ನ ಕೆರೆಸಿ ಹೊಸ ಗಾರೆ, ಗಿಲಾವು ಮಾಡಿಸಿದ ಮೇಲೂ ಗೋಡೆಯಲ್ಲಿ ಕಲೆಗಳು ಕಾಣಿಸ್ಕೊಂಡ್ರೆ
44 ಪುರೋಹಿತ ಮನೆ ಒಳಗೆ ಹೋಗಿ ಪರೀಕ್ಷಿಸಬೇಕು. ಒಂದುವೇಳೆ ಆ ಕಲೆಗಳು ಮನೇಲಿ ಹರಡ್ಕೊಂಡಿದ್ರೆ ಅದು ಅಪಾಯ ತರೋ ಕುಷ್ಠ.+ ಆ ಮನೆ ಅಶುದ್ಧ.
45 ಆಗ ಅವನು ಆ ಮನೆಯನ್ನ ಕೆಡವಿಸಬೇಕು. ಅದ್ರ ಕಲ್ಲುಗಳನ್ನ, ದಿಮ್ಮಿಗಳನ್ನ, ಗಾರೆ ಗಿಲಾಯಿನ್ನೆಲ್ಲ ತಗೊಂಡು ಹೋಗಿ ಪಟ್ಟಣದ ಹೊರಗೆ ಒಂದು ಅಶುದ್ಧ ಜಾಗದಲ್ಲಿ ಹಾಕಿಸಬೇಕು.+
46 ಆ ಮನೆಯನ್ನ ಮುಚ್ಚಿದ್ದ ದಿನಗಳಲ್ಲಿ+ ಯಾರಾದ್ರೂ ಅದ್ರ ಒಳಗೆ ಹೋದ್ರೆ ಅವನು ಆ ಸಂಜೆ ತನಕ ಅಶುದ್ಧ.+
47 ಆ ದಿನಗಳಲ್ಲಿ ಯಾರಾದ್ರೂ ಆ ಮನೆ ಒಳಗೆ ಮಲಗಿದ್ರೆ ಅಥವಾ ಊಟ ಮಾಡಿದ್ರೆ ತಮ್ಮ ಬಟ್ಟೆಗಳನ್ನ ಒಗಿಬೇಕು.
48 ಒಂದುವೇಳೆ ಮನೆಗೆ ಮತ್ತೆ ಗಾರೆ, ಗಿಲಾವು ಮಾಡಿಸಿದ ಮೇಲೆ ಪುರೋಹಿತ ಬಂದು ಪರೀಕ್ಷಿಸಿದಾಗ ಆ ಕಲೆ ಇಲ್ಲದಿದ್ರೆ ಆ ಮನೆ ಶುದ್ಧ ಅಂತ ಅವನು ಹೇಳಬೇಕು. ಯಾಕಂದ್ರೆ ಕುಷ್ಠದ ಕಲೆ ಮನೆಯಲ್ಲಿಲ್ಲ.
49 ಮನೆಯ ಶುದ್ಧೀಕರಣಕ್ಕಾಗಿ ಅವನು ಎರಡು ಪಕ್ಷಿ, ದೇವದಾರು ಮರದ ಕಟ್ಟಿಗೆ, ಕಡುಗೆಂಪು ಬಣ್ಣದ ಬಟ್ಟೆ, ಹಿಸ್ಸೋಪ್ ಗಿಡ ತಗೋಬೇಕು.+
50 ಒಂದು ಪಕ್ಷಿಯನ್ನ ಅವನು ಹರಿಯೋ ನೀರು ತುಂಬಿಸಿರೋ ಮಣ್ಣಿನ ಪಾತ್ರೇಲಿ ಕೊಲ್ಲಬೇಕು.
