ವಿಮೋಚನಕಾಂಡ 1:1-22

  • ಇಸ್ರಾಯೇಲ್ಯರ ಸಂಖ್ಯೆ ಈಜಿಪ್ಟಲ್ಲಿ ಹೆಚ್ಚಾಯ್ತು (1-7)

  • ಇಸ್ರಾಯೇಲ್ಯರ ಮೇಲೆ ಫರೋಹನ ದಬ್ಬಾಳಿಕೆ (8-14)

  • ಹೆರಿಗೆ ಮಾಡಿಸೋರು ತೋರಿಸಿದ ದೇವಭಯ (15-22)

1  ಇಸ್ರಾಯೇಲ ಅಂದ್ರೆ ಯಾಕೋಬ ಈಜಿಪ್ಟ್‌* ದೇಶಕ್ಕೆ ಬಂದಾಗ ಅವನ ಜೊತೆ ಅವನ ಗಂಡುಮಕ್ಕಳು ತಮ್ಮತಮ್ಮ ಕುಟುಂಬದ ಜೊತೆ ಬಂದ್ರು.+ ಆ ಗಂಡುಮಕ್ಕಳು ಯಾರಂದ್ರೆ  ರೂಬೇನ್‌, ಸಿಮೆಯೋನ್‌, ಲೇವಿ, ಯೆಹೂದ.+  ಇಸ್ಸಾಕಾರ್‌, ಜೆಬುಲೂನ್‌, ಬೆನ್ಯಾಮೀನ್‌.  ದಾನ್‌, ನಫ್ತಾಲಿ. ಗಾದ್‌, ಅಶೇರ್‌.+  ಯೋಸೇಫ ಮುಂಚೆಯಿಂದಾನೇ ಈಜಿಪ್ಟಲ್ಲಿದ್ದ. ಯಾಕೋಬನ ವಂಶದವರು ಒಟ್ಟು 70 ಜನ.+  ಸ್ವಲ್ಪ ದಿನ ಆದ್ಮೇಲೆ ಯೋಸೇಫ ತೀರಿಹೋದ.+ ಅವನ ಅಣ್ಣತಮ್ಮಂದಿರು ಮತ್ತು ಆ ಪೀಳಿಗೆಯವರೆಲ್ಲ ತೀರಿಹೋದ್ರು.  ಇಸ್ರಾಯೇಲ್ಯರ ವಂಶ ದೊಡ್ಡದಾಯ್ತು. ಅವರು ದಿನದಿಂದ ದಿನಕ್ಕೆ ಬಲ ಆಗ್ತಾ ಹೋದ್ರು. ಅವರ ಸಂಖ್ಯೆ ತುಂಬ ಬೇಗ ಜಾಸ್ತಿ ಆಯ್ತು. ಎಷ್ಟಂದ್ರೆ ಆ ದೇಶದಲ್ಲೆಲ್ಲಾ ತುಂಬ್ಕೊಂಡ್ರು.+  ಸ್ವಲ್ಪ ವರ್ಷ ಆದ್ಮೇಲೆ ಒಬ್ಬ ಹೊಸ ರಾಜ ಈಜಿಪ್ಟನ್ನ ಆಳೋಕೆ ಶುರುಮಾಡಿದ. ಅವನಿಗೆ ಯೋಸೇಫನ ಬಗ್ಗೆ ಗೊತ್ತಿರಲಿಲ್ಲ.  ಆ ರಾಜ ತನ್ನ ಜನರಿಗೆ “ಇಸ್ರಾಯೇಲ್ಯರು ನಮಗಿಂತ ಜಾಸ್ತಿ ಆಗಿದ್ದಾರೆ, ಬಲಿಷ್ಠರಾಗಿದ್ದಾರೆ!