ಥೆಸಲೊನೀಕದವರಿಗೆ ಬರೆದ ಎರಡನೇ ಪತ್ರ 3:1-18

  • ಯಾವಾಗ್ಲೂ ಪ್ರಾರ್ಥಿಸಿ (1-5)

  • ಕಲಿತಂತೆ ನಡಿಯದವ್ರ ಬಗ್ಗೆ ಎಚ್ಚರಿಕೆ (6-15)

  • ಕೊನೆಯಲ್ಲಿ ವಂದನೆ (16-18)

3  ಸಹೋದರರೇ, ಕೊನೇದಾಗಿ ನಾನು ಹೇಳೋದು ಏನಂದ್ರೆ ಯೆಹೋವನ* ಸಂದೇಶವನ್ನ ನಾವು ಎಲ್ಲ ಕಡೆ ಬೇಗ ಸಾರೋ ಹಾಗೆ+ ನಮಗೋಸ್ಕರ ಯಾವಾಗ್ಲೂ ಪ್ರಾರ್ಥಿಸಿ.+ ಆ ವಾಕ್ಯಕ್ಕೆ ನಿಮ್ಮ ತರ ಬೇರೆಯವರೂ ಗೌರವ ಕೊಡೋ ಹಾಗೆ ಆಗ್ಲಿ.  ನಮ್ಮನ್ನ ಕೆಟ್ಟವ್ರ ಕೈಯಿಂದ, ಅಪಾಯಕಾರಿ ಜನ್ರ ಕೈಗೆ ಸಿಕ್ಕಿ ಬೀಳದ ಹಾಗೆ ಕಾಪಾಡಬೇಕಂತ ಬೇಡಿ.+ ಯಾಕಂದ್ರೆ ಎಲ್ರಲ್ಲೂ ನಂಬಿಕೆ ಇರಲ್ಲ.*+  ಆದ್ರೆ ನಮ್ಮ ಪ್ರಭು ನಂಬಿಗಸ್ತ. ಆತನು ನಿಮ್ಮನ್ನ ಬಲಪಡಿಸ್ತಾನೆ, ದುಷ್ಟನ* ಕೈಯಿಂದ ತಪ್ಪಿಸಿ ಕಾಪಾಡ್ತಾನೆ.  ಅಷ್ಟೇ ಅಲ್ಲ ಪ್ರಭುವಿನ ಶಿಷ್ಯರಾದ ನಮಗೆ ನಿಮ್ಮ ಮೇಲೆ ನಂಬಿಕೆ ಇದೆ. ನಾವು ಕೊಟ್ಟ ಆಜ್ಞೆಗಳನ್ನ ನೀವು ಈಗ್ಲೂ ಪಾಲಿಸ್ತಿದ್ದೀರ, ಮುಂದೆನೂ ಪಾಲಿಸ್ತೀರ ಅಂತ ನಮಗೆ ಗೊತ್ತು.  ದೇವರನ್ನ ಪ್ರೀತಿಸೋ ಹಾಗೆ,+ ಕ್ರಿಸ್ತನಿಗಾಗಿ ಸಹಿಸ್ಕೊಳ್ಳೋ ಹಾಗೆ+ ಪ್ರಭು ಯಾವಾಗ್ಲೂ ನಿಮಗೆ ಸಹಾಯ ಮಾಡ್ಲಿ.*  ಸಹೋದರರೇ, ಸರಿಯಾದ ದಾರೀಲಿ ನಡೀದೆ,+ ನಮ್ಮಿಂದ ನೀವು* ಕಲಿತ ವಿಷ್ಯಗಳ* ಪ್ರಕಾರ ನಡೀದೆ ಇರೋ ಸಹೋದರನ ಜೊತೆ ಸೇರಬೇಡಿ ಅಂತ+ ಪ್ರಭು ಯೇಸು ಕ್ರಿಸ್ತನ ಹೆಸ್ರಲ್ಲಿ ಆಜ್ಞೆ ಕೊಡ್ತೀವಿ.  ನಮ್ಮನ್ನ ಹೇಗೆ ಅನುಕರಿಸಬೇಕು ಅಂತ ನಿಮಗೆ ಗೊತ್ತು.+ ಯಾಕಂದ್ರೆ ನಿಮ್ಮ ಜೊತೆ ಇದ್ದಾಗ ನಾವು ಮನಸ್ಸಿಗೆ ಬಂದ ಹಾಗೆ ನಡಿಲಿಲ್ಲ.  ಯಾರ ಹತ್ರಾನೂ ಪುಕ್ಕಟೆ* ಊಟ ಮಾಡ್ಲಿಲ್ಲ.+ ತುಂಬ ಖರ್ಚು ಮಾಡಿಸಿ ಯಾರಿಗೂ ಭಾರ ಆಗಬಾರದು ಅಂತ ನಾವು ಹಗಲೂರಾತ್ರಿ ಬೆವರು ಸುರಿಸಿ ದುಡಿದ್ವಿ.