ಯೆರೆಮೀಯ 18:1-23

  • ಕುಂಬಾರನ ಕೈಯಲ್ಲಿರೋ ಮಣ್ಣು (1-12)

  • ಯೆಹೋವ ಇಸ್ರಾಯೇಲ್ಯರಿಗೆ ಬೆನ್ನು ಮಾಡ್ತಾನೆ (13-17)

  • ಯೆರೆಮೀಯನ ವಿರುದ್ಧ ಸಂಚು, ಅವನ ಬಿನ್ನಹ (18-23)

18  ಯೆಹೋವ ಯೆರೆಮೀಯನಿಗೆ  “ನೀನೀಗ ಕುಂಬಾರನ ಮನೆಗೆ ಹೋಗು.+ ಅಲ್ಲಿ ನಿನ್ನ ಜೊತೆ ಮಾತಾಡ್ತೀನಿ” ಅಂದನು.  ಆಗ ನಾನು ಕುಂಬಾರನ ಮನೆಗೆ ಹೋದೆ. ಅವನು ಚಕ್ರಗಳ ಮೇಲೆ ಮಣ್ಣಿಂದ ಮಡಿಕೆ ಮಾಡ್ತಿದ್ದ.  ಆದ್ರೆ ಅವನು ತನ್ನ ಕೈಯಿಂದ ಮಾಡ್ತಿದ್ದ ಮಡಿಕೆ ಹಾಳಾಯ್ತು. ಮತ್ತೆ ಅದೇ ಮಣ್ಣಿಂದ ತನಗೆ ಇಷ್ಟಬಂದ ಇನ್ನೊಂದು ಪಾತ್ರೆ ಮಾಡಿದ.  ಆಗ ಯೆಹೋವ ನನಗೆ ಈ ಮಾತನ್ನ ಹೇಳಿದನು  “ಯೆಹೋವ ಹೇಳೋದು ಏನಂದ್ರೆ ‘ಇಸ್ರಾಯೇಲ್‌ ಜನ್ರೇ, ಈ ಕುಂಬಾರ ಮಾಡಿದ ಹಾಗೆ ನಿಮಗೆ ಮಾಡೋಕೆ ನನ್ನಿಂದಾಗಲ್ವಾ? ಇಸ್ರಾಯೇಲ್‌ ಜನ್ರೇ, ಕುಂಬಾರನ ಕೈಯಲ್ಲಿ ಮಣ್ಣು ಇರೋ ಹಾಗೆ ನೀವು ನನ್ನ ಕೈಯಲ್ಲಿದ್ದೀರ.+  ನಾನು ಒಂದು ದೇಶವನ್ನ ಅಥವಾ ಒಂದು ಸಾಮ್ರಾಜ್ಯವನ್ನ ಕಿತ್ತು, ಕೆಡವಿ, ನಾಶಮಾಡ್ತೀನಿ ಅಂತ ಹೇಳಿದಾಗ+  ಆ ದೇಶದವರು ಮಾಡ್ತಿದ್ದ ಕೆಟ್ಟದನ್ನ ಬಿಟ್ಟುಬಿಟ್ರೆ, ನಾನು ಸಹ ನನ್ನ ಮನಸ್ಸನ್ನ ಬದಲಾಯಿಸಿ ಅವ್ರ ಮೇಲೆ ತರ್ತಿನಿ ಅಂತ ಹೇಳಿದ ಕಷ್ಟ ತರಲ್ಲ.