ಯಾಜಕಕಾಂಡ 7:1-38
7 ದೋಷಪರಿಹಾರಕ ಬಲಿ ಅರ್ಪಿಸುವಾಗ ಪಾಲಿಸಬೇಕಾದ ನಿಯಮಗಳು:+ ಆ ಬಲಿ ಅತಿ ಪವಿತ್ರ.
2 ಸರ್ವಾಂಗಹೋಮ ಬಲಿಯ ಪ್ರಾಣಿಯನ್ನ ಕಡಿಯೋ ಸ್ಥಳದಲ್ಲೇ ದೋಷಪರಿಹಾರಕ ಬಲಿಯ ಪ್ರಾಣಿಯನ್ನೂ ಕಡಿಬೇಕು. ಅದ್ರ ರಕ್ತವನ್ನ+ ಯಜ್ಞವೇದಿಯ ಎಲ್ಲ ಬದಿಗಳಿಗೆ ಚಿಮಿಕಿಸಬೇಕು.+
3 ಪುರೋಹಿತ ಆ ಪ್ರಾಣಿಯ ಎಲ್ಲ ಕೊಬ್ಬು ತೆಗಿಬೇಕು.+ ಕೊಬ್ಬಿರೋ ಬಾಲ, ಕರುಳುಗಳ ಸುತ್ತಲಿರೋ ಕೊಬ್ಬು,
4 ಎರಡು ಮೂತ್ರಪಿಂಡಗಳು, ಅವುಗಳ ಕೊಬ್ಬು ಅಂದ್ರೆ ಸೊಂಟದ ಹತ್ರ ಇರೋ ಕೊಬ್ಬನ್ನ ತೆಗಿಬೇಕು. ಮೂತ್ರಪಿಂಡಗಳ ಜೊತೆ ಪಿತ್ತಜನಕಾಂಗದ ಮೇಲಿರೋ ಕೊಬ್ಬನ್ನೂ ತೆಗಿಬೇಕು.+
5 ಪುರೋಹಿತ ಅದನ್ನ ಯಜ್ಞವೇದಿ ಮೇಲಿನ ಬೆಂಕಿಯಲ್ಲಿ ಯೆಹೋವನಿಗೆ ಅರ್ಪಿಸಬೇಕು. ಅದ್ರ ಹೊಗೆ ಮೇಲೆ ಹೋಗಬೇಕು.+ ಅದು ದೋಷಪರಿಹಾರಕ ಬಲಿ.
6 ಪುರೋಹಿತರಾಗಿ ಸೇವೆ ಮಾಡೋರು ಮಾತ್ರ ಆ ಪ್ರಾಣಿಯ ಮಾಂಸ ತಿನ್ನಬೇಕು.+ ಅದನ್ನ ಪವಿತ್ರವಾದ ಒಂದು ಜಾಗದಲ್ಲಿ* ತಿನ್ನಬೇಕು. ಅದು ಅತಿ ಪವಿತ್ರ.+
7 ಪಾಪಪರಿಹಾರಕ ಬಲಿಯನ್ನ ಅರ್ಪಿಸುವಾಗ ಪಾಲಿಸೋ ನಿಯಮಗಳನ್ನೇ ದೋಷಪರಿಹಾರಕ ಬಲಿ ಅರ್ಪಿಸುವಾಗ್ಲೂ ಪಾಲಿಸಬೇಕು. ಪ್ರಾಯಶ್ಚಿತ್ತ ಮಾಡೋಕೆ ಬಲಿಯನ್ನ ಅರ್ಪಿಸೋ ಪುರೋಹಿತನಿಗೇ ಆ ಬಲಿಯ ಮಾಂಸ ಸಿಗಬೇಕು.+
8 ಯಾರಾದ್ರೂ ಸರ್ವಾಂಗಹೋಮ ಬಲಿಗಾಗಿ ಪ್ರಾಣಿ ತಂದ್ರೆ ಅದ್ರ ಚರ್ಮ+ ಆ ಪ್ರಾಣಿಯನ್ನ ಅರ್ಪಿಸೋ ಪುರೋಹಿತನಿಗೆ ಸಿಗಬೇಕು.
