ಸದಾ ಎಚ್ಚರವಾಗಿರಿ!
ಶಾಲೆಯಲ್ಲಿ ಗುಂಡಿನ ದಾಳಿಗಳು—ಇದರ ಬಗ್ಗೆ ಬೈಬಲ್ ಏನು ಹೇಳುತ್ತೆ?
ಅಮೆರಿಕಾದ ಟೆಕ್ಸಸ್ನ ಯುವಾಲ್ಡೆ ಅನ್ನೋ ನಗರದಲ್ಲಿ ಮೇ 24, 2022ರಂದು ಒಂದು ಭೀಕರ ಗುಂಡಿನ ದಾಳಿ ನಡೀತು. ಇದ್ರ ಬಗ್ಗೆ ದ ನ್ಯೂಯಾರ್ಕ್ ಟೈಮ್ಸ್ ಹೀಗೆ ಹೇಳಿತು, “ಒಬ್ಬ ವ್ಯಕ್ತಿ ಬಂದೂಕು ತಗೊಂಡು ರಾಬ್ ಎಲಿಮೆಂಟರಿ ಶಾಲೆಗೆ ಬಂದು . . . 19 ಪುಟಾಣಿ ಮಕ್ಕಳನ್ನ ಮತ್ತೆ ಇಬ್ಬರು ಟೀಚರ್ಗಳನ್ನ ಗುಂಡು ಹಾರಿಸಿ ಕೊಲೆ ಮಾಡಿದನು.”
ಬೇಜಾರಿನ ವಿಷ್ಯ ಏನಂದ್ರೆ, ಇಂಥಾ ಮನಕಲಕುವ ಘಟನೆಗಳು ಇತ್ತೀಚೆಗೆ ಸರ್ವೇ ಸಾಮಾನ್ಯ ಆಗಿಬಿಟ್ಟಿದೆ. ಯುಎಸ್ಎ ಟುಡೇ ಅನ್ನೋ ದಿನ ಪತ್ರಿಕೆ ಹೀಗೆ ವರದಿ ಮಾಡಿತು, ಬರೀ ಅಮೆರಿಕದಲ್ಲೇ “ಕಳೆದ ಒಂದು ವರ್ಷದಲ್ಲಿ ಈ ರೀತಿಯ 249 ಗುಂಡಿನ ದಾಳಿಗಳು ಶಾಲೆಗಳಲ್ಲಿ ನಡೆದಿವೆ. ಇಸವಿ 1970ರ ನಂತರ ಯಾವ ವರ್ಷನೂ ಇಷ್ಟರ ಮಟ್ಟಿಗೆ ಗುಂಡಿನ ದಾಳಿ ಆಗಿರಲಿಲ್ಲ.”
ಇಂಥಾ ಅಮಾನವೀಯ, ಕ್ರೂರ ಘಟನೆಗಳು ಯಾಕೆ ನಡೆಯುತ್ತೆ? ನಾವು ಇದನ್ನು ಹೇಗೆ ನಿಭಾಯಿಸಬಹುದು? ಇಂಥಾ ಎಲ್ಲಾ ಹಿಂಸಾಕೃತ್ಯಗಳು ಯಾವತ್ತಾದ್ರೂ ಕೊನೆ ಆಗುತ್ತಾ? ಈ ಪ್ರಶ್ನೆಗಳಿಗೆ ಬೈಬಲ್ ಉತ್ತರ ಕೊಡುತ್ತೆ.
ಈ ಲೋಕದಲ್ಲಿ ಹಿಂಸಾಕೃತ್ಯಗಳು ಯಾಕೆ ಜಾಸ್ತಿ ಆಗ್ತಿದೆ?
ನಾವು ಜೀವಿಸೋ ಕಾಲವನ್ನು ಬೈಬಲ್ ‘ಕೊನೇ ದಿನಗಳು’ ಅಂತ ಕರೆಯುತ್ತೆ. ಆಗ ಜನರಲ್ಲಿ ‘ಪ್ರೀತಿ ಇರೋದಿಲ್ಲ‘ ಮತ್ತೆ ಅವರು ‘ಉಗ್ರರಾಗಿದ್ದು’ ಕ್ರೂರ ಕೆಲಸಗಳನ್ನು ಮಾಡುತ್ತಾರೆ, ಹೋಗ್ತಾ ಹೋಗ್ತಾ ಇಂಥಾ ಜನರು “ಕೆಟ್ಟದ್ರಿಂದ ಇನ್ನೂ ಕೆಟ್ಟತನಕ್ಕೆ ಇಳಿತಾರೆ” ಅಂತನೂ ಬೈಬಲ್ ಹೇಳುತ್ತೆ. (2 ತಿಮೊತಿ 3:1-5, 13) ಇದರ ಬಗ್ಗೆ ಜಾಸ್ತಿ ವಿಷ್ಯ ತಿಳಿದುಕೊಳ್ಳೋಕೆ “‘ಕೊನೇ ದಿನಗಳ’ ಅಥವಾ ‘ಅಂತ್ಯಕಾಲದ’ ಸೂಚನೆಗಳೇನು?” ಅನ್ನೋ ಲೇಖನ ನೋಡಿ.
