ಎರಡನೇ ಪೂರ್ವಕಾಲವೃತ್ತಾಂತ 13:1-22

  • ಅಬೀಯ ಯೆಹೂದದ ರಾಜನಾದ (1-22)

    • ಅಬೀಯ ಯಾರೊಬ್ಬಾಮನನ್ನ ಸೋಲಿಸಿದ (3-20)

13  ರಾಜ ಯಾರೊಬ್ಬಾಮನ ಆಳ್ವಿಕೆಯ 18ನೇ ವರ್ಷದಲ್ಲಿ ಅಬೀಯ ಯೆಹೂದದ ರಾಜನಾದ.+  ಅವನು ಯೆರೂಸಲೇಮಲ್ಲಿ ಮೂರು ವರ್ಷ ಆಳಿದ. ಅವನ ಅಮ್ಮ ಹೆಸ್ರು ಮೀಕಾಯ.+ ಇವಳು ಗಿಬೆಯಾದ+ ಊರೀಯೇಲನ ಮಗಳು. ಅಬೀಯ ಮತ್ತು ಯಾರೊಬ್ಬಾಮನ ಮಧ್ಯ ಯುದ್ಧ ನಡೀತು.+  ತರಬೇತಿ ಪಡೆದ* 4,00,000 ವೀರ ಸೈನಿಕರನ್ನ+ ಕರ್ಕೊಂಡು ಅಬೀಯ ಯುದ್ಧಕ್ಕೆ ಹೋದ. ಯಾರೊಬ್ಬಾಮನೂ ಸೈನ್ಯಕಟ್ಟಿ ಅಬೀಯನ ಮೇಲೆ ಯುದ್ಧಕ್ಕೆ ಹೋದ. ಅವನ ಕಡೆ, ತರಬೇತಿ ಪಡೆದ* 8,00,000 ಯುದ್ಧವೀರರಿದ್ರು.  ಅಬೀಯ ಎಫ್ರಾಯೀಮ್‌ ಬೆಟ್ಟ ಪ್ರದೇಶದಲ್ಲಿದ್ದ ಚಮಾರಯಿಮ್‌ ಬೆಟ್ಟದ ಮೇಲೆ ನಿಂತು ಹೀಗಂದ “ಯಾರೊಬ್ಬಾಮ ಮತ್ತು ಎಲ್ಲ ಇಸ್ರಾಯೇಲ್ಯರೇ! ಇಲ್ಲಿ ಕೇಳಿ.  ಇಸ್ರಾಯೇಲ್‌ ದೇವರಾದ ಯೆಹೋವ ದಾವೀದನ ಜೊತೆ ಮತ್ತು ಅವನ ಮಕ್ಕಳ ಜೊತೆ+ ಉಪ್ಪಿನ ಒಪ್ಪಂದ*+ ಮಾಡ್ಕೊಂಡು ಇಸ್ರಾಯೇಲ್‌ ರಾಜ್ಯನ ಶಾಶ್ವತವಾಗಿ ಅವ್ರಿಗೆ ಕೊಟ್ಟಿರೋದು+ ನಿಮಗೆ ಗೊತ್ತಿಲ್ವಾ?  ಆದ್ರೆ ನೆಬಾಟನ ಮಗ, ಸೊಲೊಮೋನನ ಸೇವಕ ಯಾರೊಬ್ಬಾಮ+ ತನ್ನ ಒಡೆಯನ ವಿರುದ್ಧ ದಂಗೆಯೆದ್ದ.+  ಕೆಲಸಕ್ಕೆ ಬಾರದ ಅಯೋಗ್ಯರು ಅವನ ಜೊತೆ ಸೇರ್ತಾನೇ ಇದ್ರು. ಸೊಲೊಮೋನನ ಮಗ ರೆಹಬ್ಬಾಮ ಇನ್ನೂ ಚಿಕ್ಕವನಾಗಿದ್ರಿಂದ ಮತ್ತು ಅವನಿಗೆ ಧೈರ್ಯ ಇಲ್ಲದಿದ್ರಿಂದ ಅವರು ಅವನಿಗಿಂತ ಶಕ್ತಿಶಾಲಿಗಳಾದ್ರು. ಅದಕ್ಕೇ ರೆಹಬ್ಬಾಮನಿಗೆ ಅವ್ರ ವಿರುದ್ಧ ನಿಲ್ಲೋಕೆ ಆಗಲಿಲ್ಲ.  