ನಮ್ಮ ಸಂಗ್ರಹಾಲಯ
ಓದುಬರಹ ಬರದವರಿಗೆ ದೊರೆತ ನೆರವು!
“ನಾನು ಬಡ ರೈತ ಕುಟುಂಬದಲ್ಲಿ ಹುಟ್ಟಿದೆ. ಹಾಗಾಗಿ ಮನೆಯವ್ರನ್ನ ನೋಡಿಕೊಳ್ಳೋಕಾಗಿ ಸ್ಕೂಲನ್ನ ಬಿಡಬೇಕಾಯ್ತು” ಅಂತ ಬ್ರಸಿಲ್‌ನಲ್ಲಿರೋ ಅಗೊಸ್ಟಿನೋ ಹೇಳ್ತಾರೆ. ಅವ್ರು ಓದೋಕೆ ಬರೆಯೋಕೆ ಕಲಿತಿದ್ದು 33 ವರ್ಷ ಆದ್ಮೇಲೆನೇ. ಅವ್ರು ಹೀಗೆ ಹೇಳ್ತಾರೆ: “ನಾನು ಓದೋಕೆ ಬರೆಯೋಕೆ ಕಲಿತ ಮೇಲೆ ನನ್ನ ಸ್ವಗೌರವ ಹೆಚ್ಚಾಗಿದೆ.”
ಕಳೆದ 70 ವರ್ಷಗಳಿಂದ ಯೆಹೋವನ ಸಾಕ್ಷಿಗಳು 2.5 ಲಕ್ಷಕ್ಕಿಂತ ಹೆಚ್ಚಿನ ಜನರಿಗೆ ಓದೋಕೆ ಮತ್ತು ಬರೆಯೋಕೆ ಕಲಿಸ್ತಿದ್ದಾರೆ. ಅವ್ರಲ್ಲಿ ಅಗೊಸ್ಟಿನೋ ಕೂಡ ಒಬ್ಬರು. ಯೆಹೋವನ ಸಾಕ್ಷಿಗಳು ಯಾಕೆ ಜನರಿಗೆ ಓದೋಕೆ ಮತ್ತು ಬರೆಯೋಕೆ ಕಲಿಸ್ತಿದ್ದಾರೆ? ಇಂಥ ಶಿಕ್ಷಣದಿಂದ ಜನರಿಗೆ ಹೇಗೆ ಪ್ರಯೋಜನ ಆಗಿದೆ?
ಅನಕ್ಷರತೆ ಕಲಿಕೆಗೆ ತಡೆ
1935 ರಷ್ಟಕ್ಕೆ ಯೆಹೋವನ ಸಾಕ್ಷಿಗಳು 115 ದೇಶಗಳಲ್ಲಿ ಸಿಹಿಸುದ್ದಿಯನ್ನ ಸಾರಿದ್ರು. ಬೇರೆಬೇರೆ ಭಾಷೆಯನ್ನ ಮಾತಾಡುವ ಜನರಿಗೆ ಸಿಹಿಸುದ್ದಿಯನ್ನ ತಿಳಿಸಲು ಮಿಷನರಿಗಳು ರೆಕಾರ್ಡ್ ಮಾಡಲಾದ ಬೈಬಲ್ ಭಾಷಣಗಳನ್ನ ಹಾಕ್ತಿದ್ರು. ಕೆಲವೊಮ್ಮೆ ಅವರು ಅಲ್ಲಿನ ಸ್ಥಳೀಯ ಭಾಷೆಯ ಸಾಹಿತ್ಯಗಳನ್ನ ಹಂಚುತ್ತಿದ್ರು. ತುಂಬ ಜನರಿಗೆ ಬೈಬಲ್ ಬಗ್ಗೆ ಕಲಿಯೋಕೆ ಇಷ್ಟ ಇತ್ತು. ಆದ್ರೂ ಅವರಿಗೆ ಓದುಬರಹ ಬರದಿದ್ದ ಕಾರಣ ಬೈಬಲನ್ನ ಕಲಿಯೋಕೆ ಮತ್ತು ಪ್ರಗತಿ ಮಾಡೋಕೆ ಕಷ್ಟ ಆಗ್ತಿತ್ತು.