+ 10  ಅದಕ್ಕೆ ಅವರ ವಂಶ ಬೆಳೆಯದ ಹಾಗೆ ನಾವು ಏನಾದ್ರೂ ಮಾಡೋಣ. ಇಲ್ಲದಿದ್ರೆ ಮುಂದೆ ಶತ್ರುಗಳು ನಮ್ಮ ವಿರುದ್ಧ ಯುದ್ಧಕ್ಕೆ ಬಂದಾಗ ಇಸ್ರಾಯೇಲ್ಯರು ಅವರ ಜೊತೆ ಸೇರ್ಕೊಳ್ತಾರೆ. ನಮ್ಮ ವಿರುದ್ಧ ಯುದ್ಧ ಮಾಡಿ ಈ ದೇಶ ಬಿಟ್ಟು ಹೋಗ್ತಾರೆ” ಅಂದ. 11  ಅದಕ್ಕೆ ಈಜಿಪ್ಟಿನವರು ಇಸ್ರಾಯೇಲ್ಯರಿಗೆ ಕಷ್ಟವಾದ ಕೆಲಸ ಕೊಡೋಕೆ, ಅವರನ್ನ ಪೀಡಿಸೋಕೆ ಅಧಿಕಾರಿಗಳಿಗೆ ಹೇಳಿದ್ರು.+ ಆ ಅಧಿಕಾರಿಗಳು ಅವರಿಂದ ಬಲವಂತವಾಗಿ ದುಡಿಸ್ಕೊಳ್ತಾ ಇದ್ರು. ಹೀಗೆ ಇಸ್ರಾಯೇಲ್ಯರಿಂದ ಕೆಲಸ ಮಾಡಿಸಿ ಫರೋಹನಿಗೋಸ್ಕರ ಪಿತೋಮ್‌ ಮತ್ತು ರಾಮ್ಸೇಸ್‌+ ಅನ್ನೋ ಉಗ್ರಾಣ ಪಟ್ಟಣಗಳನ್ನ ಕಟ್ಟಿಸಿದ್ರು. 12  ಆದ್ರೆ ಇಸ್ರಾಯೇಲ್ಯರನ್ನ ಎಷ್ಟು ಹೆಚ್ಚಾಗಿ ಪೀಡಿಸಿದ್ರೋ ಅಷ್ಟೇ ಹೆಚ್ಚಾದ್ರು. ಎಲ್ಲಾ ಕಡೆ ತುಂಬ್ಕೊಂಡ್ರು. ಆದ್ರಿಂದ ಇಸ್ರಾಯೇಲ್ಯರಂದ್ರೆ ಈಜಿಪ್ಟಿನ ಜನ ತುಂಬ ಹೆದರುತಿದ್ರು, ಅವರನ್ನ ನೋಡಿ ಅಸಹ್ಯಪಡ್ತಿದ್ರು.+ 13  ಈಜಿಪ್ಟಿನ ಜನ್ರು ಇಸ್ರಾಯೇಲ್ಯರನ್ನ ಗುಲಾಮರಾಗಿ ಮಾಡ್ಕೊಂಡು ಇನ್ನೂ ಜಾಸ್ತಿ ದುಡಿಸ್ಕೊಂಡ್ರು.+ 14  ಮಣ್ಣಿನ ಗಾರೆ ಕೆಲಸ, ಇಟ್ಟಿಗೆ ಮಾಡೋ ಕೆಲಸ, ಹೊಲದಲ್ಲಿ ಎಲ್ಲಾ ಕೆಲಸ ಮಾಡಲೇಬೇಕು ಅಂತ ಒತ್ತಾಯ ಮಾಡಿ ಕೊಡಬಾರದ ಕಷ್ಟ ಕೊಟ್ರು. ಅವರಿಂದ ಎಲ್ಲ ತರದ ಬಿಟ್ಟಿ ಕೆಲಸಗಳನ್ನ ಮಾಡಿಸ್ಕೊಂಡ್ರು.+ ಇದ್ರಿಂದ ಅವರಿಗೆ ಜೀವನದ ಮೇಲೆ ಜಿಗುಪ್ಸೆ ಹುಟ್ಟಿಬಿಡ್ತು. 15  ಶಿಫ್ರಾ, ಪೂಗಾ ಅನ್ನೋ ಇಬ್ರಿಯ* ಹೆಂಗಸರು ಹೆರಿಗೆ ಮಾಡಿಸ್ತಿದ್ರು.