ನೀವು ತುಂಬ ಜನ ಇರೋದ್ರಿಂದ ಮತ್ತು ಯಾರೊಬ್ಬಾಮ ನಿಮಗೆ ದೇವರು ಅಂತ ಮಾಡಿ ಕೊಟ್ಟಿರೋ ಚಿನ್ನದ ಕರುಗಳು+ ನಿಮ್ಮ ಹತ್ರ ಇರೋದ್ರಿಂದ ದಾವೀದನ ಮಕ್ಕಳ ಕೈಯಲ್ಲಿರೋ ಯೆಹೋವನ ರಾಜ್ಯದ ವಿರುದ್ಧ ನಿಲ್ಲಬಹುದು ಅಂತ ಈಗ ನೀವು ಅಂದ್ಕೊಂಡಿದ್ದೀರ.  ಆರೋನನ ವಂಶದ ಯೆಹೋವನ ಪುರೋಹಿತರನ್ನ ಮತ್ತು ಲೇವಿಯರನ್ನ ನೀವು ಓಡಿಸಿಬಿಟ್ರಿ.+ ಬೇರೆ ದೇಶದ ಜನ್ರ ತರ ಬೇರೆ ಯಾರನ್ನೋ ನಿಮ್ಮ ಪುರೋಹಿತರಾಗಿ ಮಾಡ್ಕೊಂಡ್ರಿ.+ ಒಂದು ಹೋರಿ ಮತ್ತು ಏಳು ಟಗರುಗಳನ್ನ ತಗೊಂಡು ಯಾರಾದ್ರೂ ಬಂದ್ರೆ ನೀವು ಅವ್ರನ್ನ ದೇವರಲ್ಲದ ಮೂರ್ತಿಗಳ ಪುರೋಹಿತರಾಗಿ ಮಾಡಿಬಿಡ್ತೀರ. 10  ಆದ್ರೆ ನಮಗೆ ಯೆಹೋವನೇ ದೇವರು.+ ನಾವು ಆತನನ್ನ ಬಿಟ್ಟಿಲ್ಲ. ಆರೋನನ ವಂಶದವರು ನಮ್ಮ ಪುರೋಹಿತರು. ಅವರು ಯೆಹೋವನ ಸೇವೆ ಮಾಡ್ತಾರೆ ಮತ್ತು ಲೇವಿಯರು ಅವ್ರಿಗೆ ಸಹಾಯ ಮಾಡ್ತಾರೆ. 11  ಅವರು ದಿನ ಬೆಳಿಗ್ಗೆ ಮತ್ತು ಸಂಜೆ ಯೆಹೋವನಿಗಾಗಿ ಸುಗಂಧ ಬೀರೋ ಧೂಪದ+ ಜೊತೆ ಸರ್ವಾಂಗಹೋಮ ಬಲಿಗಳನ್ನ ಕೊಡ್ತಾರೆ.+ ಅದ್ರ ಹೊಗೆ ಮೇಲೆ ಏರೋ ತರ ಮಾಡ್ತಾರೆ. ಅಪ್ಪಟ ಚಿನ್ನದಿಂದ ಮಾಡಿದ ಮೇಜಿನ ಮೇಲೆ ಅರ್ಪಣೆ ರೊಟ್ಟಿಗಳನ್ನ+ ಇಡ್ತಾರೆ. ಪ್ರತಿ ಸಂಜೆ ಚಿನ್ನದ ದೀಪಸ್ತಂಭವನ್ನ+ ಮತ್ತು ಅದ್ರ ದೀಪಗಳನ್ನ ಹಚ್ತಾರೆ.