ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಸಂಗ್ರಹಾಲಯ

ಅವರು ಅತ್ಯುತ್ತಮವಾದದ್ದನ್ನ ಕೊಟ್ಟರು

ಅವರು ಅತ್ಯುತ್ತಮವಾದದ್ದನ್ನ ಕೊಟ್ಟರು

1945 ರಲ್ಲಿ ಎರಡನೇ ಲೋಕ ಯುದ್ಧ ಕೊನೆಯಾದಾಗ ಜರ್ಮನಿ ಹಾಳುಬಿದ್ದು ಹೋಗಿತ್ತು. ಶಾಲೆಗಳು ಖಾಲಿ ಖಾಲಿಯಾಗಿದ್ದವು. ಆಸ್ಪತ್ರೆಗಳು ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿ ಇದ್ದವು. ಅಲ್ಲಲ್ಲಿ ಸಿಡಿಯದೆ ಇದ್ದ ಬಾಂಬುಗಳು ಕಂಡುಬರುತ್ತಿದ್ದವು. ಅಷ್ಟೇ ಅಲ್ಲ, ಆಹಾರದ ಕೊರತೆ ಇತ್ತು. ಆಹಾರ ವಸ್ತುಗಳ ಬೆಲೆ ಗಗನಕ್ಕೇರಿತ್ತು. ಉದಾಹರಣೆಗೆ ಕಳ್ಳ ಸಂತೆಯಲ್ಲಿ (ಬ್ಲ್ಯಾಕ್‌ ಮಾರ್ಕೆಟ್‌) ಅರ್ಧ ಕೆ.ಜಿ. ಬೆಣ್ಣೆ ಖರೀದಿ ಮಾಡಬೇಕಂದ್ರೆ ಆರು ವಾರದ ಕೂಲಿಯನ್ನ ಕೊಡಬೇಕಿತ್ತು!

ಈ ಕಷ್ಟಗಳನ್ನ ಯೆಹೋವನ ಸಾಕ್ಷಿಗಳೂ ಎದುರಿಸಬೇಕಾಯ್ತು. ಅವ್ರಲ್ಲಿ 2,000ಕ್ಕಿಂತ ಹೆಚ್ಚಿನ ಸಾಕ್ಷಿಗಳು ನಂಬಿಕೆಗೋಸ್ಕರ ಜೈಲಲ್ಲೂ ಸೆರೆ ಶಿಬಿರಗಳಲ್ಲೂ ಇದ್ದರು. 1945 ರಲ್ಲಿ ಅವರನ್ನ ಬಿಡುಗಡೆ ಮಾಡಲಾಯ್ತು. ಆದ್ರೆ ಅವರ ಹತ್ರ ಇದ್ದದ್ದು ಅವರು ಹಾಕಿದ್ದ ಬಟ್ಟೆ ಮಾತ್ರ. ಅದೂ ಜೈಲಿನ ಬಟ್ಟೆ! ಉಳಿದ ಸಹೋದರರು ಸಹ ತಮ್ಮ ಆಸ್ತಿ-ಪಾಸ್ತಿಗಳನ್ನ ಕಳೆದುಕೊಂಡಿದ್ದರು. ಕೆಲವು ಸಹೋದರರಂತೂ ಊಟಕ್ಕಿಲ್ಲದೆ ಕೂಟದಲ್ಲಿ ತಲೆತಿರುಗಿ ಬೀಳುತ್ತಿದ್ದರು.

ಬಲುಬೇಗನೆ ಸಹಾಯ ಮಾಡಿದ ಬೇರೆ ದೇಶದ ಸಾಕ್ಷಿಗಳು

ಆಹಾರ ಮತ್ತು ಬಟ್ಟೆಯ ಅಗತ್ಯಗಳನ್ನ ಪೂರೈಸಲಿಕ್ಕಾಗಿ ಬೇರೆ ದೇಶಗಳಲ್ಲಿದ್ದ ಯೆಹೋವನ ಸಾಕ್ಷಿಗಳು ತಕ್ಷಣನೇ ಸಹಾಯ ಮಾಡೋಕೆ ಮುಂದೆ ಬಂದರು. ಅಮೆರಿಕಾದ ಮುಖ್ಯ ಕಾರ್ಯಾಲಯದಲ್ಲಿದ್ದ ಸಹೋದರರು ಜರ್ಮನಿಯ ಸಹೋದರರಿಗೆ ಸಹಾಯ ಮಾಡುವಂತೆ ಸ್ವಿಟ್ಜರ್ಲೆಂಡಿನ ಬರ್ನ್‌ನಲ್ಲಿರುವ ಶಾಖಾ ಕಚೇರಿಯನ್ನ ಕೇಳಿಕೊಂಡರು. ಮುಖ್ಯ ಕಾರ್ಯಾಲಯದ ಪ್ರತಿನಿಧಿ ಆಗಿದ್ದ ನೇತನ್‌ ಹೆಚ್‌. ನಾರ್‌ ಯುರೋಪಿಗೆ ಭೇಟಿ ನೀಡಿ ಪರಿಹಾರ ಕೆಲಸ ಬೇಗನೆ ಆಗುವಂತೆ ನೋಡಿಕೊಂಡರು.