51 ಆಗ ಅದ್ರ ರಕ್ತ ಪಾತ್ರೆಯಲ್ಲಿರೋ ನೀರು ಜೊತೆ ಬೆರೆಯುತ್ತೆ. ಆಮೇಲೆ ಆ ರಕ್ತದಲ್ಲಿ ದೇವದಾರು ಮರದ ಕಟ್ಟಿಗೆ, ಹಿಸ್ಸೋಪ್ ಗಿಡ, ಕಡುಗೆಂಪು ಬಣ್ಣದ ಬಟ್ಟೆ, ಜೀವ ಇರೋ ಇನ್ನೊಂದು ಪಕ್ಷಿಯನ್ನ ಅದ್ದಿ ತೆಗೆದು ಮನೆ ಕಡೆ ಏಳು ಸಲ ಚಿಮಿಕಿಸಬೇಕು.+
52 ಈ ರೀತಿ ಅವನು ಪಕ್ಷಿಯ ರಕ್ತ, ಹರಿಯೋ ನೀರು, ಜೀವ ಇರೋ ಪಕ್ಷಿ, ದೇವದಾರು ಮರದ ಕಟ್ಟಿಗೆ, ಹಿಸ್ಸೋಪ್ ಗಿಡ, ಕಡುಗೆಂಪು ಬಣ್ಣದ ಬಟ್ಟೆಯಿಂದ ಆ ಮನೆಯನ್ನ ಶುದ್ಧೀಕರಿಸಬೇಕು.
53 ಆಮೇಲೆ ಜೀವ ಇರೋ ಪಕ್ಷಿಯನ್ನ ಪಟ್ಟಣದ ಹೊರಗೆ ಬಯಲಲ್ಲಿ ಬಿಟ್ಟುಬಿಡಬೇಕು. ಆ ಮನೆಗಾಗಿ ಪ್ರಾಯಶ್ಚಿತ್ತ ಮಾಡಬೇಕು. ಆಗ ಆ ಮನೆ ಶುದ್ಧ ಆಗುತ್ತೆ.
54 ಈ ನಿಯಮಗಳನ್ನ ಯಾವುದೇ ವಿಧದ ಕುಷ್ಠ ಬಂದಾಗ, ತಲೆಯ ಚರ್ಮ ಅಥವಾ ಗಡ್ಡಕ್ಕೆ ಸೋಂಕು ಬಂದಾಗ,+
55 ಬಟ್ಟೆಗೆ+ ಮನೆಗೆ ಕುಷ್ಠ ಬಂದಾಗ,+
56 ಊತ ಅಥವಾ ಗಾಯದ ಮೇಲೆ ಗಟ್ಟಿ ಚರ್ಮ, ಕಲೆಗಳು+ ಆದಾಗ ಪಾಲಿಸಬೇಕು.
57 ಯಾವುದು ಶುದ್ಧ, ಯಾವುದು ಅಶುದ್ಧ ಅಂತ ತೀರ್ಮಾನಿಸೋಕೆ ಈ ನಿಯಮಗಳಿವೆ.+ ಇವು ಕುಷ್ಠದ ವಿಷ್ಯದಲ್ಲಿ ಇರೋ ನಿಯಮಗಳು.”+
ಪಾದಟಿಪ್ಪಣಿ
^ ಅಂದ್ರೆ, ಏಫಾ ಅಳತೆಯ ಹತ್ತನೇ ಮೂರು ಭಾಗ. 6.6 ಲೀ. ಪರಿಶಿಷ್ಟ ಬಿ14 ನೋಡಿ.
^ ಅಕ್ಷ. “ಒಂದು ಲೋಗ್.” ಅಂದ್ರೆ 310 ಮಿಲಿ ಲೀಟರ್. ಪರಿಶಿಷ್ಟ ಬಿ14 ನೋಡಿ.
^ ಅಥವಾ “ಕಿವಿಯ ಹಾಲೆಗೆ.”
^ ಅಂದ್ರೆ, 2.2 ಲೀ. ಪರಿಶಿಷ್ಟ ಬಿ14 ನೋಡಿ.