ಯೆಹೋಶುವ 8:1-35

  • ಆಯಿ ಪಟ್ಟಣದ ವಿರುದ್ಧ ಹೊಂಚು ಹಾಕಲು ಯೆಹೋಶುವನ ಏರ್ಪಾಡು (1-13)

  • ಆಯಿ ಪಟ್ಟಣದ ಯಶಸ್ವಿಕರ ವಶ (14-29)

  • ಏಬಾಲ್‌ ಬೆಟ್ಟದಲ್ಲಿ ನಿಯಮ ಪುಸ್ತಕ ಓದಲಾಯ್ತು (30-35)

8  ಆಮೇಲೆ ಯೆಹೋವ ಯೆಹೋಶುವಗೆ “ಭಯಪಡಬೇಡ, ಹೆದರಬೇಡ.+ ವೀರ ಸೈನಿಕರನ್ನೆಲ್ಲ ನಿನ್ನ ಜೊತೆ ಕರ್ಕೊಂಡು ಆಯಿ ಪಟ್ಟಣಕ್ಕೆ ಹೋಗು. ಅದ್ರ ರಾಜನನ್ನ ಅವನ ಜನ್ರನ್ನ ಪಟ್ಟಣವನ್ನ ದೇಶವನ್ನ ನಿನ್ನ ಕೈಗೆ ಒಪ್ಪಿಸಿದ್ದೀನಿ.+  ಯೆರಿಕೋಗೂ ಅದ್ರ ರಾಜನಿಗೂ ಮಾಡಿದ ತರ ಆಯಿ ಪಟ್ಟಣಕ್ಕೂ ಅದ್ರ ರಾಜನಿಗೂ ಮಾಡು.+ ಆದ್ರೆ ಈ ಸಲ ನೀವು ಕೊಳ್ಳೆ ಹೊಡೆಯೋ ವಸ್ತುಗಳನ್ನ ಅಲ್ಲಿನ ಪ್ರಾಣಿಗಳನ್ನ ನಿಮಗೋಸ್ಕರ ತಗೊಬಹುದು. ಆಯಿ ಮೇಲೆ ದಾಳಿ ಮಾಡೋಕೆ ಸೈನಿಕರು ಅದ್ರ ಹಿಂಭಾಗದಲ್ಲಿ ಹೊಂಚುಹಾಕೋಕೆ ಏರ್ಪಾಡು ಮಾಡು” ಅಂದನು.  ಆಗ ಯೆಹೋಶುವ ಮತ್ತೆ ಎಲ್ಲ ಸೈನಿಕರು ಆಯಿ ಪಟ್ಟಣದ ಮೇಲೆ ದಾಳಿ ಮಾಡೋಕೆ ಹೋದ್ರು. ಯೆಹೋಶುವ 30,000 ವೀರ ಸೈನಿಕರನ್ನ ಆರಿಸ್ಕೊಂಡು, ರಾತ್ರಿ ಅವ್ರನ್ನ ಅಲ್ಲಿಗೆ ಕಳಿಸಿದ.  “ನೋಡಿ, ನೀವು ಪಟ್ಟಣದ ಹಿಂಭಾಗದಲ್ಲಿ ಹೊಂಚುಹಾಕಿ ಕಾಯ್ತಾ ಇರ್ಬೇಕು. ಆದ್ರೆ ಪಟ್ಟಣದಿಂದ ತುಂಬ ದೂರ ಹೋಗಬೇಡಿ. ನೀವೆಲ್ಲ ಸಿದ್ಧರಾಗಿರಿ.  ನಾನು ಮತ್ತೆ ನನ್ನ ಜೊತೆ ಇರೋರೆಲ್ಲ ಪಟ್ಟಣದ ಹತ್ರ ಹೋಗುವಾಗ, ಈ ಹಿಂದೆ ಮಾಡಿದ ತರಾನೇ ಅವರು ನಮ್ಮ ಮೇಲೆ ದಾಳಿ ಮಾಡೋಕೆ ಬರ್ತಾರೆ.