+  ನಿಮ್ಮಿಂದ ಸಹಾಯ ಕೇಳೋ ಹಕ್ಕು ನಮಗಿದ್ರೂ+ ನಾವು ಕೇಳಲಿಲ್ಲ. ನಿಮಗೆ ಒಳ್ಳೇ ಮಾದರಿ ಇಡಬೇಕಂತ+ ನಾವು ಹಾಗೆ ಮಾಡಿದ್ವಿ. 10  ಹೇಳಬೇಕಂದ್ರೆ ನಾವು ನಿಮ್ಮ ಜೊತೆ ಇದ್ದಾಗ “ಕೆಲಸ ಮಾಡೋಕೆ ಇಷ್ಟ ಇಲ್ಲದವರು ಊಟನೂ ಮಾಡಬಾರದು”+ ಅಂತ ಆಜ್ಞೆ ಕೊಡ್ತಿದ್ವಿ. 11  ನಿಮ್ಮಲ್ಲಿ ಸ್ವಲ್ಪ ಜನ ಸರಿಯಾದ ದಾರೀಲಿ ನಡೀತಿಲ್ಲ,+ ಕೆಲಸ ಮಾಡದೆ ಬೇರೆಯವ್ರ ವಿಷ್ಯದಲ್ಲಿ ತಲೆ ಹಾಕ್ತಿದ್ದಾರೆ+ ಅಂತ ಗೊತ್ತಾಯ್ತು. 12  ಅಂಥವರು ಅವ್ರ ಕೆಲಸ ಅವರು ನೋಡ್ಕೊಳ್ಳಲಿ, ದುಡಿದು ಊಟ ಮಾಡ್ಲಿ ಅಂತ ಪ್ರಭು ಯೇಸು ಕ್ರಿಸ್ತನ ಹೆಸ್ರಲ್ಲಿ ಆಜ್ಞೆ ಕೊಡ್ತೀವಿ ಮತ್ತು ಬುದ್ಧಿ ಹೇಳ್ತೀವಿ.+ 13  ಸಹೋದರರೇ, ನೀವು ಒಳ್ಳೇದು ಮಾಡೋದನ್ನ ಬಿಟ್ಟುಬಿಡಬೇಡಿ. 14  ಈ ಪತ್ರದಲ್ಲಿ ಹೇಳಿದ ಪ್ರಕಾರ ನಡಿಯದೇ ಇರೋ ವ್ಯಕ್ತಿ ಮೇಲೆ ಕಣ್ಣಿಡಿ, ಅವನ ಸಹವಾಸ ಬಿಟ್ಟುಬಿಡಿ.+ ಅವನಿಗೆ ನಾಚಿಕೆ ಆಗ್ಲಿ. 15  ಆದ್ರೆ ಅವನನ್ನ ಶತ್ರುವಾಗಿ ನೋಡಬೇಡಿ, ನಿಮ್ಮ ಸಹೋದರನಾದ ಅವನಿಗೆ ಬುದ್ಧಿಹೇಳ್ತಾ ಇರಿ.+ 16  ಶಾಂತಿಯ ಪ್ರಭು ಯಾವಾಗ್ಲೂ ಎಲ್ಲ ವಿಧದಲ್ಲೂ ನಿಮಗೆ ಶಾಂತಿ ಕೊಡ್ಲಿ.+ ಪ್ರಭು ನಿಮ್ಮೆಲ್ರ ಜೊತೆ ಇರಲಿ. 17  ನಿಮಗೆ ನನ್ನ ವಂದನೆ, ಪೌಲನಾದ ನಾನೇ ನನ್ನ ಕೈಯಾರೆ ಇದನ್ನ ಬರಿತಾ ಇದ್ದೀನಿ.+ ಪತ್ರ ಬರೆದಿದ್ದು ನಾನೇ ಅಂತ ನಿಮಗೆ ಗೊತ್ತಾಗ್ಲಿ ಅಂತ ಎಲ್ಲ ಪತ್ರದಲ್ಲಿ ಹೀಗೇ ಹೇಳಿದ್ದೀನಿ. 18  ನಮ್ಮ ಪ್ರಭು ಯೇಸು ಕ್ರಿಸ್ತ ನಿಮ್ಮೆಲ್ರಿಗೆ ಅಪಾರ ಕೃಪೆ ತೋರಿಸ್ಲಿ.

ಪಾದಟಿಪ್ಪಣಿ

ಅಕ್ಷ. “ನಂಬಿಕೆ ಎಲ್ರ ಸೊತ್ತಲ್ಲ.”
ಅಂದ್ರೆ, ಸೈತಾನ.
ಅಕ್ಷ. “ನಿಮ್ಮ ಹೃದಯವನ್ನ ಮಾರ್ಗದರ್ಶಿಸಲಿ.”
ಅಥವಾ “ಬೋಧನೆಗಳ.”
ಬಹುಶಃ, “ಅವರು.”
ಅಥವಾ “ಹಣಕೊಡದೆ.”