ಒಂದನೇ ಸಮುವೇಲ 7:1-17

  • ಕಿರ್ಯತ್ಯಾರೀಮಿನಲ್ಲಿ ಮಂಜೂಷ (1)

  • ‘ಯೆಹೋವನನ್ನ ಮಾತ್ರ ಆರಾಧಿಸಿ’ ಅನ್ನೋ ಸಮುವೇಲನ ಬುದ್ಧಿಮಾತು (2-6)

  • ಮಿಚ್ಪಾದಲ್ಲಿ ಇಸ್ರಾಯೇಲ್ಯರಿಗೆ ಸಿಕ್ಕ ಜಯ (7-14)

  • ಸಮುವೇಲ ಇಸ್ರಾಯೇಲ್ಯರಿಗೆ ನ್ಯಾಯತೀರಿಸಿದ (15-17)

7  ಆಗ ಕಿರ್ಯತ್‌-ಯಾರೀಮಿನ ಗಂಡಸ್ರು ಬಂದು ಯೆಹೋವನ ಮಂಜೂಷವನ್ನ ಬೆಟ್ಟದ ಮೇಲಿದ್ದ ಅಬೀನಾದಾಬನ ಮನೆಗೆ ತಗೊಂಡು ಹೋದ್ರು.+ ಯೆಹೋವನ ಮಂಜೂಷವನ್ನ ಕಾಯೋಕೆ ಅವನ ಮಗ ಎಲ್ಲಾಜಾರನನ್ನ ಪವಿತ್ರೀಕರಿಸಿದ್ರು.  ಮಂಜೂಷ ಕಿರ್ಯತ್‌-ಯಾರೀಮಿಗೆ ಬಂದು ತುಂಬ ಸಮಯ ಅಂದ್ರೆ 20 ವರ್ಷ ಆಗಿತ್ತು. ಆಮೇಲೆ ಇಸ್ರಾಯೇಲ್‌ ಜನ್ರೆಲ್ಲ ಸಹಾಯಕ್ಕಾಗಿ ಯೆಹೋವನ ಕಡೆ ತಿರುಗಿದ್ರು.+  ಸಮುವೇಲ ಅವ್ರಿಗೆ “ನೀವು ಪೂರ್ಣ ಹೃದಯದಿಂದ ಯೆಹೋವನ ಹತ್ರ ವಾಪಸ್‌ ಬಂದಿರೋದಾದ್ರೆ,+ ನಿಮ್ಮಲ್ಲಿರೋ ಬೇರೆ ದೇವರುಗಳನ್ನ,+ ಅಷ್ಟೋರೆತ್‌ ಮೂರ್ತಿಗಳನ್ನ+ ತೆಗೆದುಹಾಕಿ. ಚಂಚಲರಾಗದೆ ನಿಮ್ಮ ಹೃದಯಗಳನ್ನ ಯೆಹೋವನ ಕಡೆ ತಿರುಗಿಸಿ. ಆತನನ್ನ ಮಾತ್ರ ಆರಾಧನೆ ಮಾಡಿ.+ ಆಗ ಆತನು ಫಿಲಿಷ್ಟಿಯರ ಕೈಯಿಂದ ನಿಮ್ಮನ್ನ ರಕ್ಷಿಸ್ತಾನೆ”+ ಅಂದ.  ಹಾಗಾಗಿ ಇಸ್ರಾಯೇಲ್ಯರು ಬಾಳ್‌ ದೇವರುಗಳನ್ನ, ಅಷ್ಟೋರೆತ್‌ ಮೂರ್ತಿಗಳನ್ನ ತೆಗೆದುಹಾಕಿ ಯೆಹೋವನನ್ನ ಮಾತ್ರ ಆರಾಧಿಸಿದ್ರು.+  ಆಮೇಲೆ ಸಮುವೇಲ “ಇಡೀ ಇಸ್ರಾಯೇಲನ್ನ ಮಿಚ್ಪಾದಲ್ಲಿ ಒಟ್ಟುಸೇರಿಸಿದ.+ ನಿಮ್ಮ ಪರವಾಗಿ ನಾನು ಯೆಹೋವನಿಗೆ ಪ್ರಾರ್ಥನೆ ಮಾಡ್ತೀನಿ”+ ಅಂದ.  