* ಈಜಿಪ್ಟಿನ ರಾಜ ಅವರನ್ನ ಕರೆದು 16  “ನೀವು ಇಬ್ರಿಯ ಸ್ತ್ರೀಯರಿಗೆ ಹೆರಿಗೆ ಮಾಡಿಸುವಾಗ+ ಹುಟ್ಟೋ* ಮಗು ಗಂಡಾಗಿದ್ರೆ ಕೊಲ್ಲಬೇಕು, ಹೆಣ್ಣಾಗಿದ್ರೆ ಉಳಿಸಬೇಕು” ಅಂದ. 17  ಆದ್ರೆ ಹೆರಿಗೆ ಮಾಡಿಸೋರು ಸತ್ಯದೇವರಿಗೆ ಭಯಪಡ್ತಿದ್ರು. ಅದಕ್ಕೆ ರಾಜ ಹೇಳಿದ ಹಾಗೆ ಗಂಡುಮಕ್ಕಳನ್ನ ಸಾಯಿಸಲಿಲ್ಲ.+ 18  ಸ್ವಲ್ಪ ದಿನ ಆದ್ಮೇಲೆ ಈಜಿಪ್ಟಿನ ರಾಜ ಆ ಹೆರಿಗೆ ಮಾಡಿಸೋರನ್ನ ಕರೆದು “ನೀವ್ಯಾಕೆ ಗಂಡುಮಕ್ಕಳನ್ನ ಸಾಯಿಸಲಿಲ್ಲ?” ಅಂತ ಕೇಳಿದ. 19  ಅವರು “ಇಬ್ರಿಯ ಸ್ತ್ರೀಯರು ಈಜಿಪ್ಟಿನ ಸ್ತ್ರೀಯರ ತರ ಅಲ್ಲ, ತುಂಬ ಚುರುಕು. ನಾವು ಹೋಗೋ ಮುಂಚೆನೇ ಮಗು ಹೆತ್ತುಬಿಡ್ತಾರೆ” ಅಂದ್ರು. 20  ಹೆರಿಗೆ ಮಾಡಿಸ್ತಿದ್ದ ಆ ಹೆಂಗಸರು ಹೀಗೆ ಮಾಡ್ತಾ ಇದ್ದಿದಕ್ಕೆ ದೇವರು ಅವರಿಗೆ ಆಶೀರ್ವಾದ ಮಾಡಿದನು. ಇಸ್ರಾಯೇಲ್ಯರು ಇನ್ನೂ ಜಾಸ್ತಿ ಆಗಿ ಬಲಶಾಲಿ ಆಗ್ತಾ ಹೋದ್ರು. 21  ಹೆರಿಗೆ ಮಾಡಿಸೋ ಆ ಹೆಂಗಸರಿಗೆ ಸತ್ಯದೇವರ ಮೇಲೆ ಭಯ ಇದ್ದದ್ರಿಂದ ದೇವರು ಅವರಿಗೆ ಮಕ್ಕಳನ್ನ ಕೊಟ್ಟು ಆಶೀರ್ವಾದ ಮಾಡಿದನು. 22  ಕೊನೆಗೆ ಫರೋಹ ತನ್ನೆಲ್ಲ ಜನ್ರಿಗೆ “ಇಬ್ರಿಯರಿಗೆ ಹುಟ್ಟೋ ಎಲ್ಲಾ ಗಂಡು ಮಕ್ಕಳನ್ನ ನೀವು ನೈಲ್‌ ನದಿಗೆ ಎಸೆದುಬಿಡಿ, ಆದ್ರೆ ಹೆಣ್ಣು ಮಕ್ಕಳನ್ನ ಉಳಿಸಿ” ಅಂತ ಆಜ್ಞೆ ಕೊಟ್ಟ.+

ಪಾದಟಿಪ್ಪಣಿ

ಅಥವಾ “ಐಗುಪ್ತ.”
ಇದು ಇಸ್ರಾಯೇಲ್ಯರಿಗೆ ಇರೋ ಇನ್ನೊಂದು ಹೆಸ್ರು. ಪದವಿವರಣೆಯಲ್ಲಿ “ಇಬ್ರಿಯ” ನೋಡಿ.
ಅಥವಾ “ದಾದಿಯರಾಗಿದ್ರು.”
ಅಕ್ಷ. “ಹೆರಿಗೆ ಸಮಯದಲ್ಲಿ ತಾಯಿ ಮಣೆ ಮೇಲೆ ಕೂತಿರುವಾಗ.”