9 ಯಾರಾದ್ರೂ ಒಲೆ, ಬಾಂಡ್ಲಿ ಅಥವಾ ಹೆಂಚಿನಲ್ಲಿ ಸುಟ್ಟಿರೋದನ್ನ ಧಾನ್ಯ ಅರ್ಪಣೆಯಾಗಿ+ ಕೊಟ್ರೆ ಅದ್ರಲ್ಲಿ ಉಳಿಯೋದೆಲ್ಲ ಆ ಅರ್ಪಣೆ ಮಾಡೋ ಪುರೋಹಿತನಿಗೆ ಸಿಗಬೇಕು.+
10 ಆದ್ರೆ ಎಣ್ಣೆ ಬೆರೆಸಿದ+ ಅಥವಾ ಎಣ್ಣೆ ಬೆರೆಸಿರದ+ ಹಿಟ್ಟನ್ನ ಯಾರಾದ್ರೂ ಧಾನ್ಯ ಅರ್ಪಣೆಯಾಗಿ ಕೊಟ್ರೆ ಅದ್ರಲ್ಲಿ ಉಳಿಯೋದೆಲ್ಲ ಆರೋನನ ಎಲ್ಲ ಮಕ್ಕಳು ಸರಿಸಮಾನವಾಗಿ ಹಂಚ್ಕೊಳ್ಳಬೇಕು.
11 ಯೆಹೋವನಿಗೆ ಸಮಾಧಾನ ಬಲಿ ಅರ್ಪಿಸುವಾಗ ಪಾಲಿಸಬೇಕಾದ ನಿಯಮಗಳು:+
12 ಒಬ್ಬ ಕೃತಜ್ಞತೆ ತೋರಿಸೋಕೆ ಸಮಾಧಾನ ಬಲಿಯನ್ನ ಅರ್ಪಿಸೋದಾದ್ರೆ+ ಅವನು ಆ ಕೃತಜ್ಞತಾ ಬಲಿಯ ಪ್ರಾಣಿಯನ್ನ ಹಾಗೂ ಎಣ್ಣೆ ಬೆರೆಸಿ ಮಾಡಿದ ಬಳೆಯಾಕಾರದ ಹುಳಿಯಿಲ್ಲದ ರೊಟ್ಟಿಗಳನ್ನ, ಎಣ್ಣೆ ಸವರಿದ ಹುಳಿಯಿಲ್ಲದ ತೆಳುವಾದ ರೊಟ್ಟಿಗಳನ್ನ, ಎಣ್ಣೆ ಬೆರೆಸಿ ಚೆನ್ನಾಗಿ ನಾದಿದ ನುಣ್ಣಗಿನ ಹಿಟ್ಟಿಂದ ಮಾಡಿದ ಬಳೆಯಾಕಾರದ ರೊಟ್ಟಿಗಳನ್ನ ಕೊಡಬೇಕು.
13 ಅಲ್ಲದೇ ಕೃತಜ್ಞತೆ ತೋರಿಸೋಕೆ ಕೊಟ್ಟ ಸಮಾಧಾನ ಬಲಿ ಜೊತೆ ಹುಳಿ ಬೆರೆಸಿದ ಬಳೆಯಾಕಾರದ ರೊಟ್ಟಿಗಳನ್ನೂ ಕೊಡಬೇಕು.