1947 ರಲ್ಲಿ ಜರ್ಮನಿಯ ವೀಸ್‌ಬಾಡನ್‌ನಲ್ಲಿ ಸಹೋದರ ನಾರ್‌ ಭಾಷಣ ಕೊಡುತ್ತಿದ್ದಾರೆ. ಹಿಂಭಾಗದಲ್ಲಿ ಜರ್ಮನಿ ಭಾಷೆಯಲ್ಲಿರೋ ಈ ವರ್ಷವಚನ ಕಾಣುತ್ತೆ: “ಸರ್ವಜನಾಂಗಗಳೇ, ಯೆಹೋವನನ್ನು ಕೀರ್ತಿಸಿರಿ.”

ಸ್ವಿಟ್ಜರ್ಲೆಂಡಿನಲ್ಲಿದ್ದ ಯೆಹೋವನ ಸಾಕ್ಷಿಗಳು ಆಹಾರ, ಬಟ್ಟೆ, ಹಣವನ್ನ ಧಾರಾಳವಾಗಿ ಕೊಟ್ಟರು. ಅಗತ್ಯ ವಸ್ತುಗಳನ್ನ ಮೊದಲು ಬರ್ನ್‌ಗೆ ಕಳಿಸಲಾಯ್ತು. ಅಲ್ಲಿ ಒಳ್ಳೇ ವಸ್ತುಗಳನ್ನ ಆಯ್ಕೆ ಮಾಡಿ, ಪ್ಯಾಕ್‌ ಮಾಡಿ ಜರ್ಮನಿಗೆ ಕಳಿಸಲಾಯ್ತು. ಸ್ವೀಡನ್‌, ಕೆನಡಾ ಮತ್ತು ಅಮೆರಿಕದಂಥ ಇತರ ದೇಶಗಳ ಸಾಕ್ಷಿಗಳು ಕೂಡ ಪರಿಹಾರ ಕಾರ್ಯದಲ್ಲಿ ಕೈಜೋಡಿಸಿದರು. ಇದ್ರಿಂದ ಜರ್ಮನಿಯಲ್ಲಿದ್ದ ಸಾಕ್ಷಿಗಳು ಮಾತ್ರವಲ್ಲ, ಯುದ್ಧದಿಂದ ಬಾಧಿತರಾದ ಯುರೋಪ್‌ ಮತ್ತು ಏಷ್ಯಾದ ದೇಶಗಳಲ್ಲಿದ್ದ ಸಹೋದರರಿಗೂ ತುಂಬ ಸಹಾಯ ಆಯ್ತು.

ನೆನಸದ ಫಲಿತಾಂಶಗಳು

ಕೆಲವೇ ತಿಂಗಳಲ್ಲಿ ಸ್ವಿಟ್ಜರ್ಲೆಂಡಿನ ಬ್ರಾಂಚ್‌ ಕಾಫಿ, ಹಾಲು, ಸಕ್ಕರೆ, ಧಾನ್ಯಗಳು, ಒಣ ಹಣ್ಣುಗಳು, ತರಕಾರಿಗಳು, ಮತ್ತು ಪ್ಯಾಕ್‌ ಮಾಡಲಾದ ಮೀನು ಮತ್ತು ಮಾಂಸವನ್ನ ಕಳಿಸಿದ್ರು. ಹಣ ಸಹಾಯ ಕೂಡ ಮಾಡಿದ್ರು.

