ಎರಡನೇ ಅರಸು 9:1-37
9 ಪ್ರವಾದಿ ಎಲೀಷ ಪ್ರವಾದಿಗಳ ಗಂಡು ಮಕ್ಕಳಲ್ಲಿ ಒಬ್ಬನನ್ನ ಕರೆದು ಹೀಗಂದ: “ನೀನು ಬೇಗ ತಯಾರಾಗಿ,* ಎಣ್ಣೆ ತಗೊಂಡು ರಾಮೋತ್-ಗಿಲ್ಯಾದಿಗೆ+ ಹೋಗು.
2 ನೀನು ಅಲ್ಲಿ ನಿಂಷಿಯ ಮೊಮ್ಮಗನೂ ಯೆಹೋಷಾಫಾಟನ ಮಗನೂ ಆದ ಯೇಹುವನ್ನ+ ಹುಡುಕು. ಅವನು ಸಹೋದರರ ಜೊತೆ ಇರ್ತಾನೆ. ನೀನು ಅವನನ್ನ ಅವ್ರ ಮಧ್ಯದಿಂದ ಕರ್ಕೊಂಡು ಒಳಗಿನ ಕೋಣೆಗೆ ಹೋಗು.
3 ಎಣ್ಣೆಯನ್ನ ಅವನ ತಲೆ ಮೇಲೆ ಸುರಿದು “‘ನಾನು ನಿನ್ನನ್ನ ಇಸ್ರಾಯೇಲ್ಯರ ಮೇಲೆ ರಾಜನನ್ನಾಗಿ ಅಭಿಷೇಕಿಸಿದ್ದೀನಿ’+ ಅಂತ ಯೆಹೋವ ಹೇಳಿದ್ದಾನೆ” ಅಂತ ಹೇಳು. ಆಮೇಲೆ ಬಾಗಿಲನ್ನ ತೆರೆದು ತಡಮಾಡದೆ ಅಲ್ಲಿಂದ ಓಡಿಹೋಗು.”
4 ಆಗ ಪ್ರವಾದಿಯ ಮಗ ರಾಮೋತ್-ಗಿಲ್ಯಾದಿಗೆ ಹೋದ.
5 ಅವನು ಅಲ್ಲಿ ತಲುಪಿದಾಗ ಸೈನ್ಯದ ಅಧಿಪತಿಗಳು ಅಲ್ಲಿ ಕೂತಿದ್ರು. ಪ್ರವಾದಿಯ ಮಗ “ಸೇನಾಪತಿಯೇ, ನಾನು ನಿನಗಾಗಿ ಒಂದು ಸಂದೇಶ ತಂದಿದ್ದೀನಿ” ಅಂದ. ಅದಕ್ಕೆ ಯೇಹು “ಆ ಸಂದೇಶ ನಮ್ಮಲ್ಲಿ ಯಾರಿಗೆ ಬಂದಿದೆ?” ಅಂತ ಕೇಳಿದಾಗ ಅವನು “ನಿನಗೇ” ಅಂದ.