14 ಅವನು ಪ್ರತಿಯೊಂದು ವಿಧದ ರೊಟ್ಟಿಗಳಲ್ಲಿ ಒಂದೊಂದನ್ನ ತೆಗೆದು ಅರ್ಪಿಸೋಕೆ ಕೊಡಬೇಕು. ಅದು ಯೆಹೋವನಿಗೆ ಕೊಡೋ ಪವಿತ್ರ ಪಾಲು. ಅದು ಸಮಾಧಾನ ಬಲಿಗಳ ರಕ್ತ ಚಿಮಿಕಿಸೋ ಪುರೋಹಿತನಿಗೆ ಸಿಗಬೇಕು.+
15 ಕೃತಜ್ಞತೆ ತೋರಿಸೋಕೆ ಕೊಟ್ಟ ಸಮಾಧಾನ ಬಲಿಯ ಪ್ರಾಣಿನ ಅರ್ಪಿಸಿದ ದಿನಾನೇ ಅದ್ರ ಮಾಂಸ ತಿನ್ನಬೇಕು. ಅದ್ರಲ್ಲಿ ಏನನ್ನೂ ಮಾರನೇ ದಿನ ಬೆಳಿಗ್ಗೆ ತನಕ ಉಳಿಸಬಾರದು.+
16 ಒಬ್ಬ ಸಮಾಧಾನ ಬಲಿನ ಹರಕೆಯಾಗಿ+ ಅಥವಾ ಸ್ವಇಷ್ಟದಿಂದ ಕೊಟ್ರೆ+ ಅದನ್ನ ಕೊಡೋ ದಿನಾನೇ ಅದ್ರ ಮಾಂಸ ತಿನ್ನಬೇಕು. ಉಳಿದದ್ದನ್ನ ಮಾರನೇ ದಿನಾನೂ ತಿನ್ನಬಹುದು.
17 ಆದ್ರೆ ಆ ಬಲಿಯ ಮಾಂಸ ಮೂರನೇ ದಿನದ ತನಕ ಉಳಿದ್ರೆ ಬೆಂಕಿಯಿಂದ ಸುಟ್ಟು ಹಾಕಬೇಕು.+
18 ಆ ಬಲಿಯ ಮಾಂಸವನ್ನ ಮೂರನೇ ದಿನ ತಿಂದ್ರೆ ಅದು ಅಸಹ್ಯ. ಆ ಬಲಿ ಅರ್ಪಿಸಿದವನನ್ನ ದೇವರು ಮೆಚ್ಚಲ್ಲ. ಆಶೀರ್ವಾದ ಮಾಡಲ್ಲ. ಆ ಮಾಂಸ ತಿಂದವನಿಗೆ ಶಿಕ್ಷೆಯಾಗಬೇಕು.+
19 ಅಶುದ್ಧವಾದ ಯಾವುದಕ್ಕಾದ್ರೂ ಆ ಮಾಂಸ ತಗಲಿದ್ರೆ ಅದನ್ನ ತಿನ್ನಬಾರದು, ಬೆಂಕಿಯಲ್ಲಿ ಸುಟ್ಟು ಹಾಕಬೇಕು. ಶುದ್ಧ ಮಾಂಸವನ್ನ ಶುದ್ಧನಾಗಿರೋನು ತಿನ್ನಬಹುದು.
20 ಯೆಹೋವನಿಗಾಗಿ ಅರ್ಪಿಸಿದ ಸಮಾಧಾನ ಬಲಿಯ ಮಾಂಸವನ್ನ ಅಶುದ್ಧ ಆಗಿರೋ ವ್ಯಕ್ತಿ ತಿಂದ್ರೆ ಅವನನ್ನ ಸಾಯಿಸಬೇಕು.+
21 ಒಬ್ಬನು ಅಶುದ್ಧ ವ್ಯಕ್ತಿ,+ ಅಶುದ್ಧ ಪ್ರಾಣಿ,+ ಅಶುದ್ಧವಾದ ಹೊಲಸಾದ ವಸ್ತುವನ್ನ+ ಮುಟ್ಟಿ ಯೆಹೋವನಿಗೆ ಅರ್ಪಿಸಲಾದ ಸಮಾಧಾನ ಬಲಿಯ ಮಾಂಸ ತಿಂದ್ರೆ ಅವನನ್ನ ಸಾಯಿಸಬೇಕು.’”