‘ಶಾಲೆಗಳಲ್ಲಿ ನಡೆಯೋ ಇಂಥಾ ಗುಂಡಿನ ದಾಳಿಗಳನ್ನ ದೇವರು ಯಾಕೆ ತಡೆಯೋದಿಲ್ಲ’ ಅಂತ ತುಂಬಾ ಜನ ಯೋಚ್ನೆ ಮಾಡ್ತಾರೆ. ಇದ್ರ ಬಗ್ಗೆ ಬೈಬಲ್ ಕೊಡೋ ಉತ್ತರವನ್ನ ತಿಳ್ಕೊಳ್ಳೋಕೆ “ಯಾಕೆ ಒಳ್ಳೆಯವರಿಗೆ ಕಷ್ಟ ಬರುತ್ತದೆ?” ಅನ್ನೋ ಲೇಖನ ನೋಡಿ.
ಇಂಥಾ ಘಟನೆಗಳ ಮಧ್ಯೆ ಜೀವನವನ್ನ ಹೇಗೆ ನಿಭಾಯಿಸಿಕೊಂಡು ಹೋಗಬಹುದು?
“ಹಿಂದಿನ ಕಾಲದಲ್ಲಿ ಬರೆದ ವಿಷ್ಯಗಳನ್ನೆಲ್ಲ ನಾವು ಕಲಿಬೇಕಂತ ಬರೆದ್ರು. ಈ ಪವಿತ್ರ ಬರಹಗಳು . . . ಸಾಂತ್ವನ ಪಡಿಯೋಕೆ ಸಹಾಯ ಮಾಡೋದ್ರಿಂದ ನಮಗೀಗ ನಿರೀಕ್ಷೆಯಿದೆ.”—ರೋಮನ್ನರಿಗೆ 15:4.
ಈ ಲೋಕದಲ್ಲಿ ಕ್ರೂರತನ ತುಂಬಿ ತುಳುಕುತ್ತಿದೆ. ಇದನ್ನ ನಿಭಾಯಿಸೋಕೆ ಬೈಬಲಿನಲ್ಲಿರೋ ನೀತಿ ನಿಯಮಗಳು ನಮಗೆ ಸಹಾಯ ಮಾಡುತ್ತೆ. ಹೆಚ್ಚಿನ ಮಾಹಿತಿಗಾಗಿ “ಕ್ರೂರತನಕ್ಕೆ ಕೊನೆ ಇದೆಯೋ?” ಅನ್ನೋ ಲೇಖನ ನೋಡಿ.
ಇಂಥಾ ಭೀಕರ ಘಟನೆಗಳು ನಡೆದಾಗ ಮುಗ್ಧ ಮನಸ್ಸಿನ ಮಕ್ಕಳು ತುಂಬಾ ಭಯ ಪಡ್ತಾರೆ. ಅಂಥಾ ಸಮಯದಲ್ಲಿ ಅಪ್ಪ ಅಮ್ಮ ಮಕ್ಕಳಿಗೆ ಹೇಗೆ ಸಹಾಯ ಮಾಡಬಹುದು ಅಂತ ತಿಳ್ಕೊಳ್ಳೋಕೆ “ಮನಸ್ಸು ಕೆಡಿಸೋ ನ್ಯೂಸ್ ವಿರುದ್ಧ ಹೋರಾಡೋಕೆ ಮಕ್ಕಳಿಗೆ ಕಲಿಸಿ” ಅನ್ನೋ ಲೇಖನ ನೋಡಿ.
ಹಿಂಸಾಕೃತ್ಯಗಳು ಯಾವತ್ತಾದ್ರೂ ಕೊನೇ ಆಗುತ್ತಾ?
“ಅವನು ಅವ್ರನ್ನ ದಬ್ಬಾಳಿಕೆಯಿಂದ, ಹಿಂಸೆಯಿಂದ ತಪ್ಪಿಸ್ತಾನೆ.”—ಕೀರ್ತನೆ 72:14.
“ಅವರು ತಮ್ಮ ಕತ್ತಿಗಳನ್ನ ಬಡಿದು ನೇಗಿಲ ಗುಳಗಳಾಗಿ ಮಾಡ್ತಾರೆ, ಈಟಿಗಳನ್ನ ಬಡಿದು ಕುಡುಗೋಲುಗಳಾಗಿ ಮಾಡ್ತಾರೆ. ಒಂದು ಜನಾಂಗ ಇನ್ನೊಂದು ಜನಾಂಗದ ವಿರುದ್ಧ ಕತ್ತಿ ಎತ್ತಲ್ಲ, ಇನ್ಮುಂದೆ ಅವರು ಯುದ್ಧ ಮಾಡೋಕೆ ಕಲಿಯಲ್ಲ.”—ಮೀಕ 4:3.
ಮನುಷ್ಯರು ಮಾಡೋದಕ್ಕೆ ಆಗದೇ ಇರೋದನ್ನ ದೇವರು ಮಾಡ್ತಾನೆ. ದೇವರು ತನ್ನ ಸ್ವರ್ಗೀಯ ಸರ್ಕಾರದ ಮೂಲಕ ಹಿಂಸೆಯನ್ನು ಮತ್ತು ಅದಕ್ಕೆ ಸಂಬಂಧಪಟ್ಟ ಆಯುಧಗಳನ್ನು ಹೇಳಹೆಸರಿಲ್ಲದಂತೆ ಮಾಡ್ತಾನೆ. ದೇವರ ಸರ್ಕಾರ ಇನ್ನೂ ಏನೆಲ್ಲಾ ಮಾಡುತ್ತೆ ಅಂತ ತಿಳ್ಕೊಳ್ಳೋಕೆ “ದೇವರ ಸರಕಾರದಿಂದ ‘ಸಮಾಧಾನ’ ಸಾಧ್ಯ” ಅನ್ನೋ ಲೇಖನ ಓದಿ.