ಎರಡನೇ ಅರಸು 16:1-20

  • ಆಹಾಜ, ಯೆಹೂದದ ರಾಜ (1-6)

  • ಆಹಾಜ ಅಶ್ಶೂರ್ಯರಿಗೆ ಲಂಚ ಕೊಟ್ಟ (7-9)

  • ಆಹಾಜ ಸುಳ್ಳುಧರ್ಮದ ಯಜ್ಞವೇದಿ ತರ ಇನ್ನೊಂದು ಯಜ್ಞವೇದಿ ಮಾಡಿಸಿದ (10-18)

  • ಆಹಾಜನ ಮರಣ (19, 20)

16  ರೆಮಲ್ಯನ ಮಗ ಪೆಕಹ ಆಳ್ತಿದ್ದ 17ನೇ ವರ್ಷದಲ್ಲಿ ಯೆಹೂದದ ರಾಜ ಯೋತಾಮನ ಮಗ ಆಹಾಜ+ ರಾಜನಾದ.  ರಾಜನಾದಾಗ ಆಹಾಜನಿಗೆ 20 ವರ್ಷ. ಅವನು ಯೆರೂಸಲೇಮಿಂದ 16 ವರ್ಷ ಆಳಿದ. ಇವನು ತನ್ನ ಪೂರ್ವಜ ದಾವೀದನ ತರ ಇರಲಿಲ್ಲ. ತನ್ನ ದೇವರಾದ ಯೆಹೋವನಿಗೆ ಇಷ್ಟ ಆಗೋದನ್ನ ಮಾಡಲಿಲ್ಲ.+  ಇಸ್ರಾಯೇಲ್‌ ರಾಜರ ತರ ಕೆಟ್ಟದನ್ನೇ ಮಾಡಿದ.+ ಅಷ್ಟೇ ಅಲ್ಲ ಯೆಹೋವ ಇಸ್ರಾಯೇಲ್ಯರ ಮುಂದಿಂದ ಓಡಿಸಿಬಿಟ್ಟಿದ್ದ ಜನ್ರು ಮಾಡ್ತಿದ್ದ ಅಸಹ್ಯವಾದ ಪದ್ಧತಿಗಳನ್ನ ಮಾಡಿದ.+ ಎಷ್ಟಂದ್ರೆ ತನ್ನ ಸ್ವಂತ ಮಗನನ್ನೇ ಬೆಂಕಿಯಲ್ಲಿ ಬಲಿ ಕೊಟ್ಟ.+  ಜೊತೆಗೆ ಎತ್ತರ ಸ್ಥಳಗಳಲ್ಲಿ,+ ಬೆಟ್ಟಗಳಲ್ಲಿ, ಸೊಂಪಾಗಿ ಬೆಳೆದಿರೋ ಪ್ರತಿಯೊಂದು ಮರದ ಕೆಳಗೆ+ ಬಲಿಗಳನ್ನ ಅರ್ಪಿಸಿ ಅದ್ರ ಹೊಗೆ ಏರೋ ತರ ಮಾಡ್ತಿದ್ದ.  ಆ ಸಮಯದಲ್ಲೇ ಅರಾಮ್ಯರ ರಾಜ ರೆಚೀನ ಮತ್ತು ಇಸ್ರಾಯೇಲ್‌ ರಾಜ ರೆಮಲ್ಯನ ಮಗ ಪೆಕಹ ಆಹಾಜನ ವಿರುದ್ಧ ಯುದ್ಧ ಮಾಡೋಕೆ ಯೆರೂಸಲೇಮಿಗೆ ಬಂದು+ ಅದಕ್ಕೆ ಮುತ್ತಿಗೆ ಹಾಕಿದ್ರು. ಆದ್ರೆ ಆ ಪಟ್ಟಣವನ್ನ ಅವ್ರಿಂದ ವಶ ಮಾಡ್ಕೊಳ್ಳೋಕೆ ಆಗಲಿಲ್ಲ.  