ಎರಡನೇ ಪೂರ್ವಕಾಲವೃತ್ತಾಂತ 3:1-17

  • ಸೊಲೊಮೋನ ಆಲಯ ಕಟ್ಟೋಕೆ ಶುರು (1-7)

  • ಅತಿ ಪವಿತ್ರ ಸ್ಥಳ (8-14)

  • ತಾಮ್ರದ ಎರಡು ಕಂಬ (15-17)

3  ಆಮೇಲೆ ಸೊಲೊಮೋನ ಯೆರೂಸಲೇಮಿನಲ್ಲಿದ್ದ ಮೊರೀಯ+ ಬೆಟ್ಟದ ಮೇಲೆ ಯೆಹೋವನ ಆಲಯ ಕಟ್ಟೋಕೆ ಶುರುಮಾಡಿದ.+ ಅಲ್ಲಿ ಯೆಹೋವ ಅವನ ಅಪ್ಪ ದಾವೀದನಿಗೆ ಕಾಣಿಸ್ಕೊಂಡಿದ್ದನು.+ ಆ ಜಾಗ ಯೆಬೂಸಿಯನಾದ ಒರ್ನಾನನ ಕಣವಾಗಿತ್ತು.+ ಆಲಯ ಕಟ್ಟೋಕೆ ದಾವೀದ ಆ ಜಾಗನ ಸಿದ್ಧಮಾಡಿದ್ದ.  ಆ ಆಲಯವನ್ನ ಸೊಲೊಮೋನ ತನ್ನ ಆಳ್ವಿಕೆಯ ನಾಲ್ಕನೇ ವರ್ಷದ ಎರಡನೇ ತಿಂಗಳ ಎರಡನೇ ದಿನದಲ್ಲಿ ಕಟ್ಟೋಕೆ ಶುರುಮಾಡಿದ.  ಸತ್ಯ ದೇವರ ಆಲಯನ ಕಟ್ಟೋಕೆ ಸೊಲೊಮೋನ ಹಾಕಿಸಿದ ತಳಪಾಯ ಪುರಾತನ ಕಾಲದ ಅಳತೆ ಪ್ರಕಾರ* 60 ಮೊಳ ಉದ್ದ, 20 ಮೊಳ ಅಗಲ ಇತ್ತು.+  ಆಲಯದ ಮುಂದಿನ ಮಂಟಪ 20 ಮೊಳ ಉದ್ದ ಇತ್ತು. ಅದು ದೇವಾಲಯದ ಅಗಲದಷ್ಟೇ ಇತ್ತು. ಅದ್ರ ಎತ್ತರ 20 ಮೊಳ* ಇತ್ತು. ಅವನು ಅದ್ರ ಒಳಭಾಗಕ್ಕೆ ಅಪ್ಪಟ ಚಿನ್ನದ ತಗಡನ್ನ ಹೊದಿಸಿದ.+  ಅವನು ಆ ಆಲಯದ ದೊಡ್ಡ ಕೊಠಡಿಗೆ ಜುನಿಪರ್‌ ಮರದ ಹಲಗೆಗಳನ್ನ ಹಾಕಿಸಿದ. ಆಮೇಲೆ ಅದ್ರ ಮೇಲೆ ಅಪ್ಪಟ ಚಿನ್ನದ ತಗಡನ್ನ ಹೊದಿಸಿದ.+ ಅದನ್ನ ಖರ್ಜೂರದ ಮರಗಳ ಕೆತ್ತನೆಗಳಿಂದ+ ಮತ್ತು ಸರಪಣಿಗಳಿಂದ ಅಲಂಕರಿಸಿದ.+  ಇದರ ಜೊತೆ ಅವನು ಆಲಯಕ್ಕೆ ಅಂದವಾದ, ಅಮೂಲ್ಯ ರತ್ನಗಳನ್ನ ಹೊದಿಸಿದ.+ ಅವನು ಬಳಸಿದ ಚಿನ್ನವನ್ನ+ ಪರ್ವಯಿಮ್‌ ದೇಶದಿಂದ ತಂದಿದ್ರು.  ಅವನು ಆಲಯಕ್ಕೆ, ಅದ್ರ ತೊಲೆ, ಹೊಸ್ತಿಲು, ಗೋಡೆ ಮತ್ತು ಬಾಗಿಲುಗಳಿಗೆ ಚಿನ್ನದ ತಗಡನ್ನ ಹೊದಿಸಿದ.+ ಗೋಡೆ ಮೇಲೆ ಕೆರೂಬಿಯರ ಚಿತ್ರ ಕೆತ್ತಿಸಿದ.+  ಇದಾದ ಮೇಲೆ ಅವನು ಅತಿ ಪವಿತ್ರ ಸ್ಥಳ ಮಾಡಿಸಿದ.+ ಅದ್ರ ಅಗಲ 20 ಮೊಳ ಇತ್ತು. ಅದ್ರ ಉದ್ದ ಆಲಯದ ಅಗಲದಷ್ಟೇ ಅಂದ್ರೆ 20 ಮೊಳ ಇತ್ತು. ಅವನು ಅತಿ ಪವಿತ್ರ ಸ್ಥಳಕ್ಕೆ 600 ತಲಾಂತು* ಅಪ್ಪಟ ಚಿನ್ನದ ತಗಡನ್ನ ಹೊದಿಸಿದ.+  ಅಲ್ಲಿ ಬಳಸಿದ ಮೊಳೆಗಳಿಗೆ 50 ಶೆಕೆಲ್‌* ಚಿನ್ನ ಹಿಡೀತು. ಅವನು ಮಾಳಿಗೆಯ ಕೊಠಡಿಗಳಿಗೆ ಚಿನ್ನದ ತಗಡನ್ನ ಹೊದಿಸಿದ. 10  ಆಮೇಲೆ ಅವನು ಅತಿ ಪವಿತ್ರ ಸ್ಥಳದಲ್ಲಿ ಕೆರೂಬಿಗಳ ಎರಡು ಪ್ರತಿಮೆ ಮಾಡಿಸಿ, ಅವಕ್ಕೆ ಚಿನ್ನದ ತಗಡನ್ನ ಹೊದಿಸಿದ.+ 11  ಕೆರೂಬಿಗಳ+ ರೆಕ್ಕೆಗಳ ಉದ್ದ 20 ಮೊಳ. ಮೊದಲನೇ ಕೆರೂಬಿಯ ಒಂದು ರೆಕ್ಕೆಯ ಉದ್ದ ಐದು ಮೊಳ ಇದ್ದು ಆಲಯದ ಗೋಡೆನ ಮುಟ್ತಿತ್ತು. ಅದ್ರ ಇನ್ನೊಂದು ರೆಕ್ಕೆ ಐದು ಮೊಳ ಉದ್ದ ಇದ್ದು ಎರಡನೇ ಕೆರೂಬಿಯ ರೆಕ್ಕೆನ ತಾಗ್ತಿತ್ತು. 12  ಎರಡನೇ ಕೆರೂಬಿಯ ಒಂದು ರೆಕ್ಕೆ ಐದು ಮೊಳ ಉದ್ದ ಇದ್ದು ಆಲಯದ ಇನ್ನೊಂದು ಗೋಡೆನ ಮುಟ್ತಿತ್ತು. ಅದ್ರ ಇನ್ನೊಂದು ರೆಕ್ಕೆನೂ ಐದು ಮೊಳ ಉದ್ದ ಇದ್ದು ಮೊದಲನೇ ಕೆರೂಬಿಯ ರೆಕ್ಕೆಗೆ ತಾಗ್ತಿತ್ತು. 13  ಈ ಕೆರೂಬಿಗಳ ರೆಕ್ಕೆಗಳು 20 ಮೊಳಗಳ ತನಕ ಚಾಚ್ಕೊಂಡಿದ್ವು. ಕೆರೂಬಿಗಳು ತಮ್ಮ ಕಾಲುಗಳ ಮೇಲೆ ನಿಂತ್ಕೊಂಡು, ಒಳಗೆ* ಮುಖ ಮಾಡ್ಕೊಂಡಿದ್ವು. 14  ಜೊತೆಗೆ ಅವನು ನೀಲಿ ದಾರದಿಂದ, ನೇರಳೆ ಬಣ್ಣದ ಉಣ್ಣೆಯಿಂದ, ಕಡುಗೆಂಪು ದಾರದಿಂದ ಮತ್ತು ಒಳ್ಳೇ ಬಟ್ಟೆಯಿಂದ ಪರದೆ+ ಮಾಡಿಸಿದ. ಅದ್ರ ಮೇಲೆ ಕೆರೂಬಿಗಳ ಚಿತ್ರ ಕಸೂತಿ ಹಾಕಿಸಿದ.+ 15  ಆಮೇಲೆ ಅವನು ಆಲಯದ ಮುಂದೆ ಎರಡು ಕಂಬ+ ಮಾಡಿಸಿದ. ಅವುಗಳ ಉದ್ದ 35 ಮೊಳ. ಪ್ರತಿಯೊಂದು ಕಂಬದ ಮೇಲಿದ್ದ ಕಿರೀಟ ಐದು ಮೊಳ ಇತ್ತು.+ 16  ಅವನು ಹೂವಿನ ಹಾರದ ತರ ಇರೋ ಸರಪಣಿ ಮಾಡಿಸಿ, ಅವನ್ನ ಕಂಬಗಳ ಮೇಲಿದ್ದ ಕಿರೀಟಕ್ಕೆ ನೇತು ಹಾಕಿಸಿದ. 100 ದಾಳಿಂಬೆ ಮಾಡಿಸಿ ಹಾರದ ಮೇಲೆ ಇಡಿಸಿದ. 17  ಅವನು ಆ ಕಂಬಗಳನ್ನ ಆಲಯದ ಮುಂದೆ ತರಿಸಿ, ಒಂದು ಕಂಬನ ಬಲಕ್ಕೆ,* ಇನ್ನೊಂದು ಕಂಬನ ಎಡಕ್ಕೆ* ನಿಲ್ಲಿಸಿದ. ಬಲಕ್ಕಿದ್ದ ಕಂಬಕ್ಕೆ ಯಾಕೀನ್‌,* ಎಡಕ್ಕಿದ್ದ ಕಂಬಕ್ಕೆ ಬೋವಜ್‌* ಅಂತ ಹೆಸ್ರಿಟ್ಟ.