ಹಾಗಾಗಿ ಅವರು ಮಿಚ್ಪಾದಲ್ಲಿ ಸೇರಿಬಂದು ನೀರನ್ನ ಸೇದಿ ಯೆಹೋವನ ಮುಂದೆ ಸುರಿದು ಆ ದಿನ ಉಪವಾಸ ಮಾಡಿದ್ರು.+ ಅಲ್ಲಿ ಅವರು “ನಾವು ಯೆಹೋವನ ವಿರುದ್ಧ ಪಾಪ ಮಾಡಿದ್ದೀವಿ”+ ಅಂದ್ರು. ಸಮುವೇಲ ಇಸ್ರಾಯೇಲ್ಯರ ಮೇಲೆ ನ್ಯಾಯಾಧೀಶನಾಗಿ ಮಿಚ್ಪಾದಲ್ಲಿ ನ್ಯಾಯ ತೀರಿಸೋಕೆ ಶುರುಮಾಡಿದ.+  ಇಸ್ರಾಯೇಲ್ಯರು ಮಿಚ್ಪಾದಲ್ಲಿ ಸೇರಿಬಂದಿದ್ರು ಅನ್ನೋ ಸುದ್ದಿ ಫಿಲಿಷ್ಟಿಯರ ಕಿವಿಗೆ ಬಿದ್ದಾಗ, ಫಿಲಿಷ್ಟಿಯರ ಪ್ರಭುಗಳು+ ಇಸ್ರಾಯೇಲ್ಯರ ಮೇಲೆ ದಾಳಿ ಮಾಡೋಕೆ ಹೋದ್ರು. ಫಿಲಿಷ್ಟಿಯರು ಬರ್ತಿದ್ದಾರೆ ಅಂತ ಗೊತ್ತಾದಾಗ ಇಸ್ರಾಯೇಲ್ಯರಿಗೆ ತುಂಬ ಭಯ ಆಯ್ತು.  ಹಾಗಾಗಿ ಇಸ್ರಾಯೇಲ್ಯರು ಸಮುವೇಲನಿಗೆ “ನಮಗೆ ಸಹಾಯ ಮಾಡು, ಫಿಲಿಷ್ಟಿಯರ ಕೈಯಿಂದ ನಮ್ಮನ್ನ ರಕ್ಷಿಸು ಅಂತ ನಮ್ಮ ದೇವರಾದ ಯೆಹೋವನಿಗೆ ಪ್ರಾರ್ಥಿಸೋದನ್ನ ನಿಲ್ಲಿಸಬೇಡ”+ ಅಂತ ಕೇಳ್ಕೊಂಡ್ರು.  ಆಮೇಲೆ ಸಮುವೇಲ ಹಾಲು ಕುಡಿಯೋ ಕುರಿಮರಿಯನ್ನ ತಂದು ಯೆಹೋವನಿಗೆ ಸರ್ವಾಂಗಹೋಮ ಬಲಿಯಾಗಿ ಅರ್ಪಿಸಿದ.+ ಇಸ್ರಾಯೇಲ್ಯರಿಗೆ ಸಹಾಯ ಮಾಡು ಅಂತ ಯೆಹೋವನನ್ನ ಬೇಡ್ಕೊಂಡ. ಅವನ ಪ್ರಾರ್ಥನೆಗೆ ಯೆಹೋವ ಉತ್ತರ ಕೊಟ್ಟನು.+ 10  ಸಮುವೇಲ ಸರ್ವಾಂಗಹೋಮ ಬಲಿ ಅರ್ಪಿಸ್ತಾ ಇರುವಾಗ ಇಸ್ರಾಯೇಲ್ಯರ ವಿರುದ್ಧ ಯುದ್ಧ ಮಾಡೋಕೆ ಫಿಲಿಷ್ಟಿಯರು ಹತ್ರ ಬಂದುಬಿಟ್ಟಿದ್ರು. ಅವತ್ತು ಯೆಹೋವ ಫಿಲಿಷ್ಟಿಯರ ಮೇಲೆ ದೊಡ್ಡ ಶಬ್ದದಲ್ಲಿ ಗುಡುಗು+ ಬರೋ ತರ ಮಾಡಿ ಅವ್ರನ್ನ ಗಲಿಬಿಲಿ ಮಾಡಿದನು.+ ಅವರು ಇಸ್ರಾಯೇಲ್ಯರ ಮುಂದೆ ಸೋತು ಹೋದ್ರು.