ಯೋಬ 16:1-22
16 ಅದಕ್ಕೆ ಯೋಬ ಹೀಗಂದ:
2 “ಇಂಥ ಮಾತುಗಳನ್ನ ಎಷ್ಟೋ ಕೇಳಿದ್ದೀನಿ,ಸಮಾಧಾನ ಹೇಳೋದನ್ನ ಬಿಟ್ಟು ನನ್ನ ನೋವು ಜಾಸ್ತಿ ಮಾಡಿದ್ದೀರ!+
3 ನೀನು ಸುಮ್‌ಸುಮ್ನೆ ಏನೇನೋ* ಹೇಳೋದನ್ನ ನಿಲ್ಲಿಸಲ್ವಾ?
ನೀನ್ಯಾಕೆ ನನ್ನ ಮೇಲೆ ಈ ರೀತಿ ರೇಗ್ತೀಯ?
4 ನೀವು ನನ್ನ ಜಾಗದಲ್ಲಿ ಇದ್ದಿದ್ರೆನಾನೂ ನಿಮ್ಮ ತರ ಮಾತಾಡೋಕೆ,ನಿಮ್ಮ ಬಗ್ಗೆ ಉದ್ದುದ್ದ ಭಾಷಣ ಬಿಗಿಯೋಕೆ,ನಿಮ್ಮನ್ನ ಅಣಕಿಸಿ ತಲೆಯಾಡಿಸೋಕೆ ಆಗ್ತಿತ್ತು.+
5 ಆದ್ರೆ ನಾನು ಹಾಗೆ ಮಾಡದೆ ಧೈರ್ಯ ತುಂಬೋ ಮಾತುಗಳನ್ನ ಹೇಳ್ತಿದ್ದೆ,ಸಮಾಧಾನ ಹೇಳಿ ನಿಮ್ಮ ನೋವು ಕಡಿಮೆ ಮಾಡ್ತಿದ್ದೆ.+
6 ನಾನು ಮಾತಾಡಿದ್ರೂ ನನ್ನ ನೋವು ಕಡಿಮೆ ಆಗ್ತಿಲ್ಲ,+ಹಾಗಂತ ಮಾತಾಡದೇ ಸುಮ್ಮನಿದ್ರೂ ನೋವು ಕಮ್ಮಿ ಆಗಲ್ಲ.
7 ನಾನು ಧೈರ್ಯ ಕಳ್ಕೊಳ್ಳೋ ಹಾಗೆ ದೇವರು ಮಾಡಿದ್ದಾನೆ,+ನನ್ನ ಮನೆಯವ್ರನ್ನೆಲ್ಲ ಮಣ್ಣುಪಾಲು ಮಾಡಿದ್ದಾನೆ.
8 ಆಮೇಲೆ ನನ್ನನ್ನ ಹಿಡ್ಕೊಂಡಿದ್ದಾನೆ, ಅದು ಜನ್ರಿಗೆ ಕಾಣ್ತಿದೆ,ನನ್ನ ಬಡಕಲು ದೇಹಾನೇ ನನ್ನ ವಿರುದ್ಧ ಸಾಕ್ಷಿ ಹೇಳ್ತಿದೆ.
9 ಕೋಪದಿಂದ ಆತನು ನನ್ನನ್ನ ಸೀಳಿ ಹಾಕಿದ್ದಾನೆ,ನನ್ನ ಮೇಲೆ ಹಗೆ ಸಾಧಿಸ್ತಾ ಇದ್ದಾನೆ,+ನನ್ನನ್ನ ನೋಡಿ ಹಲ್ಲು ಕಡೀತಾ ಇದ್ದಾನೆ,ಶತ್ರು ಕಣ್ಣಲ್ಲೇ ನನ್ನನ್ನ ಕೊಲ್ತಾ ಇದ್ದಾನೆ.+
10 ಅವರು ನನ್ನ ವಿರುದ್ಧ ಏನೇನೋ ಹೇಳ್ತಿದ್ದಾರೆ,+ಕೆನ್ನೆಗೆ ಹೊಡೆದು ಅವಮಾನ ಮಾಡಿದ್ದಾರೆ,ತುಂಬ ಜನ ನನ್ನ ವಿರುದ್ಧ ಸೇರ್ಕೊಂಡಿದ್ದಾರೆ.+
11 ಹುಡುಗರು ಗುಂಪಾಗಿ ನನ್ನ ಮೇಲೆ ಹಲ್ಲೆ ಮಾಡೋ ಹಾಗೇ ದೇವರು ಬಿಟ್ಟಿದ್ದಾನೆ,ನನ್ನನ್ನ ಕೆಟ್ಟವ್ರ ಕೈಗೆ ಕೊಟ್ಟಿದ್ದಾನೆ.+
12 ನಾನು ನೆಮ್ಮದಿಯಾಗಿದ್ದೆ, ಆದ್ರೆ ದೇವರು ನನ್ನ ಬದುಕನ್ನ ಚೂರುಚೂರು ಮಾಡಿದ್ದಾನೆ,+ನನ್ನ ಕತ್ತು ಹಿಡಿದು ಜಜ್ಜಿ ಬಿಟ್ಟಿದ್ದಾನೆ,ನನ್ನನ್ನ ಗುರಿಹಲಗೆ ಮಾಡ್ಕೊಂಡಿದ್ದಾನೆ.