ಆಗ ಅರಾಮ್ಯರ ರಾಜ ರೆಚೀನ ಏಲತನ್ನ+ ಎದೋಮ್ಯರಿಗೆ ಮತ್ತೆ ಗೆದ್ದು ಕೊಟ್ಟ. ಆಮೇಲೆ ಏಲತಿಂದ ಯೆಹೂದ್ಯರನ್ನ ಓಡಿಸಿಬಿಟ್ಟ. ಆಗ ಎದೋಮ್ಯರು ಬಂದು ಅಲ್ಲಿ ಇದ್ರು. ಇವತ್ತಿನ ತನಕ ಅವರು ಅಲ್ಲೇ ಇದ್ದಾರೆ.  ಹಾಗಾಗಿ ಆಹಾಜ ಸಂದೇಶವಾಹಕರ ಮೂಲಕ ಅಶ್ಶೂರ್ಯರ ರಾಜ ತಿಗ್ಲತ್‌-ಪಿಲೆಸೆರನಿಗೆ+ “ಒಡೆಯನೇ, ನನಗೆ ಸಹಾಯ ಮಾಡು. ನಾನು ನಿನ್ನ ಸೇವಕ ಮತ್ತು ನಿನ್ನ ಆಸರೆಯಲ್ಲಿ ಬದುಕಿರುವವನು.* ನನ್ನ ಮೇಲೆ ದಾಳಿ ಮಾಡ್ತಿರೋ ಅರಾಮ್ಯರ ರಾಜನ ಮತ್ತು ಇಸ್ರಾಯೇಲ್‌ ರಾಜನ ಕೈಯಿಂದ ನನ್ನನ್ನ ಕಾಪಾಡು” ಅನ್ನೋ ಸಂದೇಶ ಕಳಿಸಿದ.  ಆಹಾಜ ಯೆಹೋವನ ಆಲಯದಲ್ಲಿದ್ದ, ಅರಮನೆಯ ಖಜಾನೆಗಳಲ್ಲಿದ್ದ ಎಲ್ಲ ಬೆಳ್ಳಿಬಂಗಾರವನ್ನ ತಗೊಂಡು ಅಶ್ಶೂರ್ಯರ ರಾಜನಿಗೆ ಲಂಚವಾಗಿ ಕಳಿಸ್ಕೊಟ್ಟ.+  ಅಶ್ಶೂರ್ಯರ ರಾಜ ಅವನ ಬಿನ್ನಹವನ್ನ ಕೇಳಿ ದಮಸ್ಕಕ್ಕೆ ಹೋಗಿ ಅದನ್ನ ವಶ ಮಾಡ್ಕೊಂಡ. ಅಲ್ಲಿನ ಜನ್ರನ್ನ ಕೀರ್‌+ ಅನ್ನೋ ಸ್ಥಳಕ್ಕೆ ಕೈದಿಗಳಾಗಿ ಕರ್ಕೊಂಡು ಹೋದ. ರೆಚೀನನನ್ನ ಕೊಂದುಹಾಕಿದ.+ 10  ಆಗ ರಾಜ ಆಹಾಜ ಅಶ್ಶೂರ್ಯರ ರಾಜ ತಿಗ್ಲತ್‌-ಪಿಲೆಸೆರನನ್ನ ಭೇಟಿ ಮಾಡೋಕೆ ದಮಸ್ಕಕ್ಕೆ ಹೋದ. ಅವನು ಅಲ್ಲಿಗೆ ಹೋದಾಗ ಅಲ್ಲಿನ ಯಜ್ಞವೇದಿ ನೋಡಿದ. ಅದ್ರ ನಕ್ಷೆಯನ್ನ ಪುರೋಹಿತ ಊರೀಯಾನಿಗೆ ಕಳಿಸಿದ. ಅದ್ರಲ್ಲಿ ಆ ಯಜ್ಞವೇದಿಯ ನಮೂನೆ ಮತ್ತು ಅದನ್ನ ತಯಾರಿಸಿದ ವಿಧಾನದ ಬಗ್ಗೆ ವಿವರ ಇತ್ತು.