+ ಯಾಕಂದ್ರೆ ನಮ್ಮ ದೇವರಾದ ಯೆಹೋವನ ಕಡೆಗಿರೋ ನಮ್ಮ ಜವಾಬ್ದಾರಿನ ನಾವು ಮಾಡ್ತೀವಿ. ಆದ್ರೆ ನೀವು ಆತನನ್ನ ಬಿಟ್ಟುಬಿಟ್ಟಿದ್ದೀರ. 12  ನೋಡಿ! ಸತ್ಯ ದೇವರು ನಮ್ಮ ಜೊತೆ ಇದ್ದಾನೆ, ನಮ್ಮನ್ನ ನಡಿಸ್ತಿದ್ದಾನೆ. ನಿಮ್ಮ ವಿರುದ್ಧ ಯುದ್ಧ ಘೋಷಿಸೋಕೆ ಕೈಯಲ್ಲಿ ತುತ್ತೂರಿ ಹಿಡಿದಿರೋ ಆತನ ಪುರೋಹಿತರು ನಮ್ಮ ಜೊತೆ ಇದ್ದಾರೆ. ಇಸ್ರಾಯೇಲಿನ ಗಂಡಸರೇ, ನಿಮ್ಮ ಪೂರ್ವಜರ ದೇವರಾಗಿರೋ ಯೆಹೋವನ ವಿರುದ್ಧ ಯುದ್ಧ ಮಾಡಬೇಡಿ. ಯಾಕಂದ್ರೆ ನೀವು ಗೆಲ್ಲಲ್ಲ.”+ 13  ಆದ್ರೆ ಸೈನಿಕರು ಅವ್ರ ಹಿಂದೆ ಹೊಂಚುಹಾಕಿ ಕೂತ್ಕೊಳ್ಳೋ ತರ ಯಾರೊಬ್ಬಾಮ ಮಾಡಿದ. ಹೀಗೆ ಅವ್ರ ಸೈನ್ಯದ ಒಂದು ಗುಂಪು ಯೆಹೂದದ ಮುಂದೆ ಇದ್ರೆ ಇನ್ನೊಂದು ಗುಂಪು ಹಿಂದೆ ಹೊಂಚುಹಾಕಿ ಕೂತಿತ್ತು. 14  ಯೆಹೂದದ ಗಂಡಸರು ಹಿಂದೆ ತಿರುಗಿ ನೋಡಿದಾಗ ಅವ್ರ ಮೇಲೆ ಹಿಂದೆ, ಮುಂದೆ ಹೀಗೆ ಎರಡು ಕಡೆಗಳಿಂದಾನೂ ಆಕ್ರಮಣ ಮಾಡ್ತಾರೆ ಅಂತ ಗೊತ್ತಾಯ್ತು. ಆಗ ಪುರೋಹಿತರು ಜೋರಾಗಿ ತುತ್ತೂರಿ ಊದೋಕೆ ಶುರುಮಾಡಿದ್ರು ಮತ್ತು ಯೆಹೂದದ ಗಂಡಸರು ಯೆಹೋವನಿಗೆ ಪ್ರಾರ್ಥಿಸಿದ್ರು.+ 15  ಆಮೇಲೆ ಗಟ್ಟಿಯಾಗಿ ಯುದ್ಧ ಘೋಷಿಸಿದ್ರು. ಅವರು ಹಾಗೆ ಮಾಡಿದಾಗ ಸತ್ಯ ದೇವರು ಅಬೀಯ ಮತ್ತು ಯೆಹೂದದ ಮುಂದೆ ಯಾರೊಬ್ಬಾಮ ಮತ್ತು ಇಡೀ ಇಸ್ರಾಯೇಲನ್ನು ಸೋಲಿಸಿದನು. 16  ಇಸ್ರಾಯೇಲ್ಯರು ಯೆಹೂದದವರ ಮುಂದೆ ಸೋತು ಓಡಿಹೋದ್ರು. ಆಗ ದೇವರು ಅವ್ರನ್ನ ಯೆಹೂದದ ಕೈಗೆ ಒಪ್ಪಿಸಿದನು. 