ಬೈಬಲ್ ಓದೋಕೆ ಬರದೇ ಇದ್ದವರಿಗೆ ಅದರಲ್ಲಿರೋ ತತ್ವಗಳನ್ನ ತಮ್ಮ ಜೀವನದಲ್ಲಿ ಅನ್ವಯಿಸೋಕೆ ಕಷ್ಟ ಆಗ್ತಿತ್ತು. (ಯೆಹೋಶುವ 1:8; ಕೀರ್ತನೆ 1:2, 3) ಅಷ್ಟೇ ಅಲ್ಲ ಓದೋಕೆ ಬರದೇ ಇದ್ದಿದ್ದರಿಂದ ಅವ್ರಿಗೆ ತಮ್ಮ ಕ್ರೈಸ್ತ ಜವಾಬ್ದಾರಿಗಳನ್ನ ಮಾಡೋಕೆ ಕಷ್ಟ ಆಗ್ತಿತ್ತು. ಉದಾಹರಣೆಗೆ, ಓದೋಕೆ ಬರದಿದ್ದ ಹೆತ್ತವರಿಗೆ ತಮ್ಮ ಮಕ್ಕಳಿಗೆ ಬೈಬಲ್‌ನಲ್ಲಿರೋ ವಿಷಯಗಳನ್ನ ಕಲಿಸೋಕೆ ತುಂಬ ಕಷ್ಟ ಆಗ್ತಿತ್ತು. (ಧರ್ಮೋಪದೇಶಕಾಂಡ 6:6, 7) ಓದೋಕೆ ಬರದವ್ರು ಬೈಬಲ್ ಕಲಿತ ಮೇಲೆ, ಅದನ್ನ ಬೇರೆಯವ್ರಿಗೆ ಕಲಿಸೋಕೆ ತುಂಬ ಕಷ್ಟಪಡ್ತಿದ್ರು.
ಅಕ್ಷರಗಳ ಲೋಕಕ್ಕೆ. . .
1940 ಮತ್ತು 1950 ರ ದಶಕಗಳಲ್ಲಿ ನೇತನ್ ಎಚ್. ನಾರ್ ಮತ್ತು ಮಿಲ್ಟನ್ ಜಿ. ಹೆನ್ಶಲ್ ಯೆಹೋವನ ಸಾಕ್ಷಿಗಳ ಸಂಘಟನೆಯ ಮೇಲ್ವಿಚಾರಣೆ ನಡೆಸ್ತಿದ್ರು. ಸಾರೋ ಕೆಲಸವನ್ನ ಸಂಘಟಿಸಲು ಅವ್ರು ಬೇರೆಬೇರೆ ದೇಶಗಳಿಗೆ ಪ್ರಯಾಣ ಮಾಡಿದ್ರು. ಕೆಲವು ದೇಶಗಳಲ್ಲಿ ಜನರಿಗೆ ಓದುಬರಹ ಗೊತ್ತಿರಲಿಲ್ಲ. ಜನರಿಗೆ ಅದನ್ನ ಕಲಿಸೋಕಾಗಿ ಸಭೆಗಳಲ್ಲಿ ಏರ್ಪಾಡುಗಳನ್ನ ಮಾಡುವಂತೆ ಈ ಸಹೋದರರು ಅಲ್ಲಿನ ಬ್ರಾಂಚ್ ಆಫೀಸ್‌ಗೆ ಹೇಳಿದ್ರು.
ಈ ಶಾಲೆಗಳನ್ನ ಹೇಗೆ ನಡೆಸಬೇಕು ಅನ್ನೋ ನಿರ್ದೇಶನಗಳನ್ನ ಬ್ರಾಂಚ್ ಆಫೀಸ್ ಸಭೆಗಳಿಗೆ ಕೊಡ್ತಿತ್ತು. ಕೆಲವು ದೇಶಗಳಲ್ಲಿ ಜನರಿಗೆ ಓದೋಕೆ ಮತ್ತು ಬರೆಯೋಕೆ ಸಹಾಯ ಮಾಡಬೇಕು ಅಂತ ಕೆಲವು ಕಾರ್ಯಕ್ರಮಗಳನ್ನ ಸರ್ಕಾರ ಮಾಡ್ತಿತ್ತು. ಅಂಥ ಕಾರ್ಯಕ್ರಮಗಳನ್ನ ನಾವೂ ಅಳವಡಿಸಬಹುದಿತ್ತು. ಉದಾಹರಣೆಗೆ ಬ್ರಸಿಲ್‌ನಲ್ಲಿ ಸರ್ಕಾರ ಬಿಡುಗಡೆ ಮಾಡಿದ ಪಠ್ಯ ಪುಸ್ತಕಗಳನ್ನೇ ಬ್ರಾಂಚ್ ತಗೊಂಡು ಅದನ್ನ ಸಭೆಗಳಿಗೆ ಕಳಿಸಿತು. ಇನ್ನೂ ಕೆಲವು ದೇಶಗಳಲ್ಲಿ ಪಠ್ಯ ಪುಸ್ತಕವನ್ನ ನಮ್ಮ ಸಂಘಟನೆಯೇ ತಯಾರಿಸಿತು.