ಪಾದಟಿಪ್ಪಣಿ

ಒಂದು ಮೊಳ 44.5 ಸೆ.ಮೀ. ಇರುತ್ತೆ. ಆದ್ರೆ ಸ್ವಲ್ಪ ಜನ ಪುರಾತನ ಕಾಲದ ಅಳತೆ ಪ್ರಕಾರ ಒಂದು ಮೊಳ ಉದ್ದ 51.8 ಸೆ.ಮೀ. ಇತ್ತು ಅಂದ್ಕೊಳ್ತಾರೆ. ಪರಿಶಿಷ್ಟ ಬಿ14 ನೋಡಿ.
ಕೆಲವು ಪ್ರಾಚೀನ ಹಸ್ತಪ್ರತಿಗಳಲ್ಲಿ “120” ಅಂತ ಇದೆ. ಆದ್ರೆ ಬೇರೆ ಹಸ್ತಪ್ರತಿಗಳಲ್ಲಿ ಮತ್ತು ಕೆಲವು ಭಾಷಾಂತರಗಳಲ್ಲಿ ಇಲ್ಲಿ “20 ಮೊಳ” ಅಂತ ಇದೆ.
ಒಂದು ತಲಾಂತು=34.2 ಕೆಜಿ. ಪರಿಶಿಷ್ಟ ಬಿ14 ನೋಡಿ.
ಒಂದು ಶೆಕೆಲ್‌=11.4 ಗ್ರಾಂ. ಪರಿಶಿಷ್ಟ ಬಿ14 ನೋಡಿ.
ಅದು, ಪವಿತ್ರ ಸ್ಥಳದ ಕಡೆ.
ಅಥವಾ “ದಕ್ಷಿಣಕ್ಕೆ.”
ಅಥವಾ “ಉತ್ತರಕ್ಕೆ.”
ಅರ್ಥ “ಯೆಹೋವ ದೃಢ ಮಾಡ್ಲಿ.”
ಬಹುಶಃ ಇದರರ್ಥ “ಶಕ್ತಿಯಿಂದ.”