+ 11  ಪುರೋಹಿತ ಊರೀಯಾ+ ದಮಸ್ಕದಿಂದ ರಾಜ ಆಹಾಜ ಕಳಿಸಿದ ವಿವರಗಳ ಪ್ರಕಾರನೇ ಯಜ್ಞವೇದಿ ಕಟ್ಟಿದ.+ ರಾಜ ಆಹಾಜ ದಮಸ್ಕದಿಂದ ವಾಪಸ್‌ ಬರೋ ಮುಂಚೆನೇ ಅವನು ಅದನ್ನ ಕಟ್ಟಿಮುಗಿಸಿದ. 12  ರಾಜ ದಮಸ್ಕದಿಂದ ವಾಪಸ್‌ ಬಂದಾಗ ಯಜ್ಞವೇದಿಯನ್ನ ನೋಡಿ, ಹತ್ರ ಹೋಗಿ ಅದ್ರ ಮೇಲೆ ಅರ್ಪಣೆಗಳನ್ನ ಸಲ್ಲಿಸಿದ.+ 13  ಅವನು ಯಾವಾಗ್ಲೂ ಆ ಯಜ್ಞವೇದಿ ಮೇಲೆ ತಾನು ತಂದ ಸರ್ವಾಂಗಹೋಮ ಬಲಿಗಳನ್ನ, ಧಾನ್ಯ ಅರ್ಪಣೆಗಳನ್ನ ಅರ್ಪಿಸಿ ಹೊಗೆ ಏರೋ ತರ ಮಾಡ್ತಿದ್ದ. ಅಷ್ಟೇ ಅಲ್ಲ ಪಾನ ಅರ್ಪಣೆಗಳನ್ನ ಸುರಿತಿದ್ದ. ಸಮಾಧಾನ ಬಲಿಯ ರಕ್ತವನ್ನ ಯಜ್ಞವೇದಿ ಮೇಲೆ ಚಿಮಿಕಿಸ್ತಿದ್ದ. 14  ಅವನು ಯೆಹೋವನ ಆಲಯದ ಮುಂದೆ ಇದ್ದ ತಾಮ್ರದ ಯಜ್ಞವೇದಿಯನ್ನ+ ಅಲ್ಲಿಂದ ಸ್ಥಳಾಂತರಿಸಿದ. ಅದು ಅವನು ಮಾಡಿಸಿದ್ದ ಯಜ್ಞವೇದಿಯ ಮತ್ತು ಯೆಹೋವನ ಆಲಯದ ಮಧ್ಯದಲ್ಲಿತ್ತು. ಅದನ್ನ ಅಲ್ಲಿಂದ ತೆಗೆಸಿ ತಾನು ಮಾಡಿಸಿದ್ದ ಯಜ್ಞವೇದಿಯ ಉತ್ತರಕ್ಕೆ ಇಡಿಸಿದ. 15  ರಾಜ ಆಹಾಜ ಪುರೋಹಿತ ಊರೀಯಾನಿಗೆ+ “ಈ ಮಹಾ ಯಜ್ಞವೇದಿ ಮೇಲೆ ಬೆಳಿಗ್ಗೆಯ ಸರ್ವಾಂಗಹೋಮ ಬಲಿಯನ್ನ,+ ಸಂಜೆಯ ಧಾನ್ಯ ಅರ್ಪಣೆಯನ್ನ,+ ರಾಜ ತರೋ ಸರ್ವಾಂಗಹೋಮ ಬಲಿಯನ್ನ, ಅವನ ಧಾನ್ಯ ಅರ್ಪಣೆಯನ್ನ, ಅಲ್ಲದೆ ಎಲ್ಲ ಜನ್ರು ತರೋ ಸರ್ವಾಂಗಹೋಮ ಬಲಿಗಳನ್ನ, ಧಾನ್ಯ ಅರ್ಪಣೆಗಳನ್ನ ಮತ್ತು ಪಾನ ಅರ್ಪಣೆಗಳನ್ನ ಅರ್ಪಿಸಬೇಕು. ಸರ್ವಾಂಗಹೋಮ ಬಲಿಗಳ ಮತ್ತು ಬೇರೆಲ್ಲ ಬಲಿಗಳ ರಕ್ತವನ್ನೆಲ್ಲ ಅದ್ರ ಮೇಲೆ ಚಿಮಿಕಿಸಬೇಕು” ಅಂತ ಆಜ್ಞೆ ಕೊಟ್ಟ. ಆಮೇಲೆ ಆಹಾಜ “ಆ ತಾಮ್ರದ ಯಜ್ಞವೇದಿಯನ್ನ ಏನು ಮಾಡಬೇಕಂತ ಯೋಚ್ನೆ ಮಾಡಿ ಹೇಳ್ತೀನಿ” ಅಂದ. 16  ಪುರೋಹಿತ ಊರೀಯಾ ರಾಜ ಆಹಾಜ ಹೇಳಿದ ಎಲ್ಲ ವಿಷ್ಯಗಳನ್ನ ಮಾಡಿದ.+ 17  ಇದ್ರ ಜೊತೆ ರಾಜ ಆಹಾಜ ಬಂಡಿಗಳ ಬದಿಗಳಲ್ಲಿದ್ದ ಹಲಗೆಗಳನ್ನ ಕಡಿದು ತುಂಡುತುಂಡು ಮಾಡಿ+ ಬಂಡಿಗಳ ಮೇಲಿದ್ದ ಬೋಗುಣಿಗಳನ್ನ ತೆಗೆದುಹಾಕಿದ.+ ತಾಮ್ರದ ಹೋರಿಗಳ ಮೇಲಿದ್ದ “ಸಮುದ್ರ” ಅಂತ ಕರಿತಿದ್ದ ದೊಡ್ಡ ನೀರಿನ ಪಾತ್ರೆಯನ್ನ ಕೆಳಗೆ ಇಳಿಸಿ+ ಕಲ್ಲಿನ ನೆಲದ ಮೇಲೆ ಇಟ್ಟ.+ 18  ಆಲಯದಲ್ಲಿ ಸಬ್ಬತ್ತನ್ನ ಆಚರಿಸೋಕೆ ಕಟ್ಟಿಸಿದ್ದ ಮಂಟಪವನ್ನ ಮತ್ತು ರಾಜನು ಯೆಹೋವನ ಆಲಯಕ್ಕೆ ಬರೋ ದಾರಿಯನ್ನ ಅವನು ತೆಗೆದುಬಿಟ್ಟ. ಅಶ್ಶೂರ್ಯರ ರಾಜನಿಗೆ ಹೆದರಿ ಅವನು ಹೀಗೆ ಮಾಡಿದ. 19  ಆಹಾಜನ ಉಳಿದ ಜೀವನಚರಿತ್ರೆ ಬಗ್ಗೆ, ಅವನು ಮಾಡಿದ ಕೆಲಸಗಳ ಬಗ್ಗೆ ಯೆಹೂದದ ರಾಜರ ಕಾಲದ ಇತಿಹಾಸ ಪುಸ್ತಕದಲ್ಲಿ ಇದೆ.+ 20  ಕೊನೆಗೆ ಆಹಾಜ ತೀರಿಹೋದ. ಅವನನ್ನ ದಾವೀದಪಟ್ಟಣದಲ್ಲಿ ಸಮಾಧಿ ಮಾಡಿದ್ರು. ಅವನ ಸ್ಥಾನದಲ್ಲಿ ಅವನ ಮಗ ಹಿಜ್ಕೀಯ*+ ರಾಜನಾದ.

ಪಾದಟಿಪ್ಪಣಿ

ಅಕ್ಷ. “ನಿನ್ನ ಮಗ.”
ಅರ್ಥ “ಯೆಹೋವ ಬಲಪಡಿಸ್ತಾನೆ.”