ಒಂದನೇ ಸಮುವೇಲ 11:1-15
11 ಆಮೇಲೆ ಅಮ್ಮೋನಿಯನಾದ+ ನಾಹಾಷ ಗಿಲ್ಯಾದಿಗೆ ಬಂದು ಯಾಬೇಷಿನ+ ವಿರುದ್ಧ ಸೈನ್ಯ ನಿಲ್ಲಿಸಿದ. ಯಾಬೇಷಿನ ಗಂಡಸ್ರೆಲ್ಲ ನಾಹಾಷನಿಗೆ “ನಮ್ಮ ಜೊತೆ ಒಂದು ಒಪ್ಪಂದ ಮಾಡ್ಕೊ. ನಾವು ನಿನ್ನ ಸೇವೆ ಮಾಡ್ತೀವಿ” ಅಂದ್ರು.
2 ಅಮ್ಮೋನಿಯನಾದ ನಾಹಾಷ ಅವ್ರಿಗೆ “ನಿಮ್ಮ ಜೊತೆ ಒಪ್ಪಂದ ಮಾಡ್ಕೊಳ್ತೀನಿ, ಆದ್ರೆ ನನ್ನದೊಂದು ಷರತ್ತು. ಇಸ್ರಾಯೇಲ್ಯರನ್ನ ಅವಮಾನ ಮಾಡೋಕೆ ನಿಮ್ಮಲ್ಲಿ ಪ್ರತಿಯೊಬ್ರ ಬಲಗಣ್ಣನ್ನ ಕಿತ್ತುಹಾಕ್ತೀನಿ, ಒಪ್ಕೊಳ್ತೀರಾ?” ಅಂದ.
3 ಅದಕ್ಕೆ ಯಾಬೇಷಿನ ಹಿರಿಯರು “ನಮಗೆ ಏಳು ದಿನ ಸಮಯ ಕೊಡು. ನಾವು ಸಂದೇಶವಾಹಕರನ್ನ ಇಸ್ರಾಯೇಲಿನ ಎಲ್ಲ ಪ್ರದೇಶಗಳಿಗೆ ಕಳಿಸ್ತೀವಿ. ನಮ್ಮನ್ನ ಯಾರೂ ಕಾಪಾಡದಿದ್ರೆ ನಾವೇ ನಿಂಗೆ ಶರಣಾಗ್ತೀವಿ” ಅಂದ್ರು.
4 ಸ್ವಲ್ಪ ಸಮಯ ಆದ್ಮೇಲೆ ಸಂದೇಶವಾಹಕರು ಸೌಲ ಇದ್ದ ಗಿಬೆಯಾಗೆ+ ಬಂದು ಜನ್ರಿಗೆ ಕೇಳೋ ಹಾಗೆ ಈ ವಿಷ್ಯನ ಹೇಳಿದ್ರು. ಆಗ ಜನ್ರೆಲ್ಲ ಜೋರಾಗಿ ಅತ್ರು.
5 ಅಷ್ಟರಲ್ಲಿ ಹೊಲದಿಂದ ದನಗಳ ಹಿಂಡಿನ ಹಿಂದೆ ಬರ್ತಿದ್ದ ಸೌಲ “ಈ ಜನ್ರಿಗೆ ಏನಾಯ್ತು? ಯಾಕೆ ಅಳ್ತಿದ್ದಾರೆ?” ಅಂತ ಕೇಳಿದ. ಆಗ ಅವರು ಯಾಬೇಷಿನ ಗಂಡಸ್ರು ಹೇಳಿದ ಮಾತುಗಳನ್ನ ಹೇಳಿದ್ರು.
6 ಸೌಲ ಅದನ್ನ ಕೇಳಿಸ್ಕೊಂಡಾಗ ದೇವರ ಪವಿತ್ರಶಕ್ತಿ ಅವನಿಗೆ ಶಕ್ತಿ ಕೊಡ್ತು.+ ಅವನಿಗೆ ತುಂಬ ಕೋಪ ಬಂತು.
7 ಅವನು ಒಂದು ಜೋಡಿ ಹೋರಿಗಳನ್ನ ತಗೊಂಡು ತುಂಡುತುಂಡಾಗಿ ಕತ್ತರಿಸಿ ಆ ತುಂಡುಗಳನ್ನ ಸಂದೇಶವಾಹಕರ ಮೂಲಕ ಇಸ್ರಾಯೇಲಿನ ಎಲ್ಲ ಪ್ರಾಂತ್ಯಗಳಿಗೆ ಕಳಿಸ್ಕೊಟ್ಟ. ಅವರು ಹೋಗಿ ಜನ್ರಿಗೆ “ಸೌಲ ಮತ್ತು ಸಮುವೇಲ ಹೇಳಿದ ಹಾಗೆ ಕೇಳದವ್ರ ದನ-ಕುರಿಗಳಿಗೂ ಇದೇ ಗತಿ ಆಗುತ್ತೆ!” ಅಂದ್ರು. ಆಗ ಎಲ್ಲ ಜನ್ರಿಗೆ ಯೆಹೋವನ ಮೇಲೆ ಭಯ ಬಂತು. ಹಾಗಾಗಿ ಅವರು ಒಟ್ಟಾಗಿ ಬಂದ್ರು.