ಸ್ತ್ರೀ ಪುರುಷರು, ಚಿಕ್ಕವ್ರು, ವಯಸ್ಸಾದವ್ರು ಹೀಗೆ ಯಾರು ಬೇಕಾದ್ರೂ ಈ ಶಾಲೆಗೆ ಹಾಜರಾಗಬಹುದಿತ್ತು. ಈ ಶಾಲೆಯ ಉದ್ದೇಶ ಜನರಿಗೆ ಅವರ ಸ್ವಂತ ಭಾಷೆಯಲ್ಲಿ ಓದೋಕೆ ಮತ್ತು ಬರೆಯೋಕೆ ಕಲಿಸೋದೇ ಆಗಿತ್ತು. ಇದಕ್ಕಾಗಿ ಕೆಲವೊಮ್ಮೆ ಒಂದೇ ಸಭೆಯಲ್ಲಿ ಬೇರೆಬೇರೆ ಭಾಷೆಗಳನ್ನ ಕಲಿಸಬೇಕಾಗಿತ್ತು.
ಜನರಿಗೆ ಸಹಾಯ ಮಾಡಿದ ಒಂದು ಕಾರ್ಯಕ್ರಮ
ಸಾಕ್ಷರತಾ ಕಾರ್ಯಕ್ರಮದಿಂದ ಜನರಿಗೆ ಏನು ಪ್ರಯೋಜನ ಸಿಕ್ಕಿದೆ? ಮೆಕ್ಸಿಕೋದಲ್ಲಿರುವ ಒಬ್ಬ ಸಹೋದರಿ ಹೀಗೆ ಹೇಳ್ತಾರೆ: “ಈಗ ನಂಗೆ ಬೈಬಲಿನಲ್ಲಿರೋ ವಿಷಯಗಳ ನಿಜವಾದ ಅರ್ಥ ಗೊತ್ತಾಗ್ತಿದೆ. ಆ ವಿಷಯಗಳು ನನ್ನ ಮನಮುಟ್ತಿವೆ. ಓದೋಕೆ ಗೊತ್ತಿರೋದ್ರಿಂದ ನನ್ನ ಅಕ್ಕಪಕ್ಕದವ್ರ ಹತ್ರ ಒಳ್ಳೇ ರೀತಿಯಲ್ಲಿ ಮಾತಾಡೋಕೆ ಮತ್ತು ಬೈಬಲ್‌ನಲ್ಲಿರೋ ಸಿಹಿಸುದ್ದಿಯನ್ನ ಹೆಚ್ಚಿನ ಜನರಿಗೆ ತಿಳಿಸೋಕೆ ನನ್ನಿಂದ ಆಗ್ತಿದೆ.”