+ ಆಗ ನಾವು ಅವ್ರಿಗೆ ಬೆನ್ನುಹಾಕಿ ಓಡಿ ಹೋಗ್ತೀವಿ.  ಅವರು ನಮ್ಮನ್ನ ಅಟ್ಟಿಸ್ಕೊಂಡು ಬರ್ತಾರೆ. ಮುಂಚಿನ ತರಾನೇ ನಾವು ಹೆದರಿ ಓಡಿಹೋಗ್ತಾ ಇದ್ದೀವಿ ಅನ್ಕೊತಾರೆ.+ ಆದ್ರೆ ಅವ್ರನ್ನ ಪಟ್ಟಣದಿಂದ ದೂರ ಕರ್ಕೊಂಡು ಹೋಗೋ ತನಕ ನಾವು ಓಡ್ತಾ ಇರ್ತಿವಿ.  ಆಮೇಲೆ ನೀವು ಹೊಂಚುಹಾಕಿ ಕೂತಿರೋ ಜಾಗದಿಂದ ಎದ್ದು ಆ ಪಟ್ಟಣವನ್ನ ವಶ ಮಾಡ್ಕೊಳ್ಳಿ. ನಿಮ್ಮ ದೇವರಾದ ಯೆಹೋವ ಅದನ್ನ ನಿಮ್ಮ ಕೈಗೆ ಒಪ್ಪಿಸ್ತಾನೆ.  ಪಟ್ಟಣನ ನೀವು ವಶ ಮಾಡ್ಕೊಂಡ ತಕ್ಷಣ ಅದಕ್ಕೆ ಬೆಂಕಿಹಚ್ಚಿ.+ ಯೆಹೋವ ಹೇಳಿದ ತರಾನೇ ಮಾಡಿ. ಇದು ನಾನು ನಿಮಗೆ ಕೊಡ್ತಿರೋ ಆಜ್ಞೆ” ಅಂದ.  ಹೀಗೆ ಹೇಳಿ, ಯೆಹೋಶುವ ಅವ್ರನ್ನ ಕಳಿಸಿದ. ಅವರು ಬೆತೆಲಿಗೂ ಆಯಿಗೂ ಮಧ್ಯ ಹೊಂಚುಹಾಕಿ ಕೂತ್ರು. ಯೆಹೋಶುವ ಆ ರಾತ್ರಿ ಜನ್ರ ಜೊತೆನೇ ಇದ್ದ. 10  ಯೆಹೋಶುವ ಬೆಳಿಗ್ಗೆ ಬೇಗ ಎದ್ದು ಸೈನಿಕರನ್ನ ಒಟ್ಟು ಸೇರಿಸಿದ. ಅವನು ಮತ್ತೆ ಇಸ್ರಾಯೇಲಿನ ಹಿರಿಯರು ಸೈನಿಕರನ್ನ ಆಯಿ ಪಟ್ಟಣದ ಕಡೆಗೆ ಕರ್ಕೊಂಡು ಹೋದ್ರು. 11  ಅವನ ಜೊತೆ ಇದ್ದ ಎಲ್ಲ ಸೈನಿಕರು+ ಮುಂದೆ ಹೋಗ್ತಾ ಆಯಿ ಪಟ್ಟಣದ ಮುಂದೆ ಬಂದ್ರು. ಅವರು ಆಯಿ ಪಟ್ಟಣದ ಉತ್ತರಕ್ಕೆ ಪಾಳೆಯ ಹಾಕಿದ್ರು. ಅವರ ಮತ್ತು ಆಯಿ ಪಟ್ಟಣದ ಮಧ್ಯ ಒಂದು ಕಣಿವೆ ಮಾತ್ರ ಇತ್ತು. 12  ಅಷ್ಟರಲ್ಲಿ ಯೆಹೋಶುವ ಸುಮಾರು 5,000 ಗಂಡಸ್ರನ್ನ ಕರ್ಕೊಂಡು ಹೋಗಿ ಬೆತೆಲಿಗೂ+ ಆಯಿಗೂ ಮಧ್ಯದಲ್ಲಿ ಹೊಂಚುಹಾಕಿ ಕೂರೋಕೆ ಹೇಳಿದ್ದ.