+ 11  ಆಗ ಇಸ್ರಾಯೇಲ್ಯರು ಮಿಚ್ಪಾದಿಂದ ಫಿಲಿಷ್ಟಿಯರನ್ನ ಅಟ್ಟಿಸ್ಕೊಂಡು ಬೇತ್ಕರಿನ ದಕ್ಷಿಣದ ತನಕ ಅವ್ರನ್ನ ಹತಿಸ್ತಾ ಹೋದ್ರು. 12  ಆಮೇಲೆ ಸಮುವೇಲ ಒಂದು ಕಲ್ಲು ತಗೊಂಡು+ ಮಿಚ್ಪಾ ಮತ್ತು ಯೆಷಾನಾ ಮಧ್ಯ ಇಟ್ಟ. ಆ ಕಲ್ಲಿಗೆ ಎಬೆನೆಜೆರ್‌* ಅಂತ ಹೆಸ್ರಿಟ್ಟು “ಯೆಹೋವ ನಮಗೆ ಇಲ್ಲಿ ತನಕ ಸಹಾಯ ಮಾಡಿದ್ದಾನೆ”+ ಅಂದ. 13  ಹೀಗೆ ಫಿಲಿಷ್ಟಿಯರು ಸೋತು ಹೋದ್ರು. ಅದಾದ್ಮೇಲೆ ಇಸ್ರಾಯೇಲ್ಯರ ಪ್ರಾಂತ್ಯಕ್ಕೆ ಅವರು ಮತ್ತೆ ಬರ್ಲೇ ಇಲ್ಲ.+ ಸಮುವೇಲ ಬದುಕಿರೋ ತನಕ ಯೆಹೋವನ ಕೈ ಫಿಲಿಷ್ಟಿಯರ ವಿರುದ್ಧನೇ ಇತ್ತು.+ 14  ಅಷ್ಟೇ ಅಲ್ಲ ಫಿಲಿಷ್ಟಿಯರು ಎಕ್ರೋನಿನಿಂದ ಗತ್‌ ತನಕ ಇಸ್ರಾಯೇಲ್ಯರಿಂದ ಕಿತ್ಕೊಂಡಿದ್ದ ಪಟ್ಟಣಗಳನ್ನ ಅವ್ರಿಗೆ ವಾಪಸ್‌ ಕೊಟ್ರು. ಇಸ್ರಾಯೇಲ್ಯರು ಫಿಲಿಷ್ಟಿಯರ ಕೈಯಿಂದ ತಮ್ಮ ಪ್ರಾಂತ್ಯಗಳನ್ನ ಮತ್ತೆ ಪಡ್ಕೊಂಡ್ರು. ಇಸ್ರಾಯೇಲ್‌ ಮತ್ತು ಅಮೋರಿಯರ ಮಧ್ಯನೂ ಶಾಂತಿ ಇತ್ತು.+ 15  ಸಮುವೇಲ ತನ್ನ ಇಡೀ ಜೀವಮಾನ ಇಸ್ರಾಯೇಲಿಗೆ ನ್ಯಾಯಾಧೀಶ ಆಗಿದ್ದ.+ 16  ಪ್ರತಿವರ್ಷ ಅವನು ಬೆತೆಲ್‌,+ ಗಿಲ್ಗಾಲ್‌+ ಮತ್ತು ಮಿಚ್ಪಾಗೆ+ ಹೋಗ್ತಿದ್ದ. ಅಲ್ಲೆಲ್ಲ ಅವನು ಇಸ್ರಾಯೇಲಿಗೆ ನ್ಯಾಯತೀರಿಸ್ತಿದ್ದ. 17  ಆದ್ರೆ ಅವನ ಮನೆ ರಾಮದಲ್ಲಿತ್ತು.+ ಹಾಗಾಗಿ ಅವನು ಅಲ್ಲಿಗೆ ವಾಪಸ್‌ ಹೋಗ್ತಿದ್ದ. ಅಲ್ಲಿನೂ ಇಸ್ರಾಯೇಲಿಗೆ ನ್ಯಾಯತೀರಿಸ್ತಿದ್ದ. ಅವನು ಯೆಹೋವನಿಗೋಸ್ಕರ ಅಲ್ಲೊಂದು ಯಜ್ಞವೇದಿ ಕಟ್ಟಿದ.+

ಪಾದಟಿಪ್ಪಣಿ

ಅರ್ಥ “ಸಹಾಯದ ಕಲ್ಲು.”