ಒಂದನೇ ಪೂರ್ವಕಾಲವೃತ್ತಾಂತ 11:1-47

  • ಇಸ್ರಾಯೇಲ್ಯರು ದಾವೀದನನ್ನ ರಾಜನಾಗಿ ಅಭಿಷೇಕಿಸಿದ್ರು (1-3)

  • ದಾವೀದ ಚೀಯೋನನ್ನ ವಶ ಮಾಡ್ಕೊಂಡ (4-9)

  • ದಾವೀದನ ವೀರ ಸೈನಿಕರು (10-47)

11  ಸ್ವಲ್ಪ ಸಮಯ ಆದ್ಮೇಲೆ ಇಸ್ರಾಯೇಲ್ಯರೆಲ್ಲ ಹೆಬ್ರೋನಲ್ಲಿದ್ದ+ ದಾವೀದನ ಹತ್ರ “ನಾವು ನಿನ್ನ ರಕ್ತಸಂಬಂಧಿಗಳು.*+  ಸೌಲ ನಮ್ಮ ರಾಜನಾಗಿದ್ದಾಗ ನೀನೇ ಮುಂದೆ ನಿಂತು ಇಸ್ರಾಯೇಲಿನ ಎಲ್ಲ ಯುದ್ಧಗಳನ್ನ ಮಾಡ್ತಿದ್ದೆ.+ ಆಗ ನಿನ್ನ ದೇವರಾದ ಯೆಹೋವ ನಿನಗೆ ‘ನನ್ನ ಜನ್ರಾದ ಇಸ್ರಾಯೇಲ್ಯರನ್ನ ನೀನು ನೋಡ್ಕೊಳ್ತಿಯ, ನನ್ನ ಜನ್ರಾದ ಇಸ್ರಾಯೇಲ್ಯರಿಗೆ ನೀನು ನಾಯಕ ಆಗ್ತಿಯ’ ಅಂತ ಹೇಳಿದ್ದನು”+ ಅಂದ್ರು.  ಹೀಗೆ ಇಸ್ರಾಯೇಲಿನ ಎಲ್ಲ ಹಿರಿಯರು ಹೆಬ್ರೋನಲ್ಲಿದ್ದ ರಾಜ ದಾವೀದನ ಹತ್ರ ಬಂದ್ರು. ಅವನು ಅವ್ರ ಜೊತೆ ಹೆಬ್ರೋನಲ್ಲಿ ಯೆಹೋವನ ಮುಂದೆ ಒಂದು ಒಪ್ಪಂದ ಮಾಡ್ಕೊಂಡ. ಯೆಹೋವ ಸಮುವೇಲನ ಮೂಲಕ ಹೇಳಿದ ಪ್ರಕಾರ+ ಅವರು ದಾವೀದನನ್ನ ಇಸ್ರಾಯೇಲಿನ ರಾಜನಾಗಿ ಅಭಿಷೇಕಿಸಿದ್ರು.+  ಆಮೇಲೆ ದಾವೀದ, ಎಲ್ಲ ಇಸ್ರಾಯೇಲ್ಯರು ಯೆರೂಸಲೇಮಿಗೆ ಅಂದ್ರೆ ಯೆಬೂಸಿಯರು+ ವಾಸ ಇದ್ದ ಯೆಬೂಸಿಗೆ+ ಹೋದ್ರು.  ಯೆಬೂಸಿಯರು ದಾವೀದನನ್ನ ಕೆಣಕ್ತಾ “ನೀನು ಯಾವತ್ತೂ ಇಲ್ಲಿ ಕಾಲಿಡಕ್ಕಾಗಲ್ಲ!”+ ಅಂದ್ರು. ಆದ್ರೆ ದಾವೀದ ಚೀಯೋನಿನ+ ಭದ್ರ ಕೋಟೆಯನ್ನ ವಶ ಮಾಡ್ಕೊಂಡ. ಆ ಪಟ್ಟಣಕ್ಕೆ ಈಗ ದಾವೀದಪಟ್ಟಣ+ ಅಂತ ಹೆಸ್ರು.  