13 ಆತನ ಬಿಲ್ಲುಗಾರರು ನನ್ನ ಸುತ್ತ ನಿಂತಿದ್ದಾರೆ,+ಆತನು ನನಗೆ ಸ್ವಲ್ಪನೂ ಕನಿಕರ ತೋರಿಸದೆ ನನ್ನ ಮೂತ್ರಪಿಂಡಗಳನ್ನ+ ತಿವಿದಿದ್ದಾನೆ,ನನ್ನ ಪಿತ್ತರಸವನ್ನ ಭೂಮಿ ಮೇಲೆ ಸುರಿದಿದ್ದಾನೆ.
14 ಗೋಡೆ ಒಡೆದು ಹಾಕೋ ತರ ನನ್ನನ್ನ ಮತ್ತೆ ಮತ್ತೆ ಹೊಡೀತಾ ಇದ್ದಾನೆ,ಸೈನಿಕನ ತರ ದಾಳಿ ಮಾಡೋಕೆ ನನ್ನ ಕಡೆ ನುಗ್ಗುತ್ತಿದ್ದಾನೆ.
15 ಮೈಮೇಲೆ ಗೋಣಿ ಸುತ್ಕೊಂಡಿದ್ದೀನಿ,+ನನ್ನ ಗೌರವವನ್ನೆಲ್ಲ* ಮಣ್ಣಲ್ಲಿ ಹೂತು ಹಾಕಿದ್ದೀನಿ.+
16 ಅತ್ತು ಅತ್ತು ನನ್ನ ಮುಖ ಕೆಂಪಾಗಿದೆ,+ಕಣ್ಣುಗಳ ಸುತ್ತ ಕಪ್ಪಾಗಿದೆ,*
17 ನನ್ನ ಕೈಗಳು ಯಾರಿಗೂ ಹಿಂಸೆ ಮಾಡಿಲ್ಲ,ನಾನು ಶುದ್ಧ ಮನಸ್ಸಿಂದ ಪ್ರಾರ್ಥನೆ ಮಾಡಿದ್ರೂ ಹೀಗೆಲ್ಲ ಆಯ್ತು.
18 ಭೂಮಿಯೇ, ನನ್ನ ರಕ್ತವನ್ನ ಮುಚ್ಚಬೇಡ!+
ನನ್ನ ಕೂಗು ಯಾವತ್ತೂ ನಿಲ್ಲಬಾರದು!
19 ಈಗ್ಲೂ ನನಗಾಗಿ ಸಾಕ್ಷಿ ಹೇಳುವವನು ಸ್ವರ್ಗದಲ್ಲಿದ್ದಾನೆ,ನನ್ನ ಪರವಾಗಿ ಸಾಕ್ಷಿ ಹೇಳುವವನು ಮೇಲಿದ್ದಾನೆ.
20 ನಾನು ದೇವರ ಮುಂದೆ ಕಣ್ಣೀರು ಹಾಕ್ತಿದ್ರೆ*+ನನ್ನ ಸ್ನೇಹಿತರು ಗೇಲಿ ಮಾಡ್ತಾರೆ.+
21 ಇಬ್ರು ಮನುಷ್ಯರ ಮಧ್ಯ ಇನ್ನೊಬ್ಬ ಮಧ್ಯಸ್ಥಿಕೆ ವಹಿಸೋ ತರನನ್ನ ಮತ್ತು ದೇವರ ಮಧ್ಯ ಯಾರಾದ್ರೂ ಮಧ್ಯಸ್ಥಿಕೆ ವಹಿಸಿದ್ರೆ ಚೆನ್ನಾಗಿತ್ತು.+
22 ಇನ್ನೇನೂ ನಾಲ್ಕು ದಿನ ಬದುಕ್ತೀನಿ ಅಷ್ಟೇ,ಆಮೇಲೆ ಕಣ್ಮರೆ ಆಗ್ತೀನಿ, ವಾಪಸ್ ಬರಲ್ಲ.+
ಪಾದಟಿಪ್ಪಣಿ
^ ಅಥವಾ “ಬಿರುನುಡಿಗಳನ್ನ.”
^ ಅಥವಾ “ಬಲವನ್ನೆಲ್ಲ.” ಅಕ್ಷ. “ಕೊಂಬು.”
^ ಅಥವಾ “ಸಾವಿನ ನೆರಳು ಕವಿದಿದೆ.”
^ ಬಹುಶಃ, “ನಿದ್ದೆ ಮಾಡದೆ ದೇವ್ರನ್ನೇ ನೋಡ್ತಿದ್ರೆ.”