6 ಆಗ ಯೇಹು ಎದ್ದು ಮನೆ ಒಳಗಿನ ಕೋಣೆಗೆ ಹೋದ. ಆಗ ಆ ಸೇವಕ ಅವನ ತಲೆ ಮೇಲೆ ಎಣ್ಣೆ ಸುರಿದು “ಇಸ್ರಾಯೇಲ್ಯರ ದೇವರಾದ ಯೆಹೋವ ಹೀಗೆ ಹೇಳಿದ್ದಾನೆ: ‘ಯೆಹೋವನ ಜನ್ರಾದ ಇಸ್ರಾಯೇಲ್ಯರ ಮೇಲೆ ನಾನು ನಿನ್ನನ್ನ ರಾಜನಾಗಿ ಅಭಿಷೇಕಿಸಿದ್ದೀನಿ.+
7 ನೀನು ನಿನ್ನ ಒಡೆಯ ಅಹಾಬನ ಮನೆಯವ್ರನ್ನೆಲ್ಲ ನಾಶ ಮಾಡು. ಆಗ ನನ್ನ ಸೇವಕರಾದ ಪ್ರವಾದಿಗಳ ಮತ್ತು ಯೆಹೋವನ ಎಲ್ಲ ಸೇವಕರ ರಕ್ತಸುರಿಸಿದ ಈಜೆಬೇಲಳ ಮೇಲೆ ನಾನು ಸೇಡು ತೀರಿಸಿದ ಹಾಗಾಗುತ್ತೆ.+
8 ಅಹಾಬನ ಇಡೀ ಮನೆತನ ನಿರ್ನಾಮ ಆಗುತ್ತೆ. ನಾನು ಇಸ್ರಾಯೇಲಿನ ನಿಸ್ಸಹಾಯಕರನ್ನ, ಬಲಹೀನರನ್ನ ಸೇರಿಸಿ ಅಹಾಬನ ಮನೆಯಲ್ಲಿರೋ ಎಲ್ಲ ಗಂಡಸರನ್ನ ನಾಶಮಾಡಿಬಿಡ್ತೀನಿ.+
9 ನೆಬಾಟನ ಮಗ ಯಾರೊಬ್ಬಾಮನ ಮನೆತನಕ್ಕೆ+ ಮತ್ತು ಅಹೀಯನ ಮಗ ಬಾಷನ ಮನೆತನಕ್ಕೆ+ ತಂದ ಗತಿಯನ್ನೇ ಅಹಾಬನ ಮನೆತನಕ್ಕೂ ತರ್ತಿನಿ.
10 ಈಜೆಬೇಲಳ ವಿಷ್ಯಕ್ಕೆ ಬರೋದಾದ್ರೆ, ಇಜ್ರೇಲಿನ ಹೊಲದಲ್ಲಿ ಅವಳ ಶವವನ್ನ ನಾಯಿಗಳು ತಿಂದು ಹಾಕುತ್ತೆ.+ ಯಾರೂ ಅವಳನ್ನ ಹೂಣಿಡಲ್ಲ’” ಅಂದ. ಈ ಮಾತುಗಳನ್ನ ಹೇಳಿ ಪ್ರವಾದಿಯ ಮಗ ಬಾಗಿಲನ್ನ ತೆರೆದು ಓಡಿಹೋದ.+
11 ಯೇಹು ಸೇನೆಯ ಅಧಿಪತಿಗಳ ಹತ್ರ ವಾಪಸ್ ಹೋದಾಗ ಅವರು ಅವನನ್ನ “ಏನು ವಿಷ್ಯ? ನಿನ್ನನ್ನ ಭೇಟಿಯಾಗೋಕೆ ಆ ಹುಚ್ಚ ಯಾಕೆ ಬಂದಿದ್ದ?” ಅಂತ ಕೇಳಿದ್ರು. ಅದಕ್ಕೆ ಅವನು “ಅಂಥ ವ್ಯಕ್ತಿಗಳ ಬಗ್ಗೆ, ಅವರು ಆಡೋ ಮಾತುಗಳ ಬಗ್ಗೆ ನಿಮಗೆ ಗೊತ್ತೇ ಇದೆ” ಅಂದ.
12 ಆಗ ಅವರು “ಸುಳ್ಳು ಹೇಳ್ತಿದ್ದೀಯ! ದಯವಿಟ್ಟು ನಿಜ ಹೇಳು!” ಅಂದ್ರು. ಅದಕ್ಕೆ ಯೇಹು “ಅವನು ನನಗೆ, ಯೆಹೋವ ನಿನ್ನನ್ನ ಇಸ್ರಾಯೇಲ್ಯರ ಮೇಲೆ ರಾಜನಾಗಿ ಅಭಿಷೇಕಿಸಿದ್ದಾನೆ ಅನ್ನೋ ಸಂದೇಶ ಕೊಟ್ಟ”+ ಅಂದ.