ದಾವೀದ ಹೀಗಂದ: “ಯಾರು ಮೊದ್ಲು ಯೆಬೂಸಿಯರ ಮೇಲೆ ದಾಳಿ ಮಾಡ್ತಾನೋ ಅವನೇ ಮುಖ್ಯಸ್ಥ, ಅಧಿಕಾರಿ ಆಗ್ತಾನೆ.” ಚೆರೂಯಳ ಮಗ ಯೋವಾಬ+ ಎಲ್ಲರಿಗಿಂತ ಮೊದ್ಲು ದಾಳಿ ಮಾಡಿದ. ಹಾಗಾಗಿ ಅವನು ಮುಖ್ಯಸ್ಥನಾದ.  ಆಮೇಲೆ ದಾವೀದ ಭದ್ರ ಕೋಟೆಯಲ್ಲಿ ವಾಸ ಮಾಡ್ತಿದ್ದ. ಹಾಗಾಗಿ ಅದನ್ನ ದಾವೀದಪಟ್ಟಣ ಅಂತ ಕರಿತಿದ್ರು.  ದಾವೀದನು ಪಟ್ಟಣ ಕಟ್ಟೋಕೆ ಶುರು ಮಾಡಿದ. ಅವನು ಮಿಲ್ಲೋಕೋಟೆಯಲ್ಲಿ,* ಅದ್ರ ಸುತ್ತಮುತ್ತ ಇದ್ದ ಜಾಗಗಳಲ್ಲಿ ಗೋಡೆಗಳನ್ನ, ಕಟ್ಟಡಗಳನ್ನ ಕಟ್ಟಿದ. ಪಟ್ಟಣದ ಉಳಿದ ಜಾಗಗಳನ್ನ ಯೋವಾಬ ಮತ್ತೆ ಕಟ್ಟಿಸಿದ.  ಹೀಗೆ ದಾವೀದ ಹೆಚ್ಚೆಚ್ಚು ಬಲಶಾಲಿ ಆಗ್ತಾ ಹೋದ,+ ಸೈನ್ಯಗಳ ದೇವರಾದ ಯೆಹೋವ ಅವನ ಜೊತೆ ಇದ್ದನು. 10  ದಾವೀದನ ಸೈನ್ಯದಲ್ಲಿ ವೀರರು ಇದ್ರು. ಇವರು ಮುಖ್ಯಸ್ಥರಾಗಿದ್ರು. ಯೆಹೋವ ಇಸ್ರಾಯೇಲ್ಯರಿಗೆ ಮಾತು ಕೊಟ್ಟ ಹಾಗೇ ದಾವೀದನನ್ನ ರಾಜನಾಗಿ ಮಾಡೋದ್ರಲ್ಲಿ ಎಲ್ಲ ಇಸ್ರಾಯೇಲ್ಯರ ಜೊತೆ ಸೇರಿ ಇವರೂ ದಾವೀದನಿಗೆ ಸಂಪೂರ್ಣ ಬೆಂಬಲ ಕೊಟ್ರು.+ 11  ದಾವೀದನ ವೀರ ಸೈನಿಕರ ಹೆಸ್ರು: ಮೊದಲನೆಯವನು ಹಕ್ಮೋನಿಯನ ಮಗ ಯಾಷೊಬ್ಬಾಮ.+ ಇವನು ಮೂವರು ಯೋಧರಲ್ಲಿ ಮುಖ್ಯಸ್ಥ.+ ಒಮ್ಮೆ ಇವನು ತನ್ನ ಈಟಿ ಬೀಸಿ 300ಕ್ಕೂ ಜಾಸ್ತಿ ಜನ್ರನ್ನ ಕೊಂದುಹಾಕಿದ್ದ.