ಅಷ್ಟೇ ಅಲ್ಲ ಸ್ವಿಟ್ಜರ್ಲೆಂಡಿನ ಸಹೋದರರು 5 ಟನ್‌ ಬಟ್ಟೆಯನ್ನ ಕಳಿಸಿದ್ರು. ಅದ್ರಲ್ಲಿ ಮಾಮೂಲಿ ಬಟ್ಟೆಗಳು ಮಾತ್ರವಲ್ಲ, ಕೋಟುಗಳು, ಪುರುಷರ ಸೂಟುಗಳು ಮತ್ತು ಸ್ತ್ರೀಯರ ಬಟ್ಟೆಗಳು ಇದ್ವು. ಜನವರಿ 15, 1946 ರ ಕಾವಲಿನಬುರುಜು ಸಂಚಿಕೆಯಲ್ಲಿ ಹೀಗೆ ತಿಳಿಸಲಾಗಿತ್ತು: “ಸಹೋದರರು ತಮ್ಮ ಹತ್ರ ಇದ್ದ ಹಾಳಾದ ವಸ್ತುಗಳನ್ನಲ್ಲ, ಅತ್ಯುತ್ತಮ ವಸ್ತುಗಳನ್ನ ಕೊಟ್ರು. ಜರ್ಮನಿಯ ಸಹೋದರರಿಗೆ ಸಹಾಯ ಮಾಡಲಿಕ್ಕಾಗಿ ಅವ್ರು ತುಂಬ ತ್ಯಾಗ ಮಾಡಿದ್ರು.”

ಸ್ವಿಟ್ಜರ್ಲೆಂಡಿನಲ್ಲಿರುವ ಸಾಕ್ಷಿಗಳು ಸುಮಾರು 1,000 ಜೋಡಿ ಶೂಗಳನ್ನ ಕಳಿಸಿದ್ರು. ಅದನ್ನ ಕಳಿಸೋಕಿಂತ ಮುಂಚೆ ಅದು ಒಳ್ಳೆಯ ಸ್ಥಿತಿಯಲ್ಲಿದೆಯಾ ಅಂತ ನೋಡ್ತಿದ್ರು. ಜರ್ಮನಿಯ ವೀಸ್‌ಬಾಡನ್‌ನಲ್ಲಿದ್ದ ಸಹೋದರ ಸಹೋದರಿಯರು ತಮಗೆ ಸಿಕ್ಕ ವಸ್ತುಗಳನ್ನ ನೋಡಿ ತುಂಬ ಖುಷಿಪಟ್ರು. ಅದ್ರಲ್ಲಿ ತುಂಬ ತರತರದ ಒಳ್ಳೆ ಗುಣಮಟ್ಟದ ಬಟ್ಟೆಗಳು ಇದ್ವು. ಇದ್ರ ಬಗ್ಗೆ ಒಬ್ಬ ಸಾಕ್ಷಿ, “ಇಡೀ ಜರ್ಮನಿಯಲ್ಲಿ ಹುಡುಕಿದ್ರೂ ಇಷ್ಟು ತರತರದ ಬಟ್ಟೆಗಳಿರೋ ಅಂಗಡಿ ಸಿಗಲ್ಲ” ಅಂತ ಬರೆದ್ರು.

1948 ರ ಆಗಸ್ಟ್‌ ತನಕ ಸಹೋದರರು ಪರಿಹಾರ ವಸ್ತುಗಳನ್ನ ಕಳುಹಿಸುತ್ತಾ ಇದ್ರು. ಜರ್ಮನಿಯ ಸಹೋದರರಿಗಾಗಿ ಸ್ವಿಟ್ಜರ್ಲೆಂಡಿನ ಸಹೋದರರು ಒಟ್ಟು 444 ಬಾಕ್ಸ್‌ ವಸ್ತುಗಳನ್ನ ಕಳಿಸಿದ್ರು. ಅವುಗಳ ಒಟ್ಟು ತೂಕ 25 ಟನ್‌ ಇತ್ತು. ಬೇರೆ ಬೇರೆ ಸ್ಥಳಗಳಲ್ಲಿದ್ದ ಸಹೋದರರು ಜರ್ಮನಿಯ ಸಹೋದರರಿಗೆ ಸಹಾಯ ಮಾಡಿದ್ರು. ಅವ್ರಲ್ಲಿ ಸ್ವಿಟ್ಜರ್ಲೆಂಡಿನ ಸಹೋದರರು ಒಂದು ಚಿಕ್ಕ ಗುಂಪು ಅಷ್ಟೇ. ಯಾಕಂದ್ರೆ ಆಗ ಅಲ್ಲಿದ್ದಿದ್ದು ಬರೀ 1,600 ಸಾಕ್ಷಿಗಳು!

‘ನಿಮ್ಮ ಮಧ್ಯ ಪ್ರೀತಿ ಇರಲಿ’

ಯೇಸು ಕ್ರಿಸ್ತನು ಹೀಗೆ ಹೇಳಿದನು: “ನಿಮ್ಮ ಮಧ್ಯ ಪ್ರೀತಿ ಇದ್ರೆ ಮಾತ್ರ ನೀವು ನನ್ನ ಶಿಷ್ಯರು ಅಂತ ಎಲ್ರಿಗೂ ಗೊತ್ತಾಗುತ್ತೆ.” (ಯೋಹಾನ 13: 34, 35) ಪ್ರೀತಿ ಇರುವುದರಿಂದಾನೇ ಯೆಹೋವನ ಜನರು ತಾವು ಉಪಯೋಗಿಸಿ ಉಳಿದದ್ದನ್ನಲ್ಲ, ಬದಲಿಗೆ ತಮ್ಮಲ್ಲಿದ್ದ ಅತ್ಯುತ್ತಮವಾದದ್ದನ್ನ ಕೊಟ್ಟರು. (2 ಕೊರಿಂಥ 8:1-4) ಝುರಿಕ್‌ನಿಂದ ಬಂದ ಒಂದು ಪತ್ರದಲ್ಲಿ ಹೀಗಿತ್ತು: “ಅನೇಕ ಸಹೋದರರ ಹತ್ರ ಅವ್ರ ಜೀವನಕ್ಕೆನೇ ಅಗತ್ಯ ವಸ್ತುಗಳು ಇಲ್ಲ. ಆದ್ರೂ ಬೇರೆಯವರಿಗೆ ಸಹಾಯಮಾಡಬೇಕು ಅನ್ನೋ ಆಸೆಯಿಂದ ತಮ್ಮತ್ರ ಇದ್ದ ಹಣ, ರೇಷನ್‌ ಕಾರ್ಡುಗಳನ್ನ ಕೊಟ್ಟಿದ್ದಾರೆ.”

ಯೆಹೋವನ ಜನರು ಹಿಂಸೆ ಮತ್ತು ಯುದ್ಧದ ಪರಿಣಾಮಗಳಿಂದ ಬೇಗನೆ ಚೇತರಿಸಿಕೊಂಡರು. ಇದಕ್ಕೆ ಮುಖ್ಯ ಕಾರಣ ಸಹೋದರರು ನಿಜ ಪ್ರೀತಿಯಿಂದ ಸುವ್ಯವಸ್ಥಿತವಾಗಿ ಮತ್ತು ಧಾರಾಳವಾಗಿ ಮಾಡಿದ ಸಹಾಯನೇ ಆಗಿತ್ತು.

ಸ್ವಿಟ್ಜರ್ಲೆಂಡಿನ ಬರ್ನ್‌ನ ಶಾಖಾ ಕಚೇರಿಯಲ್ಲಿ ಸಾಕ್ಷಿಗಳು ಜರ್ಮನ್‌ ಸಹೋದರರಿಗಾಗಿ ಕೊಡಲಾದ ಬಟ್ಟೆಗಳನ್ನ ಪರಿಶೀಲಿಸಿ, ಜೋಡಿಸಿ ಇಡುತ್ತಿದ್ದಾರೆ

ಬರ್ನ್‌ನ ಶಾಖಾ ಕಚೇರಿಯಿಂದ ಅಗತ್ಯ ವಸ್ತುಗಳಿರೋ ಬಾಕ್ಸುಗಳನ್ನು ಟ್ರಕ್‌ಗಳಲ್ಲಿ ತುಂಬಿಸುತ್ತಿದ್ದಾರೆ

ಬಾಕ್ಸುಗಳು ತುಂಬಿರೋ ಟ್ರಕ್‌ಗಳ ಮೇಲೆ “ಯೆಹೋವನ ಸಾಕ್ಷಿಗಳ ಪರಿಹಾರ ಕೆಲಸ” ಅಂತ ಬರೆಯಲಾಗಿದೆ.

ಸಹೋದರರು ಕೊಟ್ಟ ವಸ್ತುಗಳಿರೋ ಬಾಕ್ಸುಗಳನ್ನ ಜರ್ಮನಿಗೆ ಹೋಗುವ ಗೂಡ್ಸ್‌ ರೈಲಲ್ಲಿ ತುಂಬಿಸ್ತಿದ್ದಾರೆ