17  ಅಬೀಯ ಮತ್ತು ಅವನ ಜನ್ರು ಇಸ್ರಾಯೇಲ್ಯರನ್ನ ಕೊಂದ್ರು. ತರಬೇತಿ ಪಡೆದಿದ್ದ* 5,00,000 ಇಸ್ರಾಯೇಲ್‌ ವೀರ ಸೈನಿಕರು ಸತ್ತುಹೋದ್ರು. 18  ಆಗ ಇಸ್ರಾಯೇಲ್ಯರು ತಮ್ಮನ್ನ ತಗ್ಗಿಸಿಕೊಂಡ್ರು. ಆದ್ರೆ ಅಷ್ಟೊತ್ತಿಗಾಗಲೇ ಯೆಹೂದದವರು ಬಲಶಾಲಿಗಳು ಅಂತ ಸಾಬೀತಾಗಿತ್ತು. ಯಾಕಂದ್ರೆ ಅವರು ತಮ್ಮ ಪೂರ್ವಜರ ದೇವರಾಗಿದ್ದ ಯೆಹೋವನ ಮೇಲೆ ಭರವಸೆಯಿಟ್ಟಿದ್ದರು.*+ 19  ಅಬೀಯ ಯಾರೊಬ್ಬಾಮನನ್ನ ಅಟ್ಟಿಸಿಕೊಂಡೇ ಹೋದ. ಅವನಿಂದ ಬೆತೆಲ್‌,+ ಯೆಷಾನಾ, ಎಫ್ರೋನ್‌+ ಪಟ್ಟಣಗಳನ್ನ ಮತ್ತು ಅವುಗಳಿಗೆ ಸೇರಿದ* ಊರುಗಳನ್ನ ವಶ ಮಾಡ್ಕೊಂಡ. 20  ಅಬೀಯ ಇದ್ದ ಕಾಲದಲ್ಲಿ ತನ್ನ ಅಧಿಕಾರನ ಮತ್ತೆ ಪಡಿಯೋಕೆ ಯಾರೊಬ್ಬಾಮನಿಗೆ ಆಗಲೇ ಇಲ್ಲ. ಆಮೇಲೆ ಯೆಹೋವ ಯಾರೊಬ್ಬಾಮನಿಗೆ ಶಿಕ್ಷೆ ಕೊಟ್ಟಿದ್ರಿಂದ ಅವನು ಸತ್ತುಹೋದ.+ 21  ಆದ್ರೆ ಅಬೀಯ ಚೆನ್ನಾಗಿ ಆಳ್ತಿದ್ದ. ಸ್ವಲ್ಪ ಸಮಯ ಆದ್ಮೇಲೆ ಅವನು 14 ಸ್ತ್ರೀಯರನ್ನ ಮದ್ವೆಯಾದ.+ ಅವನಿಗೆ 22 ಗಂಡುಮಕ್ಕಳು ಮತ್ತು 16 ಹೆಣ್ಣುಮಕ್ಕಳಾದ್ರು. 22  ಅಬೀಯನ ಜೀವನಚರಿತ್ರೆ ಬಗ್ಗೆ, ಅವನು ಮಾಡಿದ ಕೆಲಸಗಳ ಮತ್ತು ಆಡಿದ ಮಾತುಗಳ ಬಗ್ಗೆ ಇದ್ದೋ ಪ್ರವಾದಿಯ ಪುಸ್ತಕದಲ್ಲಿ* ಇದೆ.+

ಪಾದಟಿಪ್ಪಣಿ

ಅಕ್ಷ. “ಆರಿಸಿಕೊಂಡ.”
ಅಕ್ಷ. “ಆರಿಸಿಕೊಂಡ.”
ಅದು, ಶಾಶ್ವತವಾದ ಮತ್ತು ಬದಲಾಗದ ಒಂದು ಒಡಂಬಡಿಕೆ.
ಅಕ್ಷ. “ಆರಿಸಿಕೊಂಡ.”
ಅಕ್ಷ. “ಒರಗಿಕೊಂಡ್ರು.”
ಅಥವಾ “ಸುತ್ತಮುತ್ತಲಿನ.”
ಅಥವಾ “ವಿವರಣೆಯಲ್ಲಿ.”