+ 12  ಎಲ್ಲಾಜಾರ್‌+ ಎರಡನೆಯವನು. ಇವನು ಅಹೋಹಿನವನಾದ+ ದೋದೋವಿನ ಮಗ. ಮೂರು ವೀರ ಸೈನಿಕರಲ್ಲಿ ಇವನೂ ಒಬ್ಬ. 13  ಇವನು ದಾವೀದನ ಜೊತೆ ಪಸ್‌-ದಮ್ಮೀಮಲ್ಲಿ+ ಇದ್ದ. ಅಲ್ಲಿ ಫಿಲಿಷ್ಟಿಯರು ಯುದ್ಧಕ್ಕಾಗಿ ಒಟ್ಟುಸೇರಿದ್ರು. ಅಲ್ಲಿ ಬಾರ್ಲಿಯ* ಪೈರು ತುಂಬಿದ್ದ ಒಂದು ಹೊಲ ಇತ್ತು. ಫಿಲಿಷ್ಟಿಯರನ್ನ ನೋಡಿದ ಜನ್ರು ಅಲ್ಲಿಂದ ಓಡಿ ಹೋದ್ರು. 14  ಆದ್ರೆ ಎಲ್ಲಾಜಾರ ಹೊಲದ ಮಧ್ಯ ನಿಂತು ಬೆಳೆಯನ್ನ ಕಾಪಾಡಿದ, ಫಿಲಿಷ್ಟಿಯರನ್ನ ಕೊಲ್ತಾ ಹೋದ. ಹಾಗಾಗಿ ಯೆಹೋವ ಇಸ್ರಾಯೇಲ್ಯರಿಗೆ ಮಹಾಜಯ* ಕೊಟ್ಟನು.+ 15  ದಾವೀದನ ಸೇನೆಯಲ್ಲಿದ್ದ 30 ಮುಖ್ಯಸ್ಥರಲ್ಲಿ ಮೂರು ಗಂಡಸ್ರು ಬಂಡೆ ಹತ್ರ ಅಂದ್ರೆ ಅದುಲ್ಲಾಮಿನ+ ಗುಹೆಯಲ್ಲಿದ್ದ ದಾವೀದನ ಹತ್ರ ಹೋದ್ರು. ಆ ಸಮಯದಲ್ಲಿ ಫಿಲಿಷ್ಟಿಯರ ಸೈನ್ಯ ರೆಫಾಯೀಮ್‌ ಕಣಿವೆಯಲ್ಲಿ+ ಪಾಳೆಯ ಹೂಡಿತ್ತು. 16  ದಾವೀದ ಭದ್ರ ಕೋಟೆಯಲ್ಲಿ ಅಡಗಿಕೊಂಡಿದ್ದ. ಫಿಲಿಷ್ಟಿಯ ಸೈನಿಕರ ಒಂದು ಗುಂಪು ಬೆತ್ಲೆಹೇಮಲ್ಲಿತ್ತು. 17  ಆಗ ದಾವೀದ “ಬೆತ್ಲೆಹೇಮ್‌+ ಪಟ್ಟಣದ ಬಾಗಿಲ ಹತ್ರ ಇರೋ ಬಾವಿ ನೀರು ಕುಡಿಯೋಕೆ ಸಿಕ್ಕಿದ್ರೆ ಎಷ್ಟು ಚೆನ್ನಾಗಿತ್ತು” ಅಂತ ಹೇಳಿದ. 18  ಆಗ ಆ ಮೂವರು ವೀರ ಸೈನಿಕರು ಫಿಲಿಷ್ಟಿಯರ ಪಾಳೆಯಕ್ಕೆ ನುಗ್ಗಿ ಬೆತ್ಲೆಹೇಮಿನ ಬಾಗಿಲ ಹತ್ರ ಇದ್ದ ಬಾವಿ ನೀರು ಸೇದಿ ದಾವೀದನಿಗೆ ತಂದ್ಕೊಟ್ರು. ಆದ್ರೆ ದಾವೀದ ಆ ನೀರು ಕುಡಿಲಿಲ್ಲ, ಅದನ್ನ ಯೆಹೋವನ ಮುಂದೆ ನೆಲಕ್ಕೆ ಸುರಿದುಬಿಟ್ಟ. 19  ಆಮೇಲೆ ಅವನು “ಈ ನೀರು ಕುಡಿಯೋ ಯೋಚ್ನೆನೂ ಮಾಡಕ್ಕಾಗಲ್ಲ. ಕುಡಿದ್ರೆ ಅದು ನನ್ನ ದೇವರ ದೃಷ್ಟಿಯಲ್ಲಿ ತಪ್ಪಾಗುತ್ತೆ. ತಮ್ಮ ಜೀವವನ್ನೇ ಪಣಕ್ಕಿಟ್ಟ ಈ ಗಂಡಸ್ರ ರಕ್ತವನ್ನ ನಾನು ಹೇಗೆ ಕುಡಿಲಿ?+ ಯಾಕಂದ್ರೆ ಅವರು ತಮ್ಮ ಜೀವವನ್ನೇ ಅಪಾಯಕ್ಕೊಡ್ಡಿ ಈ ನೀರು ತಂದಿದ್ದಾರೆ” ಅಂದ. ಹೀಗೆ ಅವನು ಆ ನೀರು ಕುಡಿಯೋಕೆ ಒಪ್ಪಲಿಲ್ಲ. ಇವು ಅವನ ಮೂವರು ವೀರ ಸೈನಿಕರು ಮಾಡಿದ ಮಹಾನ್‌ ಕೆಲಸಗಳು. 20  ಯೋವಾಬನ+ ಸಹೋದರನಾದ ಅಬೀಷೈ+ ಬೇರೆ ಮೂವರಲ್ಲಿ ಮುಖ್ಯಸ್ಥನಾದ. ಒಮ್ಮೆ ಇವನು ತನ್ನ ಈಟಿ ಬೀಸಿ 300ಕ್ಕೂ ಜಾಸ್ತಿ ಜನ್ರನ್ನ ಕೊಂದುಹಾಕಿದ್ದ. ಹಾಗಾಗಿ ಆ ಮೂವರು ವೀರ ಸೈನಿಕರಿಗೆ ಇದ್ದಂಥ ಪ್ರಖ್ಯಾತಿ ಇವನಿಗೂ ಇತ್ತು.+ 21  ಆ ಮೂವರು ವೀರ ಸೈನಿಕರಲ್ಲಿ ಇಬ್ರಿಗಿಂತ ಅಬೀಷೈ ಹೆಚ್ಚು ಹೆಸ್ರು ಗಳಿಸಿದ್ದ, ಅವನು ಅವ್ರ ಮುಖ್ಯಸ್ಥನಾಗಿದ್ರೂ ಮೊದಲ ಮೂರು ವೀರ ಸೈನಿಕರನ್ನ ಮೀರಿಸೋಕೆ ಅವನಿಂದ ಆಗಲಿಲ್ಲ. 22  ಯೆಹೋಯಾದನ ಮಗ ಬೆನಾಯ+ ಒಬ್ಬ ಧೈರ್ಯಶಾಲಿ.* ಅವನು ಕಬ್ಜಯೇಲಲ್ಲಿ+ ಬಹಳಷ್ಟು ಸಾಹಸಗಳನ್ನ ಮಾಡಿದ್ದ. ಅವನು ಮೋವಾಬಿನ ಅರೀಯೇಲನ ಇಬ್ರು ಗಂಡು ಮಕ್ಕಳನ್ನ ಕೊಂದ. ಹಿಮ ಬೀಳ್ತಿದ್ದ ದಿನ ಅವನು ಒಂದು ನೀರಿನ ಹಳ್ಳಕ್ಕೆ ಇಳಿದು ಸಿಂಹವನ್ನ ಕೊಂದ.+ 23  ಅವನು ತುಂಬಾ ಎತ್ರ ಇದ್ದ ಅಂದ್ರೆ ಐದು ಮೊಳ* ಎತ್ತರ ಇದ್ದ ಒಬ್ಬ ಈಜಿಪ್ಟ್‌ ವ್ಯಕ್ತಿಯನ್ನ ಕೊಂದ.