13 ತಕ್ಷಣ ಅವ್ರೆಲ್ಲ ತಮ್ಮ ತಮ್ಮ ಬಟ್ಟೆ ತೆಗೆದು ಯೇಹುವಿನ ಮುಂದಿದ್ದ ಮೆಟ್ಟಿಲುಗಳ ಮೇಲೆ ಹಾಕಿದ್ರು.+ ಆಮೇಲೆ ಅವರು ಕೊಂಬು ಊದಿ “ಯೇಹು ರಾಜನಾಗಿದ್ದಾನೆ” ಅಂತ ಕೂಗಿದ್ರು.+
14 ಆಗ ನಿಂಷಿಯ ಮೊಮ್ಮಗನೂ ಯೆಹೋಷಾಫಾಟನ ಮಗನೂ ಆದ ಯೇಹು+ ಯೆಹೋರಾಮನ ವಿರುದ್ಧ ಸಂಚು ಹೂಡಿದ.
ಅರಾಮ್ಯರ ರಾಜ ಹಜಾಯೇಲನಿಂದ+ ಇಸ್ರಾಯೇಲ್ಯರನ್ನ ಸಂರಕ್ಷಿಸೋಕೆ ಯೆಹೋರಾಮ ಮತ್ತು ಇಸ್ರಾಯೇಲ್ಯರ ಸೈನಿಕರು ರಾಮೋತ್-ಗಿಲ್ಯಾದಿನಲ್ಲಿದ್ರು.+
15 ಆಮೇಲೆ ರಾಜ ಯೆಹೋರಾಮ ಅರಾಮ್ಯರ ರಾಜ ಹಜಾಯೇಲನ ವಿರುದ್ಧ ಯುದ್ಧಕ್ಕೆ ಹೋಗಿದ್ದಾಗ ಅರಾಮ್ಯರ ಸೈನಿಕರು ಅವನನ್ನ ಗಾಯ ಮಾಡಿದ್ರು.+ ಆ ಗಾಯವನ್ನ ವಾಸಿ ಮಾಡ್ಕೊಳ್ಳೋಕೆ ರಾಜ ಯೆಹೋರಾಮ ಇಜ್ರೇಲಿಗೆ+ ವಾಪಸ್ ಬಂದಿದ್ದ.
ಆಗ ಯೇಹು ಬೇರೆ ಸೇನಾಪತಿಗಳಿಗೆ “ನೀವು ನನ್ನ ಪಕ್ಷದಲ್ಲಿ ಇರೋದಾದ್ರೆ ಈ ವಿಷ್ಯ ಇಜ್ರೇಲಿನ ಜನ್ರಿಗೆ ತಲುಪದ ಹಾಗೆ ನೋಡ್ಕೊಳ್ಳಿ, ಯಾರನ್ನೂ ಈ ಪಟ್ಟಣದಿಂದ ಹೊರಗೆ ಬಿಡಬೇಡಿ” ಅಂದ.
16 ಆಮೇಲೆ ಯೇಹು ತನ್ನ ರಥ ಹತ್ತಿ ಇಜ್ರೇಲಿಗೆ ಹೋದ. ಯಾಕಂದ್ರೆ ಗಾಯಗೊಂಡಿದ್ದ ಯೆಹೋರಾಮ ವಾಸಿಯಾಗೋಕೆ ಅಲ್ಲಿಗೆ ಬಂದಿದ್ದ. ಅವನನ್ನ ನೋಡೋಕೆ ಯೆಹೂದದ ರಾಜ ಅಹಜ್ಯ ಸಹ ಅಲ್ಲಿಗೆ ಬಂದಿದ್ದ.