+ 13  ಹೀಗೆ ಸೈನಿಕರು ಮುಖ್ಯ ಪಾಳೆಯನ ಪಟ್ಟಣದ ಉತ್ತರಕ್ಕೆ ಹಾಕಿದ್ರು.+ ಅದೇ ಸಮಯಕ್ಕೆ ಇನ್ನೊಂದು ಸೈನಿಕರ ಗುಂಪು ಪಟ್ಟಣದ ಪಶ್ಚಿಮಕ್ಕೆ ಪಾಳೆಯ ಹಾಕ್ತು.+ ಆ ರಾತ್ರಿ ಯೆಹೋಶುವ ಕಣಿವೆ ಮಧ್ಯ ಹೋದ. 14  ಇದನ್ನ ನೋಡಿದ ತಕ್ಷಣ ಆಯಿಯ ರಾಜ ಮತ್ತು ಪಟ್ಟಣದ ಜನ್ರು ಬೆಳಿಗ್ಗೆ ಬೇಗ ಎದ್ದು ಇಸ್ರಾಯೇಲ್‌ ವಿರುದ್ಧ ಯುದ್ಧ ಮಾಡೋಕೆ ಮರುಭೂಮಿ ಮುಂದೆ ಇದ್ದ ಒಂದು ಜಾಗಕ್ಕೆ ಹೋದ್ರು. ಆದ್ರೆ ಪಟ್ಟಣದ ಹಿಂದೆ ಇಸ್ರಾಯೇಲ್ಯರು ಹೊಂಚುಹಾಕಿ ಕೂತಿರೋ ವಿಷ್ಯ ಅವ್ರಿಗೆ ಗೊತ್ತಿರಲಿಲ್ಲ. 15  ಆಯಿಯ ಜನ್ರು ದಾಳಿ ಮಾಡೋಕೆ ಬಂದಾಗ ಯೆಹೋಶುವ ಮತ್ತೆ ಎಲ್ಲ ಇಸ್ರಾಯೇಲ್ಯರು ಕಾಡಿನ ಕಡೆಗೆ ಹೋಗೋ ದಾರೀಲಿ ಓಡಿದ್ರು.+ 16  ಅವ್ರನ್ನ ಅಟ್ಟಿಸ್ಕೊಂಡು ಹೋಗೋಕೆ ಆ ಪಟ್ಟಣದ ಜನ್ರೆಲ್ಲ ಒಟ್ಟುಸೇರಿದ್ರು. ಹೀಗೆ ಯೆಹೋಶುವನನ್ನ ಅಟ್ಟಿಸ್ಕೊಂಡು ಅವರು ಪಟ್ಟಣದಿಂದ ದೂರ ಬಂದ್ರು. 17  ಆಯಿಯಲ್ಲಾಗ್ಲಿ ಬೆತೆಲಿನಲ್ಲಾಗ್ಲಿ ಒಬ್ಬ ಕೂಡ ಉಳೀದೆ ಎಲ್ರೂ ಇಸ್ರಾಯೇಲ್ಯರನ್ನ ಅಟ್ಟಿಸ್ಕೊಂಡು ಹೋಗಿದ್ರು. ಅವರು ತಮ್ಮ ಪಟ್ಟಣದ ಬಾಗಿಲನ್ನ ತೆರೆದಿಟ್ಟೇ ಹೋಗಿದ್ರು. ಪಟ್ಟಣದ ಸಂರಕ್ಷಣೆ ಮಾಡೋಕೆ ಯಾರೂ ಇರಲಿಲ್ಲ. 18  ಆಗ ಯೆಹೋವ ಯೆಹೋಶುವಗೆ “ನಿನ್ನ ಕೈಯಲ್ಲಿರೋ ಈಟಿನ ಆಯಿ ಪಟ್ಟಣದ ಕಡೆಗೆ ಚಾಚು.