+ ಆ ವ್ಯಕ್ತಿ ಕೈಯಲ್ಲಿ ಮಗ್ಗ ನೇಯುವವರ ಹಿಡಿ ತರ ಇದ್ದ ಈಟಿ+ ಇದ್ರೂ ಒಂದು ಕೋಲು ಹಿಡ್ಕೊಂಡು ಅವನ ವಿರುದ್ಧ ಹೋದ. ಅವನ ಕೈಯಿಂದ ಆ ಈಟಿ ಕಿತ್ಕೊಂಡು ಅದ್ರಿಂದಾನೇ ಅವನನ್ನ ಕೊಂದುಹಾಕಿದ.+ 24  ಇವು ಯೆಹೋಯಾದನ ಮಗ ಬೆನಾಯ ಮಾಡಿದ ಸಾಹಸಗಳು. ಆ ಮೂವರು ವೀರ ಸೈನಿಕರಿಗೆ ಇದ್ದಂಥ ಪ್ರಖ್ಯಾತಿ ಇವನಿಗೂ ಇತ್ತು. 25  ದಾವೀದನ 30 ವೀರ ಸೈನಿಕರಿಗಿಂತ ಬೆನಾಯ ಉತ್ತಮನಾಗಿದ್ರೂ ಮೊದಲ ಮೂವರು ವೀರ ಸೈನಿಕರನ್ನ ಮೀರಿಸೋಕೆ ಇವನಿಗೆ ಆಗಲಿಲ್ಲ.+ ಹಾಗಿದ್ರೂ ದಾವೀದ ಇವನನ್ನ ತನ್ನ ಅಂಗರಕ್ಷಕರ ಅಧಿಕಾರಿಯಾಗಿ ಇಟ್ಟ. 26  ಸೈನ್ಯದಲ್ಲಿದ್ದ ವೀರ ಸೈನಿಕರು ಯಾರಂದ್ರೆ ಯೋವಾಬನ ಸಹೋದರ ಅಸಾಹೇಲ,+ ಬೆತ್ಲೆಹೇಮಿನ ದೋದೋವಿನ ಮಗ ಎಲ್ಹಾನಾನ್‌,+ 27  ಹರೋರಿನವನಾದ ಶಮ್ಮೋತ್‌, ಪೆಲೋನ್ಯನಾದ ಹೆಲೆಚ್‌, 28  ತೆಕೋವದವನಾದ ಇಕ್ಕೇಷನ ಮಗ ಈರಾ,+ ಅನಾತೋತಿನವನಾದ ಅಬೀಯೆಜೆರ್‌,+ 29  ಹುಷಾತ್ಯನಾದ ಸಿಬ್ಕೈ,+ ಅಹೋಹಿನವನಾದ ಈಲೈ, 30  ನೆಟೋಫಾತ್ಯನಾದ ಮಹರೈ,+ ನೆಟೋಫಾತ್ಯನಾದ ಬಾಣನ ಮಗ ಹೇಲೆದ್‌,+ 31  ಬೆನ್ಯಾಮೀನ್‌+ ಕುಲದ ಗಿಬೆಯದವನಾದ ರೀಬೈನ ಮಗ ಈತೈ, ಪಿರಾತೋನ್ಯನಾದ ಬೆನಾಯ, 32  ಗಾಷ್‌+ ನಾಲೆಗಳ* ಹೂರೈ, ಬೇತ್‌-ಅರಾಬಿನವನಾದ ಅಬೀಯೇಲ್‌, 33  ಬಹುರೀಮ್ಯನಾದ ಅಜ್ಮಾವೇತ್‌, ಶಾಲ್ಬೋನ್ಯನಾದ ಎಲೆಯಖ್ಬಾ, 34  ಗೀಜೋನ್ಯನಾದ ಹಾಷೇಮನ ಮಕ್ಕಳು, ಹರಾರ್ಯನಾದ ಶಾಗೇಯ ಮಗ ಯೋನಾತಾನ, 35  ಹರಾರ್ಯನಾದ ಶಾಕಾರನ ಮಗ ಅಹೀಯಾಮ್‌, ಊರನ ಮಗ ಎಲೀಫಲ್‌, 36  ಮೆಕೆರಾತ್ಯನಾದ ಹೇಫೆರ್‌, ಪೆಲೋನ್ಯನಾದ ಅಹೀಯ, 37  ಕರ್ಮೆಲ್ಯನಾದ ಹೆಚ್ರೋ, ಎಜ್‌ಬೈ ಮಗ ನಾರೈ, 38  ನಾತಾನನ ಸಹೋದರ ಯೋವೇಲ, ಹಗ್ರೀಯ ಮಗ ಮಿಬ್ಹಾರ್‌, 39  ಅಮ್ಮೋನಿಯನಾದ ಚೆಲೆಕ್‌, ಚೆರೂಯಳ ಮಗ ಯೋವಾಬನ ಆಯುಧಗಳನ್ನ ಹೊರ್ತಿದ್ದ ಬೇರೋತ್ಯನಾದ ನಹರೈ, 40  ಇತ್ರೀಯನಾದ ಈರಾ, ಇತ್ರೀಯನಾದ ಗಾರೇಬ, 41  ಹಿತ್ತಿಯನಾದ ಊರೀಯ,+ ಅಹ್ಲೈಯ ಮಗ ಜಾಬಾದ, 42  ರೂಬೇನ್ಯನಾದ ಶೀಜನ ಮಗ ಅದೀನ, ಇವನು ರೂಬೇನ್ಯರ ಮತ್ತು ಅವನ ಜೊತೆ ಇದ್ದ 30 ಗಂಡಸ್ರ ಒಬ್ಬ ಮುಖ್ಯಸ್ಥನಾಗಿದ್ದ, 43  ಮಾಕಾನ ಮಗ ಹಾನಾನ್‌, ಮೆತೆನ್ಯನಾದ ಯೋಷಾಫಾಟ್‌, 44  ಅಷ್ಟೆರಾತ್ಯನಾದ ಉಜ್ಜಿಯ, ಅರೋಯೇರಿನ ಹೋತಾಮನ ಮಕ್ಕಳಾದ ಶಾಮಾ, ಯೆಗೀಯೇಲ್‌, 45  ಶಿಮ್ರಿಯ ಮಗ ಯೆದೀಯಯೇಲ್‌, ತೀಚೀಯನಾದ ಅವನ ಸಹೋದರ ಯೋಹ, 46  ಮಹವೀಯನಾದ ಎಲೀಯೇಲ್‌, ಎಲ್ನಾಮನ ಮಕ್ಕಳಾದ ಯೆರೀಬೈ, ಯೋಷವ್ಯ, ಮೋವಾಬ್ಯನಾದ ಇತ್ಮ, 47  ಎಲೀಯೇಲ್‌, ಓಬೇದ, ಮೆಚೋಬಾಯದವನಾದ ಯಾಸೀಯೇಲ.

ಪಾದಟಿಪ್ಪಣಿ

ಅಕ್ಷ. “ನಾವು ನಿನ್ನ ಸ್ವಂತ ಮೂಳೆ, ಮಾಂಸ.”
ಅಥವಾ “ದಿಬ್ಬದಲ್ಲಿ.” ಹೀಬ್ರು ಪದದ ಅರ್ಥ ಭರ್ತಿಮಾಡು.
ಅಥವಾ “ಜವೆಗೋದಿಯ.”
ಅಥವಾ “ರಕ್ಷಣೆ.”
ಅಕ್ಷ. “ಒಬ್ಬ ಧೀರನ ಮಗ.”
ಅವನ ಎತ್ತರ ಸುಮಾರು 2.23 ಮೀ. (7 ಅಡಿ 3 ಇಂಚು) ಪರಿಶಿಷ್ಟ ಬಿ14 ನೋಡಿ.