ಒಂದನೇ ಸಮುವೇಲ 5:1-12
5 ಫಿಲಿಷ್ಟಿಯರು ಸತ್ಯ ದೇವರ ಮಂಜೂಷ ವಶ ಮಾಡ್ಕೊಂಡು+ ಅದನ್ನ ಎಬೆನೆಜೆರಿನಿಂದ ಅಷ್ಡೋದಿಗೆ ತಗೊಂಡು ಹೋದ್ರು.
2 ಫಿಲಿಷ್ಟಿಯರು ಸತ್ಯ ದೇವರ ಮಂಜೂಷವನ್ನ ದಾಗೋನನ ಆಲಯಕ್ಕೆ* ತಂದು ಅದನ್ನ ದಾಗೋನನ+ ಪಕ್ಕದಲ್ಲಿ ಇಟ್ರು.
3 ಅಷ್ಡೋದಿನವರು ಮಾರನೇ ದಿನ ಬೆಳಿಗ್ಗೆ ಬೇಗ ಎದ್ದು ನೋಡಿದಾಗ ದಾಗೋನನ ಮೂರ್ತಿ ಯೆಹೋವನ ಮಂಜೂಷದ ಮುಂದೆ ನೆಲಕ್ಕೆ ಮುಖ ಮಾಡ್ಕೊಂಡು ಬಿದ್ದಿತ್ತು.+ ಹಾಗಾಗಿ ಅವರು ಅದನ್ನ ಎತ್ತಿ ವಾಪಸ್ ಅದ್ರ ಜಾಗದಲ್ಲಿ ಇಟ್ರು.+
4 ಎರಡನೇ ದಿನ ಬೆಳಿಗ್ಗೆ ಬೇಗ ಎದ್ದು ನೋಡಿದಾಗ ದಾಗೋನನ ಮೂರ್ತಿ ಯೆಹೋವನ ಮಂಜೂಷದ ಮುಂದೆ ನೆಲಕ್ಕೆ ಮುಖ ಮಾಡ್ಕೊಂಡು ಬಿದ್ದಿತ್ತು. ಅದ್ರ ತಲೆ ಎರಡು ಅಂಗೈಗಳು ಮುರಿದು ಹೊಸ್ತಿಲ ಮೇಲೆ ಬಿದ್ದಿತ್ತು. ಮೀನಿನ ತರ ಕಾಣ್ತಿದ್ದ ಅದ್ರ ದೇಹ* ಮಾತ್ರ ಉಳಿದಿತ್ತು.
5 ಹಾಗಾಗಿ ಇವತ್ತಿನ ತನಕ ದಾಗೋನನ ಪುರೋಹಿತರು, ಅವನ ಆಲಯಕ್ಕೆ ಹೋಗೋ ಪ್ರತಿಯೊಬ್ರು ಅಷ್ಡೋದಿನಲ್ಲಿರೋ ದಾಗೋನನ ಆಲಯದ ಹೊಸ್ತಿಲನ್ನ ತುಳಿಯಲ್ಲ.
6 ಯೆಹೋವ ಅಷ್ಡೋದಿನವ್ರಿಗೆ ಶಿಕ್ಷೆ ಕೊಟ್ಟನು. ಅಷ್ಡೋದಿನ ಮತ್ತು ಅದ್ರ ಪ್ರದೇಶಗಳ ಜನ್ರಿಗೆ ಮೂಲವ್ಯಾಧಿಯಿಂದ ತುಂಬ ಕಷ್ಟ ಕೊಟ್ಟನು.+
7 ಇದನ್ನ ನೋಡಿದ ಅಷ್ಡೋದಿನ ಗಂಡಸ್ರು “ಇಸ್ರಾಯೇಲ್ ದೇವರ ಮಂಜೂಷ ಇನ್ನು ಮುಂದೆ ನಮ್ಮ ಜೊತೆ ಇರೋದು ಬೇಡ. ಆತನು ನಮಗೆ, ನಮ್ಮ ದೇವರಾದ ದಾಗೋನನಿಗೆ ಶಿಕ್ಷೆ ಕೊಟ್ಟಿದ್ದಾನೆ” ಅಂದ್ರು.