17 ಇಜ್ರೇಲಿನ ಗೋಪುರದ ಮೇಲೆ ಒಬ್ಬ ಕಾವಲುಗಾರ ನಿಂತಿದ್ದ. ಅವನು ಯೇಹುವಿನ ಕಡೆಯಲ್ಲಿದ್ದ ಗಂಡಸ್ರ ಗುಂಪು ಬರೋದನ್ನ ನೋಡ್ದ. ತಕ್ಷಣ ಅವನು ಹೋಗಿ ಯೆಹೋರಾಮನಿಗೆ “ಗಂಡಸ್ರ ಒಂದು ಗುಂಪು ಬರೋದು ಕಾಣಿಸ್ತಿದೆ” ಅಂದ. ಅದಕ್ಕೆ ಯೆಹೋರಾಮ “ಒಬ್ಬ ಕುದುರೆಸವಾರನನ್ನ ಅವ್ರ ಹತ್ರ ಕಳಿಸಿ ‘ನೀವು ಶಾಂತಿ ಮಾಡ್ಕೊಳ್ಳೋಕೆ ಬರ್ತಿದ್ದೀರಾ?’ ಅಂತ ಕೇಳೋಕೆ ಹೇಳು” ಅಂದ.
18 ಹಾಗಾಗಿ ಕುದುರೆಸವಾರ ಹೋಗಿ ಅವ್ರನ್ನ ಭೇಟಿಮಾಡಿ “ನೀವು ಶಾಂತಿ ಮಾಡ್ಕೊಳ್ಳೋಕೆ ಬರ್ತಿದ್ದೀರಾ? ಅಂತ ರಾಜ ಕೇಳ್ತಿದ್ದಾನೆ” ಅಂದ. ಅದಕ್ಕೆ ಯೇಹು “ಅದನ್ನ ಕೇಳೋಕೆ ನೀನ್ಯಾರು? ನನ್ನ ಹಿಂದೆ ಬಾ!” ಅಂದ.
ಆಗ ಕಾವಲುಗಾರ ಯೆಹೋರಾಮನಿಗೆ “ಕುದುರೆಸವಾರ ಅವ್ರ ಹತ್ರ ತಲುಪಿದ್ದಾನೆ. ಆದ್ರೆ ಇಷ್ಟು ಹೊತ್ತಾದ್ರೂ ವಾಪಸ್ ಬರಲಿಲ್ಲ” ಅಂದ.
19 ಹಾಗಾಗಿ ರಾಜ ಎರಡನೇ ಕುದುರೆಸವಾರನನ್ನ ಅವ್ರ ಹತ್ರ ಕಳಿಸಿದ. ಅವನು ಹೋಗಿ ಅವ್ರಿಗೆ “ನೀವು ಶಾಂತಿ ಮಾಡ್ಕೊಳ್ಳೋಕೆ ಬರ್ತಿದ್ದೀರಾ? ರಾಜ ಕೇಳ್ತಿದ್ದಾನೆ” ಅಂದ. ಅದಕ್ಕೆ ಯೇಹು “ಅದನ್ನ ಕೇಳೋಕೆ ನೀನ್ಯಾರು? ನನ್ನ ಹಿಂದೆ ಬಾ!” ಅಂದ.
20 ಆಗ ಕಾವಲುಗಾರ ಯೆಹೋರಾಮನಿಗೆ “ಕುದುರೆಸವಾರ ಅವ್ರ ಹತ್ರ ತಲುಪಿದ್ದಾನೆ. ಆದ್ರೆ ಇಷ್ಟು ಹೊತ್ತಾದ್ರೂ ವಾಪಸ್ ಬರಲಿಲ್ಲ. ನನಗೆ ಯಾರೋ ರಥವನ್ನ ವೇಗವಾಗಿ ಓಡಿಸ್ಕೊಂಡು ಬರೋದು ಕಾಣಿಸ್ತಿದೆ. ಅವನು ನಿಂಷಿಯ ಮೊಮ್ಮಗ* ಯೇಹು ಅಂತ ಅನ್ಸುತ್ತೆ. ಯಾಕಂದ್ರೆ ಹುಚ್ಚನ ತರ ರಥ ಓಡಿಸುವವನು ಅವನೇ” ಅಂದ.