+  ಆದ್ರೆ ನಾನು ಒಂದು ದೇಶವನ್ನ ಅಥವಾ ಒಂದು ಸಾಮ್ರಾಜ್ಯವನ್ನ ಕಟ್ಟಿ ಉಳಿಸ್ತೀನಿ ಅಂತ ಹೇಳಿದಾಗ 10  ಆ ದೇಶದವರು ನನ್ನ ದೃಷ್ಟಿಯಲ್ಲಿ ಕೆಟ್ಟದನ್ನ ಮಾಡಿದ್ರೆ, ನನ್ನ ಮಾತನ್ನ ಕೇಳದಿದ್ರೆ ನಾನು ನನ್ನ ಮನಸ್ಸನ್ನ ಬದಲಾಯಿಸ್ಕೊಂಡು ಅವ್ರಿಗೆ ಮಾಡ್ತೀನಿ ಅಂತ ಹೇಳಿದ ಒಳ್ಳೇದನ್ನ ಮಾಡಲ್ಲ.’ 11  ಈಗ ನೀನು ಯೆಹೂದದ ಜನ್ರಿಗೆ, ಯೆರೂಸಲೇಮಿನ ಜನ್ರಿಗೆ ದಯವಿಟ್ಟು ಹೀಗೆ ಹೇಳು ‘ಯೆಹೋವ ಹೇಳೋದು ಏನಂದ್ರೆ “ನಾನು ನಿಮ್ಮ ಮೇಲೆ ಒಂದು ಕಷ್ಟ ತರೋಕೆ ತಯಾರಿ ಮಾಡ್ತಾ ಇದ್ದೀನಿ, ನಿಮಗೆ ಹೇಗೆ ಶಿಕ್ಷೆ ಕೊಡಬೇಕಂತ ಯೋಚಿಸ್ತಾ ಇದ್ದೀನಿ. ಹಾಗಾಗಿ ದಯವಿಟ್ಟು ನೀವು ಕೆಟ್ಟ ದಾರಿ ಬಿಟ್ಟುಬಿಡಿ. ನಿಮ್ಮ ನಡತೆ ಸರಿಪಡಿಸ್ಕೊಳ್ಳಿ, ರೀತಿರಿವಾಜುಗಳನ್ನ ಬದಲಾಯಿಸ್ಕೊಳ್ಳಿ.”’”+ 12  ಆದ್ರೆ ಅವರು “ಅದಂತೂ ಸಾಧ್ಯ ಇಲ್ಲ.+ ನಮ್ಮ ಮನಸ್ಸಿಗೆ ಬಂದಿದ್ದನ್ನೇ ಮಾಡ್ತೀವಿ. ನಾವೆಲ್ಲ ಹಠಮಾರಿಗಳು, ನಮ್ಮ ಕೆಟ್ಟ ಹೃದಯ ಹೇಳೋದನ್ನೇ ಮಾಡ್ತೀವಿ” ಅಂದ್ರು.+ 13  ಹಾಗಾಗಿ ಯೆಹೋವ ಹೇಳೋದು ಏನಂದ್ರೆ“ದಯವಿಟ್ಟು ದೇಶಗಳ ಹತ್ರ ಹೀಗೆ ಕೇಳಿ: ಇಂಥ ವಿಷ್ಯವನ್ನ ಯಾವತ್ತಾದ್ರೂ ಕೇಳಿದ್ದೀರಾ? ಕನ್ಯೆಯಾದ ಇಸ್ರಾಯೇಲ ತುಂಬ ಭಯಂಕರ ವಿಷ್ಯ ಮಾಡಿದ್ದಾಳೆ.+ 14  ಲೆಬನೋನಿನ ಇಳಿಜಾರಲ್ಲಿರೋ ಬಂಡೆಗಳ ಮೇಲಿಂದ ಹಿಮ ಕಣ್ಮರೆ ಆಗುತ್ತಾ? ದೂರದಿಂದ ಹರಿದುಬರೋ ತಂಪು ನೀರು ಒಣಗಿ ಹೋಗುತ್ತಾ? 15  ಆದ್ರೆ ನನ್ನ ಜನ್ರು ನನ್ನನ್ನ ಮರೆತುಬಿಟ್ಟಿದ್ದಾರೆ.