ಓದೋಕೆ ಮತ್ತು ಬರೆಯೋಕೆ ಕಲಿತಿದ್ರಿಂದ ಜನರಿಗೆ ಬೈಬಲನ್ನ ಅರ್ಥ ಮಾಡಿಕೊಳ್ಳೋಕೆ ಮಾತ್ರ ಅಲ್ಲ ಬೇರೆ ವಿಷಯಗಳಲ್ಲೂ ಸಹಾಯ ಆಗಿದೆ. ಬುರುಂಡಿಯಲ್ಲಿರೋ ಐಸಾಕ್ ಹೀಗೆ ಹೇಳ್ತಾರೆ: “ಓದೋಕೆ ಮತ್ತು ಬರೆಯೋಕೆ ಕಲಿತಿದ್ರಿಂದ ನಂಗೆ ಕಟ್ಟಡವನ್ನ ಕಟ್ಟೋ ಕೆಲಸದಲ್ಲಿ ಹೆಚ್ಚು ಕೌಶಲವನ್ನ ಬೆಳೆಸಿಕೊಳ್ಳೋಕೆ ಸಹಾಯ ಆಗಿದೆ. ನಾನೀಗ ಕಟ್ಟಡ ನಿರ್ಮಾಣ ಕೆಲ್ಸ ಮಾಡ್ತಿದ್ದೀನಿ. ದೊಡ್ಡದೊಡ್ಡ ಕಟ್ಟಡ ನಿರ್ಮಾಣ ಪ್ರಾಜೆಕ್ಟ್‌ಗಳನ್ನ ನೋಡ್ಕೊಳ್ತಿದ್ದೀನಿ.”
ಪೆರುವಿನಲ್ಲಿರೋ ಹೆಸೂಸ ಅನ್ನೋ 49 ವರ್ಷದ ಸ್ತ್ರೀ ಹೀಗೆ ಹೇಳ್ತಾರೆ: “ಮುಂಚೆ ಅಂಗಡಿಗೆ ಹೋದ್ರೆ ಸಾಮಾನುಗಳ ಬೆಲೆ ನೋಡಿ ಅದನ್ನ ಖರೀದಿಸೋಕೆ ತುಂಬ ಕಷ್ಟ ಆಗ್ತಿತ್ತು. ಆದ್ರೆ ಈಗ ಧೈರ್ಯವಾಗಿ ಶಾಪಿಂಗ್ ಮಾಡೋಕೆ ಆಗ್ತಿದೆ. ಇದಕ್ಕೆ ಕಾರಣ ಸಾಕ್ಷರತಾ ಶಾಲೆನೇ.”
ಬೇರೆಬೇರೆ ದೇಶದ ಅಧಿಕಾರಿಗಳು ಯೆಹೋವನ ಸಾಕ್ಷಿಗಳು ಜನರಿಗೆ ಓದುಬರಹ ಕಲಿಸೋಕೆ ಮಾಡಿದ ಪ್ರಯತ್ನವನ್ನ ಹೊಗಳಿದ್ದಾರೆ. ಇವತ್ತೂ ಯೆಹೋವನ ಸಾಕ್ಷಿಗಳು ಸಾಕ್ಷರತಾ ಶಾಲೆಗಳನ್ನ ನಡೆಸ್ತಿದ್ದಾರೆ. ಅದಕ್ಕಾಗಿ ಅವ್ರು ಪ್ರತಿ ವರ್ಷ ಹೊಸಹೊಸ ಸಾಧನಗಳನ್ನ ಬಿಡುಗಡೆ ಮಾಡ್ತಿದ್ದಾರೆ ಮತ್ತು ಕಾರ್ಯಕ್ರಮಗಳನ್ನ ನಡೆಸ್ತಿದ್ದಾರೆ. ಅಷ್ಟೇ ಅಲ್ಲ, ಅವ್ರು 22 ಕೋಟಿ 40 ಲಕ್ಷ ಕಿರುಹೊತ್ತಗೆಗಳನ್ನ 720 ಭಾಷೆಗಳಲ್ಲಿ ಮುದ್ರಿಸಿದ್ದಾರೆ. ಇದ್ರಿಂದ ಜನರಿಗೆ ವಿಷಯಗಳನ್ನ ಓದಿ ತಿಳಿದುಕೊಳ್ಳೋಕೆ ಅಥವಾ ಬೇರೆಯವ್ರಿಗೆ ಕಲಿಸೋಕೆ ಸಹಾಯ ಆಗಿದೆ. *
^ ಪ್ಯಾರ. 11 ಉದಾಹರಣೆಗೆ ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ ಅನ್ನೋ ಕಿರುಹೊತ್ತಗೆಯನ್ನ 123 ಭಾಷೆಗಳಲ್ಲಿ ಮತ್ತು ದೇವರ ಮಾತನ್ನು ಆಲಿಸಿ ಕಿರುಹೊತ್ತಗೆಯನ್ನ 610 ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದೆ.