ಯೆಶಾಯ 41:1-29
41 “ದ್ವೀಪಗಳೇ, ಮೌನವಾಗಿದ್ದು* ನಾನು ಹೇಳೋದನ್ನ ಕೇಳಿಸ್ಕೊಳ್ಳಿ,ಜನಾಂಗಗಳು ತಮ್ಮ ಶಕ್ತಿನ ಮತ್ತೆ ಪಡ್ಕೊಳ್ಳಲಿ.
ನನ್ನ ಹತ್ರ ಬಂದು ಮಾತಾಡಲಿ.+
ತೀರ್ಪಿಗಾಗಿ ನಾವೆಲ್ಲ ಒಟ್ಟುಸೇರೋಣ ಬನ್ನಿ.
2 ಜನಾಂಗಗಳನ್ನ ಅವನ ಕೈಗೆ ಒಪ್ಪಿಸೋಕೆ,ರಾಜರನ್ನ ಅವನ ಅಧೀನದಲ್ಲಿ ತರೋಕೆ,+ಒಬ್ಬ ಜಯಶಾಲಿಯನ್ನ ಪೂರ್ವದಿಂದ* ಎಬ್ಬಿಸಿದವನು ಯಾರು?+
ನ್ಯಾಯವನ್ನ ತೀರಿಸೋಕೆ ತನ್ನ ಕಾಲ ಹತ್ರ* ಅವನನ್ನ ಕರೆದವನು ಯಾರು?
ಅವ್ರನ್ನ ಅವನ ಕತ್ತಿಯ ಮುಂದೆ ಧೂಳನ್ನಾಗಿ ಮಾಡಿದವನು ಯಾರು?
ಅವನ ಬಿಲ್ಲಿನ ಮುಂದೆ ಅವ್ರನ್ನ, ಗಾಳಿ ಬಡ್ಕೊಂಡು ಹೋಗೋ ಕೂಳೆ ತರ ಮಾಡಿದವನು ಯಾರು?
3 ಅವನು ಅವ್ರನ್ನ ಅಟ್ಟಿಸ್ಕೊಂಡು ಹೋಗ್ತಾನೆ, ಯಾವುದೇ ಅಡ್ಡಿಯಿಲ್ಲದೆ ಮುನ್ನುಗ್ತಾನೆ,ಇಂದಿನ ತನಕ ಯಾವ ದಾರಿಗಳಲ್ಲಿ ಅವನು ಹೆಜ್ಜೆ ಇಟ್ಟಿರಲಿಲ್ವೋ ಅವುಗಳನ್ನ ಹಾದುಹೋಗ್ತಾನೆ.
4 ಇದನ್ನೆಲ್ಲ ಮಾಡಿದವನು ಯಾರು? ನೆರವೇರಿಸಿದವನು ಯಾರು?
ಆರಂಭದಿಂದ ಸಂತತಿಗಳನ್ನ ಒಟ್ಟುಸೇರಿಸಿದವನು ಯಾರು?
ಯೆಹೋವನಾದ ನಾನೇ. ನಾನು ಮೊದಲಿಂದಲೂ ಇಲ್ಲಿದ್ದೆ,+ಕಡೇ ಸಂತತಿಯವರ ಜೊತೆನೂ ನಾನು ಹೀಗೇ ಇರ್ತಿನಿ.”+
5 ಇದನ್ನ ನೋಡಿ ದ್ವೀಪಗಳು ಭಯಪಟ್ವು.
ಭೂಮಿಯ ಕಟ್ಟಕಡೆಯಲ್ಲಿ ವಾಸ ಮಾಡ್ತಿರೋರು ನಡುಗೋಕೆ ಶುರು ಮಾಡಿದ್ರು.
ಅವ್ರೆಲ್ಲ ಒಟ್ಟುಸೇರಿ ಬಂದ್ರು.
6 ಪ್ರತಿಯೊಬ್ಬ ತನ್ನ ಜೊತೆಗಾರನಿಗೆ ಸಹಾಯ ಮಾಡ್ತಾನೆ.
ತನ್ನ ಸಹೋದರನಿಗೆ “ಧೈರ್ಯವಾಗಿರು” ಅಂತಾನೆ.
7 ಕರಕುಶಲಗಾರ ಲೋಹದ ಕೆಲಸಗಾರನಿಗೆ ಧೈರ್ಯ ಹೇಳ್ತಾನೆ,+ಸುತ್ತಿಗೆಯಿಂದ ಹೊಡೆದು ಲೋಹವನ್ನ ಸಮತಟ್ಟು ಮಾಡುವವನುಲೋಹವನ್ನ ಅಡಿಗಲ್ಲಿನ ಮೇಲಿಟ್ಟು ಅದಕ್ಕೆ ಆಕಾರ ಕೊಡೋಕೆ ಸುತ್ತಿಗೆಯಿಂದ ಹೊಡೆಯುವವನನ್ನ ಬಲಪಡಿಸ್ತಾನೆ.
“ಲೋಹ ಚೆನ್ನಾಗಿ ಬೆಸೆದ್ಕೊಂಡಿದೆ” ಅಂತ ಅವನು ಹೇಳ್ತಾನೆ.
ಆಮೇಲೆ ಮೂರ್ತಿ ಬೀಳದ ಹಾಗೆ ಅದಕ್ಕೆ ಮೊಳೆಗಳನ್ನ ಹೊಡಿತಾನೆ.
8 “ಆದ್ರೆ ಇಸ್ರಾಯೇಲೇ, ನೀನು ನನ್ನ ಸೇವಕ,+ಯಾಕೋಬನೇ, ನಿನ್ನನ್ನ ನಾನು ಆರಿಸ್ಕೊಂಡಿದ್ದೀನಿ,+ನೀನು ನನ್ನ ಸ್ನೇಹಿತ ಅಬ್ರಹಾಮನ ಸಂತತಿ.+
9 ಭೂಮಿಯ ಕಟ್ಟಕಡೆಯಿಂದ ನಾನು ನಿನ್ನನ್ನ ತಗೊಂಡು ಬಂದೆ,+ಭೂಮಿಯ ತುಂಬ ದೂರದ ಪ್ರದೇಶಗಳಿಂದ ನಾನು ನಿನ್ನನ್ನ ಕರೆದೆ.
ನಾನು ನಿನಗೆ ಹೀಗೆ ಹೇಳಿದೆ ‘ನೀನು ನನ್ನ ಸೇವಕ.+
ನಾನು ನಿನ್ನನ್ನ ಆರಿಸ್ಕೊಂಡಿದ್ದೀನಿ, ನಿನ್ನನ್ನ ತಿರಸ್ಕರಿಸಲಿಲ್ಲ.+
10 ಹೆದರಬೇಡ. ಯಾಕಂದ್ರೆ ನಾನು ನಿನ್ನ ಜೊತೆ ಇದ್ದೀನಿ.+
ಕಳವಳಪಡಬೇಡ. ಯಾಕಂದ್ರೆ ನಾನು ನಿನ್ನ ದೇವರು.+
ನಾನು ನಿನ್ನನ್ನ ಬಲಪಡಿಸ್ತೀನಿ. ಹೌದು, ನಾನು ನಿನಗೆ ಸಹಾಯ ಮಾಡ್ತೀನಿ,+ನಾನು ನಿನ್ನನ್ನ ನನ್ನ ಬಲಗೈಯಿಂದ* ಗಟ್ಟಿಯಾಗಿ ಹಿಡ್ಕೊಳ್ತೀನಿ.’
11 ನೋಡು! ಯಾರೆಲ್ಲ ನಿನ್ನ ವಿರುದ್ಧ ಕೋಪಗೊಂಡಿದ್ದಾರೋ ಅವರು ಅವಮಾನಕ್ಕೆ ಗುರಿಯಾಗ್ತಾರೆ, ನಾಚಿಕೆಗೆ ಒಳಗಾಗ್ತಾರೆ.+
ಯಾರೆಲ್ಲ ನಿನ್ನ ಜೊತೆ ಜಗಳ ಆಡ್ತಾರೋ ಅವರು ಹೇಳಹೆಸರಿಲ್ಲದ ಹಾಗೆ ನಾಶವಾಗಿ ಹೋಗ್ತಾರೆ.+
12 ನಿನ್ನ ವಿರುದ್ಧ ಹೋರಾಡಿದವರನ್ನ ನೀನು ಹುಡುಕಿದ್ರೂ ಅವರು ನಿನಗೆ ಸಿಗಲ್ಲ,ನಿನ್ನ ಜೊತೆ ಯುದ್ಧ ಮಾಡಿದವರು ಅಸ್ತಿತ್ವದಲ್ಲೇ ಇಲ್ಲದ ಹಾಗೆ ಅಳಿದುಹೋಗ್ತಾರೆ.+
13 ಯಾಕಂದ್ರೆ ನಾನು, ನಿನ್ನ ದೇವರಾದ ಯೆಹೋವ, ನಿನ್ನ ಬಲಗೈಯನ್ನ ಹಿಡ್ಕೊಂಡಿದ್ದೀನಿ,‘ಹೆದರಬೇಡ, ನಾನು ನಿನಗೆ ಸಹಾಯ ಮಾಡ್ತೀನಿ’ ಅಂತ ನಾನೇ ನಿನಗೆ ಹೇಳ್ತಿದ್ದೀನಿ.+
14 ಯಾಕೋಬನೇ, ಕ್ರಿಮಿ ತರ ನೀನು ಬಲಹೀನ ಆಗಿದ್ರೂ ಭಯಪಡಬೇಡ.+
ಇಸ್ರಾಯೇಲ್ಯರೇ ನಾನು ನಿನಗೆ ಸಹಾಯಮಾಡ್ತೀನಿ” ಅಂತ ನಿಮ್ಮನ್ನ ಬಿಡಿಸಿದವನೂ+ ಇಸ್ರಾಯೇಲ್ಯರ ಪವಿತ್ರ ದೇವರೂ ಆದ ಯೆಹೋವ ಹೇಳ್ತಿದ್ದಾನೆ.
15 “ನೋಡು! ನಾನು ನಿನ್ನನ್ನ ಕಣದಲ್ಲಿ ಉಪಯೋಗಿಸೋ ಮರದ ಬಂಡಿ ತರ ಮಾಡಿದ್ದೀನಿ,+ಹೊಸದಾದ ಹಲ್ಲಿರೋ ಒಂದು ಒಕ್ಕುವ ಸಾಧನವನ್ನಾಗಿ ಮಾಡಿದ್ದೀನಿ.
ನೀನು ಪರ್ವತಗಳನ್ನ ತುಳಿದು ಅವುಗಳನ್ನ ಪುಡಿಪುಡಿ ಮಾಡ್ತೀಯ,ಬೆಟ್ಟಗಳನ್ನ ಹೊಟ್ಟಿನ ತರ ಮಾಡ್ತೀಯ.
16 ನೀನು ಅವರನ್ನ ತೂರಿಬಿಡ್ತೀಯ,ಗಾಳಿ ಅವ್ರನ್ನ ಹೊಡ್ಕೊಂಡು ಹೋಗುತ್ತೆ,ಬಿರುಗಾಳಿ ಅವ್ರನ್ನ ಚೆಲ್ಲಾಪಿಲ್ಲಿ ಮಾಡುತ್ತೆ.
ನೀನು ಯೆಹೋವನಿಂದಾಗಿ ಸಂತೋಷಿಸ್ತೀಯ,+ಇಸ್ರಾಯೇಲ್ಯರ ಪವಿತ್ರ ದೇವರ ಬಗ್ಗೆ ಹೆಮ್ಮೆಯಿಂದ ಮಾತಾಡ್ತೀಯ.”+
17 “ಕಷ್ಟದಲ್ಲಿರುವವರು ಮತ್ತು ಬಡವರು ನೀರಿಗಾಗಿ ಹುಡುಕ್ತಿದ್ದಾರೆ. ಆದ್ರೆ ಎಲ್ಲೂ ನೀರಿಲ್ಲ.
ಬಾಯಾರಿಕೆಯಿಂದ ಅವ್ರ ನಾಲಿಗೆ ಒಣಗಿಹೋಗಿದೆ.+
ಯೆಹೋವನಾದ ನಾನು ಅವ್ರಿಗೆ ಉತ್ರ ಕೊಡ್ತೀನಿ.+
ಇಸ್ರಾಯೇಲಿನ ದೇವರಾದ ನಾನು ಅವ್ರನ್ನ ತೊರೆದುಬಿಡಲ್ಲ.+
18 ನಾನು ಮರಗಳಿಲ್ಲದ ಬೆಟ್ಟಗಳಲ್ಲಿ ನದಿಗಳು ಹರಿಯೋ ತರ,+ಬಯಲು ಪ್ರದೇಶಗಳಲ್ಲಿ ಬುಗ್ಗೆಗಳು ಉಕ್ಕೋ ತರ ಮಾಡ್ತೀನಿ.+
ಕಾಡನ್ನ ಆಪುಹುಲ್ಲಿರೋ ಕೆರೆಗಳನ್ನಾಗಿ ಬದಲಾಯಿಸ್ತೀನಿ,ಬರಡು ಭೂಮಿಯನ್ನ ನೀರಿನ ಬುಗ್ಗೆಗಳನ್ನಾಗಿ ಮಾರ್ಪಡಿಸ್ತೀನಿ.+
19 ಮರುಭೂಮಿಯಲ್ಲಿ ನಾನು ದೇವದಾರು ಮರವನ್ನ,ಅಕೇಶಿಯ ಮರವನ್ನ, ಮರ್ಟಲ್ ಮರವನ್ನ* ಮತ್ತು ಪೈನ್ ಮರವನ್ನ ನೆಡ್ತೀನಿ.+
ಬಯಲು ಪ್ರದೇಶದಲ್ಲಿ ಜುನಿಪರ್ ಮರವನ್ನ,ಜೊತೆಗೆ ಬೂದಿಮರ* ಮತ್ತು ಶಂಕುಮರ ಅನ್ನೋ ಮರಗಳನ್ನ ನೆಡ್ತೀನಿ.+
20 ಆಗ ಎಲ್ಲ ಜನ್ರು ಇದು ಯೆಹೋವನ ಕೈಯಿಂದಾನೇ ಆಯ್ತು ಅಂತ,ಇಸ್ರಾಯೇಲ್ಯರ ಪವಿತ್ರ ದೇವರು ಇದನ್ನ ಸೃಷ್ಟಿಮಾಡಿದ ಅಂತ ನೋಡಿ ತಿಳ್ಕೊಳ್ತಾರೆ.
ಗಮನಕೊಟ್ಟು ಅರ್ಥಮಾಡ್ಕೊಳ್ತಾರೆ.”+
21 “ನಿಮ್ಮ ಮೊಕದ್ದಮೆಯನ್ನ ಪ್ರಸ್ತುತಪಡಿಸಿ” ಅಂತ ಯೆಹೋವ ಹೇಳ್ತಿದ್ದಾನೆ.
“ನಿಮ್ಮ ವಾದವಿವಾದಗಳನ್ನ ಮಂಡಿಸಿ” ಅಂತ ಯಾಕೋಬನ ರಾಜ ಹೇಳ್ತಿದ್ದಾನೆ.