22 ಯೆಹೋವ ಇನ್ನೂ ಮೋಶೆಗೆ ಹೇಳೋದು ಏನಂದ್ರೆ
23 “ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು: ‘ಹೋರಿ, ಎಳೇ ಟಗರು ಅಥವಾ ಆಡಿನ ಕೊಬ್ಬನ್ನ ನೀವು ತಿನ್ನಲೇಬಾರದು.+
24 ಸತ್ತು ಬಿದ್ದ ಪ್ರಾಣಿಯ ಅಥವಾ ಬೇರೆ ಪ್ರಾಣಿ ಕೊಂದು ಹಾಕಿದ ಪ್ರಾಣಿಯ ಕೊಬ್ಬನ್ನ ಬೇರೆ ಕೆಲಸಕ್ಕೆ ಬಳಸಬಹುದು. ಆದ್ರೆ ನೀವು ಅದನ್ನ ಯಾವತ್ತೂ ತಿನ್ನಬಾರದು.+
25 ಬೆಂಕಿಯಲ್ಲಿ ಯೆಹೋವನಿಗೆ ಅರ್ಪಿಸೋಕೆ ತಂದ ಪ್ರಾಣಿಯ ಕೊಬ್ಬನ್ನ ಯಾರಾದ್ರೂ ತಿಂದ್ರೆ ಅವನನ್ನ ಸಾಯಿಸಬೇಕು.
26 ಪಕ್ಷಿ, ಪ್ರಾಣಿ ಅಥವಾ ಬೇರೆ ಯಾವುದ್ರ ರಕ್ತವನ್ನೂ ನೀವು ತಿನ್ನಬಾರದು.+ ನೀವು ಎಲ್ಲೇ ವಾಸಿಸಿದ್ರೂ ಈ ನಿಯಮ ಪಾಲಿಸಬೇಕು.
27 ಒಬ್ಬ ಯಾವುದೇ ಜೀವಿಯ ರಕ್ತ ತಿಂದ್ರೆ ಅವನನ್ನ ಸಾಯಿಸಬೇಕು.’”+
28 ಯೆಹೋವ ಮೋಶೆಗೆ ಮುಂದುವರಿಸಿ ಹೇಳಿದ್ದೇನಂದ್ರೆ
29 “ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು: ‘ಯೆಹೋವನಿಗೆ ಸಮಾಧಾನ ಬಲಿ ಅರ್ಪಿಸೋ ವ್ಯಕ್ತಿ ಆ ಬಲಿಯ ಕೆಲವು ಭಾಗಗಳನ್ನ ಯೆಹೋವನಿಗೆ ಕೊಡಬೇಕು.+
30 ಅವನು ಬಲಿಯಾಗಿ ಕೊಡೋ ಪ್ರಾಣಿಯ ಕೊಬ್ಬನ್ನ, ಎದೆ ಭಾಗವನ್ನ ಬೆಂಕಿಯಲ್ಲಿ ಯೆಹೋವನಿಗೆ ಅರ್ಪಿಸೋಕೆ ತನ್ನ ಕೈಗಳಲ್ಲಿ ತಗೊಂಡು ಬರಬೇಕು.+ ಅವನು ಅವುಗಳನ್ನ ಯೆಹೋವನ ಎದುರು ಹಿಂದೆ ಮುಂದೆ ಆಡಿಸಬೇಕು. ಇದು ಓಲಾಡಿಸೋ ಅರ್ಪಣೆ.+
31 ಪುರೋಹಿತ ಆ ಕೊಬ್ಬನ್ನ ಯಜ್ಞವೇದಿ ಮೇಲೆ ಸುಡಬೇಕು ಮತ್ತು ಅದ್ರ ಹೊಗೆ ಮೇಲೆ ಹೋಗಬೇಕು.+ ಎದೆ ಭಾಗ ಆರೋನನಿಗೆ, ಅವನ ಮಕ್ಕಳಿಗೆ ಸೇರಬೇಕು.+
32 ನೀವು ಅರ್ಪಿಸೋ ಸಮಾಧಾನ ಬಲಿಯ ಪ್ರಾಣಿಯ ಬಲಗಾಲನ್ನ ಪುರೋಹಿತನಿಗೆ ಕೊಡಬೇಕು. ಅದು ಪವಿತ್ರ ಪಾಲು.+
33 ಆರೋನನ ಮಕ್ಕಳಲ್ಲಿ ಆ ಸಮಾಧಾನ ಬಲಿಯ ಪ್ರಾಣಿಯ ರಕ್ತ ಮತ್ತು ಕೊಬ್ಬನ್ನ ಅರ್ಪಿಸೋನು ಅದ್ರ ಬಲಗಾಲನ್ನ ತಗೊಳ್ಳಬೇಕು. ಅದು ಅವನ ಪಾಲು.+
34 ಸಮಾಧಾನ ಬಲಿಯಲ್ಲಿ ಇಸ್ರಾಯೇಲ್ಯರು ಆಡಿಸಿ ಕೊಡೋ ಎದೆಭಾಗ ಮತ್ತು ಪವಿತ್ರ ಪಾಲಿನಲ್ಲಿರೋ ಕಾಲನ್ನ ನಾನು ತಗೊಂಡು ಪುರೋಹಿತ ಆರೋನನಿಗೂ ಅವನ ಮಕ್ಕಳಿಗೂ ಕೊಡ್ತೀನಿ. ಇದು ಇಸ್ರಾಯೇಲ್ಯರಿಗೆ ಶಾಶ್ವತ ನಿಯಮ.+
35 ಬೆಂಕಿಯ ಮೂಲಕ ಯೆಹೋವನಿಗೆ ಮಾಡೋ ಅರ್ಪಣೆಗಳಲ್ಲಿ ಆ ಭಾಗಗಳನ್ನೇ ಪುರೋಹಿತರಿಗಾಗಿ ಅಂದ್ರೆ ಆರೋನ ಮತ್ತು ಅವನ ಮಕ್ಕಳಿಗಾಗಿ ಪ್ರತ್ಯೇಕವಾಗಿ ಇಡಬೇಕು. ಅವರನ್ನ ಪುರೋಹಿತರಾಗಿ ಯೆಹೋವನ ಸೇವೆ ಮಾಡೋಕೆ ಮೋಶೆ ಅಭಿಷೇಕಿಸಿದ ದಿನ ಈ ಆಜ್ಞೆಯನ್ನ ಕೊಡಲಾಯ್ತು.+
36 ಆ ಭಾಗಗಳನ್ನ ಇಸ್ರಾಯೇಲ್ಯರು ಪುರೋಹಿತರಿಗೆ ಕೊಡಬೇಕು ಅಂತ ಪುರೋಹಿತರನ್ನ ಅಭಿಷೇಕಿಸಿದ ದಿನ+ ಯೆಹೋವ ಆಜ್ಞೆಕೊಟ್ಟನು. ಇದು ಎಲ್ಲ ಪೀಳಿಗೆಯವರು ಪಾಲಿಸಬೇಕಾದ ಶಾಶ್ವತ ನಿಯಮ.’”
37 ಸರ್ವಾಂಗಹೋಮ ಬಲಿ,+ ಧಾನ್ಯ ಅರ್ಪಣೆ,+ ಪಾಪಪರಿಹಾರಕ ಬಲಿ,+ ದೋಷಪರಿಹಾರಕ ಬಲಿ,+ ಪುರೋಹಿತರನ್ನ ನೇಮಿಸುವಾಗ ಕೊಡೋ ಬಲಿ,+ ಸಮಾಧಾನ ಬಲಿ+ ಅರ್ಪಿಸುವಾಗ ಪಾಲಿಸಬೇಕಾದ ನಿಯಮಗಳು ಇವೇ.
38 ಯೆಹೋವ ಈ ಎಲ್ಲ ಆಜ್ಞೆಗಳನ್ನ ಮೋಶೆಗೆ ಸಿನಾಯಿ ಬೆಟ್ಟದ ಮೇಲೆ ಕೊಟ್ಟನು.+ ಸಿನಾಯಿ ಕಾಡಲ್ಲಿ* ಯೆಹೋವನಿಗೆ ಬಲಿಗಳನ್ನ ಅರ್ಪಿಸಬೇಕು ಅಂತ ಆಜ್ಞೆ ಕೊಟ್ಟ ದಿನಾನೇ ಈ ನಿಯಮಗಳನ್ನೂ ಕೊಟ್ಟನು.+