8 ಅವ್ರನ್ನ ಸೌಲ ಬೆಜೆಕಿನಲ್ಲಿ ಲೆಕ್ಕ ಮಾಡಿದ. ಅವ್ರಲ್ಲಿ 3,00,000 ಇಸ್ರಾಯೇಲ್ಯರು, 30,000 ಯೆಹೂದದ ಗಂಡಸ್ರು ಇದ್ರು.
9 ಅವರು ಯಾಬೇಷಿಂದ ಬಂದಿದ್ದ ಸಂದೇಶವಾಹಕರಿಗೆ “‘ನಾಳೆ ಮಧ್ಯಾಹ್ನ ಅಷ್ಟಕ್ಕೆ* ನಿಮಗೆ ರಕ್ಷಣೆ ಸಿಗುತ್ತೆ’ ಅಂತ ಗಿಲ್ಯಾದಿನಲ್ಲಿರೋ ಯಾಬೇಷಿನ ಗಂಡಸ್ರಿಗೆ ಹೇಳಿ” ಅಂದ್ರು. ಸಂದೇಶವಾಹಕರು ಬಂದು ಯಾಬೇಷಿನ ಗಂಡಸ್ರಿಗೆ ಅದನ್ನ ಹೇಳಿದಾಗ ಅವ್ರಿಗೆ ತುಂಬ ಖುಷಿ ಆಯ್ತು.
10 ಯಾಬೇಷಿನ ಗಂಡಸ್ರು ಅಮ್ಮೋನಿಯರಿಗೆ “ನಾಳೆ ನಿಮಗೆ ಶರಣಾಗ್ತೀವಿ. ನಿಮಗೆ ಸರಿ ಅನಿಸಿದನ್ನೇ ಮಾಡಿ”+ ಅಂದ್ರು.
11 ಸೌಲ ಮಾರನೇ ದಿನ ಜನ್ರನ್ನ ಮೂರು ಗುಂಪು ಮಾಡಿದ. ಅವರು ತಡರಾತ್ರಿಯಲ್ಲಿ* ಅಮ್ಮೋನಿಯರ+ ಪಾಳೆಯದ ಮಧ್ಯ ಹೋದ್ರು. ಮಧ್ಯಾಹ್ನದ ತನಕ ಅವ್ರನ್ನ ಸಾಯಿಸಿದ್ರು. ಪಾರಾಗಿ ಉಳಿದವರು ಒಬ್ಬೊಬ್ರು ಒಂದೊಂದು ದಿಕ್ಕಿಗೆ ಓಡಿಹೋದ್ರು.
12 ಆಮೇಲೆ ಜನ ಸಮುವೇಲನಿಗೆ “‘ಸೌಲ ನಮ್ಮ ರಾಜನಾಗೋಕೆ ಯೋಗ್ಯನಲ್ಲ’+ ಅಂತ ಹೇಳಿದವರು ಎಲ್ಲಿ? ಅವ್ರನ್ನ ನಮಗೆ ಒಪ್ಪಿಸಿ, ಅವ್ರನ್ನ ಕೊಂದುಹಾಕ್ತೀವಿ” ಅಂದ್ರು.
13 ಆದ್ರೆ ಸೌಲ “ಇವತ್ತು ಯಾರನ್ನೂ ಕೊಲ್ಲಬೇಡಿ.+ ಯಾಕಂದ್ರೆ ಯೆಹೋವ ಇವತ್ತು ಇಸ್ರಾಯೇಲ್ಯರನ್ನ ಕಾಪಾಡಿದ್ದಾನೆ” ಅಂದ.
14 ಸಮುವೇಲ ಜನ್ರಿಗೆ “ಬನ್ನಿ ಗಿಲ್ಗಾಲಿಗೆ+ ಹೋಗೋಣ. ಸೌಲನೇ ರಾಜ ಅಂತ ಇನ್ನೊಂದು ಸಲ ಎಲ್ರಿಗೂ ಹೇಳೋಣ”+ ಅಂದ.
15 ಹಾಗಾಗಿ ಜನ್ರೆಲ್ಲ ಗಿಲ್ಗಾಲಿಗೆ ಹೋದ್ರು. ಅಲ್ಲಿ ಅವರು ಸೌಲನನ್ನ ಯೆಹೋವನ ಮುಂದೆ ರಾಜನಾಗಿ ಮಾಡಿದ್ರು. ಯೆಹೋವನ ಮುಂದೆ ಸಮಾಧಾನ ಬಲಿಗಳನ್ನ ಅರ್ಪಿಸಿದ್ರು.+ ಸೌಲ ಮತ್ತು ಇಸ್ರಾಯೇಲಿನ ಎಲ್ಲ ಗಂಡಸ್ರು ತುಂಬ ಖುಷಿಯಿಂದ ಕುಣಿದಾಡಿದ್ರು.+