+ ಅವರು ಪ್ರಯೋಜನಕ್ಕೆ ಬಾರದ ದೇವರುಗಳಿಗೆ ಬಲಿಗಳನ್ನ ಅರ್ಪಿಸ್ತಿದ್ದಾರೆ,+ಅವರು ಜನ್ರನ್ನ ಎಡವಿ ಬೀಳೋ ತರ ಮಾಡಿ,ಹಳೇ ದಾರಿಗಳನ್ನ ಬಿಟ್ಟುಬಿಡೋ ತರ ಮಾಡಿ ತಮ್ಮ ದಾರಿಗೆ ಎಳಿತಿದ್ದಾರೆ.+ ಉಬ್ಬುತಗ್ಗು ಇರೋ, ಸಮತಟ್ಟಾಗಿಲ್ಲದ* ಅಡ್ಡದಾರಿಗಳಲ್ಲಿ ಅವ್ರನ್ನ ಕರ್ಕೊಂಡು ಹೋಗ್ತಿದ್ದಾರೆ. 16  ಹೀಗೆ, ತಮ್ಮ ದೇಶದ ಪಾಡನ್ನ ನೋಡಿ ಎಲ್ಲ ಜನ್ರ ಎದೆ ಡವಡವ ಅಂತ ಹೊಡ್ಕೊಳ್ಳೋ ತರ,+ಸೀಟಿ ಹೊಡೆದು ಯಾವಾಗ್ಲೂ ಅವಮಾನಿಸೋ ತರ ಮಾಡಿದ್ದಾರೆ.+ ಅಲ್ಲಿಂದ ದಾಟಿ ಹೋಗೋರಿಗೆಲ್ಲ ಅದನ್ನ ನೋಡಿ ಭಯ ಆಗುತ್ತೆ, ತಲೆ ಆಡಿಸಿ ಗೇಲಿ ಮಾಡ್ತಾರೆ.+ 17  ಪೂರ್ವದ ಗಾಳಿ ಒಣಹುಲ್ಲನ್ನ ಚದರಿಸಿಬಿಡೋ ಹಾಗೆ ಅವ್ರನ್ನ ಶತ್ರುಗಳ ಮುಂದೆ ಚದರಿಸಿಬಿಡ್ತೀನಿ. ಅವ್ರಿಗೆ ಕಷ್ಟ ಬಂದಾಗ ನನ್ನ ಮುಖವನ್ನ ಅವ್ರ ಕಡೆ ತಿರುಗಿಸಲ್ಲ, ಅವ್ರಿಗೆ ಬೆನ್ನುಹಾಕ್ತೀನಿ.”+ 18  ಆದ್ರೆ ಅವರು “ಬನ್ನಿ, ನಾವು ಯೆರೆಮೀಯನ ವಿರುದ್ಧ ಸಂಚು ಮಾಡೋಣ.+ ಯಾಕಂದ್ರೆ ಯಾವಾಗ್ಲೂ ನಮ್ಮ ಪುರೋಹಿತರು ನಮಗೆ ಕಲಿಸ್ತಾ* ಇರ್ತಾರೆ, ನಮ್ಮ ಜ್ಞಾನಿಗಳು ನಮಗೆ ಸಲಹೆ ಕೊಡ್ತಾ ಇರ್ತಾರೆ, ನಮ್ಮ ಪ್ರವಾದಿಗಳು ದೇವರ ಮಾತುಗಳನ್ನ ತಿಳಿಸ್ತಾ ಇರ್ತಾರೆ. ಏನೂ ಬದಲಾಗಲ್ಲ, ಇದ್ದ ಹಾಗೇ ಇರುತ್ತೆ. ಹಾಗಾಗಿ ಬನ್ನಿ, ಅವನ ಮೇಲೆ ಆರೋಪ ಹಾಕೋಣ, ಅವನ ಮಾತನ್ನ ಕಿವಿಗೆ ಹಾಕೊಳ್ಳೋದು ಬೇಡ” ಅಂದ್ರು. 19  ಯೆಹೋವನೇ, ನನಗೆ ಗಮನಕೊಡು,ನನ್ನ ವಿರೋಧಿಗಳು ಹೇಳ್ತಿರೋ ಮಾತುಗಳನ್ನ ಕೇಳಿಸ್ಕೊ. 20  ಒಳ್ಳೇದಕ್ಕೆ ಕೆಟ್ಟದು ಮಾಡೋದು ಸರಿನಾ? ಅವ್ರ ಮೇಲೆ ನಿನಗಿದ್ದ ಕೋಪ ಹೋಗೋಕೆನಾನು ನಿನ್ನ ಮುಂದೆ ನಿಂತು ಅವ್ರ ಬಗ್ಗೆ ಎಷ್ಟೆಲ್ಲ ಒಳ್ಳೇದನ್ನ ಹೇಳ್ದೆ ಅಂತ ನೆನಪಿಸ್ಕೊ. ಆದ್ರೆ ಅವರು ನನ್ನ ಪ್ರಾಣ ತೆಗಿಯೋಕೆ ಗುಂಡಿ ತೋಡಿದ್ದಾರೆ.+ 21  ಹಾಗಾಗಿ ಅವ್ರ ಮಕ್ಕಳು ಬರಗಾಲದಿಂದ ಕಷ್ಟ ಪಡೋ ತರ ಮಾಡು,ಅವ್ರನ್ನ ಕತ್ತಿಯ ಬಾಯಿಗೆ ಒಪ್ಪಿಸು.+ ಅವ್ರ ಹೆಂಡತಿಯರು ವಿಧವೆಯರಾಗಲಿ, ಮಕ್ಕಳನ್ನ ಕಳ್ಕೊಳ್ಳಲಿ.+ ಅವ್ರ ಗಂಡಸರು ಕಾಯಿಲೆ ಬಂದು ಸತ್ತು ಹೋಗ್ಲಿ,ಅವ್ರ ಯುವಕರು ಯುದ್ಧದಲ್ಲಿ ಕತ್ತಿಯಿಂದ ಸಾಯಲಿ.+ 22  ಅವ್ರ ಮೇಲೆ ಅಚಾನಕ್ಕಾಗಿ ದಾಳಿ ಮಾಡೋಕೆ ಲೂಟಿ ಮಾಡೋರನ್ನ ಕಳಿಸು,ಆಗ ಅವ್ರ ಮನೆಮನೆಗಳಲ್ಲಿ ಕೂಗಾಟ ಕೇಳುತ್ತೆ. ಯಾಕಂದ್ರೆ ಅವರು ನನ್ನನ್ನ ಹಿಡಿಯೋಕೆ ಗುಂಡಿ ತೋಡಿದ್ದಾರೆನನ್ನನ್ನ ಬೀಳಿಸೋಕೆ ಬಲೆ ಇಟ್ಟಿದ್ದಾರೆ.+ 23  ಆದ್ರೆ ಯೆಹೋವನೇ,ಅವರು ನನ್ನನ್ನ ಕೊಲ್ಲಲಿಕ್ಕಾಗಿ ಮಾಡಿರೋ ಎಲ್ಲ ಸಂಚುಗಳ ಬಗ್ಗೆ ನಿನಗೆ ಚೆನ್ನಾಗಿ ಗೊತ್ತು.+ ಅವರ ತಪ್ಪುಗಳನ್ನ ಕ್ಷಮಿಸಬೇಡ,ನಿನ್ನ ಕಣ್ಮುಂದಿಂದ ಅವ್ರ ಪಾಪಗಳನ್ನ ಅಳಿಸಿಹಾಕಬೇಡ. ನೀನು ಕೋಪದಿಂದ ಅವ್ರ ವಿರುದ್ಧ ಕ್ರಮ ತಗೊಳ್ಳುವಾಗ+ಅವರು ನಿನ್ನ ಮುಂದೆ ಎಡವಿ ಬೀಳಲಿ.+

ಪಾದಟಿಪ್ಪಣಿ

ಅಥವಾ “ಕಟ್ಟಿರದ.”
ಅಥವಾ “ನಿಯಮ ಪುಸ್ತಕವನ್ನ ಕಲಿಸ್ತಾ.”