21 ಯೆಹೋರಾಮ “ಬೇಗ ನನ್ನ ರಥ ಸಿದ್ಧಮಾಡಿ!” ಅಂದ. ಆಗ ಅವನ ಯುದ್ಧರಥವನ್ನ ಸಿದ್ಧಮಾಡಲಾಯ್ತು. ಇಸ್ರಾಯೇಲ್ ರಾಜ ಯೆಹೋರಾಮ ಮತ್ತು ಯೆಹೂದದ ರಾಜ ಅಹಜ್ಯ+ ಅವ್ರವ್ರ ಯುದ್ಧರಥಗಳನ್ನ ಏರಿ ಯೇಹುವನ್ನ ಭೇಟಿಮಾಡೋಕೆ ಹೋದ್ರು. ಇಜ್ರೇಲಿನವನಾದ ನಾಬೋತನ+ ಹೊಲದಲ್ಲಿ ಅವರು ಯೇಹುವನ್ನ ಎದುರುಗೊಂಡ್ರು.
22 ಯೆಹೋರಾಮ ಯೇಹುವನ್ನ ನೋಡಿದ ತಕ್ಷಣ “ಯೇಹು, ನೀನು ಶಾಂತಿ ಮಾಡ್ಕೊಳ್ಳೋಕೆ ಬಂದಿದ್ಯಾ?” ಅಂತ ಕೇಳಿದ. ಆದ್ರೆ ಯೇಹು “ನಿನ್ನ ತಾಯಿ ಈಜೆಬೇಲ್ ವೇಶ್ಯವಾಟಿಕೆ*+ ಮತ್ತು ಮಾಟಮಂತ್ರ+ ಮಾಡ್ತಿರೋವಾಗ ಶಾಂತಿ ಎಲ್ಲಿರುತ್ತೆ?” ಅಂದ.
23 ತಕ್ಷಣ ಯೆಹೋರಾಮ ಓಡಿಹೋಗೋಕೆ ತನ್ನ ಯುದ್ಧರಥನ ತಿರುಗಿಸಿದ. ಅವನು ಅಹಜ್ಯನಿಗೆ “ಅಹಜ್ಯನೇ, ಇದೊಂದು ಸಂಚು!” ಅಂದ.
24 ಯೇಹು ತನ್ನ ಬಿಲ್ಲನ್ನ ತಗೊಂಡು ಯೆಹೋರಾಮನ ಬೆನ್ನಿಗೆ ಬಾಣ ಬಿಟ್ಟ. ಅದು ಅವನ ಹೃದಯ ತೂರಿಕೊಂಡು ಹೊರಬಂತು. ಆಗ ಯೆಹೋರಾಮ ತನ್ನ ಯುದ್ಧರಥದಲ್ಲೇ ಸತ್ತುಬಿದ್ದ.
25 ಯೇಹು ತನ್ನ ಸೇನಾಪತಿ ಬಿದ್ಕರನಿಗೆ “ಇವನನ್ನ ಎತ್ಕೊಂಡು ಹೋಗಿ ಇಜ್ರೇಲಿನವನಾದ ನಾಬೋತನ ಹೊಲದಲ್ಲಿ ಬಿಸಾಡು.+ ನಿನಗೆ ನೆನಪಿದ್ಯಾ? ನಾವಿಬ್ರೂ ಇವನ ತಂದೆ ಅಹಾಬನ ಹಿಂದೆ ರಥಗಳಲ್ಲಿ ಹೋಗ್ತಿದ್ದಾಗ ಸ್ವತಃ ಯೆಹೋವನೇ ಅಹಾಬನ ವಿರುದ್ಧ ಈ ತೀರ್ಪು ಕೊಟ್ಟಿದ್ದನು:+
26 ಯೆಹೋವ ಹೀಗಂದಿದ್ದನು: ‘ನಾನು ನಿನ್ನೆ ನಾಬೋತನ ಮತ್ತು ಅವನ ಗಂಡು ಮಕ್ಕಳ ರಕ್ತವನ್ನ ನೋಡಿದ್ದೀನಿ.+ ಹಾಗಾಗಿ ಯೆಹೋವನಾದ ನಾನು ಇದೇ ಹೊಲದಲ್ಲಿ ನಿನ್ನ ವಿರುದ್ಧ ಸೇಡು ತೀರಿಸ್ತೀನಿ.’+ ಹಾಗಾಗಿ ಬಿದ್ಕರನೇ ಯೆಹೋವನ ಈ ಮಾತಿನ ಪ್ರಕಾರ ನೀನು ಇವನನ್ನ ತಗೊಂಡು ಹೋಗಿ ನಾಬೋತನ ಹೊಲದಲ್ಲಿ ಬಿಸಾಡು”+ ಅಂದ.