8 ಹಾಗಾಗಿ ಅವರು ಫಿಲಿಷ್ಟಿಯರ ಎಲ್ಲ ಪ್ರಭುಗಳನ್ನ ಕರೆದು “ಇಸ್ರಾಯೇಲ್ ದೇವರ ಮಂಜೂಷವನ್ನ ಏನು ಮಾಡೋಣ?” ಅಂತ ಕೇಳಿದ್ರು. ಅದಕ್ಕೆ ಪ್ರಭುಗಳು “ಇಸ್ರಾಯೇಲ್ ದೇವರ ಮಂಜೂಷವನ್ನ ಗತ್+ ಪಟ್ಟಣಕ್ಕೆ ಕಳಿಸ್ಕೊಡೋಣ” ಅಂದ್ರು. ಹಾಗಾಗಿ ಇಸ್ರಾಯೇಲ್ ದೇವರ ಮಂಜೂಷವನ್ನ ಅಲ್ಲಿಗೆ ತಗೊಂಡು ಹೋದ್ರು.
9 ಅವರು ಅದನ್ನ ಗತ್ ಪಟ್ಟಣಕ್ಕೆ ತಗೊಂಡು ಹೋದಾಗ ಯೆಹೋವ ಆ ಪಟ್ಟಣಕ್ಕೆ ಶಿಕ್ಷೆ ಕೊಟ್ಟು ಅವ್ರಿಗೆ ತುಂಬ ಭಯ ಹುಟ್ಟಿಸಿದನು. ಆತನು ಆ ಪಟ್ಟಣದಲ್ಲಿದ್ದ ಚಿಕ್ಕವ್ರಿಂದ ದೊಡ್ಡವರ ತನಕ ಎಲ್ರಿಗೂ ಮೂಲವ್ಯಾಧಿ ಬರೋ ತರ ಮಾಡಿದನು.+
10 ಹಾಗಾಗಿ ಅವರು ಸತ್ಯ ದೇವರ ಮಂಜೂಷವನ್ನ ಎಕ್ರೋನಿಗೆ+ ಕಳಿಸ್ಕೊಟ್ರು. ಸತ್ಯ ದೇವರ ಮಂಜೂಷ ಎಕ್ರೋನಿಗೆ ಬಂದ ತಕ್ಷಣ ಎಕ್ರೋನಿನವರು “ನಮ್ಮನ್ನ, ನಮ್ಮ ಜನ್ರನ್ನ ಸಾಯಿಸೋಕೆ ಇಸ್ರಾಯೇಲ್ ದೇವರ ಮಂಜೂಷವನ್ನ ಅವರು ಇಲ್ಲಿಗೆ ತಂದಿದ್ದಾರೆ!”+ ಅಂತ ಕೂಗಾಡಿದ್ರು.
11 ಆಮೇಲೆ ಅವರು ಫಿಲಿಷ್ಟಿಯರ ಎಲ್ಲ ಪ್ರಭುಗಳನ್ನ ಕರೆದು “ನಾವು, ನಮ್ಮ ಜನ ಸಾಯದ ಹಾಗೆ ಇಸ್ರಾಯೇಲ್ ದೇವರ ಮಂಜೂಷವನ್ನ ಮತ್ತೆ ಅದ್ರ ಸ್ಥಾನಕ್ಕೆ ಕಳಿಸಿಬಿಡಿ” ಅಂದ್ರು. ಯಾಕಂದ್ರೆ ಸಾವಿನ ಭಯ ಇಡೀ ಪಟ್ಟಣದಲ್ಲಿ ಹಬ್ಬಿತ್ತು. ಸತ್ಯ ದೇವರು ಅವ್ರಿಗೆ ಶಿಕ್ಷೆ ಕೊಟ್ಟಿದ್ದನು.+
12 ಸಾಯದೆ ಉಳಿದವ್ರಿಗೆ ಮೂಲವ್ಯಾಧಿ ರೋಗ ಬಂತು. ಸಹಾಯಕ್ಕಾಗಿ ಬೇಡ್ಕೊಳ್ತಿದ್ದ ಪಟ್ಟಣದ ಜನ್ರ ಅಳು ಮುಗಿಲು ಮುಟ್ಟಿತು.