22 “ಆಧಾರಗಳನ್ನ ಕೊಡಿ, ಮುಂದೆ ಆಗಲಿರೋ ವಿಷ್ಯಗಳನ್ನ ನಮಗೆ ಹೇಳಿ.
ಹಿಂದೆ ನಡೆದ* ವಿಷ್ಯಗಳನ್ನೂ ನಮಗೆ ಹೇಳಿ,ಆಗ ನಾವು ಅವುಗಳ ಬಗ್ಗೆ ಆಲೋಚಿಸಿ* ಅವುಗಳ ಪರಿಣಾಮ ಏನಂತ ತಿಳ್ಕೊಳ್ತೀವಿ.
ಅಥವಾ ಮುಂದೆ ಆಗಲಿರೋ ವಿಷ್ಯಗಳ ಬಗ್ಗೆ ಹೇಳಿ.+
23 ನೀವು ದೇವರುಗಳು ಅಂತ ನಾವು ತಿಳ್ಕೊಳ್ಳೋ ಹಾಗೆಭವಿಷ್ಯದಲ್ಲಿ ಏನಾಗುತ್ತೆ ಅಂತ ನಮಗೆ ಹೇಳಿ.+
ಹೌದು, ಒಳ್ಳೇದೋ ಕೆಟ್ಟದೋ ಏನಾದ್ರೊಂದು ಮಾಡಿ.
ಆಗ ನಾವು ಅದನ್ನ ನೋಡಿ ಆಶ್ಚರ್ಯಪಡ್ತೀವಿ.+
24 ನೋಡಿ! ನೀವು ಪ್ರಯೋಜನಕ್ಕೆ ಬಾರದವರು,ನೀವು ಸಾಧಿಸಿದ್ದು ಶೂನ್ಯ.+
ನಿಮ್ಮನ್ನ ಆರಾಧಿಸೋಕೆ ಆಯ್ಕೆ ಮಾಡುವವರು ಮೂರ್ಖರು.+
25 ನಾನು ಉತ್ತರದಿಂದ ಒಬ್ಬನನ್ನ ಎಬ್ಬಿಸಿದೆ, ಅವನು ಬರ್ತಾನೆ,+ಪೂರ್ವದಿಂದ*+ ಬರೋ ವ್ಯಕ್ತಿ ನನ್ನ ಹೆಸ್ರನ್ನ ಮಹಿಮೆಪಡಿಸ್ತಾನೆ.
ಅವನು ಜೇಡಿಮಣ್ಣನ್ನ ತುಳಿಯೋ ಹಾಗೆ ಅಧಿಪತಿಗಳನ್ನ* ತುಳಿದುಹಾಕ್ತಾನೆ,+ಕುಂಬಾರ ಜೇಡಿಮಣ್ಣನ್ನ ತುಳಿಯೋ ತರ ಅವನು ಅವ್ರನ್ನ ತುಳಿತಾನೆ.
26 ನಾವು ತಿಳ್ಕೊಳ್ಳೋ ಹಾಗೆ, ಆರಂಭದಿಂದ ಇದ್ರ ಬಗ್ಗೆ ಹೇಳಿದವರು ಯಾರು?
‘ಆತನು ಹೇಳಿದ್ದು ಸರಿ’ ಅಂತ ನಾವು ಹೇಳೋ ಹಾಗೆ ಪ್ರಾಚೀನ ಕಾಲದಲ್ಲೇ ಅದನ್ನ ಹೇಳಿದವರು ಯಾರು?+
ನಿಜಕ್ಕೂ, ಯಾರೂ ಅದರ ಬಗ್ಗೆ ಸಾರಲಿಲ್ಲ!
ಯಾರೂ ಅದ್ರ ಬಗ್ಗೆ ಹೇಳಲಿಲ್ಲ!
ನಿಮ್ಮಿಂದ ಯಾರೂ ಏನೂ ಕೇಳಿಸ್ಕೊಳ್ಳಲಿಲ್ಲ!”+
27 “ಏನೆಲ್ಲ ಆಗುತ್ತೆ ನೋಡು!” ಅಂತ ಚೀಯೋನಿಗೆ ಮೊಟ್ಟಮೊದಲು ಹೇಳಿದವನು ನಾನೇ.+
ಅಷ್ಟೇ ಅಲ್ಲ ಈ ಸಿಹಿಸುದ್ದಿಯನ್ನ ಯೆರೂಸಲೇಮಿಗೆ ಹೇಳೋಕೆ ಒಬ್ಬನನ್ನ ಕಳಿಸ್ತೀನಿ.+
28 ನಾನು ನೋಡ್ತಾ ಇದ್ದೆ, ಆದ್ರೆ ಅಲ್ಲಿ ಯಾರೂ ಇರಲಿಲ್ಲ,ಸಲಹೆಯನ್ನ ಕೊಡೋಕೆ ಅವ್ರಲ್ಲಿ ಒಬ್ಬನೂ ಇರಲಿಲ್ಲ.
ಉತ್ರ ಕೊಡು ಅಂತ ನಾನು ಅವ್ರನ್ನ ಕೇಳ್ತಾ ಇದ್ದೆ.
29 ನೋಡು! ಅವ್ರೆಲ್ಲ ಒಂದು ಭ್ರಮೆ ತರ ಇದ್ದಾರೆ.*
ಅವ್ರ ಕೆಲಸಗಳೆಲ್ಲ ಪೊಳ್ಳು.
ಅವರು ಅಚ್ಚಲ್ಲಿ ಹೊಯ್ದು ಮಾಡಿದ ಲೋಹದ ಮೂರ್ತಿಗಳು ಗಾಳಿ ತರ ಇವೆ, ವ್ಯರ್ಥವಾಗಿವೆ.+
ಪಾದಟಿಪ್ಪಣಿ
^ ಅಥವಾ “ನನ್ನ ಮುಂದೆ ಸುಮ್ಮನಿದ್ದು.”
^ ಅಥವಾ “ಸೂರ್ಯೋದಯದಿಂದ.”
^ ಅದು, ತನ್ನ ಸೇವೆಗಾಗಿ.
^ ಅಥವಾ “ನೀತಿಯನ್ನ ನಡೆಸುವ ನನ್ನ ಬಲಗೈಯಿಂದ.”
^ ಇದು, ಹೊಳಪಿನ ಎಲೆಗಳು ಮತ್ತು ಸುವಾಸನೆಯುಳ್ಳ ಬಿಳಿ ಹೂವುಗಳನ್ನ ಬಿಡುವ ಪೊದೆ.
^ ಇದು, 15 ಮೀಟರಿನಷ್ಟು ಎತ್ತರಕ್ಕೆ ಬೆಳೆಯುವ ಮರವಾಗಿದೆ. ಅದರ ಎಲೆಗಳು ತಿಳಿಹಸಿರು ಬಣ್ಣದ್ದಾಗಿದ್ದು, ಅದರ ಸಣ್ಣಸಣ್ಣ ರೆಂಬೆಗಳು ಬೂದಿ ಬಣ್ಣದ್ದಾಗಿರುತ್ತವೆ.
^ ಅಕ್ಷ. “ಮೊದಲ.”
^ ಅಥವಾ “ಹೃದಯಕ್ಕೆ ತೆಗೆದುಕೊಂಡು.”
^ ಅಕ್ಷ. “ಸೂರ್ಯೋದಯದಿಂದ.”
^ ಅಥವಾ “ಉಪಾಧಿಪತಿಗಳನ್ನ.”
^ ಅಥವಾ “ಅಸ್ತಿತ್ವದಲ್ಲಿ ಇಲ್ಲದಂತಿದ್ದಾರೆ.”