27 ಯೆಹೂದದ ರಾಜ ಅಹಜ್ಯ+ ನಡಿತಿರೋದನ್ನೆಲ್ಲ ಗಮನಿಸಿ ತೋಟದ ಮನೆ ಕಡೆ ಹೋಗೋ ದಾರಿಯಲ್ಲಿ ಓಡಿಹೋದ. (ಆಮೇಲೆ ಯೇಹು ಅವನನ್ನು ಬೆನ್ನಟ್ಟುತ್ತಾ ತನ್ನ ಗಂಡಸ್ರಿಗೆ “ಅವನನ್ನ ಸಹ ಕೊಂದುಹಾಕಿ!” ಅಂದ. ಆಗ ಆ ಗಂಡಸ್ರು ಇಬ್ಲೆಯಾಮಿನ+ ಪಕ್ಕದಲ್ಲಿದ್ದ ಗೂರಿನ ಕಡೆ ತನ್ನ ರಥದಲ್ಲಿ ಹೋಗ್ತಿದ್ದ ಅಹಜ್ಯನ ಮೇಲೆ ದಾಳಿ ಮಾಡಿದ್ರು. ಗಾಯಗೊಂಡ ಅಹಜ್ಯ ಓಡ್ತಾ ಮೆಗಿದ್ದೋ ತನಕ ಹೋಗಿ ಅಲ್ಲಿ ಸತ್ತ.
28 ಅವನ ಸೇವಕರು ಅವನ ಶವನ ರಥದಲ್ಲಿ ಹಾಕೊಂಡು ಯೆರೂಸಲೇಮಿಗೆ ತಗೊಂಡು ಬಂದ್ರು. ಅವನನ್ನ ದಾವೀದಪಟ್ಟಣದಲ್ಲಿ+ ಹೂಣಿಟ್ರು.
29 ಅಹಾಬನ ಮಗ ಯೆಹೋರಾಮನ ಆಳ್ವಿಕೆಯ 11ನೇ ವರ್ಷದಲ್ಲಿ ಅಹಜ್ಯ+ ಯೆಹೂದದ ರಾಜನಾಗಿದ್ದ.)
30 ಯೇಹು ಇಜ್ರೇಲಿಗೆ+ ಬಂದ ವಿಷ್ಯ ಈಜೆಬೇಲಳ+ ಕಿವಿಗೆ ಬಿತ್ತು. ಹಾಗಾಗಿ ಅವಳು ತನ್ನ ಕಣ್ಣಿಗೆ ಕಾಡಿಗೆ ಹಚ್ಕೊಂಡು ತನ್ನ ಕೂದಲನ್ನ ಅಲಂಕಾರ ಮಾಡ್ಕೊಂಡು ಕಿಟಕಿಯಿಂದ ಕೆಳಗೆ ನೋಡ್ತಿದ್ದಳು.