+ ನಾನು ನಿನ್ನ ಕೈಗೆ ಅದನ್ನ ಒಪ್ಪಿಸ್ತೀನಿ”+ ಅಂದನು. ಆಗ ಯೆಹೋಶುವ ತನ್ನ ಈಟಿನ ಪಟ್ಟಣದ ಕಡೆಗೆ ಚಾಚಿದ. 19  ಆಗ ಹೊಂಚುಹಾಕಿ ಕೂತಿದ್ದವರು ಆ ಜಾಗದಿಂದ ಎದ್ದು ಓಡ್ತಾ ಪಟ್ಟಣದ ಒಳಗೆ ಹೋಗಿ ಅದನ್ನ ವಶ ಮಾಡ್ಕೊಂಡು ಅದಕ್ಕೆ ಬೆಂಕಿ ಹಚ್ಚಿದ್ರು.+ 20  ಆಯಿಯ ಜನ್ರು ಹಿಂದೆ ತಿರುಗಿ ನೋಡಿದಾಗ ಪಟ್ಟಣದಿಂದ ಹೊಗೆ ಆಕಾಶಕ್ಕೆ ಏರೋದನ್ನ ನೋಡಿದ್ರು. ಅವ್ರಿಗೆ ಯಾವ ದಿಕ್ಕಿಗೂ ಓಡಿಹೋಗೋಕೆ ಆಗಲಿಲ್ಲ. ಆಗ ಕಾಡಿನ ಕಡೆಗೆ ಓಡ್ತಿದ್ದ ಇಸ್ರಾಯೇಲ್ಯರು ತಮ್ಮನ್ನ ಅಟ್ಟಿಸ್ಕೊಂಡು ಬರ್ತಿದ್ದ ಆಯಿ ಪಟ್ಟಣದವರ ಕಡೆಗೆ ತಿರುಗಿದ್ರು. 21  ಆಯಿ ಪಟ್ಟಣದ ಹತ್ರ ಹೊಂಚುಹಾಕಿ ಕೂತಿದ್ದವರು ಆ ಪಟ್ಟಣನ ವಶ ಮಾಡ್ಕೊಂಡಿದ್ದನ್ನ ಅದ್ರಿಂದ ಹೊಗೆ ಮೇಲೆ ಏರೋದನ್ನ ಕಂಡ ಕೂಡ್ಲೇ ಯೆಹೋಶುವ ಮತ್ತೆ ಅವನ ಜೊತೆ ಇದ್ದ ಎಲ್ಲ ಇಸ್ರಾಯೇಲ್ಯರು ಆಯಿ ಪುರುಷರ ಕಡೆಗೆ ತಿರುಗಿ ಅವ್ರ ಮೇಲೆ ದಾಳಿ ಮಾಡಿದ್ರು. 22  ಪಟ್ಟಣನ ವಶ ಮಾಡ್ಕೊಂಡ ಸೈನಿಕರೂ ಪಟ್ಟಣದಿಂದ ಹೊರಗೆ ಬಂದು ಆಯಿಯ ಸೈನಿಕರ ಮೇಲೆ ದಾಳಿ ಮಾಡಿದ್ರು. ಹೀಗೆ ಇಸ್ರಾಯೇಲ್ಯರು ಎರಡೂ ಕಡೆಯಿಂದ ದಾಳಿ ಮಾಡಿದ್ರಿಂದ ಅವರು ಮಧ್ಯ ಸಿಕ್ಕಿಹಾಕೊಂಡ್ರು. ಅವ್ರಲ್ಲಿ ಒಬ್ಬ ಕೂಡ ತಪ್ಪಿಸ್ಕೊಳ್ಳೋಕೆ ಆಗದ ಹಾಗೆ, ಉಳಿಯದ ಹಾಗೆ ಇಸ್ರಾಯೇಲ್ಯರು ಎಲ್ರನ್ನ ಸಾಯಿಸಿದ್ರು.+ 23  ಆದ್ರೆ ಆಯಿಯ ರಾಜನನ್ನ+ ಜೀವಂತವಾಗಿ ಕರ್ಕೊಂಡು ಬಂದು ಯೆಹೋಶುವನ ಮುಂದೆ ನಿಲ್ಲಿಸಿದ್ರು. 24  ಇಸ್ರಾಯೇಲ್ಯರು ತಮ್ಮನ್ನ ಕಾಡಿನ ತನಕ ಅಟ್ಟಿಸ್ಕೊಂಡು ಬಂದ ಆಯಿ ಜನ್ರಲ್ಲಿ ಒಬ್ಬನನ್ನೂ ಬಿಡದೆ ಎಲ್ರನ್ನ ಕತ್ತಿಯಿಂದ ಕೊಂದ್ರು. ಆಮೇಲೆ ಇಸ್ರಾಯೇಲ್ಯರೆಲ್ಲ ಆಯಿ ಪಟ್ಟಣಕ್ಕೆ ಹೋಗಿ ಉಳಿದಿದ್ದ ಜನ್ರನ್ನ ಕತ್ತಿಯಿಂದ ಕೊಂದುಹಾಕಿದ್ರು. 25  ಆ ದಿನ ಆಯಿಯ ಜನ್ರೆಲ್ಲ ಸತ್ತುಹೋದ್ರು. ಅವರ ಒಟ್ಟು ಸಂಖ್ಯೆ 12,000. ಅವ್ರಲ್ಲಿ ಸ್ತ್ರೀಯರೂ ಇದ್ರು, ಪುರುಷರೂ ಇದ್ರು. 26  ಆಯಿ ಪಟ್ಟಣದ ಜನ್ರನ್ನೆಲ್ಲ ಕೊಲ್ಲೋ ತನಕ+ ಯೆಹೋಶುವ ತನ್ನ ಕೈಯಲ್ಲಿದ್ದ ಈಟಿನ ಕೆಳಗೆ ಇಳಿಸಲಿಲ್ಲ.+ 27  ಯೆಹೋವ ಯೆಹೋಶುವನಿಗೆ ಆಜ್ಞೆ ಕೊಟ್ಟ ಹಾಗೆ ಇಸ್ರಾಯೇಲ್ಯರು ಆ ಪಟ್ಟಣದ ಪ್ರಾಣಿಗಳನ್ನ ಕೊಳ್ಳೆ ಹೊಡೆದ ವಸ್ತುಗಳನ್ನ ತಮಗೋಸ್ಕರ ತಗೊಂಡ್ರು.+ 28  ಆಮೇಲೆ ಯೆಹೋಶುವ ಆಯಿ ಪಟ್ಟಣ ಸುಟ್ಟು ಅದು ಶಾಶ್ವತವಾಗಿ ಹಾಳು ಬೀಳೋ ತರ ಮಾಡಿದ.+ ಅದು ಇವತ್ತಿಗೂ ಹಾಗೇ ಇದೆ. 29  ಆಯಿ ಪಟ್ಟಣದ ರಾಜನನ್ನ ಕೊಂದು ಕಂಬಕ್ಕೆ* ನೇತುಹಾಕಿದ್ರು. ಸಂಜೆ ತನಕ ಶವನ ಅಲ್ಲೇ ಬಿಟ್ರು. ಇನ್ನೇನು ಸೂರ್ಯ ಮುಳುಗುವಾಗ ಶವನ ಕೆಳಗೆ ಇಳಿಸೋಕೆ ಯೆಹೋಶುವ ಆಜ್ಞೆ ಕೊಟ್ಟ.+ ಆಮೇಲೆ ಆ ಶವನ ಪಟ್ಟಣದ ಬಾಗಿಲ ಹತ್ರ ಎಸೆದು ಅದನ್ನ ಕಲ್ಲುಗಳಿಂದ ಮುಚ್ಚಿದ್ರು. ಅದು ಇವತ್ತಿಗೂ ಹಾಗೇ ಇದೆ. 30  ಆಮೇಲೆ ಯೆಹೋಶುವ ಇಸ್ರಾಯೇಲ್‌ ದೇವರಾದ ಯೆಹೋವನಿಗಾಗಿ ಏಬಾಲ್‌ ಬೆಟ್ಟದ+ ಮೇಲೆ ಒಂದು ಯಜ್ಞವೇದಿ ಕಟ್ಟಿದ. 31  “ಉಳಿಯಿಂದ ಕೆತ್ತದ ಕಲ್ಲುಗಳಿಂದ ಒಂದು ಯಜ್ಞವೇದಿ ಕಟ್ಟಿ”+ ಅಂತ ಯೆಹೋವನ ಸೇವಕ ಮೋಶೆ ಇಸ್ರಾಯೇಲ್ಯರಿಗೆ ಆಜ್ಞೆ ಕೊಟ್ಟ ಹಾಗೆ, ಮೋಶೆಯ ನಿಯಮ ಪುಸ್ತಕದಲ್ಲಿ+ ಬರೆದಿರೋ ತರ ಅದನ್ನ ಕಟ್ಟಿದ. ಅದ್ರ ಮೇಲೆ ಜನ್ರು ಯೆಹೋವನಿಗೆ ಸರ್ವಾಂಗಹೋಮ ಬಲಿಗಳನ್ನ ಸಮಾಧಾನ ಬಲಿಗಳನ್ನ ಕೊಟ್ರು.+ 32  ಮೋಶೆ ಇಸ್ರಾಯೇಲ್ಯರ ಮುಂದೆ ಬರೆದಿದ್ದ ನಿಯಮ ಪುಸ್ತಕನ+ ಯೆಹೋಶುವ ಕಲ್ಲುಗಳ ಮೇಲೆ ಬರೆದ.+ 33  ಎಲ್ಲ ಇಸ್ರಾಯೇಲ್ಯರು, ಅವರ ಹಿರಿಯರು, ಅಧಿಕಾರಿಗಳು, ನ್ಯಾಯಾಧೀಶರು ಯೆಹೋವನ ಒಪ್ಪಂದದ ಮಂಜೂಷವನ್ನ ಹೊತ್ಕೊಂಡಿದ್ದ ಪುರೋಹಿತರ ಕಡೆಗೆ ಮುಖಮಾಡಿ ಮಂಜೂಷದ ಅಕ್ಕಪಕ್ಕ ನಿಂತಿದ್ರು. ಅಲ್ಲಿ ಇಸ್ರಾಯೇಲ್ಯರ ಜೊತೆ ವಿದೇಶಿಯರೂ ಇದ್ರು.+ ಅವ್ರಲ್ಲಿ ಅರ್ಧ ಜನ ಗೆರಿಜ್ಜೀಮ್‌ ಬೆಟ್ಟದ ಮುಂದೆ ನಿಂತ್ರೆ, ಇನ್ನೂ ಅರ್ಧ ಜನ ಏಬಾಲ್‌ ಬೆಟ್ಟದ+ ಮುಂದೆ (ಯೆಹೋವನ ಸೇವಕ ಮೋಶೆ ಈ ಹಿಂದೆ ಆಜ್ಞೆ ಕೊಟ್ಟ ಹಾಗೆ)+ ಆಶೀರ್ವಾದ ಪಡಿಯೋಕೆ ನಿಂತ್ರು. 34  ಆಮೇಲೆ ಯೆಹೋಶುವ ನಿಯಮ ಪುಸ್ತಕದಲ್ಲಿ+ ಬರೆದಿರೋ ಆಶೀರ್ವಾದಗಳನ್ನ,+ ಶಾಪಗಳನ್ನ,+ ಹೀಗೆ ಅದ್ರಲ್ಲಿದ್ದ ಎಲ್ಲ ವಿಷ್ಯಗಳನ್ನ ಇದ್ದ ಹಾಗೇ ಓದಿದ. 35  ಮೋಶೆ ಆಜ್ಞೆ ಕೊಟ್ಟ ವಿಷ್ಯಗಳಲ್ಲಿ ಒಂದನ್ನೂ ಬಿಡದೆ ಎಲ್ಲವನ್ನ ಇಸ್ರಾಯೇಲಿನ ಇಡೀ ಸಭೆ ಮುಂದೆ ಗಟ್ಟಿಯಾಗಿ ಓದಿದ.+ ಆ ಸಭೆಯಲ್ಲಿ ಹೆಂಗಸ್ರು, ಮಕ್ಕಳು ಅವ್ರ ಮಧ್ಯ ವಾಸಮಾಡ್ತಿದ್ದ* ವಿದೇಶಿಯರೂ ಇದ್ರು.+

ಪಾದಟಿಪ್ಪಣಿ

ಅಥವಾ “ಮರಕ್ಕೆ.”
ಅಕ್ಷ. “ನಡೀತಿದ್ದ.”