31 ಯೇಹು ಅರಮನೆಯ ಪ್ರಾಕಾರದೊಳಕ್ಕೆ ಬಂದಾಗ ಅವಳು “ತನ್ನ ಒಡೆಯನನ್ನ ಕೊಂದ ಜಿಮ್ರಿಗೆ ಏನಾಯ್ತು ಅಂತ ನಿನಗೆ ನೆನಪಿದ್ಯಾ?”+ ಅಂತ ಕೇಳಿದಳು.
32 ಕಿಟಕಿ ಕಡೆ ನೋಡಿ ಯೇಹು “ನನ್ನ ಪಕ್ಷದವರು ಯಾರಾದ್ರೂ ಅಲ್ಲಿದ್ದೀರಾ? ಹೇಳಿ!”+ ಅಂತ ಕೂಗಿದ. ತಕ್ಷಣ ಇಬ್ಬರು-ಮೂವರು ಆಸ್ಥಾನದ ಅಧಿಕಾರಿಗಳು ಅವನ ಕಡೆ ಬಗ್ಗಿ ನೋಡಿದ್ರು.
33 ಅವನು ಆ ಅಧಿಕಾರಿಗಳಿಗೆ “ಅವಳನ್ನು ಕೆಳಗೆ ದೊಬ್ಬಿ!” ಅಂದ. ಆಗ ಅವರು ಅವಳನ್ನ ಕೆಳಕ್ಕೆ ದೊಬ್ಬಿದ್ರು. ಅವಳ ರಕ್ತ ಗೋಡೆಗೂ ಕುದುರೆಗಳಿಗೂ ಸಿಡಿತು. ಆಗ ಯೇಹು ತನ್ನ ಕುದುರೆಗಳಿಂದ ಅವಳನ್ನ ತುಳಿಸಿದ.
34 ಆಮೇಲೆ ಅವನು ಒಳಗೆ ಹೋಗಿ ತಿಂದುಕುಡಿದ. ಅವನು “ಆ ಶಾಪಗ್ರಸ್ತ ಸ್ತ್ರೀಯ ಶವ ತಗೊಂಡು ಹೋಗಿ ಹೂಣಿಡಿ. ಎಷ್ಟಾದ್ರೂ ಅವಳು ರಾಜನ ಮಗಳು”+ ಅಂದ.
35 ಸೇವಕರು ಅವಳ ಶವ ಹೂಣಿಡೋಕಂತ ಅಲ್ಲಿ ಹೋದ್ರು. ಆದ್ರೆ ಅಲ್ಲಿ ಅವ್ರಿಗೆ ಅವಳ ತಲೆಬುರುಡೆ, ಅಂಗೈ ಮತ್ತು ಅಂಗಾಲುಗಳು ಬಿಟ್ರೆ ಬೇರೆ ಏನೂ ಸಿಗಲಿಲ್ಲ.+
36 ಅವರು ಹೋಗಿ ಈ ವಿಷ್ಯನ ಯೇಹುವಿಗೆ ಹೇಳಿದಾಗ ಅವನು “ಯೆಹೋವ ತಿಷ್ಬೀಯನಾದ ಎಲೀಯ ಅನ್ನೋ ತನ್ನ ಸೇವಕನ ಮೂಲಕ ಹೇಳಿದ ಮಾತು ನೆರವೇರಿತು.+ ಅದೇನಂದ್ರೆ: ‘ಇಜ್ರೇಲಿನ ಹೊಲದಲ್ಲಿ ನಾಯಿಗಳು ಈಜೆಬೇಲಳ ಶವನ ತಿಂದು ಹಾಕುತ್ತೆ.+
37 “ಇವಳು ಈಜೆಬೇಲ್” ಎಂದು ಯಾರೂ ಗುರುತು ಹಿಡಿಯೋಕೂ ಆಗದ ಮಟ್ಟಿಗೆ ಅವಳ ಶವ ಇಜ್ರೇಲಿನ ಹೊಲದಲ್ಲಿ ಗೊಬ್ಬರ ಆಗುತ್ತೆ’” ಅಂದ.